ಮೈಸೂರು,ಅಕ್ಟೋಬರ್,3,2026 (www.justkannada.in): ಪತ್ರಿಕೋದ್ಯಮವೂ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ತಂತ್ರಜ್ಞಾನದ ಬಳಕೆ ವೇಗವಾಗಿ ಹೆಚ್ಚುತ್ತಿರುವ ಸಂದರ್ಭದಲ್ಲಿ, ಮಹಿಳಾ ಪತ್ರಕರ್ತರಿಗೆ ಕೃತಕ ಬುದ್ಧಿಮತ್ತೆಯ ಕುರಿತು ಅರಿವು ಮತ್ತು ಕೌಶಲ್ಯ ಬೆಳೆಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ , ಕರ್ನಾಟಕ ಮಾಧ್ಯಮ ಅಕಾಡೆಮಿ ಹಾಗೂ ಇನ್ಫೋಸಿಸ್ ಸ್ಪ್ರಿಂಗ್‌ಬೋರ್ಡ್ ಸಹಯೋಗದಲ್ಲಿ ಮೂರು ದಿನಗಳ ವಿಶೇಷ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್ ನಲ್ಲಿ ಆಯೋಜಿಸಿದ್ದ ‘ಲೀಡರ್ ಶಿಪ್ ಎನೇಬಲ್‌ಮೆಂಟ್ – ಎಐ ತರಬೇತಿ ಕಾರ್ಯಕ್ರಮ’ವನ್ನು ಕರ್ನಾಟಕ ಸರ್ಕಾರದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿ ಜೆ. ಮಂಜುನಾಥ್ ಅವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನುಂ, ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಎಂ.ಕೆ. ಸವಿತಾ, ಇನ್ಫೋಸಿಸ್ ಸ್ಪ್ರಿಂಗ್‌ಬೋರ್ಡ್ ನ ಹಿರಿಯ ಉಪಾಧ್ಯಕ್ಷ ಸತೀಶ್ ನಂಜಪ್ಪ, ಸಹಾಯಕ ಉಪಾಧ್ಯಕ್ಷ ಸಂತೋಷ್, ಗಿರಿಜಾ, ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ವಿನೋದ್ ಚಂದ್ರ ಹಾಗೂ ಕರ್ನಾಟಕ ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ಎನ್.ಎಸ್. ಮಹೇಶ್ ಉಪಸ್ಥಿತರಿದ್ದರು.
ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಮಾಧ್ಯಮ ಸಂಸ್ಥೆಗಳಿಂದ ಸುಮಾರು 54 ಮಹಿಳಾ ಪತ್ರಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪತ್ರಿಕೋದ್ಯಮದಲ್ಲಿ ಕೃತಕ ಬುದ್ಧಿಮತ್ತೆಯ ಸಾಧ್ಯತೆಗಳು, ಅದರ ಜವಾಬ್ದಾರಿಯುತ ಬಳಕೆ, ಡಿಜಿಟಲ್ ಸುರಕ್ಷತೆ , ಸಮಯ ನಿರ್ವಹಣೆ ಹಾಗೂ ನಾಯಕತ್ವದಂತಹ ಹಲವು ವಿಷಯಗಳ ಕುರಿತು ತರಬೇತಿ ನೀಡಲಾಯಿತು.
ವೇಗವಾಗಿ ಬದಲಾಗುತ್ತಿರುವ ತಂತ್ರಜ್ಞಾನವನ್ನು ಪತ್ರಕರ್ತರು ಅರ್ಥಮಾಡಿಕೊಂಡು , ಅದನ್ನು ತಮ್ಮ ವೃತ್ತಿಯಲ್ಲಿ ಪರಿಣಾಮಕಾರಿಯಾಗಿ ಹೇಗೆ ಬಳಸಿಕೊಳ್ಳಬೇಕು ಮತ್ತು ಅದೇ ಸಂದರ್ಭದಲ್ಲಿ ಕೃತಕ ಬುದ್ಧಿಮತ್ತೆಯಿಂದ ಉಂಟಾಗಬಹುದಾದ ಅಪಾಯಗಳ ಬಗ್ಗೆ ಹೇಗೆ ಎಚ್ಚರಿಕೆ ವಹಿಸಬೇಕು ಎಂಬುದರ ಅರಿವು ಮೂಡಿಸುವುದು ತರಬೇತಿಯ ಪ್ರಮುಖ ಉದ್ದೇಶವಾಗಿತ್ತು.
