ಬೆಂಗಳೂರು,ಸೆಪ್ಟಂಬರ್,18,2025 (www.justkannada.in): ಪರಿಚಯ ಪತ್ರ ತೋರಿಸಿ ಬೆದರಿಸಿ ಹಣ ವಸೂಲಿ ಮಾಡುವ ನಕಲಿ ಪತ್ರಕರ್ತರ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದ್ದು ಕಡಿವಾಣ ಹಾಕಬೇಕಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಕಳವಳ ವ್ಯಕ್ತಪಡಿಸಿದರು.
ಪೀಣ್ಯ ಕೈಗಾರಿಕಾ ಸಂಘದ ಸಭಾಂಗಣದಲ್ಲಿ ದಾಸರಹಳ್ಳಿ ಪತ್ರಕರ್ತ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ಮಾಧ್ಯಮ ಸಮ್ಮೇಳನ ಹಾಗೂ ಪತ್ರಕರ್ತರ ಆರೋಗ್ಯ ನಿಧಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ಪತ್ರಿಕೋದ್ಯಮದ ಗಂಧ ಗಾಳಿ ಇಲ್ಲದ, ಬದ್ಧತೆ ಇಲ್ಲದ ನಕಲಿ ಪತ್ರಕರ್ತರ ಸಂಖ್ಯೆ ಮಿತಿಮೀರಿದೆ. ಸಮಾಜದಲ್ಲಿ ನಕಲಿ ಪತ್ರಕರ್ತರಿಂದ ನೈಜ ಪತ್ರಕರ್ತರಿಗೂ ಕೆಟ್ಟ ಹೆಸರು ಬರುತ್ತಿದೆ. ವಸೂಲಿ ದಂದೆ ಮಾಡುವ ನಕಲಿಗಳ ನಡುವೆ ನೈಜ ಪತ್ರಕರ್ತರನ್ನು ಉಳಿಸಿ ಬೆಳೆಸಿಕೊಳ್ಳುವುದು ದೊಡ್ಡ ಸವಾಲಾಗಿದೆ. ನೈಜ ಪತ್ರಕರ್ತರ ಸಂತತಿ ಉಳಿಯದಿದ್ದರೆ ಸಮಾಜಕ್ಕೆ ಒಳ್ಳೆಯದನ್ನು ಮಾಡಲು ಸಾಧ್ಯವಿಲ್ಲ ಹಾಗಾಗಿ ವಿಶ್ವಾಸಾರ್ಹ ಸಮಾಜಮುಖಿ ಪತ್ರಕರ್ತರನ್ನು ಪ್ರೋತ್ಸಾಹಿಸಿ, ನಕಲಿಗಳನ್ನು ಮುಲಾಜಿಲ್ಲದೆ ದೂರವಿಡಿ ಎಂದು ಕಿವಿ ಮಾತು ಹೇಳಿದರು.
ಇದೇ ಸಂದರ್ಭದಲ್ಲಿ ವಸತಿ ಸಚಿವ ಜಮೀರ್ ಅಹಮ್ಮದ್ ಖಾನ್ ಅವರ ಮಾಧ್ಯಮ ಸಲಹೆಗಾರ ಲಕ್ಷ್ಮೀ ನಾರಾಯಣ್ ಮಾತನಾಡಿ ರಾಜೀವ್ ಗಾಂಧಿ ವಸತಿ ನಿಗಮ ನಿರ್ಮಿಸುತ್ತಿರುವ ಮುಖ್ಯಮಂತ್ರಿಗಳ ಒಂದು ಲಕ್ಷ ಬಹುಮಹಡಿ ವಸತಿ ಯೋಜನೆಯಡಿ ವಸತಿ ಸಚಿವ ಜಮೀರ್ ಅಹಮ್ಮದ್ ಖಾನ್ ಜತೆ ಮಾತನಾಡಿ ಸಂಘದ ಸದಸ್ಯರಿಗೆ ಮನೆ ಮಂಜೂರು ಮಾಡಿಸುವುದಾಗಿ ಭರವಸೆ ನೀಡಿದ ಅವರು ಆರೋಗ್ಯ ಸೇವೆ ದುಬಾರಿಯಾಗಿರುವ ಕಾಲಘಟ್ಟದಲ್ಲಿ ಪತ್ರಕರ್ತರು ಸಕಾಲದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ಪಡೆಯಲು ಯಾವುದಾದರೂ ಕಂಪನಿ ವಾರ್ಷಿಕ ಆರೋಗ್ಯ ವಿಮಾ ಶುಲ್ಕವನ್ನು ಪಾವತಿಸುವಂತೆ ಮನವಿ ಮಾಡಿ ಅದು ಇಡೀ ಕುಟುಂಬಕ್ಕೆ ಸಹಕಾರಿಯಾಗುತ್ತದೆ ಎಂದು ಇದೇ ವೇಳೆ ಸಲಹೆ ನೀಡಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನಂ ಮಾತನಾಡಿ ಡಿಜಿಟಲ್ ಯುಗದ ಕಾಲಘಟ್ಟಕ್ಕೆ ತಕ್ಕಂತೆ ಪತ್ರಕರ್ತರ ವೃತ್ತಿಪರತೆ, ಕೌಶಲ್ಯವನ್ನು ವೃದ್ಧಿಸುವ ನಿಟ್ಟಿನಲ್ಲಿ ಇನ್ಫೋಸಿಸ್ ಜತೆ ಒಡಂಬಡಿಕೆ ಮಾಡಿಕೊಂಡಿದ್ದೇವೆ. ಕಂಪನಿಯವರು ಡಿಜಿಟಲ್ ತರಬೇತಿ, ಆರ್ಟಿಫಿಶಿಯಲ್ ಇಂಟಲಿಜೆನ್ಸ್ ತರಬೇತಿ ನೀಡಲಿದ್ದು ಪತ್ರಕರ್ತರು ಇದರ ಸದುಪಯೋಗ ಪಡೆದುಕೊಂಡು ಜೀವನಮಟ್ಟ ಹಾಗೂ ಅರ್ಥಿಕ ಮಟ್ಟ ಸುಧಾರಿಸಿಕೊಳ್ಳಿ ಎಂದು ತಿಳಿಸಿದರಲ್ಲದೇ ಸಮಾಜ ಸುಧಾರಣೆ ಹಾಗೂ ಸ್ವಸ್ಥ ಸಮಾಜ ನಿರ್ಮಾಣ ನಿಟ್ಟಿನಲ್ಲಿ ಶ್ರಮಿಸುವ ಪತ್ರಕರ್ತರು ತಮ್ಮ ಯೋಗಕ್ಷೇಮಕ್ಕಾಗಿ ಉಳ್ಳವರು ಸಹೃದಯಿಗಳ ನೆರವು ಕೊರುವುದು ಖಂಡಿತ ಮುಜುಗರವಲ್ಲ ಎಂದರು
ಮಾಜಿ ಶಾಸಕ ಆರ್. ಮಂಜುನಾಥ್ ಮಾತನಾಡಿ ಪತ್ರಕರ್ತರ ಸಂಕಷ್ಟಗಳಿಗೆ ಸದಾ ಸ್ಪಂದಿಸುವ ಜತೆಗೆ ಅವರ ಕ್ಷೇಮಾಭಿವೃದ್ಧಿಗೆ ಸದಾ ಒತ್ತಾಸೆಯಾಗಿ ನಿಲ್ಲುವುದಾಗಿ ಭರವಸೆ ನೀಡಿದರು.
ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷ ಬಿ.ವಿ ಮಲ್ಲಿಕಾರ್ಜುನಯ್ಯ ಮಾತನಾಡಿ ಪತ್ರಕರ್ತರ ಯೋಗಕ್ಷೇಮಕ್ಕೆ ಆರೋಗ್ಯ ನಿಧಿ ಸ್ಥಾಪನೆ ಶ್ಲಾಘನೀಯ ಕಾರ್ಯ ಎಂದು ಪ್ರಶಂಶಿಸಿದರು.
ದಾಸರಹಳ್ಳಿ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಚ್.ಆರ್ ಹರೀಶ್, ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಡಿ.ಪಿ ದಾನಪ್ಪ, ಹ್ಯೂಮನ್ ರೈಟ್ಸ್ ಪ್ರೊಟೆಕ್ಷನ್ ಕಮಿಟಿ ರಾಜ್ಯಾಧ್ಯಕ್ಷ ಚಿಕ್ಕಣ್ಣ, ಜಯ ಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ಬಿ.ಎನ್ ಜಗದೀಶ್, ಜೆಡಿಎಸ್ ಮುಖಂಡರಾದ ಅಂದಾನಪ್ಪ,
ಮುನೇಗೌಡ, ಪಾಲಿಕೆ ಮಾಜಿ ಸದಸ್ಯ ನಾಗಭೂಷಣ್, ಕ್ಷೇತ್ರ ಜಾನಪದ ಅಕಾಡೆಮಿ ಅಧ್ಯಕ್ಷ ವೈಬಿಎಚ್ ಜಯದೇವ್ ಸೇರಿದಂತೆ ಹಲವು ಗಣ್ಯರು ಪತ್ರಿಕೋದ್ಯಮ ವಿದ್ಯಾರ್ಥಿಗಳು, ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಇದ್ದರು.
Key words: Excessive number, fake journalists, Shivananda Tagadur