ರೈತರ ಹಿತ ಕಾಯಲು ರಾಜ್ಯ ಸರ್ಕಾರ ಬದ್ಧ-ಕೃಷಿ ಸಚಿವ ಚಲುವರಾಯಸ್ವಾಮಿ

ಮಂಡ್ಯ ಆಗಸ್ಟ್, 28,2023(www.justkannada.in): ಕಾವೇರಿ ನದಿ ನೀರಿನ ಹಂಚಿಕೆ ಸಂಕಷ್ಟ ಸೇರಿದಂತೆ ಎಲ್ಲಾ ವಿಚಾರಗಳಲ್ಲೂ ರಾಜ್ಯದ ರೈತರ ಹಿತ ಕಾಯಲು  ಸರ್ಕಾರ ಬದ್ದವಾಗಿದೆ ಎಂದು‌ ಕೃಷಿ ಸಚಿವ  ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ.

ಭಾರತ ಸರ್ಕಾರದ ಆಹಾರ ಸಂಸ್ಕರಣಾ ಮಂತ್ರಾಲಯ , ಕರ್ನಾಟಕ ರಾಜ್ಯ ಕೃಷಿ ಇಲಾಖೆ, ಜಲಾನಯನ ಅಭಿವೃದ್ಧಿ ಇಲಾಖೆ, ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ, ಕರ್ನಾಟಕ ಕೃಷಿ ವಾಣಿಜ್ಯ ಅಭಿವೃದ್ಧಿ ನಿಗಮ, ಮಂಡ್ಯ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್  ಸಹಭಾಗಿತ್ವದಲ್ಲಿ ಮಂಡ್ಯದ ಡಾ.ರಾಜ್ ಕುಮಾರ್ ಬಡಾವಣೆ ಮೈದಾನದಲ್ಲಿ ಏರ್ಪಡಿಸಿದ್ದ ಸಿರಿಧಾನ್ಯ ಮೇಳ, ವಸ್ತು ಪ್ರದರ್ಶನ ಹಾಗೂ ಬೆಲ್ಲದ ಪರಿಷೆಯನ್ನ  ಉದ್ಘಾಟಿಸಿ  ಸಚಿವ ಚಲುವರಾಯಸ್ವಾಮಿ ಅವರು ಮಾತನಾಡಿದರು.

ಇಂತಹ ಪರಿಸ್ಥಿತಿಯಲ್ಲಿ ಕಾವೇರಿ ನದಿ ನೀರಿನ‌ ಹಂಚಿಕೆಗೆ ಸಂಕಷ್ಟ ಸೂತ್ರ ಬೇಕು. ರಾಜ್ಯದ ರೈತರನ್ನು ಉಳಿಸುವುದು ನಮ್ಮ ಜವಾಬ್ದಾರಿ ಅದನ್ನು ನಿರ್ವಹಿಸುತ್ತೇವೆ. ಕಡಿಮೆ ನೀರಿನ ಬಳಕೆ ಮೂಲಕ ಕೃಷಿ ಮಾಡುವುದು, ಅಂತರ್ಜಲ ಹೆಚ್ಚಿಸುವ ಪ್ರಯತ್ನಗಳನ್ನೂ ನಾವು ಮಾಡಬೇಕಿದೆ. ಕೃಷಿ ಹೊಂಡ  ಯೋಜನೆಗೆ ಮರು ಚಾಲನೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ರೈತರ ಬದುಕು ‌ಹಸನಾಗಬೇಕೆಂಬುದು ನಮ್ಮ ಆಶಯ. ಅದಕ್ಕೆ ಪೂರಕವಾದ ಎಲ್ಲಾ ಪ್ರಯತ್ನ ಮಾಡಲಾಗುತ್ತಿದೆ. ಜಿಲ್ಲೆಯ ಜನರು, ಸ್ವಾಮೀಜಿಯವರು ಹಾಗೂ ಪಕ್ಷದ ವರಿಷ್ಠರ ಆಶೀರ್ವಾದದಿಂದ ಸ್ವಾತಂತ್ರ್ಯ ನಂತರ ಮಂಡ್ಯ ಜಿಲ್ಲೆಗೆ  ಇದೇ ಮೊದಲ ಬಾರಿಗೆ  ಕೃಷಿ ಸಚಿವ ಸ್ಥಾನ ದೊರೆತಿದೆ  ಎಂದು ಸಚಿವ ಚಲುವರಾಯಸ್ವಾಮಿ ಹೇಳಿದರು.