ಪತ್ರಿಕೋದ್ಯಮದಲ್ಲಿ ಕೃತಕ ಬುದ್ಧಿಮತ್ತೆಯ ಸಾಧ್ಯತೆಗಳು:
ಕಾರ್ಯಕ್ರಮದ ಪ್ರಮುಖ ಭಾಗವಾಗಿದ್ದ ‘ಪತ್ರಿಕೋದ್ಯಮದಲ್ಲಿ ಕೃತಕ ಬುದ್ಧಿಮತ್ತೆಯ ಸಾಧ್ಯತೆಗಳು’ ಕಾರ್ಯಾಗಾರದಲ್ಲಿ ಕೃತಕ ಬುದ್ಧಿಮತ್ತೆ ಎಂದರೇನು, ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ನಮ್ಮ ದೈನಂದಿನ ಕೆಲಸಗಳಲ್ಲಿ ಅದನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ಪರಿಚಯಿಸಲಾಯಿತು. ಮಾಹಿತಿಯನ್ನು ಸಂಗ್ರಹಿಸುವುದು, ವಿಷಯವನ್ನು ವ್ಯವಸ್ಥಿತಗೊಳಿಸುವುದು, ಸಂಶೋಧನೆಗೆ ನೆರವು ಪಡೆಯುವುದು, ಅನುವಾದ ಸೇರಿದಂತೆ ಪತ್ರಕರ್ತರ ಕೆಲಸದ ವಿವಿಧ ಹಂತಗಳಲ್ಲಿ ಎಐ ಅನ್ನು ಹೇಗೆ ಸಹಾಯಕ ಸಾಧನವಾಗಿ ಬಳಸಿಕೊಳ್ಳಬಹುದು ಎಂಬುದರ ಕುರಿತು ವಿವರಿಸಲಾಯಿತು . ಕೃತಕ ಬುದ್ಧಿಮತ್ತೆಯಿಂದ ಉತ್ತಮ ಫಲಿತಾಂಶ ಪಡೆಯಲು ಸರಿಯಾದ ರೀತಿಯಲ್ಲಿ ಪ್ರಶ್ನೆ ಅಥವಾ ಸೂಚನೆ ನೀಡುವುದು ಹೇಗೆ ಎಂಬುದನ್ನು ಕಾರ್ಯಾಗಾರದಲ್ಲಿ ತಿಳಿಸಿಕೊಡಲಾಯಿತು. ಆದರೆ ಎಐ ನೀಡುವ ಮಾಹಿತಿಯನ್ನು ಅಂತಿಮ ಸತ್ಯವೆಂದು ಪರಿಗಣಿಸದೆ, ಪತ್ರಕರ್ತರು ತಮ್ಮ ವೃತ್ತಿಪರ ವಿವೇಚನೆ ಮತ್ತು ಮೂಲಗಳ ಪರಿಶೀಲನೆಯನ್ನು ಮುಂದುವರಿಸಬೇಕು ಎಂಬ ಅಂಶಕ್ಕೂ ಒತ್ತು ನೀಡಲಾಯಿತು.
