ಮೈಸೂರಲ್ಲೊಂದು ಅಪರೂಪದ ಕೇಸ್ ; ಒಂದೇ ಘಟನೆ, ನಾಲ್ಕು ಎಫ್.ಐ.ಆರ್ ದಾಖಲು….!

 

ಮೈಸೂರು,ಜೂ,5,2019(www.justkannada.in): ಮಹಿಳಾ ಸಬ್ – ಇನ್ಸ್ ಪೆಕ್ಟರ್ ಒಬ್ಬರು ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ ಆರೋಪ ಪ್ರಕರಣಕ್ಕೆ ಸಂಬಂದಿಸಿದಂತೆ ಇದೀಗ ನಾಲ್ಕು ಎಫ್ ಐ ಆರ್ ದಾಖಲಾಗಿದೆ.

ಟಿ.ನರಸೀಪುರ ಸಬ್ ಇನ್ಸ್ ಪೆಕ್ಟರ್ ಯಾಸ್ಮಿನ್ ತಾಜ್ ಹಾಗೂ ಮೈಸೂರು ನಿವಾಸಿ ಪರಮೇಶ್ ಎಂಬುವವರು ಪರಸ್ಪರರ ವಿರುದ್ಧ ದೂರು ನೀಡಿದವರು. ಈ ಘಟನೆಗೆ ಸಂಬಂಧಿಸಿದಂತೆ ಇದೀಗ ಒಟ್ಟು 4 ಎಫ್ ಐ ಆರ್ ದಾಖಲಾಗಿರುವುದು ತೀವ್ರ ಕುತೂಹಲ ಮೂಡಿಸಿದೆ.

ಏನಿದು ಘಟನೆ :

