ಮೈಸೂರು,ನವೆಂಬರ್,14,2026 (www.justkannada.in): ಯಾರೊಬ್ಬರು ಈ ಕುಟುಂಬಕ್ಕೆ ಏನು ಕೊಡುವಂತಿಲ್ಲ, ಆಂಗಡಿ ದೇವಾಲಯಕ್ಕೂ ಪ್ರವೇಶವಿಲ್ಲ. ಗ್ರಾಮದ ಶವ ಸಂಸ್ಕಾರದಲ್ಲೂ ಈ ಕುಟುಂಬಕ್ಕೆ ಅನುಮತಿ ಇಲ್ಲ. ಕನಿಷ್ಠ ಪಕ್ಷ ದುಡಿದು ತಿನ್ನಲು ಈ ಕುಟುಂಬಕ್ಕೆ ಕೂಲಿಗೂ ಯಾರು ಕರೆಯುವಂತಿಲ್ಲ. ಅಪ್ಪಣೆ ಮೀರಿದ್ರೆ 10 ಸಾವಿರ ದಂಡ. ಈ ರೀತಿಯ ಸಾಮಾಜಿಕ ಬಹಿಷ್ಕಾರ ಕಂಡು ಬಂದಿರುವುದು ಮೈಸೂರು ಜಿಲ್ಲೆಯಲ್ಲಿ.
ಮೈಸೂರು ಜಿಲ್ಲೆಯ ಮೈಸೂರು ತಾಲ್ಲೂಕಿನ ಜಯಪುರ ಗ್ರಾಮದಲ್ಲಿ ಸಾಮಾಜಿಕ ಬಹಿಷ್ಕಾರದ ಪಿಡುಗು ಇನ್ನೂ ಜೀವಂತವಾಗಿದೆ. ಗ್ರಾಮದ ಮಹದೇವಮ್ಮ ಮತ್ತು ಜವರನಾಯಕನ ಕುಟುಂಬ ಸಾಮಾಜಿಕ ಬಹಿಷ್ಕಾರಕ್ಕೆ ಬಲಿಯಾಗಿದ್ದು ಇದರಿಂದ ಬೇಸತ್ತು ಸಾಮೂಹಿಕ ಆತ್ಮಹತ್ಯೆಗೆ ತೀರ್ಮಾನಿಸಿದ್ದಾರೆ.
3-4 ತಲೆ ಮಾರುಗಳಿಂದ ಖಾಲಿ ಜಾಗದಲ್ಲಿ ಕಲ್ಲರ್ ಶೀಟ್ ನ ಮನೆ ಕಟ್ಟಿಕೊಂಡು ಮಹದೇವಮ್ಮ ಕುಟುಂಬ ವಾಸವಿದ್ದಾರೆ. ಒಂದೇ ಮನೆಯಲ್ಲಿ 20 ಕ್ಕೂ ಹೆಚ್ಚು ಮಂದಿಯಿದ್ದು, ಈ ಮನೆಯ ಜಾಗವನ್ನ ಕಬಳಿಸಲು ಗ್ರಾಮದ ಪ್ರಭಾವಿ ವ್ಯಕ್ತಿ ಸಂಚು ರೂಪಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಪ್ರಭಾವಿ ಕುತಂತ್ರಕ್ಕೆ ಮಣಿಯದ ಹಿನ್ನೆಲೆಯಲ್ಲಿ ಅವಿಭಕ್ತ ಕುಟುಂಬದ ವಿರುದ್ದ ಗ್ರಾಮಸ್ಥರನ್ನು ಎತ್ತಿ ಕಟ್ಟಿ ಬಹಿಷ್ಕಾರದ ಬರೆ ಹಾಕಲಾಗಿದೆ. ಬಹಿಷ್ಕಾರದ ಹೆಸರಿನಲ್ಲಿ ಕುಟುಂಬಕ್ಕೆ ನಿರಂತರ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.
ಇನ್ನು ಇದೇ ವಿಚಾರವಾಗಿ ತಹಶೀಲ್ದಾರ್, ಡಿಸಿ, ಮಾನವಹಕ್ಕು ಆಯೋಗಕ್ಕೆ ಕುಟುಂಬದವರು ಅರ್ಜಿ ಹಿಡಿದು ಅಲೆದಾಡಿದರೂ ನ್ಯಾಯ ಸಿಕ್ಕಿಲ್ಲ. ಹೀಗಾಗಿ ಸಾಮೂಹಿಕ ಆತ್ಮಹತ್ಯೆಯೊಂದೇ ನಮಗಿರುವ ದಾರಿ ಎಂದು ಕುಟುಂಬದ ಸದಸ್ಯರು ಆಳಲು ತೋಡಿಕೊಂಡಿದ್ದಾರೆ.