ಡಿಜಿಟಲ್ ಪತ್ರಿಕೋದ್ಯಮದ ವಿಸ್ತರಣೆಯೊಂದಿಗೆ ಸೈಬರ್ ಸೆಕ್ಯೂರಿಟಿ ಕೂಡ ಪತ್ರಕರ್ತರ ಪ್ರಮುಖ ಜವಾಬ್ದಾರಿಯಾಗಿದೆ. ಪಾಸ್‌ವರ್ಡ್‌ಗಳ ಸುರಕ್ಷತೆ, ಫಿಶಿಂಗ್, ಅನುಮಾನಾಸ್ಪದ ಲಿಂಕ್‌ಗಳು, ಆನ್ ಲೈನ್ ವಂಚನೆಗಳು, ವೈಯಕ್ತಿಕ ಮಾಹಿತಿಯ ರಕ್ಷಣೆ ಹಾಗೂ ಡಿಜಿಟಲ್ ಖಾತೆಗಳ ಸುರಕ್ಷತೆಯ ಕುರಿತು ಅಲ್ಲಾಭಕ್ಷ್ ತರಬೇತಿ ನೀಡಿದರು . ಪತ್ರಕರ್ತರು ತಮ್ಮ ಮಾಹಿತಿಯಷ್ಟೇ ಅಲ್ಲದೆ, ತಮ್ಮ ಸಹೋದ್ಯೋಗಿಗಳು ಮತ್ತು ಸಂಪರ್ಕಗಳಿಂದ ಪಡೆಯುವ ಸೂಕ್ಷ್ಮ ಮಾಹಿತಿಯನ್ನೂ ಸುರಕ್ಷಿತವಾಗಿ ನಿರ್ವಹಿಸುವ ಅಗತ್ಯವನ್ನು ತಿಳಿಸಿಕೊಟ್ಟರು.
ಪತ್ರಕರ್ತರು ಎದುರಿಸುವ ಸಮಸ್ಯೆಗಳನ್ನು ವಿಭಿನ್ನ ದೃಷ್ಟಿಕೋನದಿಂದ ನೋಡುವ ಮತ್ತು ಅವುಗಳಿಗೆ ಸೃಜನಾತ್ಮಕ ಪರಿಹಾರ ಕಂಡುಕೊಳ್ಳುವ ವಿಧಾನವನ್ನು ಸುಷ್ಮಜ ಹಾಗೂ ಬಿಂದು ಕೆ. ತಿಳಿಸಿಕೊಟ್ಟರು. ಪತ್ರಕರ್ತರ ವೃತ್ತಿಯಲ್ಲಿ ಸಮಯ ನಿರ್ವಹಣೆಯೂ ಬಹಳ ಮುಖ್ಯ. ಸುದ್ದಿ, ಸಂದರ್ಶನ, ಸಭೆ, ಸಂಶೋಧನೆ, ವರದಿ ಮತ್ತು ಡೆಡ್‌ಲೈನ್‌ಗಳನ್ನು ಒಂದೇ ಸಮಯದಲ್ಲಿ ನಿರ್ವಹಿಸಬೇಕಾಗಿರುವುದರಿಂದ ಕೆಲಸಗಳಿಗೆ ಆದ್ಯತೆ ನಿಗದಿಪಡಿಸುವುದು ಅಗತ್ಯ. ಆದ್ದರಿಂದ ಸಮಯವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು, ಪ್ರಮುಖ ಕೆಲಸಗಳಿಗೆ ಆದ್ಯತೆ ನೀಡುವುದು ಮತ್ತು ಕೆಲಸವನ್ನು ಯೋಜಿತ ರೀತಿಯಲ್ಲಿ ನಿರ್ವಹಿಸುವ ಕುರಿತು ಅವರು ತರಬೇತಿ ನೀಡಿದರು .
