ಬೆಂಗಳೂರಿಗೆ ಸ್ಮಾರ್ಟ್ ಸಿಟಿಯ ಹೊಸ ವರ್ಷದ ಉಡುಗೊರೆ.

ಬೆಂಗಳೂರು, ಡಿಸೆಂಬರ್ 14, 2022(www.justkannada.in): ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್‌ ನ (ಬಿಎಸ್‌ಸಿಎಲ್) ಮಹತ್ವಾಕಾಂಕ್ಷಿ ವರ್ಚ್ಯುವಲ್ ಸ್ಮಾರ್ಟ್ ಕ್ಲಿನಿಕ್ (ವಿಎಸ್‌ಸಿ) ಕೇಂದ್ರಗಳ ಯೋಜನೆ ಹೊಸ ವರ್ಷದಿಂದ ಕಾರ್ಯಾರಂಭಗೊಳ್ಳಲಿದೆ. ಬಿಎಸ್‌ಸಿಎಲ್ ಅಧಿಕಾರಿಗಳ ಪ್ರಕಾರ ಈ ಯೋಜನೆಯಡಿ ಒಟ್ಟು ೨೭ ಕೇಂದ್ರಗಳ ಪೈಕಿ ೨೬ ಕೇಂದ್ರಗಳ ಕಾಮಗಾರಿಗಳು ಇನ್ನೂ ಪ್ರಗತಿಯಲ್ಲಿದ್ದು, ಪ್ಯಾಲೆಸ್ ಗುಟ್ಟಹಳ್ಳಿಯಲ್ಲಿ ಪ್ರಾಯೋಗಿಕವಾಗಿ ಕಾರ್ಯಾಚರಣೆ ಆರಂಭಿಸಲು ಸಿದ್ಧವಾಗಿದೆ.

“ಗುಟ್ಟಹಳ್ಳಿಯಲ್ಲಿನ ಪ್ರಾಯೋಗಿಕ ಕೇಂದ್ರದ ಕಾಮಗಾರಿಗಳು ಪೂರ್ಣಗೊಂಡಿದ್ದು, ಕಾರ್ಯಾರಂಭಗೊಳ್ಳಲು ಸಿದ್ಧವಾಗಿದೆ. ಸದಾಶಿವನಗರದಲ್ಲಿರುವ ಜನತಾ ಬಜಾರ್‌ ನಲ್ಲಿ ಸ್ಥಾಪಿಸಿರುವ ಸೆಂಟ್ರಲ್ ಕ್ಲಿನಿಕಲ್ ಕಮಾಂಡ್ ಸೆಂಟರ್ (ಸಿಸಿಸಿಸಿ) ಪೂರ್ಣಗೊಳ್ಳುವುದಕ್ಕಾಗಿ ನಾವು ಕಾಯುತ್ತಿದ್ದೇವೆ. ಅದು ಡಿಸೆಂಬರ್ ೨೦೨೨ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ,” ಎಂದು ಬಿಎಸ್ ಸಿಎಲ್‌ ನ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಸುಶೀಲಮ್ಮ ಅವರು ತಿಳಿಸಿದ್ದಾರೆ.

ಈ ಸ್ಮಾರ್ಟ್ ವರ್ಚ್ಯುವಲ್ ಕ್ಲಿನಿಕ್‌ ಗಳನ್ನು ಬೆಂಗಳೂರು ನಗರದಾದ್ಯಂತ ಇರುವ ೨೭ ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳಲ್ಲಿ ಸ್ಥಾಪಿಸಲಾಗುತ್ತಿವೆ. ಸಿಸಿಸಿ ಕೇಂದ್ರದಲ್ಲಿ ಒಂಬತ್ತು ವಿಶೇಷ ತಜ್ಞ ವೈದ್ಯರ ಸೇವೆಗಳನ್ನು ಲಭ್ಯಗೊಳಿಸಲಾಗುತ್ತದೆ. ಇವರನ್ನು ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಮುಖ್ಯ ಆರೋಗ್ಯ ಅಧಿಕಾರಿಯವರು ಅತೀ ಶೀಘ್ರದಲ್ಲೇ ನೇಮಕ ಮಾಡುತ್ತಾರೆ.

