ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳ ಪಾರದರ್ಶಕ ಕಾಯಿದೆಗೆ ತಂದಿರುವ ತಿದ್ದುಪಡಿ ವಾಪಸ್ ಪಡೆಯುವಂತೆ ಸಿದ್ಧರಾಮಯ್ಯ ಆಗ್ರಹ…

ಬೆಂಗಳೂರು,ಮಾರ್ಚ್,26,2021(www.justkannada.in): ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಗುತ್ತಿಗೆದಾರರಿಗೆ ಅನ್ಯಾಯವಾಗುವಂತೆ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳ ಪಾರದರ್ಶಕ ಕಾಯಿದೆಗೆ (ಕೆಟಿಪಿಪಿ) ತಂದಿರುವ ತಿದ್ದುಪಡಿಯನ್ನು ಕೂಡಲೇ ವಾಪಸ್ ಪಡೆಯುವಂತೆ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.jk

ಈ ತಿದ್ದುಪಡಿ ಮೂಲಕ ಸರ್ಕಾರ ಶೋಷಿತ ವರ್ಗಗಳ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಸರ್ಕಾರ ಕೊಡಲಿ ಪೆಟ್ಟು ಕೊಟ್ಟಿದೆ ಎಂದು ಸಿದ್ಧರಾಮಯ್ಯ ಕಿಡಿ ಕಾರಿದ್ದಾರೆ.

ತಮ್ಮ ನಿವಾಸದಲ್ಲಿ ಇದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ ಅವರು, ಕಾಮಗಾರಿಯಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗದ ಗುತ್ತಿಗೆದಾರರಿಗೆ ಮೀಸಲು ಸೌಲಭ್ಯ ಒದಗಿಸುವ ಕಾನೂನನನ್ನು ದೇಶದ ಯಾವುದೇ ರಾಜ್ಯವೂ ಜಾರಿಗೆ ತಂದಿಲ್ಲ. ಆದರೆ, ಆ ಸೌಲಭ್ಯವನ್ನು ಬಿಜೆಪಿ ಸರ್ಕಾರ ಕಸಿದುಕೊಳ್ಳಲು ಮುಂದಾಗಿದೆ ಎಂದರು.

ಸಿದ್ದರಾಮಯ್ಯ ಅವರ ಹೇಳಿಕೆ ಮುಖ್ಯಾಂಶಗಳು  ಹೀಗಿದೆ.  

ತಿದ್ದುಪಡಿ ಪ್ರಕಾರ ಎರಡು ಕೋಟಿ ರೂ.ಗಳ ವರೆಗಿನ ಕಾಮಗಾರಿಯನ್ನು ಟೆಂಡರ್ ಕರೆಯದೆ ಭೂ ಸೇನಾ ನಿಗಮಕ್ಕೆ ವಹಿಸಬಹುದು. ನಾವು ಅಧಿಕಾರದಲ್ಲಿ ಇದ್ದಾಗ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಗುತ್ತಿಗೆದಾರರಿಗೆ 50 ಲಕ್ಷ ರೂ.ಗಳವರೆಗಿನ ಕಾಮಗಾರಿ ಗುತ್ತಿಗೆಯಲ್ಲಿ ಮೀಸಲು ನೀಡುವ ಕಾನೂನು ಜಾರಿಗೆ ತಂದಿದ್ದೆವು. ಇದರಿಂದ ಆ ವರ್ಗದ  ಗುತ್ತಿಗೆದಾರರಿಗೆ ಅನುಕೂಲವಾಗಿತ್ತು.  ನನ್ನ ಕೊನೆಯ ಬಜೆಟ್‍ನಲ್ಲಿ ಕಾಮಗಾಗಿ ವೆಚ್ಚವನ್ನು ಒಂದು ಕೋಟಿ ರೂ.ಗಳಿಗೆ ಏರಿಸುವ ಘೋಷಣೆ ಮಾಡಲಾಗಿತ್ತು. ಆದರೆ, ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಘೋಷಣೆ ಜಾರಿಗೆ ಬರಲಿಲ್ಲ.