ನಕಲಿ ವಿಡಿಯೋ, ಚಿತ್ರ ಮತ್ತು ಸುದ್ದಿಗಳನ್ನು ಗುರುತಿಸುವ ವಿಧಾನ:
ಕೃತಕ ಬುದ್ಧಿಮತ್ತೆಯ ಮೂಲಕ ಸೃಷ್ಟಿಸಲಾದ ನಕಲಿ ವಿಡಿಯೋಗಳು, ಚಿತ್ರಗಳು ಮತ್ತು ಸುದ್ದಿಗಳನ್ನು ಗುರುತಿಸುವುದು ಹೇಗೆ ಎಂಬುದನ್ನು ಸ್ನೇಹ ಪ್ರಜಾಪತಿ ಮತ್ತು ಶ್ರೀರಾಮ್ ಹೆಗ್ಡೆ ತಿಳಿಸಿಕೊಟ್ಟರು. ಇಂದಿನ ಡಿಜಿಟಲ್ ಯುಗದಲ್ಲಿ ನಿಜವಾದ ವ್ಯಕ್ತಿಯ ಧ್ವನಿ ಅಥವಾ ಮುಖವನ್ನು ಹೋಲುವಂತೆ ಕೃತಕ ವಿಡಿಯೋಗಳನ್ನು ಸೃಷ್ಟಿಸಲಾಗುತ್ತಿದೆ . ಹಾಗೆಯೇ ನಿಜವೆಂದು ಕಾಣುವ ಚಿತ್ರಗಳು ಮತ್ತು ಸುದ್ದಿಗಳನ್ನು ಕೂಡ AI ಮೂಲಕ ಸೃಷ್ಟಿಸಲಾಗುತ್ತಿದೆ . ಇಂತಹ ವಿಷಯಗಳು ಸಾಮಾಜಿಕ ಮಾಧ್ಯಮಗಳ ಮೂಲಕ ವೇಗವಾಗಿ ಹರಡುವ ಸಾಧ್ಯತೆ ಇರುವುದರಿಂದ ಪತ್ರಕರ್ತರಿಗೆ ಅವುಗಳನ್ನು ಪರಿಶೀಲಿಸುವ ಸಾಮರ್ಥ್ಯ ಅತ್ಯಂತ ಮುಖ್ಯವಾಗಿದೆ.
ತರಬೇತಿಯಲ್ಲಿ ಇಂತಹ ಕೃತಕ ಬುದ್ಧಿಮತ್ತೆಯನ್ನು ಬಳಸಿ ಸೃಷ್ಟಿಸಲಾದ ಚಿತ್ರ , ವಿಡಿಯೋ ಅಥವಾ ಮಾಹಿತಿಗಳನ್ನು ಹೇಗೆ ಗುರುತಿಸಬೇಕು, ಅದರ ಸತ್ಯಾಸತ್ಯತೆಯನ್ನು ಹೇಗೆ ಪರಿಶೀಲಿಸಬೇಕು ಮತ್ತು ಯಾವುದೇ ವಿಷಯವನ್ನು ಪ್ರಕಟಿಸುವ ಮೊದಲು ಅವುಗಳ ನಿಖರತೆಯನ್ನು ಹೇಗೆ ಪರಿಶೀಲನೆ ಮಾಡಬೇಕು ಎಂಬುದನ್ನು ಪ್ರಾಯೋಗಿಕ ಉದಾಹರಣೆಗಳ ಮೂಲಕ ತೋರಿಸಲಾಯಿತು.
ಇದು ಪತ್ರಕರ್ತರ ವೃತ್ತಿಪರ ಜವಾಬ್ದಾರಿಯ ದೃಷ್ಟಿಯಿಂದ ಮಹತ್ವದ ಕಲಿಕೆಯಾಗಿತ್ತು. ವೇಗವಾಗಿ ಸುದ್ದಿ ನೀಡುವ ಸ್ಪರ್ಧೆಯ ನಡುವೆಯೂ, ಸುದ್ದಿಯ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯ ಎಂಬ ಸಂದೇಶವನ್ನು ತರಬೇತಿ ನೀಡಿತು.
