ಸೌತ್‌ ಏಶ್ಯನ್‌ ಗೇಮ್ಸ್‌ ಕುಸ್ತಿ: ಚಿನ್ನ ಗೆದ್ದ ಸಾಕ್ಷಿ, ರವೀಂದರ್‌

ಕಠ್ಮಂಡು (ನೇಪಾಳ):, ಡಿಸೆಂಬರ್ 09, 2019 (www.justkannada.in): ಸೌತ್‌ ಏಶ್ಯನ್‌ ಗೇಮ್ಸ್‌ ಕುಸ್ತಿ ಸ್ಪರ್ಧೆಯಲ್ಲಿ ಭಾರತದ ಪಾರಮ್ಯ ಮುಂದುವರಿದಿದೆ.

ವನಿತೆಯರ 62 ಕೆಜಿ ವಿಭಾಗದಲ್ಲಿ ಒಲಿಂಪಿಕ್‌ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್‌ ಚಿನ್ನಕ್ಕೆ ಕೊರಳೊಡ್ಡಿದರು. ಇದರೊಂದಿಗೆ ಕುಸ್ತಿಯ ಎಲ್ಲ 12 ವಿಭಾಗದ ಸ್ಪರ್ಧೆಗಳಲ್ಲೂ ಭಾರತ ಸ್ವರ್ಣ ಸಾಧನೆ ಮಾಡಿದಂತಾಯಿತು.

ಅಂಡರ್‌-23 ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಜಯಿಸಿದ ರವೀಂದರ್‌, ಪುರುಷರ 61 ಕೆಜಿ ಫ್ರೀಸ್ಟೈಲ್‌ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದರು. ಫೈನಲ್‌ನಲ್ಲಿ ಅವರು ಪಾಕಿಸ್ಥಾನದ ಎಂ. ಬಿಲಾಲ್‌ ವಿರುದ್ಧ ಜಯಕ್ಕೆ ತೀವ್ರ ಸೆಣಸಾಟ ನಡೆಸಬೇಕಾಯಿತು. ಆದರೆ ಸಾಕ್ಷಿ ಮಲಿಕ್‌ ಎಲ್ಲ ಪಂದ್ಯಗಳನ್ನೂ ಸುಲಭದಲ್ಲಿ ಗೆದ್ದರು.

ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಚಿನ್ನ ಜಯಿಸಿದ್ದ ಪವನ್‌ ಕುಮಾರ್‌ ಪುರುಷರ 86 ಕೆಜಿ ಫ್ರೀಸ್ಟೈಲ್‌ನಲ್ಲಿ ಇದೇ ಸಾಧನೆಯನ್ನು ಪುನರಾವರ್ತಿಸಿದರು. ವನಿತೆಯರ 59 ಕೆಜಿ ವಿಭಾಗದಲ್ಲಿ ಅಂಶು ಕೂಡ ಚಿನ್ನದಿಂದ ಸಿಂಗಾರಗೊಂಡರು.