ಏತ ನೀರಾವರಿ ಯೋಜನೆಗಳ ನಿರ್ವಹಣಾ ಜವಾಬ್ದಾರಿಯನ್ನು ‘ಹೊರಗುತ್ತಿಗೆ’ ನೀಡಲು ರಾಜ್ಯ ಕ್ಯಾಬಿನೆಟ್ ಅನುಮೋದನೆ.

ಬೆಂಗಳೂರು, ಅಕ್ಟೋಬರ್ ,21, 2022 (www.justkannada.in): “ರೈತರಿಗೆ ತಡೆರಹಿತ ನೀರು ಸರಬರಾಜು ಮಾಡುವ ಉದ್ದೇಶದೊಂದಿಗೆ ಏತ ನೀರಾವರಿ ಯೋಜನೆಗಳ ನಿಗಾವಣೆ ಹಾಗೂ ನಿರ್ವಹಣೆ ಜವಾಬ್ದಾರಿಯನ್ನು ‘ಹೊರಗುತ್ತಿಗೆ’ ಮೇಲೆ ಖಾಸಗಿ ಸಂಸ್ಥೆಗಳಿಗೆ ವಹಿಸಲು ವಿಸ್ತೃತವಾದ ನೀತಿಯನ್ನು ಕ್ಯಾಬಿನೆಟ್ ಅನುಮೋದಿಸಿತು,” ಎಂದು ಕಾನೂನು ಸಚಿವರಾದ ಜೆ.ಸಿ. ಮಾಧುಸ್ವಾಮಿ ಅವರು ತಿಳಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಜೆ.ಸಿ  ಮಾಧುಸ್ವಾಮಿ ಅವರು,  ರಾಜ್ಯ ಸರ್ಕಾರ ಎತ್ತಿನಹೊಳೆ ಒಳಗೊಂಡಂತೆ ರಾಜ್ಯದಲ್ಲಿ ಮೊದಲ ಹಂತದಲ್ಲಿ ಈ ಹೊಸ ನೀತಿ ಯಾವ ರೀತಿ ಕೆಲಸ ಮಾಡುತ್ತದೆ ಎಂಬುದನ್ನು ಮೌಲ್ಯಮಾಪನ ಮಾಡಲು ಪ್ರಸ್ತುತ ಎಂಟು ಏತ ನೀರಾವರಿ ಯೋಜನೆಗಳನ್ನು ಹೊರಗುತ್ತಿಗೆ ನೀಡಲು ಗುರುತಿಸಿದೆ.

ಈ ಸಂಬಂಧ ಮಾಧ್ಯಮದೊಂದಿಗೆ ಮಾತನಾಡಿದ ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು, ರಾಜ್ಯದ ೨೦೦ಕ್ಕೂ ಹೆಚ್ಚಿನ ಸಂಖ್ಯೆಯ ಏತ ನೀರಾವರಿ ಯೋಜನೆಗಳು ಸರಿಯಾದ ನಿರ್ವಹಣೆಯ ಕೊರತೆಯಿಂದಾಗಿ ಕೆಲಸ ಮಾಡುತ್ತಿಲ್ಲ. ಯೋಜನೆಗಳ ಕಾಮಗಾರಿಗಳು ಪೂರ್ಣಗೊಂಡಿದ್ದರೂ ಜಮೀನುಗಳಿಗೆ ಸಂಪೂರ್ಣವಾಗಿ ನೀರು ಲಭಿಸುತ್ತಿಲ್ಲದಿರುವ ಕಾರಣದಿಂದಾಗಿ ರಾಜ್ಯದ ರೈತರು ಸರ್ಕಾರದ ಬಗ್ಗೆ ಅಸಮಾಧಾನ ಹೊಂದಿದ್ದಾರೆ. “ರಾಜ್ಯ ಸರ್ಕಾರ ೬೦-ಪುಟಗಳ ವಿಸ್ತೃತವಾದ ನೀತಿಯೊಂದನ್ನು ಸಿದ್ಧಪಡಿಸಿದ್ದು, ಇದು ಖಾಸಗಿ ಸಂಸ್ಥೆಗಳವರಿಗೆ ಈ ಯೋಜನೆಗಳನ್ನು ನಿರ್ವಹಿಸಲು ಮಾರ್ಗದರ್ಶಿಯಾಗಿರುತ್ತದೆ,” ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.

“ನಾವು ಯಾವುದೇ ಯೋಜನೆಯನ್ನು ಖಾಸಗಿ ಸಂಸ್ಥೆಗಳಿಗೆ (ಟೆಂಡರ್ ಮೂಲಕ ಆಯ್ಕೆ ಮಾಡಿರುವ ಕಂಪನಿಗಳು) ಹಸ್ತಾಂತರಿಸುತ್ತಿಲ್ಲ. ಆ ಸಂಸ್ಥೆಗಳು ಕೇವಲ ಈ ಯೋಜನೆಗಳ ನಿರ್ವಹಣೆಯ ಜವಾಬ್ದಾರಿಯನ್ನು ಮಾತ್ರ ಹೊಂದಿರುತ್ತಾರೆ. ವಿದ್ಯುತ್ ಶುಲ್ಕಗಳನ್ನು ರಾಜ್ಯ ಸರ್ಕಾರವೇ ಭರಿಸುತ್ತದೆ,” ಎಂದು ಮಾಧುಸ್ವಾಮಿ ವಿವರಿಸಿದರು. ಜೊತೆಗೆ ರಾಜ್ಯದ ಹಲವು ಏತ ನೀರಾವರಿ ಯೋಜನೆಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದನ್ನು ಒಪ್ಪಿಕೊಂಡರು.