ಪತ್ರಕರ್ತರ ಕೌಶಲ್ಯಕ್ಕೆ ಕೃತಕ ಬುದ್ಧಿಮತ್ತೆ ಪರ್ಯಾಯವಲ್ಲ:
ಕೃತಕ ಬುದ್ಧಿಮತ್ತೆಯನ್ನು ಪತ್ರಕರ್ತರ ಪರ್ಯಾಯವಾಗಿ ನೋಡದೆ , ಸಹಾಯಕ ಸಾಧನವಾಗಿ ಬಳಸಿಕೊಳ್ಳಬೇಕು ಎಂಬುದನ್ನು ಒತ್ತಿ ಹೇಳಲಾಯಿತು . ಕೃತಕ ಬುದ್ಧಿಮತ್ತೆಯಿಂದ ಮಾಹಿತಿ ಪಡೆಯಬಹುದು, ಕೆಲಸದ ವೇಗವನ್ನು ಹೆಚ್ಚಿಸಬಹುದು. ಆದರೆ ಸುದ್ದಿಯ ಮಹತ್ವವನ್ನು ಅರ್ಥಮಾಡಿಕೊಳ್ಳುವುದು, ಪ್ರಶ್ನೆಗಳನ್ನು ಕೇಳುವುದು, ಮೂಲಗಳನ್ನು ಹುಡುಕುವುದು, ಮಾಹಿತಿಯ ಸತ್ಯಾಸತ್ಯತೆಯನ್ನು ಪರಿಶೀಲಿಸುವುದು ಮತ್ತು ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ವಿಷಯವನ್ನು ನೋಡುವುದು ಪತ್ರಕರ್ತರ ಮೂಲ ಜವಾಬ್ದಾರಿಗಳಾಗಿವೆ. ಹೀಗಾಗಿ ಕೃತಕ ಬುದ್ಧಿಮತ್ತೆ ಬಳಸುವಾಗ ಪತ್ರಕರ್ತರ ಕೌಶಲ್ಯ, ಸಂಪಾದಕೀಯ ಸ್ವಾತಂತ್ರ್ಯ, ವಿವೇಚನೆ ಮತ್ತು ವಿಶ್ವಾಸಾರ್ಹತೆಗೆ ಯಾವುದೇ ರಾಜಿಯಾಗಬಾರದು ಎಂಬುದನ್ನು ತರಬೇತಿಯಲ್ಲಿ ಒತ್ತಿ ಹೇಳಲಾಯಿತು.
60 ಮಹಿಳಾ ಪತ್ರಕರ್ತರಿಗೆ ತಂತ್ರಜ್ಞಾನದ ಕಲಿಕೆಯೊಂದಿಗೆ ಹೊಸ ರೆಕ್ಕೆಗಳು:
ಈ ತರಬೇತಿಯ ಮತ್ತೊಂದು ವಿಶೇಷತೆ ಎಂದರೆ ಕರ್ನಾಟಕದ ವಿವಿಧ ಭಾಗಗಳಿಂದ ಬಂದ ಸುಮಾರು 60 ಮಹಿಳಾ ಪತ್ರಕರ್ತರು ಒಂದೇ ವೇದಿಕೆಯಲ್ಲಿ ಭಾಗವಹಿಸಿದ್ದು. ವಿಭಿನ್ನ ಜಿಲ್ಲೆಗಳಲ್ಲಿ ಮತ್ತು ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರಿಗೆ ಪರಸ್ಪರ ಪರಿಚಯವಾಗುವುದರ ಜೊತೆಗೆ , ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಮತ್ತು ಹೊಸ ವಿಚಾರಗಳನ್ನು ಚರ್ಚಿಸಲು ಇದು ಉತ್ತಮ ಅವಕಾಶವಾಯಿತು. ಮಹಿಳಾ ಪತ್ರಕರ್ತರಿಗೆ ತಂತ್ರಜ್ಞಾನ ಕ್ಷೇತ್ರದ ಹೊಸ ಬೆಳವಣಿಗೆಗಳನ್ನು ಪರಿಚಯಿಸುವುದರ ಜೊತೆಗೆ, ಅವರ ವೃತ್ತಿಪರ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಲು ಈ ಕಾರ್ಯಕ್ರಮ ಸಹಕಾರಿಯಾಯಿತು.
ಕರ್ನಾಟಕ ಸರ್ಕಾರ, ಕರ್ನಾಟಕ ಮಾಧ್ಯಮ ಅಕಾಡೆಮಿ ಹಾಗೂ ಇನ್ಫೋಸಿಸ್ ಸ್ಪ್ರಿಂಗ್‌ಬೋರ್ಡ್ ಸಹಯೋಗದಲ್ಲಿ ನಡೆದ ಈ ತರಬೇತಿ ಕಾರ್ಯಕ್ರಮವು ಮಹಿಳಾ ಪತ್ರಕರ್ತರಿಗೆ ಎಐ ಯ ಸಾಧ್ಯತೆಗಳನ್ನು ಅರಿಯುವುದರ ಜೊತೆಗೆ ಅದರ ಸವಾಲುಗಳನ್ನು ಅರ್ಥಮಾಡಿಕೊಳ್ಳುವ ಮತ್ತು ಪತ್ರಿಕೋದ್ಯಮದ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಂಡೇ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಹೊಸ ಕಲಿಕೆಯ ಅನುಭವವನ್ನು ನೀಡಿತು.
