CJI ಮೇಲೆ ಶೂ ಎಸೆತ: ಸಂವಿಧಾನದ ಮೇಲಿನ ದಾಳಿ-  ಕೆ.ವಿ.ಮಲ್ಲೇಶ್ ಆಕ್ರೋಶ

ಮೈಸೂರು,ಅಕ್ಟೋಬರ್,11,2025 (www.justkannada.in): ಸುಪ್ರಿಂ ಕೋರ್ಟ್‌ ಮುಖ್ಯನ್ಯಾಯಮೂರ್ತಿ ಗವಾಯಿ ಅವರ ಮೇಲೆ ಶೂ ಎಸೆಯಲು ಪ್ರಯತ್ನಿಸಿರುವುದು ಪ್ರಜಾಪ್ರಭುತ್ವದ, ಸಂವಿಧಾನದ ಮೇಲಿನ ದಾಳಿ ಆಗಿದೆ ಎಂದು ಪಾಲಿಕೆ ಮಾಜಿ ಸದಸ್ಯ ಕೆ.ವಿ.ಮಲ್ಲೇಶ್ ಆಕ್ರೋಶ ವ್ಯಕ್ತಪಡಿಸಿದರು.

ಈ ಕುರಿತು ಪ್ರತಿಕ್ರಿಯಿಸಿರುವ ಕೆ.ವಿ.ಮಲ್ಲೇಶ್, ನ್ಯಾಯಮೂರ್ತಿಗಳನ್ನು‌ಮೈ ಲಾರ್ಡ್ ಎನ್ನುತ್ತೇವೆ.‌ ಲಾರ್ಡ್ ಎಂದರೆ ದೇವರು.‌ ಆದರೆ, ಇಂದು‌ ನ್ಯಾಯ ದೇವರ ಮೇಲೆಯೇ ಹಲ್ಲೆ ನಡೆಯುತ್ತಿದೆ. ಇದಕ್ಕೆ‌ ಯಾರು ಹೊಣೆ? ರಕ್ಷಣೆ ನೀಡಬೇಕಾದವರೇ ಕುಮ್ಮಕ್ಕು ನೀಡುತ್ತಿದ್ದಾರೆಯೇ? ಎಂಬ ಅನುಮಾನ‌ ಮೂಡುತ್ತಿದೆ. ಇದಕ್ಕೆ‌ ಮೋದಿ ಸರಕಾರವೇ ಉತ್ತರಿಸಬೇಕು. ಬಿಜೆಪಿ, ಆರ್‌ಎಸ್‌ ಎಸ್‌ ಕುಮ್ಮಕ್ಕಿನಿಂದ ದೇಶದಲ್ಲಿ ಅಭದ್ರತೆ ಹೆಚ್ಚಾಗಿದೆ. ಜಾತಿ, ಧರ್ಮಗಳ ನಡುವೆ ಕೋಮುದ್ವೇಷ ಹೆಚ್ಚಾಗಿದೆ.‌ ಇದಕ್ಕೆ ಸುಪ್ರಿಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್.ಗವಾಯಿ ಅವರ ಮೇಲಿನ ‌ದಾಳಿ‌ ಮತ್ತೊಂದು ನಿದರ್ಶನವಾಗಿದೆ.

ಹಿಂದೂಗಳ ಪರವಾಗಿದ್ದೇವೆ ಎಂದು ಕೇಂದ್ರದಲ್ಲಿ ಅಧಿಕಾರಕ್ಕೆ ಬಿಜೆಪಿ ಹಿಡಿದಿದೆ. ಆದರೆ, ವಾಸ್ತವದಲ್ಲಿ ಎನ್‍ಡಿಎ ಮೈತ್ರಿಕೂಟದ ಸರ್ಕಾರದಲ್ಲಿ ದಲಿತರಿಗೆ, ಅಲ್ಪಸಂಖ್ಯಾತರಿಗೆ, ಹಿಂದುಳಿದ ವರ್ಗಗಳ ಜನರ ಮೇಲೆ ದಾಳಿ, ದೌರ್ಜನ್ಯ, ದಬ್ಬಾಳಿಕೆ, ಕೊಲೆ ನಡೆಯುತ್ತಲೇ ಇವೆ. ಇದು ಬಿಜೆಪಿಗರ ಮನಸ್ಥಿತಿಗೆ ಉದಾಹರಣೆಯಷ್ಟೆ ಎಂದು ವಾಗ್ದಾಳಿ ನಡೆಸಿದ್ದಾರೆ.

