ಇಂದಿನ ವಿದ್ಯಾರ್ಥಿಗಳಿಗೆ ರಾಮಾಯಣದ ತಿಳುವಳಿಕೆ ಅಗತ್ಯ: ಮೈವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್

ಮೈಸೂರು, ಅಕ್ಟೋಬರ್ 9, 2022 (justkannada.in): ವಿಶ್ವವಿದ್ಯಾಲಯದಲ್ಲಿ ಓದುವ ಎಲ್ಲರಿಗೂ ರಾಮಾಯಣ ಹಾಗೂ ಮಹಾಭಾರತದ ಪರಿಚಯ ಹಾಗೂ ತಿಳುವಳಿಕೆ ಇರಬೇಕು ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದ್ದಾರೆ.

ಮೈಸೂರು ವಿಶ್ವವಿದ್ಯಾನಿಲಯ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿಶೇಷ ಘಟಕದ ವತಿಯಿಂದ ವಿಜ್ಞಾನ ಭವನದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭದಲ್ಲಿ ಅವರು ಹೇಳಿದಿಷ್ಟು.

ಪ್ರಪಂಚದ ಇತರ ಭಾಗಗಳಲ್ಲಿ ರಾಮಾಯಣ ಹಾಗೂ ಭಗವದ್ಗೀತೆ ಹೆಚ್ಚು ಪ್ರಭಾವ ಬೀರಿದೆ. ಹಾಗಾಗಿ ಇಂದಿನ‌ ವಿದ್ಯಾರ್ಥಿಗಳ ಅಧ್ಯಯನ ಕಾರ್ಯ ಕ್ಷೇತ್ರ ಯಾವುದೇ ಇರಲಿ ಆದರೆ ರಾಮಾಯಣವನ್ನು ತಿಳಿದುಕೊಂಡಿರಬೇಕು. ಸುಧಾಮೂರ್ತಿ ಅವರು ಕಂಪ್ಯೂಟರ್ ಸೈನ್ಸ್ ಓದಿ, ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆಯಾದರೂ ಅವರ ಮೇಲೆ ರಾಮಾಯಣ, ಭಗವದ್ಗೀತೆ ಹೆಚ್ಚು ಪ್ರಭಾವ ಬೀರಿದೆ. ಹಾಗಾಗಿ ಅವರು ಹೆಚ್ಚಿನ ಸಾಹಿತ್ಯ ಕೃಷಿ ಮಾಡಲು ಸಾಧ್ಯವಾಯಿತು. ಸರ್ ಸಿವಿ ರಾಮಣ್ಣ ವಿಜ್ಞಾನಿಯಾದರೂ ಸಂಗೀತದ ಜ್ಞಾನ ಇತ್ತು. ರಾಷ್ಟ್ರೀಯ ಶಿಕ್ಷಣ ನೀತಿಯೂ ಬಹು‌ಕೌಶಲ್ಯಕ್ಕೆ ಹೆಚ್ಚಿನ‌ ಆದ್ಯತೆ ನೀಡಿದೆ ಎಂದರು.

ರಾಮಾಯಣ ಮತ್ತು ಮಹಾಭಾರತ ಭಾರತದ ಎರಡು ಪ್ರಮುಖ ಮಹಾಕಾವ್ಯಗಳು. ರಾಮಾಯಣ ಬರೆದ ವಾಲ್ಮೀಕಿಯನ್ನು ನಾವು ಆದಿಕವಿ ಎಂದೆ ಕರೆಯುತ್ತೇವೆ. ಪ್ರಪಂಚದ ಹಲವು ದೇಶದ ಸಹೃದಯರನ್ನು ರಾಮಾಯಣ ಗೆದ್ದಿದೆ.‌ ಆದಿಕವಿ ವಾಲ್ಮೀಕಿ ಮಹಾನ್ ವ್ಯಕ್ತಿ. ‌ವಾಲ್ಮೀಕಿ ತತ್ತ್ವಶಾಸ್ತ್ರಜ್ಞ, ಆದಿಕವಿ, ತಪಸ್ವಿ, ಇತಿಹಾಸಕಾರ, ಸಮಾಜ ಸುಧಾರಕ, ಶೋಷಿತ ಜನಾಂಗದ ಹರಿಕಾರ.‌ ವಾಲ್ಮೀಕಿ‌ ಬರೆಯದ ವಿಷಯವಿಲ್ಲ. ತಮ್ಮ ಕೃತಿಯಲ್ಲಿ ತತ್ತ್ವ ಜ್ಞಾನದಿಂದ ಹಿಡಿದು ತಂತ್ರಜ್ಞಾನದ ಬಗ್ಗೆ ಬರೆದಿದ್ದಾರೆ ಎಂದರು.

