ಹಿರಿಯ ರಾಜಕಾರಣಿ, ಸಂಸದ ವಿ. ಶ್ರೀನಿವಾಸ್ ಪ್ರಸಾದ್ ರಾಜಕೀಯ ನಿವೃತ್ತಿ ಘೋಷಣೆ.

ಮೈಸೂರು,ಅಕ್ಟೋಬರ್,17,2022(www.justkannada.in): ಮುತ್ಸದ್ಧಿ ರಾಜಕಾರಣಿ, ಸಂಸದ ವಿ.ಶ್ರೀನಿವಾಸ್ ಪ್ರಸಾದ್ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ.

ಕಲಾಮಂದಿರದಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ವಿ.ಶ್ರೀನಿವಾಸ್ ಪ್ರಸಾದ್,  ನನ್ನ ರಾಜಕೀಯ ಜೀವನಕ್ಕೆ 50 ವರ್ಷ ಆಗುತ್ತಿದೆ.  ಇನ್ನು ಒಂದೂವರೆ ವರ್ಷಕ್ಕೆ ಸಂಸದ ಅವಧಿ ಮುಕ್ತಾಯವಾಗುತ್ತದೆ. ಅಲ್ಲಿಗೆ ನಾನು ನಿವೃತ್ತಿ ಆಗುತ್ತೇನೆ. 1977ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿ ಗೆದ್ದೆ. ಇದುವರೆಗೆ 14 ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. 11 ಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದೇನೆ.   ಒಂದೂವರೆ ವರ್ಷ ಕಳೆದರೆ ನಾನು ರಾಜಕೀಯಕ್ಕೆ ಬಂದು 50 ವರ್ಷವಾಗಲಿದೆ. ಹಾಗಾಗಿ ರಾಜಕೀಯವಾಗಿ ನಿವೃತ್ತಿಯಾಗಲು ನಿರ್ಧರಿಸಿದ್ದೇನೆ. ಕಳೆದ ಲೋಕಸಭಾ ಚುನಾವಣೆಯಲ್ಲೇ ಸ್ಪರ್ಧಿಸುವ ಇಚ್ಚೆ ಇರಲಿಲ್ಲ. ಆದರೆ ಕ್ಷೇತ್ರದ ಮತದಾರರು ಕಡೆಯ ಚುನಾವಣೆಯಲ್ಲಿ ಗೆದ್ದು ಅವಧಿ ಮುಗಿದ ಬಳಿಕ ನಿವೃತ್ತಿಯಾಗಿ ಎಂದಿದ್ದರು. ಹಾಗಾಗಿ ಚುನಾವಣೆಗೆ ಸ್ಪರ್ಧಿಸಿದೆ. ಈಗ ನನ್ನ ಆರೋಗ್ಯ ಸರಿಯಿಲ್ಲ, ನನಗೀಗ ಹೆಚ್ಚು ಸಮಯ ನಿಲ್ಲಲಾಗುವುದಿಲ್ಲ. ಹಾಗಾಗಿ ನನ್ನ ಸಂಸತ್ ಸ್ಥಾನದ ಅವಧಿ ಮುಗಿದ ನಂತರ ರಾಜಕೀಯ ನಿವೃತ್ತಿಯ ಘೋಷಣೆ ಮಾಡಿದ್ದೇನೆ. ನನ್ನ ರಾಜಕೀಯ ನಿವೃತ್ತಿ ಬಳಿಕ ನನ್ನ ಮಕ್ಕಳು ರಾಜಕಾರಣಕ್ಕೆ ಬರುವುದಿಲ್ಲ ಎಂದು ಹೇಳಿದರು.

