ಹಿಂದಿನ ನಮ್ಮ ಸರ್ಕಾರದ ಬಗ್ಗೆ ಸುಳ್ಳು ಹೇಳುವುದು ನಿಲ್ಲಿಸಿ ಕೂಡಲೇ ಶ್ವೇತಪತ್ರ ಹೊರಡಿಸಿ- ಇಂಧನ ಸಚಿವರಿಗೆ ಸಿದ್ಧರಾಮಯ್ಯ ಆಗ್ರಹ.

ಬೆಂಗಳೂರು,ಸೆಪ್ಟಂಬರ್,7,2022(www.justkannada.in): ಇಂಧನ ಸಚಿವರು ಹಿಂದಿನ ನಮ್ಮ ಸರ್ಕಾರದ ಬಗ್ಗೆ ಸುಳ್ಳು ಹೇಳುವುದನ್ನು ನಿಲ್ಲಿಸಿ ಕೂಡಲೆ ಶ್ವೇತಪತ್ರ ಹೊರಡಿಸಬೇಕು ಹಾಗೂ ರೈತರ ಪಂಪ್ ಸೆಟ್ ಗಳಿಗೆ ಮೀಟರ್ ಅಳವಡಿಸುವ  ಕೇಂದ್ರದ ವಿದ್ಯುತ್ ಮಸೂದೆಯನ್ನು ತಿರಸ್ಕರಿಸಲು ಮುಂದಿನ ಅಧಿವೇಶನದಲ್ಲಿ ನಿರ್ಣಯ ಮಂಡಿಸಬೇಕು ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಆಗ್ರಹಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ  ಮಾಜಿ ಸಿಎಂ ಸಿದ್ದರಾಮಯ್ಯ  ಹೇಳಿದ್ದಿಷ್ಟು…

ಸುನಿಲ್‍ಕುಮಾರ್ ಅವರು ಮಾಧ್ಯಮಗಳಿಗೆ ನೀಡಿರುವ ಹೇಳಿಕೆ ಪ್ರಕಾರ, ನಮ್ಮ ಸರ್ಕಾರದ ಅವಧಿಯಲ್ಲಿ ರೈತರ ಪಂಪ್ ಸೆಟ್ ಗಳಿಗೆ ಮೀಟರ್ ಅಳವಡಿಸಲು ಹುನ್ನಾರ ನಡೆದಿತ್ತು, ರಾಜ್ಯದ ಮೇಲೆ ಮತ್ತು ಇಂಧನ ಇಲಾಖೆ ಮೇಲೆ ಸಾಲ ಹೊರಿಸಿದ್ದರು.  ಸೋಲಾರ್ ವಿದ್ಯುತ್  ಅನ್ನು ಅವಾಸ್ತವಿಕ ಮೊತ್ತಕ್ಕೆ  ಖರೀದಿಸಿದ್ದರು. ಆದರೆ ಈಗ ಸೌರ ವಿದ್ಯುತ್ ಮಾರಾಟದಿಂದ ರಾಜ್ಯಕ್ಕೆ ಲಾಭ ಬಂದಿದೆ. ತಮ್ಮ ಸರ್ಕಾರ ಸಮರ್ಥವಾಗಿ ನಿಭಾಯಿಸುತ್ತಿದೆ ಎಂದು ಹೇಳಿಕೆ ಕೊಟ್ಟಿದ್ದಾರೆ.  ಹೇಳಿಕೆ ಕೊಟ್ಟ ಮೇಲೆ ಉತ್ತರ ನೀಡಬೇಕಾಗುತ್ತದೆ. ನಾನು ಅವರಿಂದ ಉತ್ತರವನ್ನು ಶ್ವೇತಪತ್ರದ ಮೂಲಕ ಬಯಸುತ್ತಿದ್ದೇನೆ ಎಂದು ತಿರುಗೇಟು ನೀಡಿದರು.

ರೈತರ ಪಂಪುಸೆಟ್  ಗಳಿಗೆ ಮೀಟರ್ ಅಳವಡಿಸುವ ಹುನ್ನಾರ ಮಾಡಿದ್ದರು ಅಂದರೆ ಏನು ಅರ್ಥ? ಅಳವಡಿಸಿದ್ದೆವು ಎಂದೆ? ಎಲ್ಲಿ ಅಳವಡಿಸಿದ್ದೇವೆ? ಮಿಟರ್ ಅಳವಡಿಸಲು ಟೆಂಡರ್ ಕರೆದಿದ್ದೇವೆಯೇ ? ಯಾವ ಕಂಪೆನಿಗೆ ಆದೇಶ ಕೊಟ್ಟಿದ್ದೆವು?  ನಮ್ಮ ಸರ್ಕಾರ ಮೀಟರ್ ಅಳವಡಿಸಲು ಕ್ಯಾಬಿನೆಟ್‍ ನಲ್ಲಿ ತೀರ್ಮಾನ ಮಾಡಿದ್ದರೆ ಅದರ ಪ್ರತಿಗಳೆಲ್ಲಿವೆ? ಯಾವ ರೈತರಿಗೆ  ತೊಂದರೆ ಕೊಟ್ಟಿದ್ದೇವೆ? ದಾಖಲೆ ಬಿಡುಗಡೆ ಮಾಡಬೇಕು ಎಂದು ಸಿದ್ಧರಾಮಯ್ಯ ಒತ್ತಾಯಿಸಿದರು.