ವಾಲ್ಮೀಕಿ ವಾಸ್ತವವಾದಿ. ಅಲ್ಲದೆ ಶ್ರೀರಾಮನ ಸಮಕಾಲೀನರಾದ ಕಾರಣ ರಾಮಾಯಣ ಬರೆಯಲು ಸಾಧ್ಯವಾಯಿತು. ರಾಮಾಯಣ ಕಾಲದ ಕಾವ್ಯವಾದರೂ ಎಲ್ಲಾ ಕಾಲಕ್ಕೂ ಸಲ್ಲುವಂತೆ ವಾಲ್ಮೀಕಿ ಬರೆದಿದ್ದಾರೆ. ಬೇಡ ಸಮುದಾಯಕ್ಕೆ ಸೇರಿದ ವಾಲ್ಮೀಕಿ ಅವರ ಮೂಲ ಹೆಸರು ರತ್ನಾಕರ. ವಾಲ್ಮೀಕಿ ರಾಮಾಯಣದಲ್ಲಿ ಸಕಲ ಜ್ಞಾನದ ಸಂಪತ್ತು ಅಡಕವಾಗಿದೆ. ರಾಮಾಯಣ ಭಾರತೀಯ ಸಂಸ್ಕೃತಿ ನೆಲೆಬೀಡು. ವಾಲ್ಮೀಕಿ ತತ್ತ್ವ ಜನ ಸಾಮಾನ್ಯರನ್ನು ತಲುಪಬೇಕು ಎಂದರು.

ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಕೃಷ್ಣ ಹೊಂಬಾಳು ಮಾತನಾಡಿ, ವಾಲ್ಮೀಕಿ ಸಾಹಿತ್ಯ ಲೋಕದ ವಿಶಿಷ್ಟ ಕೋಗಿಲೆ. ಕಾವ್ಯ ಪರಂಪರೆಯ ನಿರಂತರ ಗಂಗೆಯಾಗಿ ವಾಲ್ಮೀಕಿ ಉಳಿದುಕೊಂಡಿದ್ದಾರೆ. ನಾಟಕ, ಗ್ರಂಥಗಳ ಮೂಲಕ ವಾಲ್ಮೀಕಿ ಹಲವು ಕಡೆ ಜೀವಂತವಾಗಿದ್ದಾರೆ. ಬೋಜರಾಜ ತಮ್ಮ ಕಾವ್ಯದಲ್ಲಿ ವಾಲ್ಮೀಕಿ ಅವರನ್ನು ‘ಗೀತ ರಘುಪುಂಗವ’ ಎಂದು ಬಣ್ಣಿಸುತ್ತಾರೆ. 24 ಸಾವಿರ ಶ್ಲೋಕಗಳು ರಾಮಾಯಣದಲ್ಲಿ ಇದೆ. ವಾಲ್ಮೀಕಿ ಋಷಿ,‌ ಸಂಸ್ಕೃತ ಕವಿ. ರತ್ನಾಕರ‌ ಇವರ ಜನ್ಮನಾಮ ಎಂದು ವಿವರಿಸಿದರು.

ಮೈವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿಶೇಷ ಘಟಕ ಅಧಿಕಾರಿ ಪ್ರೊ.ಎಸ್.ಮಹದೇವಮೂರ್ತಿ, ಪ್ರೊ.ರಾಮಶೇಷು ಸೇರಿದಂತೆ ಇತರರು ಇದ್ದರು.