ಲೋಕಸಭೆ ಚುನಾವಣೆ: ಅಂತಿಮ ಮತದಾರರ ಪರಿಷ್ಕೃತ ಪಟ್ಟಿ ಪ್ರಕಟ.

ಮೈಸೂರು,ಜನವರಿ,22,2024(www.justkannada.in):  2024 ರ ಲೋಕಸಭಾ ಚುನಾವಣೆಗೆ ಮತ ಚಲಾವಣೆ ಮಾಡಲಿರುವ ಅಂತಿಮ ಮತದಾರರ ಪರಿಷ್ಕೃತ ಪಟ್ಟಿ ಪ್ರಕಟವಾಗಿದೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಮಾಹಿತಿ ನೀಡಿದ ಮೈಸೂರು ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ, ಮೈಸೂರು ಜಿಲ್ಲೆಯಾದ್ಯಂತ 11 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 26,99,835 ಅರ್ಹ ಮತದಾರರು. ಈ ಪೈಕಿ 13,31,772 ಪುರುಷ ಮತದಾರರು. 13,67,843 ಮಹಿಳಾ ಮತದಾರರು. 220 ತೃತೀಯ ಲಿಂಗಿ ಮತದಾರರು ಇದ್ದಾರೆ.  ಕಳೆದ ಲೋಕಸಭಾ ಚುನಾವಣೆಗೆ ಹೋಲಿಸಿದರೆ 5 ಲಕ್ಷಕ್ಕೂ ಹೆಚ್ಚು ಮತದಾರರ ಸೇರ್ಪಡೆಯಾಗಿದೆ ಎಂದು ತಿಳಿಸಿದರು.

ಮೈಸೂರು ಜಿಲ್ಲೆಯ ಜನ ಸಂಖ್ಯೆ ಅಂದಾಜು 35 ಲಕ್ಷದಷ್ಟಿದೆ. ಈ ಪೈಕಿ ಅಂದಾಜು ಶೇ. 75% ರಷ್ಟು ಮಂದಿ ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. ಚಾಮುಂಡೇಶ್ವರಿ ಹಾಗು ನರಸಿಂಹರಾಜ‌ ವಿಧಾನಸಭೆ ಕ್ಷೇತ್ರಗಳಲ್ಲಿ ಮತದಾರರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಮತದಾರರ ಪಟ್ಟಿಯ ಪರಿಷ್ಕರಣೆ ಸಲುವಾಗಿ 1950 ಮತದಾರರ ಸಹಾಯವಾಣಿ ನಂಬರ್ ಚಾಲ್ತಿಯಲ್ಲಿದೆ. ಸಾರ್ವಜನಿಕರು ಈ ಸಹಾಯವಾಣಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ಹೇಳಿದರು.

Key words: Revised- final -voter list –announced-mysore DC-Dr.K.V Rajendra