Wednesday, August 12, 2026

BDA Apartments

Home Crime ಪ್ರೀತಿ ನಿರಾಕರಿಸಿದ ತಂದೆಯನ್ನು ವಿಷವುಣಿಸಿ, ಚಾಕುವಿನಿಂದ ಇರಿದು ಹತ್ಯೆಗೈದ 15 ವರ್ಷದ ಪುತ್ರಿ ಹಾಗೂ ಆಕೆ...

ಪ್ರೀತಿ ನಿರಾಕರಿಸಿದ ತಂದೆಯನ್ನು ವಿಷವುಣಿಸಿ, ಚಾಕುವಿನಿಂದ ಇರಿದು ಹತ್ಯೆಗೈದ 15 ವರ್ಷದ ಪುತ್ರಿ ಹಾಗೂ ಆಕೆ ಪ್ರಿಯಕರ

ಬೆಂಗಳೂರು:ಆ-20:(www.justkannada.in) 9 ನೇ ತರಗತಿಯ ವಿದ್ಯಾರ್ಥಿನಿ ತನ್ನ 18 ವರ್ಷದ ಪ್ರಿಯಕರನೊಂದಿಗೆ ಸೇರಿ ಜನ್ಮಕೊಟ್ಟ ತಂದೆಯನ್ನೇ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ರಾಜಾಜಿನಗರದಲ್ಲಿ ನಡೆದಿದೆ.

ಬಟ್ಟೆ ವ್ಯಾಪಾರಿ ಜೈಕುಮಾರ್ (43) ಕೊಲೆಯಾದ ವ್ಯಕ್ತಿ. ಜೈಕುಮಾರ್ ಮೂಲತ: ಪಾಂಡಿಚೇರಿಯವರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದರು. ನಗರದಲ್ಲಿ ಬಟ್ಟೆ ವ್ಯಾಪಾರ ಉದ್ಯಮವನ್ನು ನಡೆಸುತ್ತಿದ್ದು, ಕುಟುಂಬದ ಜೊತೆ ವಾಸವಾಗಿದ್ದರು. ಕೆಲಸದ ನಿಮಿತ್ತ ಶನಿವಾರ ಪತ್ನಿ ಹಾಗೂ ಮಗ ಪಾಂಡಿಚೇರಿಗೆ ತೆರಳಿದ್ದರು. ಆದರೆ ಭಾನುವಾರ ಜೈಕುಮಾರ್ ಮನೆಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದರು.

ಪ್ರಿಯಕರನೊಂದಿಗೆ ತಾನೇ ತಂದೆಯನ್ನು ಕೊಂದು ಗೀಜರ್ ಬ್ಲಾಸ್ಟ್ ಆಗಿ ತಂದೆ ಸಾವನ್ನಪ್ಪಿರುವುದಾಗಿ 15 ವರ್ಷದ ಮಗಳು ಕಥೆ ಕಟ್ಟಿದ್ದಳು. ಬೆಳ್ಳಗ್ಗೆ ತಾನು ಸಂಬಂಧಿಕರ ಮನೆಗೆ ತಿಂಡಿಗೆ ಹೋಗಿದ್ದೆ. ವಾಪಸ್ಸು ಬಂದಾಗ ಸ್ನಾನದ ಕೋಣೆಯಲ್ಲಿ ನನ್ನ ತಂದೆ ಬೆಂಕಿಗೆ ಸಿಲುಕಿಕೊಂಡಿದ್ದರು. ಗ್ಲೀಸರ್ ಬ್ಲಾಸ್ಟ್ ಆಗಿತ್ತು. ನನ್ನ ಕಿರುಚಾಟ ಕೇಳಿ ಅಕ್ಕಪಕ್ಕದ ನಿವಾಸಿಗಳು ಬಂದಿದ್ದರು. ಬೆಂಕಿ ಹಾರಿಸಲು ಹೋದ ಸಂದರ್ಭದಲ್ಲಿ ತನಗೂ ಬೆಂಕಿ ತಗುಲಿದ್ದು, ಚಿಕಿತ್ಸೆ ಪಡೆದಿದ್ದಾಗಿ ಹೇಳಿಕೆ ನೀಡಿದ್ದಳು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದರು. ಆಗ ಮಗಳೇ ಕೊಲೆ ಮಾಡಿರುವ ಸತ್ಯ ಬೆಳಕಿಗೆ ಬಂದಿದೆ.

