ಬೆಂಗಳೂರು,ಮೇ,5,2025 (www.justkannada.in): ಇಂದಿನಿಂದ ಪರಿಶಿಷ್ಟ ಜಾತಿ ಸಮುದಾಯದ ಉಪ ಜಾತಿಗಳ ಪ್ರತ್ಯೇಕ ಗಣತಿ ಆರಂಭವಾಗಲಿದ್ದು, ಮೇ 23 ರವರೆಗೆ ರಾಜ್ಯಾದ್ಯಂತ ಗಣತಿ ಕಾರ್ಯ ನಡೆಯಲಿದೆ.
2024 ರ ಆಗಸ್ಟ್ 1 ರಂದು ಆಯಾ ರಾಜ್ಯ ಸರ್ಕಾರಗಳು ಒಳ ಮೀಸಲಾತಿ ಜಾರಿ ಮಾಡಬಹುದು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಆಗಸ್ಟ್ 12 ರಂದು ರಾಜ್ಯ ಸರ್ಕಾರ ನಾಗಮೋಹನ್ ದಾಸ್ ಆಯೋಗ ರಚನೆ ಮಾಡಿತ್ತು. ನಿವೃತ್ತ ನ್ಯಾಯಮೂರ್ತಿ ಎಚ್‌ಎನ್ ನಾಗಮೋಹನ್ ದಾಸ್ ನೇತೃತ್ವದ ಏಕ ಸದಸ್ಯ ಆಯೋಗ ರಚನೆ ಮಾಡಿದ್ದು ಇಂದಿನಿಂದ ಸಮೀಕ್ಷೆ ಆರಂಭವಾಗಿದೆ.
ಒಳ ಮೀಸಲಾತಿ ಜಾರಿಗಾಗಿ ದಲಿತ ಸಮುದಾಯಗಳು ದಶಕಗಳಿಂದ ಆಗ್ರಹಿಸುತ್ತಿದ್ದು, ಪರಿಶಿಷ್ಟ ಜಾತಿಯ ಅತೀ ಹಿಂದುಳಿದ ಉಪ ಜಾತಿಗಳಿಗೆ ಒಳ ಮೀಸಲಾತಿ ಜಾರಿಗೆ ದಶಕಗಳಿಂದ ಹೋರಾಟ ನಡೆಯುತ್ತಿದೆ. ಇದೀಗ ಬಹುದಿನಗಳ ಬೇಡಿಕೆ ಈಡೇರುವ ಕ್ಷಣ ಸನಿಹ ಬಂದಿದೆ.
ಜಸ್ಟೀಸ್ ನಾಗಮೋಹನ್ ದಾಸ್ ನೇತೃತ್ವದ ಆಯೋಗ ಸಮೀಕ್ಷೆ ನಡೆಸಿ 6 ತಿಂಗಳಲ್ಲಿ ವರದಿ ಸಲ್ಲಿಸಲು ಸಮಯ ಅವಕಾಶ ಕೇಳಿದೆ. ಪರಿಶಿಷ್ಟ ಜಾತಿ ಪಟ್ಟಿಯಲ್ಲಿ 101 ಜಾತಿಗಳಿವೆ. ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಆದಿ ಆಂಧ್ರ ಎಂದು ದಕ್ಷಿಣ ಭಾರತದಲ್ಲಿ ಕರೆಯಲಾಗುತ್ತದೆ. ಅಲ್ಲಿನ ಉಪ ಜಾತಿಗಳ ಗೊಂದಲ ಸರಿಪಡಿಸಲು ಸರ್ಕಾರ ಮುಂದಾಗಿದ್ದು, ದಾಖಲೆ ಪುರಾವೆ, ಅಂತರ್ ಹಿಂದುಳಿದಿರುವಿಕೆ ಇನ್ನಿತರ ಮಾಹಿತಿ ಸಂಗ್ರಹಿಸಿ ವೈಜ್ಞಾನಿಕ ಮಾಹಿತಿ ಸಂಗ್ರಹ ಮಾಡಬೇಕಿದೆ.
ಈ ನಡುವ ಆಯೋಗಕ್ಕೆ ಎರಡು ತಿಂಗಳಲ್ಲಿ ವರದಿ ನೀಡಲು ಸರ್ಕಾರ ಸೂಚಿಸಿತ್ತು. ಆದರೆ ಇದೀಗ ಆಯೋಗ ಆರು ತಿಂಗಳ ಸಮಯಾವಕಾಶ ಕೇಳಿದ್ದು, ರಾಜ್ಯಾದ್ಯಂತ ಸಮೀಕ್ಷೆಗಾಗಿ 58,960 ಗಣತಿದಾರರನ್ನು ನೇಮಕ ಮಾಡಲಾಗಿದೆ. ಗಣತಿದಾರರು ಮನೆ ಮನೆಗೆ ತೆರಳಿ ಖುದ್ದಾಗಿ ಸಮೀಕ್ಷೆ ನಡೆಸಲಿದ್ದು, ಸುಮಾರು 6000 ಸುಪರ್ವೈಸರ್ ಗಳ ನಿಯೋಜನೆ ಮಾಡಲಾಗಿದೆ ಈಗಾಗಲೇ ಗಣತಿದಾರರಿಗೆ ಸೂಕ್ತ ತರಬೇತಿ ನೀಡಲಾಗಿದೆ.
ಮೇ.5 ರಿಂದ 23 ರವರಗೆ ಸಮೀಕ್ಷೆ ನಡೆಯಲಿದ್ದು ಮೆ.19 ರಿಂದ 21 ರವರೆಗೆ ಪಂಚಾಯತಿ ಮಟ್ಟದಲ್ಲಿ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದ್ದು, ಮೇ 19 ರಿಂದ 23 ರವರೆಗೆ ಆನ್ ಲೈನ್ ಮೂಲಕವೂ ಘೋಷಣೆ ಮಾಡಲು ಅವಕಾಶ ನೀಡಲಾಗಿದೆ.
Key words: SC, internal reservation, Survey, state