ಈ ತರಬೇತಿ ಬಗ್ಗೆ ಅಭಿಪ್ರಾಯ ಹಂಚಿಕೊಂಡ ಕೀರ್ತಿ ಸೇನಾ, ಬೀದರ್‌ನಂತಹ ದೂರದ ಜಿಲ್ಲೆಯ ಮಹಿಳಾ ಪತ್ರಕರ್ತೆಯಾಗಿರುವ ನನಗೆ ಈ ತರಬೇತಿ ಒಂದು ಸುವರ್ಣಾವಕಾಶ. ಸುಮಾರು 900 ಕಿ.ಮೀ. ಪ್ರಯಾಣಿಸಿ ಮೈಸೂರಿಗೆ ಬಂದು, ನನ್ನಂತೆಯೇ ಹಲವು ಮಹಿಳಾ ಪತ್ರಕರ್ತರನ್ನು ಒಂದೇ ವೇದಿಕೆಯಲ್ಲಿ ಭೇಟಿಯಾಗಿರುವುದು ವಿಶೇಷ ಅನುಭವ. ಈ ವೇದಿಕೆ ನಾವೆಲ್ಲ ಮಹಿಳೆಯರಿಗೆ ರೆಕ್ಕೆಗಳನ್ನು ನೀಡುವ ಅವಕಾಶವಾಗಿದೆ . ಕರ್ನಾಟಕ ಸರ್ಕಾರ, ಮಾಧ್ಯಮ ಅಕಾಡೆಮಿ ಹಾಗೂ ಇನ್ಫೋಸಿಸ್ ಸ್ಪ್ರಿಂಗ್ ಬೋರ್ಡ್ ಗೆ ಹೃತ್ಪೂರ್ವಕ ಧನ್ಯವಾದಗಳು ಎಂದರು.
ಪ್ರತಿಕ್ರಿಯೆ ನೀಡಿದ ಆಸ್ಮಾ ಇನಾಂದಾರ್ (ಗುಲ್ಬರ್ಗ) ಈ ಮೂರು ದಿನಗಳ ತರಬೇತಿ ನಮಗೆ ಕೇವಲ ಹೊಸ ತಂತ್ರಜ್ಞಾನವನ್ನು ಕಲಿಸಿಲ್ಲ , ಪತ್ರಿಕೋದ್ಯಮದಲ್ಲಿ ಅದನ್ನು ಹೇಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂಬುದನ್ನೂ ಕಲಿಸಿದೆ. ವಿಶೇಷವಾಗಿ ಕೃತಕ ಬುದ್ಧಿಮತ್ತೆಯನ್ನು ನಮ್ಮ ಕೆಲಸದ ಗುಣಮಟ್ಟ ಮತ್ತು ವೇಗವನ್ನು ಹೆಚ್ಚಿಸಲು , ನಮ್ಮ ಪತ್ರಿಕೋದ್ಯಮದ ಕೌಶಲ್ಯಗಳಿಗೆ ಪೂರಕವಾಗಿ ಬಳಸಿಕೊಳ್ಳುವ ಬಗ್ಗೆ ಸಾಕಷ್ಟು ಪ್ರಾಯೋಗಿಕ ಜ್ಞಾನ ದೊರಕಿದೆ. ತರಬೇತಿ ಮುಗಿದ ನಂತರವೂ ಕಲಿಕೆಯನ್ನು ಮುಂದುವರಿಸಲು ಇನ್ಫೋಸಿಸ್ ಸ್ಪ್ರಿಂಗ್ ಬೋರ್ಡ್ ಮೂಲಕ ದೊರೆಯುವ ಅವಕಾಶ ನಮ್ಮಂತಹ ಪತ್ರಕರ್ತರಿಗೆ ಬಹಳ ಮೌಲ್ಯಯುತವಾಗಿದೆ ಎಂದು ಸಂತಸ ಪಟ್ಟರು.
Key words: Special training, on, Artificial Intelligence, for, women journalists, at, Infosys, Mysore.