ದೇಶದಲ್ಲಿ ದಲಿತರಿಗೆ, ಅಲ್ಪಸಂಖ್ಯಾತರಿಗೆ, ಹಿಂದುಳಿದ ವರ್ಗಗಳಿಗೆ ರಕ್ಷಣೆ ಇಲ್ಲ. ಯಾವಾಗ, ಯಾರ ಮೇಲೆ ದಾಳಿ, ಹಲ್ಲೆ ನಡೆಯುತ್ತದೆಯೋ ಎಂಬ ಆತಂಕ ಕಾಡುತ್ತಿದೆ. ಮುಖ್ಯನ್ಯಾಯಮೂರ್ತಿ ಮೇಲೆ ದಾಳಿಯ ಪ್ರಕರಣ ದೇಶದಲ್ಲಿ ದಲಿತರಿಗೆ ರಕ್ಷಣೆ ಇಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ.

ಕೂಡಲೇ ಸರಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ದೇಶದಲ್ಲಿ ಸನಾತನಿಗಳನ್ನು, ಮನುವಾದಿಗಳನ್ನು, ಸಂಘಿಗಳನ್ನು ಹಿಮ್ಮೆಟ್ಟಿಸಬೇಕು. ದೇಶದ ಸಂವಿಧಾನ, ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಉಳಿಸಲು ಎಲ್ಲರೂ ಒಂದಾಗಬೇಕು ಎಂದು ಹೇಳಿದರು.

ಒಬ್ಬ ವ್ಯಕ್ತಿಗೆ ವೃತ್ತಿ ನಡತೆ ಹಾಗೂ ವೈಯಕ್ತಿಕ ನಡತೆ ಎಂಬುದು ಬಹುಮುಖ್ಯ. ದಾಳಿ ನಡೆಸಿದ ವ್ಯಕ್ತಿಯು ಅಪ್ರಬುದ್ಧನೇನಲ್ಲ. ಮಾನಸಿಕ ಅಸ್ವಸ್ಥನೂ ಅಲ್ಲ.  71 ವರ್ಷ ವಯಸ್ಸಿನ ಆ ವ್ಯಕ್ಯಿ ಒಬ್ಬ ವಕೀಲ, ಭಾರತೀಯ ವಕೀಲರ ಪರಿಷತ್ತಿನ ಸದಸ್ಯರಾಗಿದ್ದವರು. ಅಂತಹವರು ಇಂತಹ ಕೆಲಸ‌ ಮಾಡಿದ್ದಾರೆ ಎಂದರೆ, ಅದು ಸೈದ್ಧಾಂತಿಕ ಪ್ರೇರಣೆಯೇ ಆಗಿದೆ. ಶೂ ಎಸೆದಿರುವುದು ದ್ವೇಷವನ್ನು ಹೊದ್ದುಕೊಂಡಿರುವ ಕೃತ್ಯ. ಅಂತಹ ಕೃತ್ಯವನ್ನೂ ಸಮಾಜದ ಹಲವು ಹಿರಿಯರು, ಬುದ್ಧಿಜೀವಿಗಳು ಸಮರ್ಥಿಸಿಕೊಳ್ಳುತ್ತಿರುವುದು ಅವರ ಕೊಳಕು ಮನಸ್ಥಿತಿಗೆ ಹಿಡಿದ ಕೈಗನ್ನಡಿ. ದಾಳಿ ನಡೆದ ನಂತರವೂ ಶಾಂತಚಿತ್ತವನ್ನು ಕಾಪಾಡಿಕೊಂಡ ನ್ಯಾಯಮೂರ್ತಿ ಗವಾಯಿ ಅವರ‌ ನಡೆ ಮೆಚ್ಚುವಂತದ್ದು. ಈ ಕೃತ್ಯವನ್ನು ಇಡೀ ದೇಶ ಖಂಡಿಸಬೇಕು. ಏಕೆಂದರೆ ಇದು ನ್ಯಾಯಮೂರ್ತಿಗಳ‌ ಮೇಲಿನ ದಾಳಿಯಲ್ಲ. ಸಂವಿಧಾನದ ಮೇಲಿನ ದಾಳಿ, ಪ್ರಜಾಪ್ರಭುತ್ವದ ಮೇಲಿನ ದಾಳಿ ಎಂದು ಕೆ.ವಿ ಮಲ್ಲೇಶ್ ಕಿಡಿಕಾರಿದರು.

Key words: Shoe, CJI, Attack, Constitution, K.V. Mallesh, outraged