ಜೈಕುಮಾರ್ 12 ವರ್ಷದ ಪುತ್ರ ಹಾಗೂ 15 ವರ್ಷದ ಪುತ್ರಿ ಹಾಗೂ ಪತ್ನಿ ಜತೆ ರಾಜಾಜಿನಗರದಲ್ಲಿ ವಾಸವಾಗಿದ್ದರು. ದಿಲೀಪ್ ಅಪೇರಲ್ಸ್ ಎಂಬ ಬಟ್ಟೆ ಮಳಿಗೆ ಆರಂಭಿಸಿದ್ದರು. 9ನೇ ತರಗತಿ ಓದುತ್ತಿದ್ದ ಮಗಳಿಗೆ ಶಾಲೆಯಲ್ಲಿ ಪರಿಚಯವಾಗಿದ್ದ ಪ್ರವೀಣ್ ಜತೆಗೆ ಸ್ನೇಹವಾಗಿ ಬಳಿಕ ಪ್ರೀತಿಗೆ ತಿರುಗಿದೆ. ಮನೆಯವರಿಗೆ ಗೊತ್ತಾಗದಂತೆ ಆತನ ಜತೆ ಸಿನಿಮಾ, ಶಾಪಿಂಗ್ ಮಾಲ್ ಸೇರಿ ಹಲವೆಡೆ ಸುತ್ತಾಡಿದ್ದಳು. ಈ ವಿಚಾರ ತಿಳಿದ ತಂದೆ ಪುತ್ರಿಗೆ ಬುದ್ಧಿವಾದ ಹೇಳಿದ್ದರು. ಆದರೂ, ಪ್ರವೀಣ್ ಜತೆ ಸುತ್ತಾಡುವುದನ್ನು ಬಿಟ್ಟಿರಲಿಲ್ಲ. ಪಾಲಕರ ಕಣ್ತಪ್ಪಿಸಿ, ಶಾಲೆಗೆ ಮತ್ತು ಟ್ಯೂಷನ್​ಗೆ ಹೋದಾಗ ಆತನನ್ನು ಭೇಟಿ ಮಾಡುತ್ತಿದ್ದಳು. ಇತ್ತೀಚೆಗೆ ಪ್ರವೀಣ್​ನೊಂದಿಗೆ ಮಂತ್ರಿ ಮಾಲ್​ನಲ್ಲಿ ಸಿನಿಮಾಗೆ ಹೋಗಿದ್ದಳು. ಆತನೊಂದಿಗೆ ತೆಗೆಸಿಕೊಂಡಿದ್ದ ಫೋಟೋಗಳು, ವಾಟ್ಸ್ ಆಪ್ ಮೂಲಕ ಚಾಟಿಂಗ್ ಮಾಡಿರುವುದು ಗೊತ್ತಾಗಿತ್ತು. ಇದರಿಂದ ಆಕ್ರೋಶಗೊಂಡಿದ್ದ ಜೈಕುಮಾರ್, ಪುತ್ರಿಗೆ ಹೊಡೆದು ಆಕೆ ಬಳಿ ಇದ್ದ ಮೊಬೈಲ್ ಕೂಡ ಕಸಿದುಕೊಂಡಿದ್ದರು. ಅಲ್ಲದೇ ಆತನನ್ನು ಭೇಟಿಯಾಗದಂತೆ ಎಚ್ಚರಿಸಿದ್ದರು. ಇದರಿಂದ ಪ್ರವೀಣ್ ಜತೆ ಭೇಟಿ, ಸುತ್ತಾಟಕ್ಕೆ ಬ್ರೇಕ್ ಬಿದ್ದಿತ್ತು.