ಮೈಸೂರಿನ ಗಾಯತ್ರಿ ಪುರಂ ನಲ್ಲಿ ಮಂಗಳವಾರ (ಜೂ.04) ರಾತ್ರಿ ಯಾಸ್ಮಿನ್ ತಾಜ್ ಹಾಗೂ ಅವರ ಅಪ್ರಾಪ್ತ ವಯಸ್ಸಿನ ಮಗ ಓಡಿಸುತ್ತಿದ್ದ ದ್ವಿಚಕ್ರ ವಾಹನ ಪರಮೇಶ್ ಎಂಬುವವರ ವಾಹನಕ್ಕೆ ಡಿಕ್ಕಿ ಹೊಡೆದಿತ್ತು. ಈ ವೇಳೆ ಬೈಕ್ ಹಿಂದೆ ಕುಳಿತಿದ್ದ ಯಾಸ್ಮಿನ್ ತಾಜ್, ಪರಮೇಶ್ ಅವರಿಗೆ ಅವ್ಯಾಚ ಶಬ್ದಗಳಿಂದ ನಿಂದಿಸಿದರು ಎಂದು ಆರೋಪಿಸಲಾಗಿತ್ತು.
ಜತೆಗೆ ಮರ್ಮಾಂಗಕ್ಕೆ ಗುದ್ದಿ, ಪೊಲೀಸ್ ಅಧಿಕಾರಿಗಳು ಗೊತ್ತು, ಸಿದ್ದರಾಮಯ್ಯ ಗೊತ್ತು ಎಂದು ಧಮ್ಕಿ ಹಾಕಿದರು ಎಂದು ಪರಮೇಶ್ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದರು. ಈ ಬಗ್ಗೆ ಸಿದ್ದಾರ್ಥ ಟ್ರಾಫಿಕ್ ಠಾಣೆಯಲ್ಲಿ ದೂರು ನೀಡಲು ಹೋದಾಗ ದೂರು ಸ್ವೀಕರಿಸಲು ಪೊಲೀಸರು ನಿರಾಕರಿಸಿ ಉದಯಗಿರಿ ಪೊಲೀಸ್ ಠಾಣೆಗೆ ಕಳುಹಿಸಿದ್ದರು. ಅಲ್ಲಿ ಸ್ವೀಕೃತಿ ಪತ್ರ ನೀಡಿದರು.
ಇದಾದ ಬಳಿಕ ಮರು ದಿನ ಸಬ್ ಇನ್ಸ್ ಪೆಕ್ಟರ್ ಯಾಸ್ಮಿನ್ ತಾಜ್, ಉದಯಗಿರಿ ಠಾಣೆಯಲ್ಲಿ ಪರಮೇಶ್ ವಿರುದ್ಧ ನನ್ನ ಮೇಲೆ ಹಲ್ಲೆ ನಡೆಸಿದ ಎಂದು ಮತ್ತೊಂದು ದೂರು ದಾಖಲಿಸಿದರು. ಈ ದೂರಿನ ಆಧಾರದ ಮೇಲೆ ಪೊಲೀಸರು ಎಫ್ ಐ ಆರ್ ದಾಖಲಿಸಿದರು.
ಹಲ್ಲೆಗೊಳಗಾದ, ಮೊದಲು ದೂರು ದಾಖಲಿಸಿದ ವ್ಯಕ್ತಿಗೆ ರಕ್ಷಣೆ ನೀಡಬೇಕಾದ ಪೊಲೀಸರು, ಸಬ್ ಇನ್ ಪೆಕ್ಟರ್ ಗೆ ಫೇವರ್ ಮಾಡುವ ಸಲುವಾಗಿ ಪರಮೇಶ್ ವಿರುದ್ಧವೇ ಎಫ್.ಐ.ಆರ್ ದಾಖಲಿಸಿದ್ದಾರೆ ಎಂದು ಪರಮೇಶ್ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದರು. ಕಡೆಗೆ ನ್ಯಾಯಾಲಯದಿಂದ ಅನುಮತಿ ಪಡೆದು ಪೊಲೀಸರು ಮತ್ತೊಂದು ಎಫ್.ಐ.ಆರ್ ದಾಖಲಿಸಿದರು.
ಇದೇ ವೇಳೆ ಸಬ್ ಇನ್ಸ್ ಪೆಕ್ಟರ್ ಯಾಸ್ಮಿನ್ ತಾಜ್, ಅಪಘಾತ ಘಟನೆ ನಡೆದಿದ್ದ ಸಿದ್ದಾರ್ಥ ಪೊಲೀಸ್ ಠಾಣೆಯಲ್ಲಿ ಪರಮೇಶ್ ವಿರುದ್ಧವೇ ಮತ್ತೊಂದು ದೂರು ದಾಖಲಿಸಿದರು. ನಾನೇ ವಾಹನ ಚಲಾಯಿಸುತ್ತಿದ್ದದ್ದು, ನನ್ನ ವಾಹನಕ್ಕೆ ಡಿಕ್ಕಿ ಹೊಡೆದು ಪರಮೇಶ್ ಹಲ್ಲೆ ನಡೆಸಿದ ಎಂದು ದೂರಿನಲ್ಲಿ ಆರೋಪಿಸಿದ್ದರು. ಈ ದೂರಿನ ಮೇರೆಗೆ ಪೊಲೀಸರು ಮತ್ತೊಂದು ಎಫ್ ಐ ಆರ್ ದಾಖಲಿಸಿದರು.

ಪೊಲೀಸ್ ಆಯುಕ್ತರ ಹೇಳಿಕೆ :
ಈ ಘಟನೆಯಲ್ಲಿ ಹಲ್ಲೆ ಆರೋಪಕ್ಕೆ ಸಂಬಂಧಿಸಿದಂತೆ ಉದಯಗಿರಿ ಪೊಲೀಸ್ ಠಾಣೆಯಲ್ಲಿ ದೂರು ಹಾಗೂ ಪ್ರತಿದೂರು ದಾಖಲಾಗಿದೆ. ಜತೆಗೆ ಸಿದ್ದಾರ್ಥ ಸಂಚಾರಿ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ದೂರು ಹಾಗೂ ಪ್ರತಿ ದೂರು ದಾಖಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಅವರು ಜಸ್ಟ್ ಕನ್ನಡ ಡಾಟ್ ಇನ್ ಗೆ ಮಾಹಿತಿ ನೀಡಿದರು.

key words : sub inspector yasmin taj-mysore-assult-complaint-police-FIR

In a rare case, the incident of a lady inspector lodging a complaint against a person who allegedly threatened her life, has gained all attention. Inspector Yasmin taj of T narasipura has accused Paramesh of Mysore that he threatened to kill her. Four FIRs have been lodged in this case making it a high profile one.