ಹುಬ್ಬಳ್ಳಿ, ನವೆಂಬರ್ 24,2025 (www.justkannada.in): ಇ.ಡಿ ಅಧಿಕಾರಿಗಳ ಸೋಗಿನಲ್ಲಿ ಬಂದು ವ್ಯಕ್ತಿಯೊಬ್ಬರ ಬಳಿ 3 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಚಿನ್ನಾಭರಣ ದೋಚಿ ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ನಡೆದಿದೆ.
ನಗರದ ಚೆನ್ನಮ್ಮ ವೃತ್ತಕ್ಕೆ ಹೊಂದಿಕೊಂಡಿರುವ ನೀಲಿಜನ್ ರಸ್ತೆಯಲ್ಲಿ ಕಳೆದ ಗುರುವಾರದಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಕೇರಳದ ವ್ಯಾಪಾರಿ ಸುದೀನ್ ಎಂ.ಆರ್ ಎಂಬುವವರ ಬಳಿಯೇ ಖದೀಮರು ಚಿನ್ನಾಭರಣವನ್ನ ದೋಚಿರುವುದು.
ಚಿನ್ನಾಭರಣ ಅಂಗಡಿಗಳಿಗೆ ಆಭರಣ ಪೂರೈಸುವ ವ್ಯವಹಾರ ಮಾಡುತ್ತಿದ್ದ ಸುದೀನ್ ಎಂ.ಆರ್ ಅವರು ನವೆಂಬರ್ 15 ರಂದು ಮಂಗಳೂರಿನಿಂದ ಬೆಳಗಾವಿಗೆ ಕೆಲಸಗಾರ ವಿವೇಕ್ ಜೊತೆ ಬಂದಿದ್ದರು. ಚೈನ್, ಬ್ರಾಸ್ಲೈಟ್, ಉಂಗುರ, ಕಿವಿಯೋಲೆ, ನೆಕ್ಲೆಸ್, ಲಾಕೆಟ್, ಬಳೆ ಸೇರಿ ಬಿಟ್ಟು 3.2 ಕೋಟಿ ರೂ. ಮೌಲ್ಯದ ಆಭರಣಗಳನ್ನು ತಂದಿದ್ದರು.
ಬೆಳಗಾವಿ, ಧಾರವಾಡ, ಹುಬ್ಬಳ್ಳಿಯಲ್ಲಿರುವ ವಿವಿಧ ಆಭರಣ ಮಳಿಗೆಗಳಿಗೆ ತೆರಳಿ ಆರ್ಡರ್ ಗಳನ್ನು ಪಡೆದಿದ್ದರು. ಧಾರವಾಡಕ್ಕೆ ಹೋಗಿ ಹೋಟೆಲ್ ಗೆ ವಾಪಸ್ ತೆರಳುತ್ತಿದ್ದ ವೇಳೆ ನೀಲಿಜನ್ ರಸ್ತೆಯಲ್ಲಿ ಐವರ ಗ್ಯಾಂಗ್ ಅವರನ್ನು ತಡೆದಿದ್ದು, ಇ.ಡಿ ಅಧಿಕಾರಿಗಳು ಎಂದು ಹಿಂದಿಯಲ್ಲಿ ಮಾತನಾಡಿದ ಆರೋಪಿಗಳು, ಗುರುತಿನ ಪತ್ರ ತೋರಿಸಿ ವಿಚಾರಣೆಗೆ ಕಚೇರಿಗೆ ಬನ್ನಿ ಎಂದು ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾರೆ. ನಂತರ ಸುದೀನ್ ಅವರ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣವಿದ್ದ ಬ್ಯಾಗ್ ಕಿತ್ತುಕೊಂಡು ಎಸ್ಕೇಪ್ ಆಗಿದ್ದಾರೆ.
Key words: ED officers, Criminals, robbed, gold, worth, Rs 3 crore