Former CM- Siddaramaiah- warns- implemented-anugraha
siddaramaih#profile..

ಎರಡು ಕೋಟಿ ರೂ. ವರೆಗಿನ ಕಾಮಗಾರಿ ಟೆಂಡರ್ ನನ್ನು ಭೂ ಸೇನಾ ನಿಗಮಕ್ಕೆ ವಹಿಸಿದರೆ ಪರಿಶಿಷ್ಟ ಜಾತಿ ಮತ್ತು ವರ್ಗದ ಗುತ್ತಿಗೆದಾರರಿಗೆ ಭಾರಿ ಅನ್ಯಾಯವಾಗುತ್ತದೆ. ಅವರಿಗೆ ಒದಗಿಸಿರುವ ಮೀಸಲು ಸೌಲಭ್ಯವನ್ನು ಕಸಿಯುವ ಹುನ್ನಾರವನ್ನು ಸರ್ಕಾರ ನಡೆಸಿದೆ. ದಲಿತರಿಗೆ ಕೇವಲ ರಾಜಕೀಯ ಸ್ವಾತಂತ್ರ್ಯ ದೊರೆತರೆ ಸಾಲದು. ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯವೂ ಸಿಗಬೇಕು ಎಂದು ಡಾ. ಬಿ.ಆರ್. ಅಂಬೇಡ್ಕರ್ ಅವರು ಹೇಳಿದ್ದರು. ಆದರೆ, ರಾಜ್ಯ ಸರ್ಕಾರ ತಿದ್ದುಪಡಿ ಮೂಲಕ ದಲಿತರಿಗೆ ದೊಡ್ಡ ದ್ರೋಹ ಮತ್ತು ಅನ್ಯಾಯ ಎಸಗಿದೆ. ಯಾವುದೇ ಸರ್ಕಾರ, ಶೋಷಿತ ವರ್ಗಗಳಿಗೆ ನ್ಯಾಯ ದೊರಕಿಸಿಕೊಡುವ ಕಾನೂನುಗಳನ್ನು ಜಾರಿಗೆ ತರಬೇಕೇ ಹೊರತು ಅವರಿಗೆ ಮಾರಕ ಆಗುವಂಥ ಕಾಯಿದೆಗಳನ್ನು ಅನುಷ್ಠಾನಗೊಳಿಸಬಾರದು.

ಟಿಕಾಯತ್ ವಿರುದ್ಧ ಕೇಸು : ಖಂಡನೀಯ

ಬೆಂಗಳೂರಿಗೆ ಮುತ್ತಿಗೆ ಹಾಕಿ ಎಂಬ ರೈತ ನಾಯಕ ಟಿಕಾಯತ್ ಅವರ ಹೇಳಿಕೆಯಲ್ಲಿ ಯಾವ ಪ್ರಚೋದನಕಾರಿ ಅಂಶವಿದೆ. ಅವರ ವಿರುದ್ಧ ಕೇಸು ದಾಖಲು ಮಾಡಿರುವುದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.

ರೈತರು ದೆಹಲಿ ಗಡಿಯಲ್ಲಿ 120 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರ ಸಮಸ್ಯೆಗಳಿಗೆ ಸ್ಪಂದಿಸುವ ಬದಲು ಕೇಸು ದಾಖಲು ಮಾಡುವ ಕೆಲಸವನ್ನು ಪ್ರಧಾನಿಯವರು ಮಾಡುತ್ತಿದ್ದಾರೆ. ಇದು ಪ್ರಜಾಪ್ರಭುತ್ವ ವಿರೋಧಿ ಕ್ರಮ.