ವಿಜಯಪುರ ವಿಮಾನನಿಲ್ದಾಣಕ್ಕೆ ಬಸವಣ್ಣನ ಹೆಸರು

ವಿಜಯಪುರ ವಿಮಾನನಿಲ್ದಾಣವನ್ನು ಉನ್ನತೀಕರಿಸಲು ಮತ್ತು ಅದಕ್ಕೆ 12ನೇ ಶತಮಾನದ ಸಾಮಾಜಿಕ ಪರಿವರ್ತಕ ಕ್ರಾಂತಿಯೋಗಿ ಬಸವಣ್ಣನ ಹೆಸರಿಡಲು ಕ್ಯಾಬಿನೆಟ್ ಅನುಮೋದನೆ ನೀಡಿರುವುದಾಗಿಯೂ ಈ ಸಂದರ್ಭದಲ್ಲಿ ಸಚಿವ ಮಾಧುಸ್ವಾಮಿ ಮಾಹಿತಿ ನೀಡಿದರು. ಈ ಯೋಜನೆಗೆ ಮೊದಲಿನ ರೂ.೨೨೦ ಕೋಟಿ ಅಂದಾಜಿನಿಂದ ರೂ.೩೪೭ ಕೋಟಿಗಳಿಗೆ ಪರಿಷ್ಕರಿಸಿ ಕ್ಯಾಬಿನೆಟ್ ಅನುಮೋದನೆ ನೀಡಿದೆ. “ನಾವು ವಿಜಯಪುರದ ವಿಮಾನನಿಲ್ದಾಣವನ್ನು ಎಟಿಆರ್ ೭೨ ಮಾದರಿ ವಿಮಾನ ನಿರ್ವಹಣೆಗೂ ಸೂಕ್ತವಾಗಿರುವ ಹಾಗೆ ನಿರ್ಮಾಣ ಮಾಡಲು ಯೋಜಿಸಿದ್ದೇವೆ. ಇದರಿಂದಾಗಿ ಈಗ ಆ ವಿಮಾನನಿಲ್ದಾಣ ಏರ್‌ ಬಸ್ ಎ-೩೨೦ ವಿಮಾನದಂತಹ ಬೃಹತ್ ವಿಮಾನವೂ ಸಹ ಬರಬಹುದು, ಇದಕ್ಕೆ ಬೇಕಾಗುವ ಹಾಗೆ ರನ್‌ ವೇ ನಿರ್ಮಿಸಲಾಗುತ್ತದೆ, ಹಾಗೂ ಸೌಲಭ್ಯಗಳನ್ನೂ ವಿಸ್ತರಿಸಲಾಗುತ್ತದೆ,” ಎಂದು ಮಾಧುಸ್ವಾಮಿ ವಿವರಿಸಿದರು. ಈ ವಿಮಾನನಿಲ್ದಾಣವನ್ನು ಶ್ರೀ ಜಗಜ್ಯೋತಿ ಬಸವೇಶ್ವರ ವಿಮಾನನಿಲ್ದಾಣ ಎಂದು ಹೆಸರಿಸಲಾಗುತ್ತದೆ ಎಂದರು.

ಮತ್ತೊಂದು ಕ್ಯಾಬಿನೆಟ್ ನಿರ್ಣಯದ ಪ್ರಕಾರ, ಹಸುಗಳಲ್ಲಿ ಗಂಟು ರೋಗ ಕಂಡು ಬಂದಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ೨೯೦ ಮೊಬೈಲ್ ಪಶು ಆಸ್ಪತ್ರೆಗಳನ್ನು (ಎಂವಿಯು) ಸ್ಥಾಪಿಸಲಾಗುವುದು. “ಇದು ಕೇಂದ್ರ ಸರ್ಕಾರ ಪ್ರಾಯೋಜಿತ ಯೋಜನೆ. ಪ್ರತಿಯೊಂದು ಕೇಂದ್ರದಲ್ಲಿಯೂ ಓರ್ವ ಪಶು ವೈದ್ಯರಿರುತ್ತಾರೆ, ಜೊತೆಗೆ ಇಬ್ಬರು ಸಹಾಯಕ ಸಿಬ್ಬಂದಿಗಳು ಇಂತಹ ರೋಗಗಳು ಉದ್ಭವಿಸಿದ ಸಂದರ್ಭಗಳಲ್ಲಿ ತಮ್ಮ ವ್ಯಾಪ್ತಿಯಲ್ಲಿ ಕ್ಷೇತ್ರಮಟ್ಟದಲ್ಲಿ ಭೇಟಿ ನೀಡಿ ಜನರಲ್ಲಿ ಅರಿವು ಮೂಡಿಸುವುದು ಹಾಗೂ ಸೂಕ್ತ ರೀತಿಯಲ್ಲಿ ನಿರ್ವಹಿಸಲಿದ್ದಾರೆ,” ಎಂದರು.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: State- Cabinet –approves-outsourcing-management-responsibility – irrigation -projects.