ಮೋದಿ ಸರ್ಕಾರ ಹೊಸ ವಿದ್ಯುತ್ ಕಾಯ್ದೆಯನ್ನು ಜಾರಿಗೊಳಿಸಲು, ರೈತರ ಪಂಪ್ ಸೆಟ್ಟುಗಳಿಗೆ ಮೀಟರ್ ಅಳವಡಿಸಲು ಹುನ್ನಾರ ನಡೆಸುತ್ತಿದೆ. ಹೊಸ ವಿದ್ಯುತ್ ಬಿಲ್ಲನ್ನು ಈಗಾಗಲೆ ಪಾರ್ಲಿಮೆಂಟಿನಲ್ಲಿ ಮಂಡಿಸಿದೆ. ಕರಾಳ ಕೊರೋನದ ಕರ್ಫ್ಯೂ ಇದ್ದಾಗಲೆ ಕರಡನ್ನು ಸಿದ್ಧಪಡಿಸಿ ನೆಪಮಾತ್ರಕ್ಕೆ ಚರ್ಚೆಗೆ ಬಿಟ್ಟಂತೆ ಮಾಡಿದ್ದರು. ನಮ್ಮ ಸರ್ಕಾರ ಇದ್ದಾಗ ಈ ರೀತಿಯ ರೈತ ದ್ರೋಹದ ಕಾನೂನನ್ನು ಜಾರಿಗೆ ತಂದಿದ್ದರೆ ಅದರ ದಾಖಲೆ ಬಿಡುಗಡೆ ಮಾಡಿ ಎಂದು ಆಗ್ರಹಿಸಿದರು.

ಮೋದಿ ಸರ್ಕಾರ ತರಲು ಹೊರಟಿರುವ ವಿದ್ಯುತ್ ಬಿಲ್‍ ನ ವಿರುದ್ಧ ಮುಂದಿನ ಅಧಿವೇಶನದಲ್ಲಿ ನೀವೇ ನಿರ್ಣಯವನ್ನು ಮಂಡಿಸಿ, ನೀವು ತರುವ ನಿರ್ಣಯದ ಪರವಾಗಿ ನಾವೆಲ್ಲರೂ ಒಮ್ಮತದಿಂದ ಒಪ್ಪಿಗೆ ಸೂಚಿಸುತ್ತೇವೆ.

ಯಾವ ಕಾರಣಕ್ಕೂ ಕರ್ನಾಟಕದ ರೈತರ ಮೇಲೆ ಹಾಗೂ ಉಳಿದೆಲ್ಲ ಜನ ವರ್ಗಗಳ ಮೇಲೆ ಈ ಕರಾಳ ಕಾನೂನನ್ನು ಜಾರಿಗೊಳಿಸಲು ಅವಕಾಶ ನೀಡುವುದಿಲ್ಲವೆಂದು ಒಮ್ಮತದ ನಿರ್ಣಯವನ್ನು ಅಂಗೀಕರಿಸಿ ಕಳಿಸೋಣ.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ವಿದ್ಯುತ್  ಇಲಾಖೆಯ ಮೇಲೆ ದೊಡ್ಡ ಮೊತ್ತದ ಸಾಲ ಇತ್ತು. ಮುಖ್ಯಮಂತ್ರಿ ಹುದ್ದೆಯ  ಜೊತೆಗೆ ಹಣಕಾಸಿನ ಇಲಾಖೆಯನ್ನು ನೋಡಿಕೊಳ್ಳುತ್ತಿದ್ದ ನಾನು ಈ ಸಾಲವನ್ನು ಹೀಗೇ ಬಿಟ್ಟರೆ, ವಿದ್ಯುತ್ ಇಲಾಖೆಯು ಮುಳುಗಿ ಹೋಗುತ್ತದೆ ಎಂಬ ಕಾರಣಕ್ಕಾಗಿ ಎಸ್ಕಾಂಗಳ ಬಾಕಿಗಳನ್ನು ತೀರಿಸಲು ಸಾಲ ಮಾಡಿದ್ದೆವು. ಅಗತ್ಯ ಇರುವ ಕ್ಷೇತ್ರದಲ್ಲಿ ಹೂಡಿಕೆ ಮಾಡುವುದನ್ನು ನಷ್ಟ ಎನ್ನುವುದಿಲ್ಲ. ಬದಲಾಗಿ ಬಂಡವಾಳ ಹೂಡಿಕೆ ಎನ್ನುತ್ತಾರೆ ಎಂಬ ಅರ್ಥ ಶಾಸ್ತ್ರದ ತತ್ವಗಳನ್ನು ಸಚಿವರು ಅರ್ಥ ಮಾಡಿಕೊಳ್ಳಬೇಕು ಎಂದು ಸಿದ್ಧರಾಮಯ್ಯ ಚಾಟಿ ಬೀಸಿದರು.