“ಹೃದ್ರೋಗ, ಚರ್ಮ ರೋಗಗಳು, ಜನರಲ್ ಮೆಡಿಸಿನ್, ಇಎನ್‌ ಟಿ, ಕಣ್ಣಿನ ಚಿಕಿತ್ಸೆ, ಎಂಡೊಕ್ರೈನಾಲಜಿ, ಮಕ್ಕಳ ಚಿಕಿತ್ಸೆ, ಮನೋವೈದ್ಯ, ಹಾಗೂ ಸಾಮಾನ್ಯ ಶಸ್ತ್ರಚಿಕಿತ್ಸೆಗಳಂತಹ ತಜ್ಞ ವೈದ್ಯರ ನೇಮಕಾತಿಗೆ ಸಂಬಂಧಪಟ್ಟ ಅಧಿಸೂಚನೆಯನ್ನು ಈಗಾಗಲೇ ಸಿದ್ಧಪಡಿಸಲಾಗಿದ್ದು, ಸಿಹೆಚ್‌ ಓ, ಬಿಬಿಎಂಪಿಯಲ್ಲಿ ಪ್ರಕಟಿಸಲಾಗಿದೆ. ಈ ವೈದ್ಯರು ಸಿಸಿಸಿ ಕೇಂದ್ರದಲ್ಲಿ ಸೇವೆ ಸಲ್ಲಿಸಲಿದ್ದು, ಆನ್‌ ಲೈನ್ ಮೂಲಕ ವಿಎಸ್‌ ಸಿ ರೋಗಿಗಳಿಗೆ ಸಲಹೆ ನೀಡುತ್ತಾರೆ,” ಎಂದು ಸುಶೀಲಮ್ಮ ಮಾಹಿತಿ ನೀಡಿದ್ದಾರೆ.

ವಿಎಸ್‌ಸಿಯಲ್ಲಿ ಲಭ್ಯಗೊಳಿಸುವ ವೈದ್ಯಕಿಯ ಉಪಕರಣಗಳ ಪೈಕಿ ಡಿಜಿಟಲ್ ಸ್ಟೆಥೊಸ್ಕೋಪ್, ಸ್ಫಿಗ್ಮೊಮ್ಯಾನೋಮೀಟರ್, ಗ್ಲೂಕೋಮೀಟರ್, ಇಸಿಜಿ, ಡರ್ಮಾಸ್ಕೋಪ್, ಇಎನ್‌ಟಿ ತಪಾಸಣಾ ಕ್ಯಾಮೆರಾ, ಮ್ಯಾಗ್ನಿಫೈಯಿಂಗ್ ಲಎನ್ಸ್, ಪರಿಶೀಲನಾ ಮೇಜು, ಡಿಜಿಟಲ್ ಬರವಣಿಗೆ ಪ್ಯಾಡ್, ಆಪ್ತಾಲ್ಮಾಸ್ಕೋಪ್, ಫಂಡಸ್ ಕ್ಯಾಮೆರಾ, ಆಫ್ತಾಲ್ಮಿಕ್ ರಿಫ್ರ್ಯಾಂಕ್ಷನ್ ಯೂನಿಟ್, ಸ್ಕಿರ್‌ ಮರ್ ಟಿಯರ್ ಟೆಸ್ಟ್ ಸ್ಟ್ರಿಪ್, ಸ್ನೆಲ್ಲೆನ್ಸ್ ಚಾರ್ಟ್, ಜೇಗರ್ ಚಾರ್ಟ್, ಹಾಗೂ ಎ೩ ಡಿಜಿಎಲ್ ಎಕ್ಸ್ರೇ ಸ್ಕ್ಯಾನರ್‌ ಗಳು ಸೇರಿವೆ. ಈ ತಂತ್ರಜ್ಞಾನ ಆಧಾರಿತ ಸಿಸಿಸಿ ಕೇಂದ್ರ, ರೋಗಿಗಳಿಗೆ ಸಲಹೆ ನೀಡುವ ಸೇವೆಗಳನ್ನು ಒದಗಿಸಲು ನಗರದಾದ್ಯಂತ ಸ್ಥಾಪನೆಯಾಗಲಿರುವ ೨೭ ಸಿವಿಸಿಗಳೊಂದಿಗೆ ಸಂಪರ್ಕ ಹೊಂದಿರುತ್ತದೆ. ವೈದ್ಯರು ರೋಗಿಗಳನ್ನು ಆನ್‌ ಲೈನ್ ಮೂಲಕ ತಪಾಸಣೆ ಮಾಡಿದ ನಂತರ, ರೋಗನಿರ್ಣಯದ ಫಲಿತಾಂಶದ ಪ್ರಕಾರ ಅಗತ್ಯವಿದ್ದರೆ ತಜ್ಞ ಆಸ್ಪತ್ರೆಗೆ ಉಲ್ಲೇಖಿಸಿ ಕಳುಹಿಸಬಹುದು.