ಸಂತ್ರಸ್ತ ಯುವತಿಗೆ ಸಲಹೆ :

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಂದ ದೌರ್ಜನ್ಯಕ್ಕೆ ಒಳಗಾಗಿರುವ ಯುವತಿಗೆ ರಕ್ಷಣೆ ನೀಡುವಂತೆ ಗೃಹ ಸಚಿವರಿಗೆ ಹೇಳಿದ್ದೇನೆ. ಈ ಕುರಿತು ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಜೊತೆಗೂ ಮಾತನಾಡುತ್ತೇನೆ. ಯುವತಿ ಸೇರಿದಂತೆ ಎಲ್ಲ ಕನ್ನಡಿಗರಿಗೂ ರಕ್ಷಣೆ ನೀಡುವುದು ರಾಜ್ಯ ಸರ್ಕಾರದ ಜವಾಬ್ದಾರಿ. ಆಧರೂ ಯುವತಿಗೆ ರಕ್ಷಣೆ ನೀಡಿಲ್ಲ. ಇದು ಸರ್ಕಾರದ ವೈಫಲ್ಯ. ಹೀಗಾಗಿ ಯುವತಿ ತನಗೆ ಹಾಗೂ ತನ್ನ ತಂದೆ, ತಾಯಿಗೆ ರಕ್ಷಣೆ ಕೇಳಿದ್ದಾರೆ. ವೀಡಿಯೋ ಮೂಲಕ ಹೇಳಿಕೆ ಬಿಡುಗಡೆ ಮಾಡುವ ಬದಲು ಎಸ್‍ಐಟಿ ಮುಂದೆ ಹಾಜರಾಗಿ ಹೇಳಿಕೆ ನೀಡುವಂತೆ ಸಂತ್ರಸ್ತ ಯುವತಿಗೆ ನಾನು ಸಲಹೆ ನೀಡುತ್ತೇನೆ.

ಮೀಸಲು ಸೌಲಭ್ಯಕ್ಕೆ ವಿರೋಧವಿಲ್ಲ :

ಯಾವುದೇ ಸಮುದಾಯಕ್ಕೆ ಮೀಸಲು ಸೌಲಭ್ಯ ಕೊಡಲು ನನ್ನ ವಿರೋಧ ಇಲ್ಲ. ಯಾರೇ ಕೇಳಿದರೂ ವಿರೋಧಿಸುವುದಿಲ್ಲ. ಆದರೆ, ಸಂವಿಧಾನ ಪ್ರಕಾರ ಅರ್ಹರಿಗೆ ಮೀಸಲು ಸೌಲಭ್ಯ ಒದಗಿಸಬೇಕು.

ಜೆಡಿಎಸ್ ಹೊಂದಾಣಿಕೆ ರಾಜಕೀಯ :

ಬಸವಕಲ್ಯಾಣ ವಿಧಾನಸಭೆ ಕ್ಷೇತ್ರಕ್ಕೆ ನಡೆಯುವ ಉಪ ಚುನಾವಣೆಯಲ್ಲಿ ಜೆಡಿಎಸ್ ಅಲ್ಪಸಂಖ್ಯಾತ ಸಮುದಾಯದವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಇದು ಹೊಂದಾಣಿಕೆ ರಾಜಕಾರಣ. ಅಲ್ಪ ಸಂಖ್ಯಾತರ ಮತಗಳನ್ನು ವಿಭಜನೆ ಮಾಡುವುದು ಇದರ ಉದ್ದೇಶ. ಬಿಜೆಪಿ ಜೊತೆ ಜೆಡಿಎಸ್ ಕೈ ಜೋಡಿಸಿರುವುದು ಇದರಿಂದ ಸ್ಪಷ್ಟವಾಗುತ್ತದೆ. ಜೆಡಿಎಸ್‍ನ ಈ ಹುನ್ನಾರವನ್ನು ಅರ್ಥ ಮಾಡಿಕೊಳ್ಳಿ ಎಂದು ನಾನು ಬಸವಕಲ್ಯಾಣ ಕ್ಷೇತ್ರದ ಜನತೆಯಲ್ಲಿ ಮನವಿ ಮಾಡುತ್ತೇನೆ ಎಂದರು.