ಸುಮಾರು ವರ್ಷಗಳಿಂದ ರಾಜ್ಯ ಸರ್ಕಾರದ ಇಲಾಖೆಗಳು ವಿದ್ಯುತ್ ಇಲಾಖೆಗೆ ಪಾವತಿಸದೆ ಉಳಿಸಿಕೊಂಡಿದ್ದ ಬಾಕಿಗಳನ್ನು ತೀರಿಸಿ ಅವುಗಳ ಹೊರೆ ಕಡಿಮೆ ಮಾಡಿದ್ದನ್ನು ಸುನಿಲ್ ಕುಮಾರ್ ಅವರು ನಷ್ಟಕ್ಕೆ ತಂದರು ಎಂದು ಎಂದು ಹೇಳುತ್ತಿದ್ದಾರೆ. ಇದು ಸಂಪೂರ್ಣ ರಾಜಕೀಯಕ್ಕಾಗಿ ಹೇಳುತ್ತಿರುವ ಸುಳ್ಳು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ  2014-15 ರಲ್ಲಿ ಒಟ್ಟು ರಾಜ್ಯದಲ್ಲಿ ಉತ್ಪಾದನೆಯಾಗುತ್ತಿದ್ದ ವಿದ್ಯುತ್ 14825 ಮೆ.ವ್ಯಾ ಮಾತ್ರ. ಅದರಲ್ಲಿ ಸೋಲಾರ್ ಮೂಲದಿಂದ 118 ಮತ್ತು ಗಾಳಿ ಮೂಲದಿಂದ 2655 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಆಗುತ್ತಿತ್ತು. ಆದರೆ 2018 ರ ವೇಳೆಗೆ ಸೋಲಾರ್ ಮೂಲದಿಂದ 6157 ಮೆ.ವ್ಯಾ. ಮತ್ತು ಗಾಳಿ ಮೂಲದಿಂದ 4730 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಸ್ಥಿತಿಗೆ ರಾಜ್ಯವು ತಲುಪಿತು.

ಕಲ್ಲಿದ್ದಲು ಮೂಲದ ಉಷ್ಣ ವಿದ್ಯುತ್ ಕೂಡಾ 2014-15 ರಲ್ಲಿ 6197 ಮೆಗಾವ್ಯಾಟ್ ಇದ್ದದ್ದು, 2018 ರ ವೇಳೆಗೆ 11366 ಮೆಗಾವ್ಯಾಟ್ ಉತ್ಪಾದನೆ ಮಾಡುವ ಹಂತಕ್ಕೆ ತಲುಪಿತ್ತು. ಒಂದು ಕಾಲದಲ್ಲಿ ಕೇವಲ 2-3 ಗಂಟೆ ವಿದ್ಯುತ್ ಒದಗಿಸಲು ಸಂಕಷ್ಟ ಪಡುತ್ತಿದ್ದ ರಾಜ್ಯವು 2018 ರ ವೇಳೆಗೆ 28741 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಹಂತಕ್ಕೆ ರಾಜ್ಯವು ತಲುಪಿತು. ನಮ್ಮ 5 ವರ್ಷಗಳ ಆಡಳಿತದ ಅವಧಿಯಲ್ಲಿ 13175 ಮೆಗಾವ್ಯಾಟ್ ವಿದ್ಯುತ್ ಅನ್ನು ಹೆಚ್ಚಾಗಿ ಉತ್ಪಾದನೆ ಮಾಡಲಾರಂಭಿಸಿದೆವು.

2014-15 ರಲ್ಲಿ ನವೀಕರಿಸಬಹುದಾದ ಇಂಧನ ಮೂಲದಿಂದ ಒಟ್ಟು ಉತ್ಪಾದನೆಯಾಗುತ್ತಿದ್ದ ವಿದ್ಯುತ್ ಪ್ರಮಾಣ 4855 ಮೆಗಾ ವ್ಯಾಟ್ ಗಳಷ್ಟಿತ್ತು. 2018 ರ ವೇಳೆಗೆ ಅದು 13500 ಕ್ಕೂ ಹೆಚ್ಚು ಮೆಗಾ ವ್ಯಾಟ್ ಗಳನ್ನು ಉತ್ಪಾದನೆ ಮಾಡುವ ಹಂತಕ್ಕೆ ತಲುಪಿದೆವು.

