ಇಂದಿನಿಂದ ರಾಜ್ಯ ವಿಧಾನಮಂಡಲ ಅಧಿವೇಶನ: ವಿಧಾನಸೌಧದ ಸುತ್ತ ನಿಷೇಧಾಜ್ಞೆ ಜಾರಿ.

ಬೆಂಗಳೂರು,ಜುಲೈ,3,2023(www.justkannada.in): ರಾಜ್ಯದ ನೂತನ ಕಾಂಗ್ರೆಸ್ ಸರ್ಕಾರದ ವಿಧಾನಮಂಡಲ ಅಧಿವೇಶನ ಇಂದಿನಿಂದ ಆರಂಭವಾಗಲಿದ್ದು, ವಿಧಾನಸೌಧದ ಸುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಇಂದಿನಿಂದ 10 ದಿನಗಳ ಕಾಲ ಕಲಾಪ ನಡೆಯಲಿದ್ದು, ಮೊದಲ ದಿನ ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಜುಲೈ 7ರಂದು  ಸಿಎಂ ಸಿದ್ದರಾಮಯ್ಯ 14ನೇ ಬಾರಿ ಬಜೆಟ್ ಮಂಡನೆ ಮಾಡಲಿದ್ದಾರೆ.

ವಿಧಾನಸಭಾ ಕಲಾಪದ ವೇಳೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಭಾರಿ  ವಾಗ್ವಾದಗಳು ನಡೆಯುವ ಸಾಧ್ಯತೆ ಇದ್ದು,  ಹಿಂದಿನ ಸರ್ಕಾರದ ಹಗರಣ, ಗ್ಯಾರಂಟಿ ಯೋಜನೆ, ಅಕ್ಕಿ ಬದಲು ಹಣ, ಗ್ಯಾರಂಟಿ ಯೋಜನೆಗಳಿಗೆ ಷರತ್ತು, ವರ್ಗಾವಣೆ ದಂಧೆ, ಮತಾಂತರ ನಿಷೇಧ, ಗೋಹತ್ಯೆ ನಿಷೇಧ, ಎಪಿಎಂಸಿ ಕಾಯ್ದೆ ಮೊದಲಾದ ವಿಚಾರಗಳು ಪ್ರಸ್ತಾಪವಾಗುವ ಸಾಧ್ಯತೆ ಇದೆ.

ಅಧಿವೇಶನ ಹಿನ್ನೆಲೆ ವಿಧಾನಸೌಧ ಸುತ್ತ 2 ಕಿ.ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಆದೇಶ ಹೊರಡಿಸಿದ್ದಾರೆ. 2 ಕಿ.ಮೀ. ವ್ಯಾಪ್ತಿಯಲ್ಲಿ ಪ್ರತಿಭಟನೆ, ಧರಣಿ ನಡೆಸುವಂತಿಲ್ಲ. ವಿಧಾನಸೌಧದ ಸುತ್ತಮುತ್ತ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಕೇಂದ್ರ ವಿಭಾಗದ ಡಿಸಿಪಿ‌ ಶ್ರೀನಿವಾಸಗೌಡ ನೇತೃತ್ವದಲ್ಲಿ ಮೂವರು ಡಿಸಿಪಿ, 15 ಎಸಿಪಿ, 80 ಇನ್ಸ್​ಪೆಕ್ಟರ್​ಗಳು ಸೇರಿದಂತೆ ವಿಧಾನಸೌಧ ಸುತ್ತಮುತ್ತ 1500 ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

Key words: State- assembly- session – today-congress-bjp-jds