ಸಮಸ್ಯೆಗಳನ್ನು ಆಲಿಸುವ ನೆಪದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪದೇ ಪದೇ ಶಾಸಕರ ಸಭೆ ಕರೆಯುತ್ತಿದ್ದಾರೆ. ಅವರ ನೆತ್ತಿಯ ಮೇಲೆ ಕತ್ತಿ ತೂಗಾಡುತ್ತಿದೆ. ಅಧಿಕಾರ ಉಳಿಸಿಕೊಳ್ಳಲು ಪರದಾಡುತ್ತಿರುವ ಅವರು, ಶಾಸಕರ ಸಭೆಗಳ ಮೂಲಕ ಹೈಕಮಾಂಡ್ ಗೆ ತಮ್ಮ ಶಕ್ತಿ ಏನು ಎಂಬುದನ್ನು ತೋರಿಸಲು ಹೊರಟಿದ್ದಾರೆ.

ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ :

ನನ್ನ ಬಳಿ ಇರುವ ದಾಖಲೆಗಳನ್ನು ಬಿಡುಗಡೆ ಮಾಡಿದರೆ ಮಹಾನಾಯಕನಿಗೆ ಶಾಕ್ ಆಗುತ್ತದೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರು ಹೇಳಿದ್ದಾರೆ. ಸಧ್ಯ ಅವರಿಗೆ ಶಾಕ್ ಆಗದಿದ್ದರೆ ಸಾಕು. ಅವರ ಪ್ರಕಾರ ಮಹಾನಾಯಕರು ಯಾರು, ಶಾಕ್ ನೀಡುವಂಥ ದಾಖಲೆಗಳು ಅವರ ಬಳಿ ಏನಿದೆ ಎಂಬುದು ನನಗೆ ಗೊತ್ತಿಲ್ಲ.

ಒಂದು ವೇಳೆ ಅವರ ಬಳಿ ಸಾಕ್ಷ್ಯಾಧಾರ ಇದ್ದರೆ ದೂರು ನೀಡುವಾಗ ಏಕೆ ಆ ಅಂಶವನ್ನು ನಮೂದು ಮಾಡಿಲ್ಲ. ದಾಖಲೆಗಳನ್ನು ಮುಚ್ಚಿಡುವುದೂ ಅಪರಾಧವೇ ಆಗುತ್ತದೆ. ಮಹಾನಾಯಕರು ಬಿಜೆಪಿಯಲ್ಲಿ ಸಾಕಷ್ಟು ಮಂದಿ ಇದ್ದಾರೆ. ಕಾಂಗ್ರೆಸ್ ನಲ್ಲಿ ನಾಯಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸುಮ್ಮನೆ ಗುಮ್ಮ ತೋರಿಸುವುದು ಬೇಡ. ದಾಖಲೆಗಳಿದ್ದರೆ ಹೊರಗೆ ತರಲಿ. ಇಷ್ಟಕ್ಕೂ ಜಾರಕಿಹೊಳಿಯವರಿಗೆ ಶಾಕ್ ಆಗಿದ್ದರೆ ಸಾಕು.

ಸ್ಪೀಕರ್ ಹೇಳಿಕೆಗೆ ಅಸಮಾಧಾನ :

ವಿಧಾಸಭೆಯ ಅಧ್ಯಕ್ಷರು ವಿರೋಧ ಪಕ್ಷದ ಬಗ್ಗೆ ಅಸಮಾಧಾನದ ಮಾತುಗಳನ್ನಾಡಿದ್ದಾರೆ. ಅವರು ಒಂದು ಪಕ್ಷದ ಒಂದು ಕಡೆ ವಹಿಸಿಕೊಂಡು ಮಾತನಾಡಿದಂತೆ ಕಾಣುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷಗಳ ಪಾತ್ರ ಬಹು ದೊಡ್ಡದು. ಸರ್ಕಾರ ತಪ್ಪು ನಿರ್ಧಾರ, ಭ್ರಷ್ಟಾಚಾರ, ಅಭಿವೃದ್ಧಿಗೆ ವಿರುದ್ಧವಾದ ತೀರ್ಮಾನಗಳನ್ನು ಕೈಗೊಂಡರೆ ಬಯಲು ಮಾಡುವುದು, ಕಿವಿ ಹಿಂಡುವುದು ವಿರೋಧ ಪಕ್ಷದ ಕೆಲಸ.