ಇದು ಕಾಂಗ್ರೆಸ್ ಸರ್ಕಾರದ ಶ್ರಮದಿಂದ ಆದದ್ದು. ನಾವು ಮಾಡಿದ್ದ ಕೆಲಸದಿಂದ ನೀವು ಹಣ ಗಳಿಸುತ್ತಿದ್ದರೆ, ಕೆಲಸದ ಕ್ರೆಡಿಟ್  ಯಾರಿಗೆ ಸಲ್ಲಬೇಕು? ಬಿಜೆಪಿ ಸರ್ಕಾರ ಮಾರುತ್ತಿರುವ ವಿದ್ಯುತ್ ಅನ್ನು ಉತ್ಪಾದಿಸಲು ಕ್ರಮ ಕೈಗೊಂಡವರು ಯಾರು? ನಿಮ್ಮ ಸರ್ಕಾರ ಬಂದಾದ ಮೇಲೆ ಎಷ್ಟು ವಿದ್ಯುತ್ ಉತ್ಪಾದನೆಯನ್ನು ಹೊಸದಾಗಿ ಮಾಡಿದ್ದೀರಿ? ವಿದ್ಯುತ್ ಉತ್ಪಾದನೆಗಾಗಿ ಎಷ್ಟು ಬಂಡವಾಳ ಹೂಡಿದ್ದೀರಿ? ಹಾಗೂ ನಾವು ಉತ್ಪಾದನೆ ಮಾಡಲು ಪ್ರಾರಂಭಿಸಿದ ವಿದ್ಯುತ್ ಅನ್ನು ಎಷ್ಟು ಮಾರಾಟ ಮಾಡುತ್ತಿದ್ದೀರಿ? ಎಂಬ ದಾಖಲೆಗಳನ್ನು ಕೂಡಲೆ ಬಿಡುಗಡೆ ಮಾಡಿ.

ರಾಜ್ಯದಲ್ಲಿ ಗರಿಷ್ಠ ವಿದ್ಯುತ್ ಬೇಡಿಕೆ ಬೇಸಿಗೆಯಲ್ಲಿ ಸುಮಾರು 11 ರಿಂದ 13000 ಮೆಗಾ ವ್ಯಾಟ್‍ಗಳಷ್ಟು ಇದೆ. ಮಳೆಗಾಲದಲ್ಲಿ 8 ರಿಂದ 9000 ಮೆಗಾ ವ್ಯಾಟ್‍ಗಳಿಗೆ ಮಾತ್ರ ಬೇಡಿಕೆಯಿರುತ್ತದೆ. ಇನ್ನು ಉಳಿಕೆಯಾಗುವ ಸುಮಾರು 18 ರಿಂದ 20 ಸಾವಿರ ಮೆಗಾ ವ್ಯಾಟ್‍ಗಳನ್ನು ಮಾರಬೇಕಲ್ಲ, ಅದನ್ನು ಮಾರಾಟ ಮಾಡಲು ಯಾವ ಕ್ರಮ ಕೈಗೊಂಡಿದ್ದೀರಿ ಎಂಬುದನ್ನು ಶ್ವೇತ ಪತ್ರದ ಮೂಲಕ ರಾಜ್ಯದ ಜನತೆಗೆ ತಿಳಿಸಬೇಕು.

ಮಾನ್ಯ ಇಂಧನ ಸಚಿವರೆ, ಸಿದ್ದರಾಮಯ್ಯ ರವರ ಸರ್ಕಾರ ಸೋಲಾರ್ ವಿದ್ಯುತ್ ಅನ್ನು ಪ್ರತಿ ಯೂನಿಟ್‍ ಗೆ 5 ರಿಂದ 11 ರೂ.ಗಳವರೆಗೆ ಕೊಟ್ಟು ಅವಾಸ್ತವಿಕ ಖರೀದಿ ಒಪ್ಪಂದವನ್ನು ಮಾಡಿಕೊಂಡಿತ್ತು ಎಂದು ಆರೋಪ ಮಾಡಿದ್ದೀರಿ. ಈ ದರಗಳನ್ನು ಕಡಿಮೆ ಮಾಡಿ, ರೂ.3 ರ ಒಳಗೆ ಒಪ್ಪಂದ ಮಾಡಿಕೊಂಡಿದ್ದರೆ ರಾಜ್ಯಕ್ಕೆ ರೂ.2000 ಸಾವಿರ ಕೋಟಿ ನಷ್ಟ ತಪ್ಪುತ್ತಿತ್ತು ಎಂದೂ ಹೇಳಿದ್ದೀರಿ. ಆದರೆ ನಿಮ್ಮ ವಿಶ್ವಗುರು ಮೋದಿಯವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮತ್ತು ಆನಂತರದಲ್ಲಿ ಗುಜರಾತ್‍ ನಲ್ಲಿ ಪ್ರತಿ ಯೂನಿಟ್ ವಿದ್ಯುತ್ ಖರೀದಿಸಲು ಎಷ್ಟು ರೂಪಾಯಿಗಳಿಗೆ ಅಗ್ರಿಮೆಂಟ್ ಮಾಡಿಕೊಂಡಿದ್ದರು ತಿಳಿಸಿ? ಈ ಮಾಹಿತಿಯನ್ನೊಳಗೊಂಡಂತೆ ದೇಶದಲ್ಲಿ ಯಾವ, ಯಾವ ರಾಜ್ಯಗಳು 2010 ರಿಂದ 2022 ರವರೆಗೆ ಎಷ್ಟು ರೂಪಾಯಿಗಳಿಗೆ ಸೋಲಾರ್ ವಿದ್ಯುತ್ ಖರೀದಿ ಒಪ್ಪಂದಗಳನ್ನು ಮಾಡಿಕೊಂಡಿವೆ ಎಂಬುದರ ಕುರಿತು ಕೂಡಲೆ ಶ್ವೇತ ಪತ್ರವನ್ನು ಹೊರಡಿಸಬೇಕೆಂದು ಆಗ್ರಹಿಸುತ್ತೇನೆ ಎಂದಿದ್ದಾರೆ.

