ಹೊಸ ವರ್ಷಾಚರಣೆಗೆ ರಾಜ್ಯ ಸರ್ಕಾರ ನಿರ್ಬಂಧ: ಮಾರ್ಗಸೂಚಿ ಹೀಗಿದೆ ನೋಡಿ..

ಬೆಳಗಾವಿ,ಡಿಸೆಂಬರ್,21,2021(www.justkannada.in): ಕಳೆದ ಬಾರಿಯಂತೆ ಈ ಬಾರಿಯೂ ಅದ್ಧೂರಿ ಹೊಸ ವರ್ಷಾಚರಣೆಗೆ ರಾಜ್ಯ ಸರ್ಕಾರ ನಿರ್ಬಂಧ ವಿಧಿಸಿದೆ. ಈ ಸಂಬಂಧ ರಾಜ್ಯ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಕೊರೊನಾ ಆತಂಕದ ಹಿನ್ನೆಲೆಯಲ್ಲಿ ಹೊಸ ವರ್ಷಾಚರಣೆ ವೇಳೆ ಜನರು ಗುಂಪುಗೂಡದಂತೆ ನಿರ್ಬಂಧದ ಆದೇಶ ಜಾರಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಈ ಕುರಿತು ಸುವರ್ಣಸೌಧದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಹೊಸವರ್ಷದ ಸಂಭ್ರಮಾಚರಣೆಗೆ ಮಾತ್ರ ಈ ನಿಯಮಗಳು ಅನ್ವಯವಾಗುತ್ತವೆ. ಆದರೆ ಕ್ರಿಸ್​ಮಸ್​ ಹಬ್ಬದಲ್ಲಿ ಚರ್ಚುಗಳಲ್ಲಿ ಪ್ರಾರ್ಥನೆ ನಡೆಸಲು ಯಾವುದೇ ನಿರ್ಬಂಧಗಳು ಇರುವುದಿಲ್ಲ. ಎಂಜಿ ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ಗುಂಪುಗೂಡದಂತೆ ನಿಯಮ ವಿಧಿಸಲಾಗುವುದು. ಡಿ 30ರಿಂದ ಜ 2ರವರೆಗೆ ಸಾಮೂಹಿಕ ಸಮಾರಂಭಗಳಿಗೆ ನಿರ್ಬಂಧ ಇರುತ್ತದೆ. ಗುಂಪುಗೂಡಿ ಹೊಸ ವರ್ಷಾಚರಣೆ ಮಾಡಲು ಅವಕಾಶವಿಲ್ಲ ಎಂದಿದ್ದಾರೆ.

ಅಪಾರ್ಟ್ ಮೆಂಟ್ ಗಳಲ್ಲಿ ಡಿಜೆ ಹಾಕುವಂತಿಲ್ಲ.  ಅಪಾರ್ಟ್ ಮೆಂಟ್ ಗಳಲ್ಲಿ ಪಾರ್ಟಿ ಮಾಡುವಂತಿಲ್ಲ. ಹೊರಾಂಗಣ ಪಾರ್ಟಿ ಮಾಡಲು ಅವಕಾಶವಿರುವುದಿಲ್ಲ.ಕ್ಲಬ್ ಗಳಲ್ಲಿ ವಿಶೇಷ ಪಾರ್ಟಿ ಆಯೋಜನೆ ಮಾಡುವ ಆಗಿಲ್ಲ. ಬಹಿರಂಗ ಪಾರ್ಟಿ ಮಾಡಲು ಅವಕಾಶವಿಲ್ಲ.  ಬೆಂಗಳೂರು ಸೇರಿ ರಾಜ್ಯಾದ್ಯಂತ ಈ ಮಾರ್ಗಸುಚಿ ಅನ್ವಯವಾಗಲಿದೆ ಎಂದು ತಿಳಿಸಿದ್ದಾರೆ.

ಪಬ್, ಬಾರ್ ಮತ್ತು ರೆಸ್ಟೋರೆಂಟ್, ಹೋಟೆಲ್​ಗಲ್ಲಿ ಅರ್ಧದಷ್ಟು ಜನರಿಗೆ ಸೇವೆ ಒದಗಿಸಬಹುದು. ಎಲ್ಲಾ ಸಿಬ್ಬಂದಿಗೆ 2 ಡೋಸ್​ ಕೊರೊನಾ ಲಸಿಕೆ ಹಾಕಿಸಿರಬೇಕು. ಆರ್​ಟಿಪಿಸಿಆರ್​ ಟೆಸ್ಟ್​ ಮಾಡಿಸಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು. ಈ ಸಂಬಂಧ ನಡೆದ ವಿಡಿಯೊ ಕಾನ್ಫರೆನ್ಸ್​ನಲ್ಲಿ ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Key words: State government – New Year’s- Eve-restriction-guidelines