ನನಗೆ ನ್ಯಾಷನಲ್ ಎಕ್ಸ್‌ಪೋಸರ್ ಸಿಕ್ಕಿದೆ. ಸಂಸತ್ತು ಜಗತ್ತಿನ ಪ್ರಜಾಪ್ರಭುತ್ವದ ಬಹುದೊಡ್ಡ ಕೇಂದ್ರ. ಸ್ಥಾಯಿ ಸಮಿತಿಗಳ ಮೂಲಕ ದೇಶದ ಪ್ರವಾಸ ಮಾಡಿದ್ದೇನೆ.  ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಮನವರಿಕೆ ಮಾಡಿಕೊಂಡಿದ್ದೇನೆ. ಜಾತಿಯತೆ, ಅಸ್ಪೃಶ್ಯತೆ ಹೇಗೆ ನಮ್ಮನ್ನು ಕೊಲ್ಲುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಅಸ್ಪೃಶ್ಯತೆಯ ಹಿಂಸೆ ಕೇಳಿದರೆ ಬೇರೆಯವರಿಗೆ ರಕ್ತ ಕುದಿಯುತ್ತದೆ. ಇನ್ನು ಅನುಭವಿಸುವವರ ಕತೆ ಏನಾಗಬೇಡ.  ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವುದು. ಜಗತ್ತು ಹುಚ್ಚರ ಸಂತೆಯಾಗಿದ್ದು, ಹೇಗೋ ಬದುಕುತ್ತಿದ್ದೇವೆ. ಅಸ್ಪೃಶ್ಯತೆ ಮಾನಸಿಕ ರೋಗ.  ಹಿಂದೂ ಧರ್ಮದ ಅಸಮಾನತೆ ವಿರುದ್ಧ ಹೋರಾಡಲು ಸಾಧ್ಯವಾಗದೆ ಡಾ.ಬಿ.ಆರ್.ಅಂಬೇಡ್ಕರ್ ಬೌದ್ಧ ಧರ್ಮಕ್ಕೆ ಸೇರಿದರು. ನಮಗೆ ಧಾರ್ಮಿಕ ವಿಮೋಚನೆ ನೀಡಿದರು ಎಂದು ವಿ.ಶ್ರೀನಿವಾಸ್ ಪ್ರಸಾದ್ ತಿಳಿಸಿದರು.

ಮೀಸಲಾತಿ, ಒಳ ಮೀಸಲಾತಿ ಹೋರಾಟ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಶ್ರೀನಿವಾಸ್ ಪ್ರಸಾದ್, ಮಕ್ಕಳೆ ಇದೆಲ್ಲ ಒಡೆದು ಹಾಳುವ ನೀತಿ. ಬ್ರಿಟಿಷರು ಒಡೆದು ಹಾಳುವ ನೀತಿ ಮಾಡಿದ್ದರು. ಈಗ ವೋಟಿಗಾಗಿ ಒಡೆದು ಹಾಳುವ ನೀತಿ ಮಾಡಲಾಗುತ್ತಿದೆ. ಮೀಸಲಾತಿ, ಒಳ ಮೀಸಲಾತಿ ಅಂತ ಮಾಡಿದ್ದಾರೆ.  ನಮ್ಮಲ್ಲಿ ಎಡಗೈ, ಬಲಗೈ ಅಂತೆಲ್ಲ ಇದೆ. ನಾನು ಎಲ್ಲವನ್ನೂ ಹತ್ತಿರದಿಂದ ನೋಡಿದ್ದೇನೆ. ಅಂತಹ ರಾಜಕೀಯ ಪಕ್ಷಗಳೊಂದಿಗೆ ಕೆಲಸ ಮಾಡಿದ್ದೇನೆ.  ಅದೆಲ್ಲವನ್ನೂ ದೂರ ಇಟ್ಟು ಒಟ್ಟಿಗೆ ಇರಬೇಕು.  ದಲಿತರಲ್ಲಿ ಇರುವ ಆಂತರಿಕ ಶತ್ರುಗಳನ್ನೂ ದೂರ ಮಾಡಬೇಕು. ಕುಡಿತ ಬಿಡಿ, ದುಡಿಯುವ ಜನ ದುಡ್ಡು ಉಳಿಸಿಕೊಳ್ಳಿ. ಉಚಿತವಾಗಿ ಶಿಕ್ಷಣ ಕೊಡುತ್ತಿದ್ದಾರೆ.  ಮಕ್ಕಳನ್ನು ಶಾಲೆಗೆ ಸೇರಿಸಿ. 5-6 ಮಕ್ಕಳು ಬೇಡ, ಫ್ಯಾಮಿಲಿ ಪ್ಲ್ಯಾನಿಂಗ್ ಅಳವಡಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಕಾಂಗ್ರೆಸ್ ಪಕ್ಷಕ್ಕೆ ಗಜೇಂದ್ರ ಮೋಕ್ಷ ಸಿಕ್ಕಿದೆ