ಗುಜರಾತ್‍ನ ಬಿಜೆಪಿ ಸರ್ಕಾರ ಮತ್ತು ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಅವಧಿಗಳಲ್ಲಿ ವಿದ್ಯುತ್ ಖರೀದಿ ಒಪ್ಪಂದಗಳ ಕುರಿತು ತೌಲನಿಕವಾದ ದಾಖಲೆಗಳನ್ನು ಒಳಗೊಂಡಂತೆ ಶ್ವೇತಪತ್ರವನ್ನು ಹೊರಡಿಸಬೇಕೆಂದು ಆಗ್ರಹಿಸುತ್ತೇನೆ.

2017-18 ರ ವರೆಗೆ ಸೋಲಾರ್ ವಿದ್ಯುತ್ ಅತ್ಯಂತ ದುಬಾರಿಯಾಗಿತ್ತು. ಆ ನಂತರದಲ್ಲಿ ಸೋಲಾರ್ ಪ್ಯಾನೆಲ್ ಮುಂತಾದ ಉಪಕರಣಗಳ ಬೆಲೆ ಇಳಿಕೆ ಕಂಡಿತು. ನೀವು ಹೇಳುತ್ತಿದ್ದೀರಲ್ಲ 3 ರೂಪಾಯಿ, ಅದಕ್ಕಿಂತ ಕಡಿಮೆ ಬೆಲೆಗೆ ವಿದ್ಯುತ್ ಸರಬರಾಜು ಮಾಡಲು ಕಂಪೆನಿಗಳು ಈಗ ಮುಂದೆ ಬರುತ್ತಿವೆ. ಆದರೂ ಗುಜರಾತ್ ಬಿಜೆಪಿ ಸರ್ಕಾರ 15 ರೂ ವರೆಗೆ ನೀಡಿತು. ಗುಜರಾತ್ 15 ರೂ ನೀಡುವಾಗ ನೀವೆ ಹೇಳುವಂತೆ ನಾವು 5 ರೂಗೆ ಒಪ್ಪಂದ ಮಾಡಿಕೊಂಡಿದ್ದೆವು.

ನಾನು ಈ ಹಿಂದೆ ಇದೇ ವಿಧಾನಸಭಾ ಅಧಿವೇಶನದಲ್ಲಿ ರಾಜ್ಯದ ವಿದ್ಯುತ್ ಇಲಾಖೆಯನ್ನು ಹೇಗೆ ಲಾಭದಾಯಕವಾಗಿ ನಡೆಸಬಹುದೆಂದು ಮತ್ತು ಎಲ್ಲೆಲ್ಲಿ ಸಂಪನ್ಮೂಲಗಳು ಸೋರಿಕೆಯಾಗುತ್ತಿವೆ ಎಂದು ತಿಳಿಸಿದ್ದೆ. ಹಾಗೂ ರಾಜ್ಯದಲ್ಲಿ ಹೆಚ್ಚುವರಿ ವಿದ್ಯುತ್ ಮಾರಾಟ ಮಾಡಿದರೆ ರಾಜ್ಯದ ಜನರ ಮೇಲಿನ ಹೊರೆಯನ್ನು ಯಾವ ರೀತಿ ಇಳಿಸಬಹುದೆಂದು ಯಡಿಯೂರಪ್ಪನವರಿದ್ದಾಗ ಸಲಹೆ ನೀಡಿದ್ದೆ. ಈಗಲೂ ಕೆಲವು ಅಂಶಗಳನ್ನು ರಾಜ್ಯ ಬಿಜೆಪಿ ಸರ್ಕಾರದ ಗಮನಕ್ಕೆ ತರಲು ಬಯಸುತ್ತೇನೆ.

