ಗಾಯಕ ಸೋನು ನಿಗಮ್ ವಿರುದ್ಧ ಬಲವಂತದ ಕ್ರಮ ಬೇಡ: ಹೈಕೋರ್ಟ್ ಸೂಚನೆ

ಬೆಂಗಳೂರು,ಮೇ,15,2025 (www.justkannada.in): ಕನ್ನಡವನ್ನ ಪಹಲ್ಗಾಮ್ ದಾಳಿಗೆ ಹೋಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ  ಗಾಯಕ ಸೋನು ನಿಗಮ್ ವಿರುದ್ದ ಯಾವುದೇ ಬಲವಂತ ಕ್ರಮ ಕೈಗೊಳ್ಳಬಾರದೆಂದು ಎಂದು ಕರ್ನಾಟಕ ಹೈಕೋರ್ಟ್ ಸೂಚನೆ ನೀಡಿದೆ.

ಸೋನು ನಿಗಮ್  ವಿರುದ್ಧ ನಗರದ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಕನ್ನಡಪರ ಸಂಘಟನೆಗಳು ದೂರು ನೀಡಿದ್ದು ಎಫ್ ಐಆರ್ ದಾಖಲಾಗಿತ್ತು. ಈ ಮಧ್ಯೆ ಗಾಯಕ ಸೋನು ನಿಗಂ ತಮ್ಮ ಮೇಲಿನ ಎಫ್​ಐಆರ್ ರದ್ದು ಮಾಡುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದು ಈ ಅರ್ಜಿ ವಿಚಾರಣೆ ಇಂದು ನ್ಯಾ. ಶಿವಶಂಕರ್ ಅಮರಣ್ಣನವರ್ ಅವರಿದ್ದ ಪೀಠದಲ್ಲಿ ನಡೆಯಿತು.

ತನಿಖೆಗೆ ಹಾಜರಾಗಿಲ್ಲವೆಂದು ಹೆಚ್ಚುವರಿ SPP ಬಿ.ಎನ್.ಜಗದೀಶ್ ನ್ಯಾಯಾಲಯಕ್ಕೆ ಹೇಳಿದರು. ಬೆಂಗಳೂರಿಗೆ ಸೋನು ನಿಗಮ್ ಹಾಜರಾದರೆ ಸಮಸ್ಯೆ ಆಗಬಹುದು, ವಿಚಾರಣೆಗೆ ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಬೇಕು ಎಂದು ಸೋನು ನಿಗಮ್ ಪರ ವಕೀಲರು ಹೈಕೋರ್ಟ್​ಗೆ ಮನವಿ ಮಾಡಿದರು.

ಎರಡೂ ಕಡೆಯ ವಾದ ಆಲಿಸಿದ ನ್ಯಾ.ಶಿವಶಂಕರ್ ಅಮರಣ್ಣವರ್ ಅವರು, ಸೋನು ನಿಗಂ ಅವರಿರುವ ಸ್ಥಳದಲ್ಲಿಯೇ ಅವರ ವೆಚ್ಚದಲ್ಲಿಯೇ ವಿಚಾರಣೆ ಮಾಡುವಂತೆ ಅಥವಾ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ಮಾಡುವಂತೆ ಪೊಲೀಸರಿಗೆ ಸೂಚಿಸಿದರು.

ಅಲ್ಲದೆ ಸೋನು ನಿಗಂ ಅವರ ವಿರುದ್ಧ ಯಾವುದೇ ಬಲವಂತ ಕ್ರಮ ಕೈಗೊಳ್ಳಬಾರದೆಂದು. ನ್ಯಾಯಾಲಯದ ಅನುಮತಿ ಇಲ್ಲದೆ  ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಬಾರದು ಎಂದು ಸಹ ಪ್ರಕರಣದ ತನಿಖಾಧಿಕಾರಿಗಳಿಗೆ ಸೂಚನೆ ನೀಡಿದರು.

Key words: No action, against, singer, Sonu Nigam, High Court