ಪ್ರತಿ ವಿಎಸ್‌ ಸಿಯೂ ಸಹ ಅಗತ್ಯ ಸೇವೆಗಳನ್ನು ನಿರ್ವಹಿಸಲು ಓರ್ವ ಕ್ಲಿನಿಕಲ್ ಆಪರೇಟರ್ ಅನ್ನು ಒಳಗೊಂಡಿರುತ್ತದೆ. ಈ ಕ್ಲಿನಿಕಲ್ ಆಪರೇಟರ್‌ ಗಳು ರೋಗಿಗಳ ಮಾಹಿತಿಯನ್ನು ಸಂಗ್ರಹಿಸಿ, ಸಿಸಿಸಿಸಿಯಲ್ಲಿರುವ ತಜ್ಞ ವೈದ್ಯರೊಂದಿಗೆ ವೀಡಿಯೊ ಸಮಾಲೋಚನೆ ನಡೆಸುತ್ತಾರೆ. ಇದಾದ ನಂತರ ಎಲೆಕ್ಟ್ರಾನಿಕ್ ಪ್ರಿಸ್ಕ್ರಿಪ್ಷನ್ (ವಿದ್ಯುನ್ಮಾನ ರೂಪದಲ್ಲಿರುವ ವೈದ್ಯರ ಸಲಹೆ ಚೀಟಿ) ನ ಮುದ್ರಿತ ಪ್ರತಿಯೊಂದನ್ನು ಪಡೆಯಲಾಗುವುದು. ಈ ವಿಎಸ್‌ ಸಿಗಳು ನಗರದ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಬಲಪಡಿಸುತ್ತದೆ ಎನ್ನಲಾಗಿದ್ದು, ಸಮುದಾಯ ಆಸ್ಪತ್ರೆಗಳಲ್ಲಿನ ಓಪಿಡಿಗಳ ಹೊರೆಯನ್ನು ಕಡಿಮೆಗೊಳಿಸಲಿವೆ.

“ಈ ಯೋಜನೆಯು, ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಗಣಕೀಕರಣ ಪ್ರಕ್ರಿಯೆ ಮೂಲಕ ನಗರದಲ್ಲಿರುವ ಪ್ರತಿ ವ್ಯಕ್ತಿಗೂ ಸಹ ಗುಣಮಟ್ಟದ ಆರೋಗ್ಯ ಸೇವೆ ತಲುಪುವಂತಾಗಲು ನೆರವಾಗಲಿದೆ. ನಗರದಲ್ಲಿ ವಾಸಿಸುವ ಬಡವರನ್ನು ಗಮನದಲ್ಲಿರಿಸಿಕೊಂಡು ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಪ್ರಸ್ತುತ, ಆರ್ಥಿಕವಾಗಿ ಬಲಹೀನವಾಗಿರುವ ಸಮುದಾಯದವರಿಗೆ, ಉತ್ತಮ ಹಾಗೂ ಕೈಗೆಟಕುವ ದರಗಳಲ್ಲಿ ಆರೋಗ್ಯಸೇವಾ ಸೌಲಭ್ಯಗಳು ಲಭ್ಯವಾಗುತ್ತಿಲ್ಲದಿರುವ ಕಾರಣದಿಂದಾಗಿ ಖಾಯಿಲೆಯ ಮೂಲ ಕಾರಣದ ರೋಗನಿರ್ಣಯ ಲಭ್ಯವಾಗುತ್ತಿಲ್ಲ. ಈ ವಿಎಸ್‌ ಸಿಗಳು ಖಾಯಿಲೆಯ ಪತ್ತೆ ಹಚ್ಚಲು ಅತ್ಯಾಧುನಿಕ ತಂತ್ರಜ್ಞಾನದ ಉಪಕರಣಗಳನ್ನು ಒಳಗೊಳ್ಳಲಿದ್ದು, ಇಂತಹ ವರ್ಗದ ಜನರಿಗೆ ಉತ್ತಮ ಚಿಕಿತ್ಸೆ ಒದಗಿಸುವಲ್ಲಿ ನೆರವಾಗಲಿವೆ,” ಎಂದು ಬಿಎಸ್‌ ಸಿಎಲ್‌ ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಯೋಜನೆಯ ಪ್ರಕಾರ, ಬೆಂಗಳೂರು ಪಶ್ಚಿಮ ಭಾಗದಲ್ಲಿ ಹಾಗೂ ದಕ್ಷಿಣದಲ್ಲಿ ತಲಾ ಆರು ವಿಎಸ್‌ ಸಿಗಳು, ಪಶ್ಚಿಮದಲ್ಲಿ ೧೦ ವಿಎಸ್‌ ಸಿಗಳು, ಹಾಗೂ ಬೊಮ್ಮನಹಳ್ಳಿ, ಮಹದೇವಪುರ, ಆರ್‌.ಆರ್ ನಗರ, ಯಲಹಂಕ ಹಾಗೂ ದಾಸರಹಳ್ಳಿ ಪ್ರದೇಶಗಳಲ್ಲಿ ತಲಾ ಒಂದೊಂದು ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ.

ಸುದ್ದಿ ಮೂಲ: ಬೆಂಗಳೂರ್ ಮಿರರ್

Key words: smart city- New Year- gift – Bangalore