ರಾಜ್ಯ ಸರ್ಕಾರವು ಖರೀದಿಸುತ್ತಿರುವ ವಿದ್ಯುತ್ ಬಿಲ್ಲನ್ನು ದೂರದ ಪ್ರದೇಶದಲ್ಲಿ ಉತ್ಪಾದಿಸುತ್ತಿರುವ ಗ್ರಿಡ್‍ಗಳ ಮೀಟರ್‍ಗಳನ್ನು ಆಧರಿಸಿಯೇ ಪಾವತಿಸುತ್ತಿದೆ. ಇದನ್ನು ಕೂಡಲೆ ನಿಲ್ಲಿಸಿ, ರಾಜ್ಯದ ಒಳಗಿನ ಗ್ರಿಡ್‍ಗಳಿಗೆ ಬಂದ ಮೇಲೆ  ಬಂದ ಮೇಲೆ ಲೆಕ್ಕ ಹಾಕಿ ಬಿಲ್ ಪಾವತಿಸಿದರೆ ಸುಮಾರು ರೂ.1800 ಕೋಟಿಗಳವರೆಗೆ ಉಳಿತಾಯವಾಗುತ್ತದೆ. ಇದನ್ನು ಈಗಾಗಲೆ ಅನೇಕ ರಾಜ್ಯಗಳು ಮಾಡಲಾರಂಭಿಸಿವೆ. ನಾನು ಹೇಳಿ 2 ವರ್ಷಗಳಾದವು, ಆದರೂ ರಾಜ್ಯ ಸರ್ಕಾರ ಈ ಕುರಿತು ತಲೆ ಕೆಡಿಸಿಕೊಂಡಿಲ್ಲ.

ನಮ್ಮ ರಾಜ್ಯವೇ ಈಗ ಯಥೇಚ್ಛವಾಗಿ ವಿದ್ಯುತ್ ಉತ್ಪಾದನೆ ಮಾಡುವ ಸ್ಥಿತಿಯಲ್ಲಿರುವುದರಿಂದ ಒಪ್ಪಂದದ ಅವಧಿ ಮುಗಿದಿರುವ ಹಾಗೂ ಒಂದೆರಡು ವರ್ಷಗಳಲ್ಲಿ ಮುಗಿಯುತ್ತಿರುವ  ಉಡುಪಿಯ ಅದಾನಿ ಪವರ್ಸ್ ಮುಂತಾದ ಖಾಸಗಿಯವರಿಂದ ಖರೀದಿಸುತ್ತಿರುವ ವಿದ್ಯುತ್ ಅನ್ನು ಕೂಡಲೆ ನಿಲ್ಲಿಸಬೇಕು. ಹಾಗೆಯೇ ಇತರೆ ಎಲ್ಲಾ ಒಪ್ಪಂದ ಮುಗಿದಿರುವ ಖಾಸಗಿ ಖರೀದಿಗಳನ್ನು ಸ್ಥಗಿತಗೊಳಿಸಬೇಕು ಇದರಿಂದ ವರ್ಷಕ್ಕೆ ಸುಮಾರು 4500 ಕೋಟಿ ಉಳಿತಾಯವಾಗುತ್ತದೆ. ರಾಜ್ಯಕ್ಕೆ ವಿದ್ಯುತ್ ಬೇಕಿಲ್ಲದಿದ್ದರೂ ಸೆಂಟ್ರಲ್ ಗ್ರಿಡ್‍ಗಳಿಂದ ಖರೀದಿಸುತ್ತಿರುವ ನಾವು ಬಳಸದ ವಿದ್ಯುತ್‍ಗಾಗಿ ರೂ.4500 ಕೋಟಿಗಳವರೆಗೆ ಪಾವತಿ ಮಾಡಲಾಗುತ್ತಿದೆ.

ಅದಾನಿ ಕಂಪೆನಿಯ 1080 ಮೆಗಾ ವ್ಯಾಟ್ ವಿದ್ಯುತ್ ಖರೀದಿಯ ಅವಧಿ 2024 ಕ್ಕೆ ಮುಕ್ತಾಯವಾಗುತ್ತದೆ. ಅದಾನಿ ಕಂಪನಿಯಿಂದ 2019-20 ರಲ್ಲಿ ರೂ.505 ಕೋಟಿಗಳ ವಿದ್ಯುತ್ ಖರೀದಿ ಮಾಡಿದ್ದರೆ, ಪಾವತಿಸಿರುವುದು ರೂ.1092 ಕೋಟಿ. ಕಳೆದ 3 ವರ್ಷಗಳಿಂದಲೂ ಹೀಗೆ ಆಗಿದೆ ಅದನ್ನು ಯಾಕೆ ಹೆಚ್ಚಿಗೆ ಪಾವತಿಸಲಾಗಿದೆ ಎಂಬುದರ ಕುರಿತು ಸಮಗ್ರ ತನಿಖೆಯಾಗಬೇಕು.

