ಮೈಸೂರು,ಡಿಸೆಂಬರ್,27,2025 (www.justkannada.in): ದಲಿತ ವಿದ್ಯಾರ್ಥಿ ಪರಿಷತ್ ವತಿಯಿಂದ ಕೊಡಮಾಡುವ ರಾಜ್ಯಮಟ್ಟದ ಅಕ್ಷರದವ್ವ ಸಾವಿತ್ರಿಬಾಯಿ ಪುಲೆ-2026 ಪ್ರಶಸ್ತಿಗೆ ಪತ್ರಕರ್ತೆ ರಂಜಿತಾ ದರ್ಶಿನಿ ಆರ್.ಎಸ್., ಮತ್ತು ಪೊಲೀಸ್ ಪೇದೆ ಸುಧಾ ಕೆ.ಎನ್., ಅವರನ್ನು ಆಯ್ಕೆ ಮಾಡಲಾಗಿದ್ದು, ಜನವರಿ 3 ರಂದು ವಿಜಯಪುರದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ದಲಿತ ವಿದ್ಯಾರ್ಥಿ ಪರಿಷತ್ ನ ಮಂಡ್ಯ ಜಿಲ್ಲಾ ಸಂಚಾಲಕ ಲೋಕರಕ್ಷಕ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಮಹಿಳಾ ಸಾಧಕಿಯರನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ಮಂಡ್ಯ ಜಿಲ್ಲೆಯ ಇಬ್ಬರು ಸಾಧಕಿಯರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದೆ.
ಪತ್ರಕರ್ತೆ ರಂಜಿತಾದರ್ಶಿನಿ ನಿರೂಪಕರು, ವಾರ್ತಾ ವಾಚಕರು ಆಗಿದ್ದು, ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಪ್ರಮುಖವಾಗಿ ಅವರು ಬರೆದ ಸ್ಕೇಚ್ ಎಂಬ ಕಾದಂಬರಿಯು ಕನ್ನಡ ಪುಸ್ತಕ ಪ್ರಾಧಿಕಾರದಿಂದ ಆಯ್ಕೆಯಾಗಿ ಪ್ರಕಟಗೊಂಡಿದೆ. ಕಾವ್ಯದರ್ಶಿನಿ ಎಂಬ ಕವನ ಸಂಕಲನ, ಮನಸ್ವಿನಿ (ಕಾದಂಬರಿ), ರಾತ್ರಿ ಸುರಿದ ಮಲ್ಲಿಗೆ (ಚುಟುಕು ಕವನ ಸಂಕಲನ) ಸೇರಿದಂತೆ ಅವರು ಬರೆದ ಹಲವು ಕತೆಗಳು, ಲೇಖನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
ಅದೇ ರೀತಿ ಮತ್ತೋರ್ವ ಸಾಧಕಿ ಸುಧಾ.ಕೆ.ಎನ್., ಅವರು ಮಹಿಳಾ ಪೋಲಿಸ್ ಪೇದೆಯಾಗಿದ್ದು, ಕೆ.ಆರ್.ಎಸ್. ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜತೆಗೆ ಹಲವು ಸಾಮಾಜಿಕ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪ್ರಮುಖವಾಗಿ ತಮ್ಮ ವೇತನದಲ್ಲಿ ಸರ್ಕಾರಿ ಶಾಲೆಗಳ ಮಕ್ಕಳಿಗೆ ಪುಸ್ತಕ ಮತ್ತು ಲೇಖನ ಸಾಮಗ್ರಿಗಳ ವಿತರಣೆ, ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯ, ಶಿಕ್ಷಣದ ಮಹತ್ವದ ಬಗ್ಗೆ ಅರಿವು ಮೂಡಿಸುವ ಮೂಲಕ ಬುದ್ಧ, ಬಸವ, ಅಂಬೇಡ್ಕರ್ ಅವರನ್ನು ತಮ್ಮ ಆದರ್ಶವಾಗಿ ಸ್ವೀಕರಿಸಿ ಅವರ ತತ್ವ ಸಿದ್ದಾಂತಗಳನ್ನು ಮೈಗೂಡಿಸಿಕೊಂಡು ಅನೇಕ ಜನಪರ ಸಂಘ ಸಂಸ್ಥೆಗಳ ಶೈಕ್ಷಣಿಕ ಕಾರ್ಯಗಳಿಗೆ ಉತ್ತೇಜನ ನೀಡುತ್ತಾ ಬಂದಿದ್ದಾರೆ ಎಂದು ಲೋಕರಕ್ಷಕ ತಿಳಿಸಿದ್ದಾರೆ.
Key words: Journalist, police constable, Savitribai Phule Award