ವಿಧಾನಸಭೆ ಕಲಾಪವನ್ನು ದುರುಪಯೋಗಪಡಿಸಿಕೊಳ್ಳುವುದಾಗಲಿ, ಕಲಾಪ ನಡೆಯದಂತೆ ಮಾಡುವುದು ನಮ್ಮ ಉದ್ದೇಶವಲ್ಲ. ಸದನ ನಡೆಯಲು ನಾವು ಸಹಕಾರ ಕೊಟ್ಟಿದ್ದೇವೆ. ನಾನು ಬಜೆಟ್ ಮೇಲೆ ಭಾಷಣ ಮಾಡಿದ್ದೇನೆ. ಮೂರು ನಿಲುವಳಿ ಸೂಚನೆ ಮಂಡಿಸಿದ್ದೇನೆ. ನಮ್ಮ ಶಾಸಕರೂ ಬಜೆಟ್ ಮೇಲೆ ಮಾತನಾಡಿದ್ದಾರೆ. ಗಮನ ಸೆಳೆಯುವ ಸೂಚನೆಗಳನ್ನು ಮಂಡಿಸಿದ್ದಾರೆ. ಸದನದ ಸಮಯವನ್ನು ನಾವು ಸದುಪಯೋಗಪಡಿಸಿಕೊಂಡಿದ್ದೇವೆ.

ಸದನದ ಸಮಯವನ್ನು ನಾವು ಹಾಳು ಮಾಡಿದ್ದೇವೆ ಎಂಬುದು ಸರಿಯಲ್ಲ. ಸಿ.ಡಿ. ವಿಚಾರ ಸಾರ್ವಜನಿಕ ವಲಯದಲ್ಲಿ ಚರ್ಚೆಯ ವಸ್ತು ಆಗಿರುವಾಗ ನಾವು ಸುಮ್ಮನೆ ಕೂರಲಾಗದು. ಸರ್ಕಾರ ಸರಿಯಾಗಿ ಉತ್ತರ ಕೊಡದಿದ್ದಾಗ, ನಮ್ಮ ಬೇಡಿಕೆ ಈಡೇರಿಸಿದೇ ಇದ್ದಾಗ ಧರಣಿ ಮಾಡಿದ್ದೇವೆ. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಉಸ್ತುವಾರಿಯಲ್ಲಿ ಸಿ.ಡಿ. ಪ್ರಕರಣ ಕುರಿತಾದ ತನಿಖೆ ನಡೆಯಬೇಕೆಂಬ ಬೇಡಿಕೆ ದೊಡ್ಡದೇನೂ ಅಲ್ಲ. ಇಷ್ಟಕ್ಕೂ ಧರಣಿ ನಡೆಯುವಾಗ ವಿಧೇಯಕಗಳನ್ನು ಅಂಗೀಕಾರ ಮಾಡಿಕೊಂಡು ಹೋಗುವುದು ಯಾವ ಪ್ರಜಾಪ್ರಭುತ್ವ.  ವಿಧಾನಸಭೆಯ ಅಧ್ಯಕ್ಷರು ಆಡಳಿತ ಪಕ್ಷಕ್ಕೆ ಬುದ್ಧಿ ಮಾತು ಹೇಳಬೇಕಿತ್ತು. ನಾವು ಪ್ರಜಾಪ್ರಭುತ್ವ ರೀತ್ಯ ಕೆಲಸ ಮಾಡುತ್ತಿದ್ದೇವೆ ಎಂದು ಸಿದ್ಧರಾಮಯ್ಯ ತಿಳಿಸಿದರು.

Key words: Siddaramaiah -urges -withdrawal – amendments – KTPP