ಕೊರೋನಾ ಅವಧಿಯಲ್ಲಿ ಮತ್ತು ಆನಂತರ ಕೂಡ ಖಾಸಗಿ ವಿದ್ಯುತ್ ಖರೀದಿದಾರರಿಂದ ಯಾವ ಕಾರಣಕ್ಕೆ ವಿದ್ಯುತ್ ಖರೀದಿ ಮಾಡಲಾಯಿತು? ಈ ಅವಧಿಯಲ್ಲಿ ರಾಜ್ಯದ ಉಷ್ಣ ವಿದ್ಯುತ್ ಸ್ಥಾವರಗಳನ್ನು ಯಾಕೆ ಮುಚ್ಚಲಾಗಿತ್ತು? ರಾಜ್ಯದ ಗ್ರಿಡ್‍ಗಳು ಖಾಸಗಿಯವರು ಮತ್ತು ಕೇಂದ್ರದ ಗ್ರಿಡ್‍ ಗಳಿಗಿಂತ ಪ್ರತಿ ಯೂನಿಟ್‍ ಗೆ 0.50 ಪೈಸೆಯಷ್ಟು ಕಡಿಮೆ ದರಕ್ಕೆ ಕೆಪಿಸಿಎಲ್ ಮಾರಲು ತಯಾರಿದ್ದರೂ, ಅದನ್ನು ನಿರಾಕರಿಸಿ, ಆರ್‍ಟಿಪಿಎಸ್ ಮತ್ತು ವೈಟಿಪಿಎಸ್‍ಗಳನ್ನು ಮುಚ್ಚಿ, ರಾಜ್ಯದ ಜನರಿಗೆ ಅನ್ಯಾಯ ಮಾಡಿದ್ದು ಏಕೆ? ರಾಜ್ಯದ ಖಜಾನೆಗೆ ಇದರಿಂದಾದ ನಷ್ಟವೆಷ್ಟು? ಎಂಬ ಲೆಕ್ಕವನ್ನು ಕೂಡಲೆ ಬಿಡುಗಡೆ ಮಾಡಬೇಕು.

ಜೊತೆಗೆ ಈ ಕೂಡಲೆ ಅನವಶ್ಯಕವಾಗಿ ಪಾವತಿ ಮಾಡಲಾಗುತ್ತಿರುವ ರಾಜ್ಯದ ಖಜಾನೆಗೆ ಹೊರೆಯಾಗಿರುವ ಎಲ್ಲ ಖರೀದಿ ಒಪ್ಪಂದಗಳನ್ನು ಕೂಡಲೆ ಸ್ಥಗಿತಗೊಳಿಸಬೇಕು. ಮೊಟ್ಟ ಮೊದಲಿಗೆ ಅದಾನಿ ಮುಂತಾದ ಖಾಸಗಿಯವರ ಖರೀದಿ ಒಪ್ಪಂದಗಳನ್ನು ಸ್ಥಗಿತಗೊಳಿಸಬೇಕು.

ಸಚಿವರು ಇನ್ನು ಮುಂದಾದರೂ ರಾಜ್ಯದ ಜನರಿಗೆ ಸುಳ್ಳು ಹೇಳುವುದನ್ನು ಬಿಟ್ಟು ರಾಜ್ಯದ ಹಿತದೃಷ್ಟಿಯಿಂದ ಕೆಲಸ ಮಾಡಬೇಕು. ಇಡೀ ದೇಶದಲ್ಲಿಯೇ ಅತಿ ಹೆಚ್ಚು ದರಗಳನ್ನು ಪಾವತಿಸುತ್ತಿರುವ ಕನ್ನಡಿಗರ ಮೇಲಿನ ವಿದ್ಯುತ್ ಶುಲ್ಕದ ಹೊರೆಗಳನ್ನು ಕಡಿಮೆ ಮಾಡಬೇಕು. ಸಣ್ಣ ಮತ್ತು ಗೃಹ ಕೈಗಾರಿಕೆಗಳಿಗೆ ಸಾಧ್ಯವಾದಷ್ಟು ಕಡಿಮೆ ದರದಲ್ಲಿ ವಿದ್ಯುತ್ ಅನ್ನು ಒದಗಿಸಿ, ಉತ್ಪಾದನಾ ಚಟುವಟಿಕೆಗಳನ್ನು ಹೆಚ್ಚಿಸುವಂತೆ ಆ ಮೂಲಕ ಉದ್ಯೋಗಾವಕಾಶಗಳನ್ನು ಹೆಚ್ಚಿಸುವಂತೆ ನೋಡಿಕೊಳ್ಳಬೇಕು. ಜೊತೆಗೆ ಸೋಲಾರ್ ವಿದ್ಯುತ್ ಅನ್ನು ರಾತ್ರಿ ಸಮಯದಲ್ಲೂ ಬಳಸಲು ಬೇಕಾದ ತಂತ್ರಜ್ಞಾನದ ಹುಡುಕಾಟ ವಿಶ್ವಮಟ್ಟದಲ್ಲಿ ನಡೆಯುತ್ತಿದೆ. ಇಂಥ ಎಲ್ಲ ತಂತ್ರಜ್ಞಾನಗಳು ನಮ್ಮಲ್ಲೆ ವೇದಕಾಲದಲ್ಲೆ ಇದ್ದವು ಎನ್ನುವ ಮೂರ್ಖರ ಸಹವಾಸದಿಂದ ಹೊರಗೆ ಬಂದು ಸಮರ್ಥ ವಿಜ್ಞಾನಿಗಳ, ತಂತ್ರಜ್ಞರ ತಂಡ ರಚಿಸಿ ತಂತ್ರಜ್ಞಾನವನ್ನು ನಿರ್ಮಿಸಲು ಕಾರ್ಯೊನ್ಮುಖರಾಗಿ. ಯಾಕೆಂದರೆ ಈಗ ರಾಜ್ಯದಲ್ಲಿ ಉತ್ಪಾದನೆಯಾಗುತ್ತಿರುವ ವಿದ್ಯುತ್ ಮುಂದಿನ 50 ವರ್ಷಗಳಿಗೆ ಸಾಕಾಗುತ್ತದೆ. ಇದರಿಂದ ನೀವು ಒತ್ತಡಗಳಿಲ್ಲದೆ ಕಾರ್ಯನಿರ್ವಹಿಸಲು ಬಿಡುವು ಸಿಗುತ್ತಿದೆ. ಜನರ ಮೇಲೆ ಅವಾಸ್ತವಿಕವಾಗಿ ಹೊರಿಸಲಾಗುತ್ತಿರುವ ಶುಲ್ಕಗಳನ್ನು ಕಡಿಮೆ ಮಾಡಬೇಕೆಂದೂ ಆಗ್ರಹಿಸುತ್ತೇನೆ.

