ಲಾರಿ ಮಾಲೀಕರ ಒಕ್ಕೂಟದಿಂದ ಮುಷ್ಕರಕ್ಕೆ ಸಭೆಯಲ್ಲಿ ನಿರ್ಧಾರ.

ಮೈಸೂರು,ಜನವರಿ,10,2024(www.justkannada.in): ನಾಗರೀಕ ಸುರಕ್ಷತಾ 2023ರ ವಿಧೇಯಕ ಹಿಂಪಡೆಯುವಂತೆ ಆಗ್ರಹಿಸಿ ಜನವರಿ 17ರಿಂದ ಲಾರಿ ಮಾಲೀಕರ ಒಕ್ಕೂಟದಿಂದ ಮುಷ್ಕರ ನಡೆಸಲಾಗುತ್ತದೆ ಎಂದು ಮೈಸೂರು ಜಿಲ್ಲಾ ಲಾರಿ ಮಾಲೀಕರ ಹಾಗೂ ಚಾಲಕರ ಒಕ್ಕೂಟದ ಅಧ್ಯಕ್ಷ ಕೊದಂಡರಾಮ ತಿಳಿಸಿದರು.

ನಾಗರೀಕ ಸುರಕ್ಷತಾ ಕಾಯ್ದೆ 2023 ವಿಧೇಯಕವನ್ನು ವಿರೋಧಿಸಿ ಮೈಸೂರು ಜಿಲ್ಲಾ ಲಾರಿ ಮಾಲೀಕರ ಹಾಗೂ ಚಾಲಕರ ಒಕ್ಕೂಟದ ಅಧ್ಯಕ್ಷ ಕೊದಂಡರಾಮ, ರಾಜ್ಯ ಮಟ್ಟದ ಲಾರಿ ಮಾಲೀಕರ ಅಧ್ಯಕ್ಷ ನವೀನ್ ರೆಡ್ಡಿ ಅವರ ನೇತೃತ್ವದಲ್ಲಿ ಸಂಘದ ಆವರಣದಲ್ಲಿ ನಡೆದ ಸಭೆಯಲ್ಲಿ ಹುಣಸೂರು, ನಂಜನಗೂಡು , ಚಾಮರಾಜನಗರ , ಗುಂಡ್ಲುಪೇಟೆ , ಸೇರಿದಂತೆ ಹಲವು ಜಿಲ್ಲೆಗಳ ಲಾರಿ ಮಾಲೀಕರು , ಚಾಲಕರು, ಆಟೋ, ಬಸ್, ಟ್ಯಾಕ್ಸಿ, ಚಾಲಕರು , ಮಾಲೀಕರು ಸೇರಿದಂತೆ ಹಲವರು ಪಾಲ್ಗೊಂಡಿದ್ದರು,

ಸಭೆಯಲ್ಲಿ ನಾಗರೀಕ ಸುರಕ್ಷತಾ ಕಾಯ್ದೆ 2023 ವಿಧೇಯಕವನ್ನು‌ ವಿರೋಧಿಸಿ ಎಲ್ಲರೂ ಒಮ್ಮತದಿಂದ ಜನವರಿ 17 ರಿಂದ ಮುಷ್ಕರ ಪ್ರಾರಂಭಿಸುವ ನಿರ್ಧಾರಕ್ಕೆ ಬರಲಾಯಿತು.

ಸಭೆಯ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಕೊದಂಡರಾಮ ಅವರು, ಇದು ಕೇವಲ ಲಾರಿ ಮಾಲೀಕರಿಗೆ ಮಾತ್ರವಲ್ಲ, ಎಲ್ಲಾ ವಾಹನ ಸವಾರರಿಗೂ ತೊಂದರೆಯಾಗಲಿದೆ. ನಾಗರೀಕ ಸುರಕ್ಷತಾ 2023ರ ವಿಧೇಯಕವು  ವಾಹನ ಚಾಲಕರಿಗೆ ಮಾರಕವಾಗಿದೆ. ಈಗಾಗಲೇ ವಾಹನ ಚಾಲಕರು ಅನೇಕ ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ. ಈ ವಿಧೇಯಕವನ್ನ ಕೂಡಲೇ ವಾಪಾಸ್ ಪಡೆಯಬೇಕು ಎಂದು ಆಗ್ರಹಿಸಿದರು.

ನಾಗರೀಕ ಸುರಕ್ಷತಾ 2023ರ ವಿಧೇಯಕ ಹಿಂಪಡೆಯುವಂತೆ ಆಗ್ರಹಿಸಿ ಜನವರಿ 17ರಿಂದ ಲಾರಿ ಮಾಲೀಕರ ಒಕ್ಕೂಟ ಮುಷ್ಕರ ನಡೆಸುತ್ತದೆ. ಅಗತ್ಯ ವಸ್ತುಗಳಾದ ತರಕಾರಿ, ಔಷಧಿ, ಹಾಲು ಬಿಟ್ಟು ಉಳಿದ ಸರಕು ಸಾಗಾಣಿಕೆ ವಾಹನಗಳು ರಸ್ತೆಗೆ ಇಳಿಯಲ್ಲ. ನಮ್ಮ ಬೇಡಿಕೆ ಈಡೇರುವವರೆಗೂ ಮುಷ್ಕರ ಮುಂದುವರೆಯುತ್ತದೆ ಎಂದು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಅಬ್ದುಲ್ ಖಾದರ್ ಶಾಹಿದ್, ಪೃಥ್ವೀರಾಜ್, ರಾಜೇಂದ್ರ , ನಾಗಚಂದ್ರ, ವಜ್ರೇಗೌಡ, ಶ್ರೀನಿವಾಸ್ ರಾವ್ , ಅಭಿಷೇಕ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.

Key words: Strike – Lorry -Owners- Union – Jan 17-mysore