ಇಂದು ಸಿರಿಧಾನ್ಯದ ಬಗ್ಗೆ ವಿಶ್ವದಲ್ಲೇ ವ್ಯಾಪಕ  ಚರ್ಚೆ ನಡೆಯುತ್ತಿದ.  ಹಿಂದೊಮ್ಮೆ  ಬಡವರ ಆಹಾರವಾಗಿದ್ದ ಸಿರಿಧಾನ್ಯ  ಇಂದು ಸಿರಿವಂತರ ಆಯ್ಕೆಯಾಗುತ್ತಿದೆ . ಪ್ರಪಂಚದ ಅತ್ಯಂತ ಅವಶ್ಯಕ ಧಾನ್ಯವಾಗಿದೆ. ಈ ವರ್ಷ ಅಂತರಾಷ್ಟ್ರೀಯ ಸಿರಿಧಾನ್ಯ ವರ್ಷ . ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಿರಿಧಾನ್ಯ ಬೆಳೆಗಳಿಗೆ ವಿವಿಧ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಿವೆ. ಕೃಷಿಕರು ಈ‌ ಯೋಜನೆಗಳ ಲಾಭ ಪಡೆಯಬೇಕು. ಸಿರಿಧಾನ್ಯ ಗಳ ಉತ್ಪನ್ನಗಳ ಮೌಲ್ಯ ವರ್ಧನೆ, ಬ್ರಾಂಡಿಂಗ್ ‌ಮಾಡಬೇಕು. ಆ ಮೂಲಕ‌ ಆರ್ಥಿಕ ಪ್ರಗತಿ ಸಾಧಿಸಬೇಕು ಎಂದು  ಸಚಿವ ಚಲುವರಾಯಸ್ವಾಮಿ ಕರೆ ನೀಡಿದರು. ಆದಿಚುಂಚನಗಿರಿ  ಮಾಹಾ ಸಂಸ್ಥಾನ ಮಠದ ಡಾ .ನಿರ್ಮಲಾನಂದನನಾಥ ಸ್ವಾಮೀಜಿ ಆಶೀರ್ವಚನ ನೀಡಿ‌ ರೈತನ ಮಹತ್ವ ವಿವರಿಸಿದರು. ಸುಧಾರಿತ ಕೃಷಿ ಹಾಗೂ ಕೃಷಿ ಉತ್ಪನ್ನಗಳ ಮೌಲ್ಯ ವರ್ಧನೆಗೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸ್ವಾಮೀಜಿ  ಹಿತವಚನ ನೀಡಿದರು.

ಶಾಸಕರಾದ ಪಿ.ಎಂ.ನರೇಂದ್ರ ಸ್ವಾಮಿ, ಪಿ ರವಿ ಕುಮಾರ್ ಅವರು ಕಾರ್ಯಕ್ರಮದಲ್ಲಿ ಮಾತನಾಡಿದರು. ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ , ಮಧು ಜಿ. ಮಾದೇಗೌಡ, ದಿನೇಶ್ ಗೂಳಿಗೌಡ, ಕೆ.ಎಂ ಉದಯ್ , ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಕೆ.ಬಿ .ಈಶ್ವರ್ ಪ್ರಸಾದ್ , ಆಹಾರ ಸಂಸ್ಕರಣೆ ಹಾಗೂ ಕಟಾವು ತಂತ್ರಜ್ಞಾನ ವಿಭಾಗದ ಸರ್ಕಾರದ ವಿಶೇಷ  ಕಾರ್ಯದರ್ಶಿ ಮನೋಜ್ ರಂಜನ್  ಕೃಷಿ ಆಯುಕ್ತರಾದ ವೈ.ಎಸ್   ಪಾಟೀಲ್ ಜಲಾನಯನ ಅಭಿವೃದ್ಧಿ ಇಲಾಖೆ ಆಯುಕ್ತಡಾ ಹೆಚ್.ಸಿ ಗಿರೀಶ್, ಬೆಂಗಳೂರು ಕೃಷಿ ವಿಶ್ವ ವಿದ್ಯಾನಿಲಯ ಕುಲಪತಿ ಡಾ ಎಸ್.ವಿ ಸುರೇಶ್  ಜಲಾನಯನ ಅಭಿವೃದ್ಧಿ ಇಲಾಖೆ ನಿರ್ದೇಶಕರಾದ ಬಿ.ವೈ ಶ್ರೀನಿವಾಸ್ ,ಕೃಷಿ ನಿರ್ದೇಶಕರಾದ ಡಾ ಜಿ.ಟಿ ಪುತ್ರ, ಕೆಪೆಕ್ ವ್ಯವಸ್ಥಾಪಕ ನಿರ್ದೇಶಕರಾದ ಎಂ ಹೆಚ್.ಬಂಥನಾಳ, ಜಿಲ್ಲಾಧಿಕಾರಿ ಕುಮಾರ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎನ್.ಯತೀಶ್,ಜಿಲ್ಲಾ ಪಂಚಾಯತ್ ಸಿ.ಇ.ಒ  ಶೇಖ್ ತನ್ವೀರ್ ಆಸೀಫ್,  ಕೆಪೆಕ್ ಸಂಸ್ಥೆ ಪ್ರತಿನಿಧಿ ಆಕಾಂಕ್ಷಾ ಶರ್ಮಾ ,ಜಂಟಿ ಕೃಷಿ ನಿರ್ದೆಶಕರಾದ ಅಶೋಕ್ ವಿ.ಎಸ್ ಮತ್ತಿತರರು ಹಾಜರಿದ್ದರು. ಇದೇ ವೇಳೆ ಪ್ರಗತಿರ ರೈತ ದಂಪತಿಗಳನ್ನು ಸನ್ಮಾನಿಸಲಾಯಿತು.