ರಾಜ್ಯ ಬಿಜೆಪಿ ಸರ್ಕಾರಕ್ಕೆ ವಿದ್ಯುತ್ ಇಲಾಖೆಯ ಕುರಿತು ತನಿಖೆ ಮಾಡುವ ಉದ್ದೇಶವಿದ್ದರೆ 2008 ರಿಂದ ನಡೆದ ಎಲ್ಲ ಖರೀದಿ ಒಪ್ಪಂದಗಳಿಂದ ಹಿಡಿದು ಈವರೆಗಿನ ಪ್ರತಿಯೊಂದು ವಹಿವಾಟುಗಳನ್ನೂ ಸೇರಿಸಿ, ತನಿಖೆ ಮಾಡಬೇಕು. ಈ ತನಿಖೆಯ ನೇತೃತ್ವವನ್ನು ಹೈಕೋರ್ಟ್ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿಯೆ ನಡೆಸಬೇಕೆಂದು ಆಗ್ರಹಿಸುತ್ತೇನೆ. ಮತ್ತು ಹಿನ್ನೆಲೆಯಲ್ಲಿ ವಿದ್ಯುತ್ ಇಲಾಖೆಗೆ ಸಂಬಂಧಪಟ್ಟಂತೆ ಕಳೆದ 15 ವರ್ಷಗಳಿಂದ ಏನೇನಾಗಿದೆ ಎಂಬುದರ ಕುರಿತು ಶ್ವೇತಪತ್ರವನ್ನು ಹೊರಡಿಸಬೇಕೆಂದು  ಮತ್ತೊಮ್ಮೆ  ಒತ್ತಾಯಿಸುವುದಾಗಿ ಸಿದ್ಧರಾಮಯ್ಯ ತಿಳಿಸಿದ್ದಾರೆ.

Key words: Stop -lying – previous government  – Siddaramaiah – Energy Minister.

ENGLISH SUMMARY….

“Stop spreading lies about our Govt.: Issue a white paper – former CM Siddaramaiah Challenges
Bengaluru, September 7, 2022 (www.justkannada.in): “The Energy Minister should stop spreading lies about our government, and issue a white paper immediately, and pass resolution in the next cabinet session refusing implementation of the Union Power Bill regarding installation of meters to the farmers pumpsets,” demanded leader of the Opposition Siddaramaiah.
In a press statement, the former CM stated, “as per the statement given by Energy Minister Sunil Kumar to the media persons, a plan was made to install meters to the farmers pumpsets when there was Congress government in the State. Our government had left huge amount loan on the state and the Energy Department. He has also alleged that we had purchased solar power at an abnormal rate. However, the State has earned profits now from sale of solar power. He has claimed this government is successfully managing it. I have to answer after any statements are issued. I demand an answer from him in the form of a white paper,” he said.
He alleged that the Modi government is planning to install meters to the farmers pumpsets by introducing a new Energy bill, which already been presented in the Parliament. They had prepared it during the Corona pandemic time itself and had invited for a discussion just for name sake. If our government had introduced such a law and cheated the farmers let them release the document,” he demanded.
Keywords: Leader of the Opposition/ Siddaramaiah/ lies/ Congress party