ಕಾರ್ಯಕ್ರಮ ಮುಗಿದ ಬಳಿಕ ಮಾತನಾಡಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಕುರಿತು ಲೇವಡಿ ಮಾಡಿದ ಸಂಸದ ವಿ ಶ್ರೀನಿವಾಸಪ್ರಸಾದ್, ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಗಜೇಂದ್ರ ಮೋಕ್ಷ ಸಿಕ್ಕಂತಾಗಿದೆ. 22 ವರ್ಷಗಳ ಸುದೀರ್ಘ ಅವಧಿಯ ಬಳಿಕ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದೆ. ಈ ಮೂಲಕ ಕಾಂಗ್ರೆಸ್ ಗೆ ಗಜೇಂದ್ರ ಮೋಕ್ಷ ಸಿಕ್ಕಂತಾಗಿದೆ.  ಆನೆ ನೀರು ಕುಡಿಯಲು ಕೆರೆಯ ಬಳಿ ಹೋದಾಗ ಮೊಸಳೆ ಆನೆಯ ಕಾಲು ಹಿಡಿದುಕೊಳ್ಳುತ್ತದೆ. ಆಗ ವಿಷ್ಣು ಚಕ್ರವನ್ನು ಪ್ರಯೋಗಿಸಿದಾಗ ಮೊಸಳೆಯಿಂದ ಆನೆಗೆ ಮುಕ್ತಿ ಸಿಗುತ್ತದೆ. ಅದೇ ರೀತಿ ಈಗ ಕಾಂಗ್ರೆಸ್ ಪಕ್ಷದ ಪರಿಸ್ಥಿತಿಯೂ ಆಗಿದೆ ಎಂದು ಮಾರ್ಮಿಕವಾಗಿ ನುಡಿದರು.

ರಾಹುಲ್ ಗಾಂಧಿ ನಡೆಸುತ್ತಿರುವ ಭಾರತ್ ಜೋಡೊ ಯಾತ್ರೆಯನ್ನು ಲೇವಡಿ ಮಾಡಿದ ಸಂಸದ ವಿ ಶ್ರೀನಿವಾಸಪ್ರಸಾದ್, ರಾಜ್ಯವನ್ನೆಲ್ಲ ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದಂತಿದೆ ರಾಹುಲ್ ಗಾಂಧಿ ಯಾತ್ರೆ. ಎಲ್ಲವನ್ನೂ ಲೂಟಿ ಮಾಡಿದ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ ರಾಹುಲ್ ಗಾಂಧಿ ಯಾತ್ರೆ ಮಾಡುತ್ತಿದ್ದಾರೆಂದು ಟೀಕಿಸಿದರು.

ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ವಿಚಾರ ಸಂಸದ ಶ್ರೀನಿವಾಸ್ ಪ್ರಸಾದ್ ಪ್ರತಿಕ್ರಿಯಿಸಿದ ಶ್ರೀನಿವಾಸ್ ಪ್ರಸಾದ್ , ಹೌದು ಹೆಚ್ಚಳ ಮಾಡಿದ್ದಾರೆ.  ಸಂವಿಧಾನ ಬದ್ಧವಾಗಿ ರಾಜ್ಯದ ಇತಿಮಿತಿ ಒಳಗೆ ಹೇಗೆ ಮಾಡಬಹುದು ಅನ್ನೋದನ್ನ ತಿಳಿದುಕೊಂಡು ಮಾಡಬೇಕು. ನಾನು ಅದನ್ನೆಲ್ಲ ಹೇಳೋಕೆ ಹೋದ್ರೆ ಕಾಂಟ್ರವರ್ಸಿ ಆಗುತ್ತೆ. ನಾನು ಕೇಂದ್ರದಲ್ಲಿ ಇದ್ದವನು, ಸಂವಿಧಾನ ನೋಡಿ ಮಾತನಾಡುವವನು. ಯಾರದೋ ಒತ್ತಡಕ್ಕೆ ಮಣಿದು ಮಾತನಾಡುವುದಕ್ಕೆ ಆಗಲ್ಲ. ಇದೊಂದು ಇಕ್ಕಟ್ಟಿನ ಪರಿಸ್ಥಿತಿ. ಅದೇನು ಎತ್ತ ಅಂಥ ನನಗೆ ಗೊತ್ತು ಮಾಡ್ಲಿ ಬಿಡಿ. ಸರಿಯಾಗಿ ಬಿಡಿಸಿ ಹೇಳಿದರೆ ಅದರ ಕಥೆನೇ  ಬೇರೆ ಇದೆ‌ ಎಂದರು.

Key words: Senior politician- MP- V. Srinivas Prasad –announces- retirement – politics