ಅಂತಿಮವಾಗಿ ಪುತ್ರಿ ಹಾಗೂ ಆಕೆ ಪ್ರಿಯಕರ ತಂದೆಯನ್ನೇ ಕೊಲ್ಲುವ ಸ್ಕೆಚ್ ಹಾಕಿದ್ದಾರೆ. ಟ್ಯೂಷನ್​ಗೆ ಹೋಗಿದ್ದಾಗ ತಾಯಿ ಪಾಂಡಿಚೇರಿಗೆ ಹೋಗಿರುವ ವಿಚಾರವನ್ನು ಪ್ರಿಯಕರ ಪ್ರವೀಣ್​ಗೆ ಪುತ್ರಿಯೇ ಹೇಳಿದ್ದಳು. ಆಗ ಆತ ಹಾಲಿನಲ್ಲಿ ನಿದ್ರೆ ಮಾತ್ರೆ ಹಾಕುವ ಉಪಾಯ ಕೊಟ್ಟಿದ್ದ.

ಶನಿವಾರ ರಾತ್ರಿ 11 ಗಂಟೆಯಲ್ಲಿ ಜೈಕುಮಾರ್​ಗೆ ನಿದ್ರೆ ಮಾತ್ರೆ ಬೆರೆಸಿದ ಹಾಲನ್ನು ಮಗಳು ಕೊಟ್ಟಿ ದ್ದಳು. ಅದನ್ನು ಕುಡಿದು ನಿದ್ರೆಗೆ ಜಾರಿದ ಬಳಿಕ ಪ್ರಿಯಕರನನ್ನು ಮನೆಗೆ ಕರೆಸಿಕೊಂಡಿದ್ದಳು. ರಾತ್ರಿ 2 ಗಂಟೆಯಲ್ಲಿ ಇಬ್ಬರೂ ಸೇರಿ ಮಲಗಿದ್ದ ತಂದೆಯ ಕುತ್ತಿಗೆಯನ್ನು ಚಾಕುವಿನಿಂದ ಕೊಯ್ದಿದ್ದು, ದೇಹಕ್ಕೆ ಮನಸೋಇಚ್ಛೆ ಇರಿದು ಹತ್ಯೆ ಮಾಡಿದ್ದಾರೆ. ವಿಷಯ ಗೊತ್ತಾಗಬಾರದು ಎಂಬ ಕಾರಣಕ್ಕೆ ಶವವನ್ನು ಶೌಚ ಗೃಹಕ್ಕೆ ಸಾಗಿಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ತಡರಾತ್ರಿಯೇ ಶವವನ್ನು ಹೊರಗೆ ಸಾಗಿಸಲು ಯತ್ನಿಸಿದ್ದರು. ಆದರೆ, ಪೊಲೀಸರಿಗೆ ಸಿಕ್ಕಿ ಬೀಳಬಹುದೆಂಬ ಭಯದಿಂದ ಅದು ಸಾಧ್ಯವಾಗಿಲ್ಲ. ಬೆಳಗ್ಗೆ 8.30ಕ್ಕೆ ಬೇಕರಿಯೊಂದರಲ್ಲಿ ನೀರಿನ ಬಾಟಲ್ ಖರೀದಿಸಿ, ನೀರನ್ನು ಚೆಲ್ಲಿ ಪೆಟ್ರೋಲ್ ತಂದು ಶವಕ್ಕೆ ಬೆಂಕಿ ಹಚ್ಚಿದ್ದರು. ಬಳಿಕ ಬೆಂಕಿ ನಂದಿಸುವ ನಾಟಕವಾಡಿ, ಕೈ ಕಾಲು ಸುಟ್ಟುಕೊಂಡು, ರಕ್ಷಣೆಗಾಗಿ ಕೂಗಾಡಿ ಸತ್ಯ ಮರೆಮಾಚಲು ಯತ್ನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಜೈಕುಮಾರ್ ಮಗಳು ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರೀತಿ ನಿರಾಕರಿಸಿದ ತಂದೆಯನ್ನು ವಿಷವುಣಿಸಿ, ಚಾಕುವಿನಿಂದ ಇರಿದು ಹತ್ಯೆಗೈದ 15 ವರ್ಷದ ಪುತ್ರಿ ಹಾಗೂ ಆಕೆ ಪ್ರಿಯಕರ

She mixed sleeping pills in father’s milk. And then stabbed him to death, with boyfriend’s help