PMFME ಉತ್ಪನ್ನಗಳ ಬ್ರಾಂಡ್ ಬಿಡುಗಡೆ ,ಇದೇ ಯೋಜನೆಯ ಫಲಾನುಭವಿಗಳಿಗೆ ಸಾಲ ಮಂಜೂರಾತಿ ಪತ್ರ ವಿತರಣೆ , ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ‌ ವಿತರಣೆ ನಡೆಯಿತು. ರಾಶಿ ಪೂಜೆ  ಸಿರಿಧಾನ್ಯಗಳಿಂದ ಮಾಡಿದ್ದ ಅತ್ಯಂತ ಆಕರ್ಷಕ ಧಾನ್ಯ ರಾಶಿಗೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಗಮನ ಸೆಳೆದ ವಸ್ತುಪ್ರದರ್ಶನ.

ಕಾರ್ಯಕ್ರಮದ ಅಂಗವಾಗಿ  ಆಯೋಜಿಸಲಾಗಿದ್ದ ಕೃಷಿ ಯಂತ್ರಗಳು, ಕೃಷಿ ಉತ್ಪನ್ನಗಳು ,ಸಿರಿಧಾನ್ಯಗಳಿಂದ ಮಾಡಿದ್ದ ತಿನಿಸಿಗಳ ಮಾರಾಟ ಹಾಗೂ ಪ್ರದರ್ಶನ ಗಮನ ಸೆಳೆದವು. ಬೆಲ್ಲದಿಂದ ಮಾಡಿದ್ದ ವಿವಿಧ ಬಗೆಯ ಸಿಹಿ ತಿನಿಸುಗಳಿಂದ  ತುಂಬಿದ್ದ ಬೆಲ್ಲದ ಪರಿಷೆ ಕೂಡ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಸಾರ್ವಜನಿಕರು ಈ ಎಲ್ಲಾ ತಿನಿಸುಗಳನ್ನು ಮುಗಿಬಿದ್ದು ಖರೀದಿಸಿ ಆಸ್ವಾದಿಸಿದರು

 ಎತ್ತಿನ ಗಾಡಿಯಲ್ಲಿ ಬಂದ ಸಚಿವರು, ಸ್ವಾಮೀಜಿ.

ಕೃಷಿ ಸಂಸ್ಕೃತಿಗೆ ಹೆಸರುವಾಸಿಯಾಗಿರುವ ಮಂಡ್ಯದಲ್ಲಿ ಏರ್ಪಡಿಸಿರುವ ಸಿರಿಧಾನ್ಯ ಮೇಳ ಹಲವು ವಿಭಿನ್ನತೆಯಿಂದ ಗಮನ ಸೆಳೆಯಿತು .  ಸಚಿವರು, ಸ್ವಾಮೀಜಿ, ಗಣ್ಯರಿಗೆ ಪೂರ್ಣಕುಂಭ ಸ್ವಾಗತದ ಜೊತೆಗೆ ಎತ್ತಿನ ಬಂಡಿಯಲ್ಲಿ ಕೂರಿಸಿ ಮೆರವಣಿಗೆಯಲ್ಲಿ ಕರೆತರಲಾಯಿತು. ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಅವರೇ ಎತ್ತಿನ ಗಾಡಿ ಚಲಾಯಿಸಿದ್ದು ವಿಶೇಷವಾಗಿತ್ತು.

Key words: state government – look – interests – farmers- Minister -Chaluvarayaswamy