ಬೆಂಗಳೂರು,ಮೇ,12,2021(www.justkannada.in): ಆಯುಷ್ಮಾನ್ ಭಾರತ್ ಫಲಾನುಭವಿಗಳಿಗೆ ಸರಾಗವಾಗಿ ಕೊರೋನಾ ಉಚಿತ ಚಿಕಿತ್ಸೆ ಕೊಡುವುದಿಲ್ಲವಾದರೆ ಈ ಯೋಜನೆ ಮತ್ತಿನ್ಯಾವ ಪುರುಷಾರ್ಥಕ್ಕೆ? ಎಂದು ಕೇಂದ್ರ ಸರ್ಕಾರವನ್ನ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆಯ ಅಡಿಯಲ್ಲಿ ನಾಗರಿಕರಿಗೆ ಮಹಾಮಾರಿ ಕೊರೋನಾ ವೈರಸ್ ಸೋಂಕಿಗೆ ಚಿಕಿತ್ಸೆ ಪಡೆಯಲು ಇರುವ ನಿರ್ಬಂಧಗಳನ್ನು ಸಡಿಲಗೊಳಿಸಿ ಕೇಂದ್ರ ಸರ್ಕಾರ ತಕ್ಷಣವೇ ಆದೇಶ ಹೊರಡಿಸಬೇಕು ಎಂದು ನಾನು ಈ ಮೂಲಕ ಆಗ್ರಹಿಸುತ್ತೇನೆ ಎಂದಿದ್ದಾರೆ.
ಹಾಗೆಯೇ ಆಯುಷ್ಮಾನ್ ಭಾರತ ಯೋಜನೆ ಅಡಿ ಕೊರೊನಾ ಸೋಂಕಿತರು ಉಚಿತವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರ ನಿರ್ಬಂಧಿಸಿರುವ 5 ಲಕ್ಷ ರೂಪಾಯಿ ವ್ಯಾಪ್ತಿಯಲ್ಲಿ ಚಿಕಿತ್ಸೆ ಪಡೆಯಲು ಎಡರು ತೊಡರುಗಳಿವೆ. ಮಹಾಮಾರಿ ಕೊರೊನಾ ದೇಶವನ್ನು ನಲುಗಿಸುತ್ತಿರುವ ಈ ದುರಿತ ಕಾಲದಲ್ಲಿ ಕೇಂದ್ರ ಸರ್ಕಾರ ಔದಾರ್ಯ ಪ್ರದರ್ಶಿಸಬೇಕಾದ ತುರ್ತು ಅಗತ್ಯವಿದೆ.
ಬಿಪಿಎಲ್ ಕಾರ್ಡುದಾರರು ಆಯುಷ್ಮಾನ್ ಭಾರತ ಯೋಜನೆ ಅಡಿ 5 ಲಕ್ಷ ರೂಪಾಯಿಗಳವರೆಗೆ ಮಾರಣಾಂತಿಕ ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ಪಡೆಯಬಹುದಾಗಿದೆ. ಎಪಿಎಲ್ ಕಾರ್ಡ್ ದಾರರಿಗೆ ಗರಿಷ್ಠ 5 ಲಕ್ಷ ರೂಪಾಯಿಗಳವರೆಗೆ ಶೇಕಡ 30ರಷ್ಟು ಚಿಕಿತ್ಸಾ ವೆಚ್ಚದಲ್ಲಿ ರಿಯಾಯಿತಿ ದಕ್ಕಲಿದೆ. ಹೀಗಾಗಿ ಆಯುಷ್ಮಾನ್ ಭಾರತ್ ಫಲಾನುಭವಿಗಳಿಗೆ ಸರಾಗವಾಗಿ ಕೊರೋನಾ ಉಚಿತ ಚಿಕಿತ್ಸೆ ಕೊಡುವುದಿಲ್ಲವಾದರೆ ಈ ಯೋಜನೆ ಮತ್ತಿನ್ಯಾವ ಪುರುಷಾರ್ಥಕ್ಕೆ?ಎಂದು ಹೆಚ್,ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಕೇಂದ್ರ ಸರ್ಕಾರ ತಕ್ಷಣ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ತುರ್ತು ಅಗತ್ಯವಿದೆ. ದೇಶದ ಬಹುಸಂಖ್ಯಾತರ ಆಗ್ರಹ ಕೂಡ ಇದೇ ಆಗಿದೆ ಎಂದು ಟ್ವೀಟ್ ಮಾಡಿದ್ದಾರೆ.
Key words: restriction – treatment – corona -under – Ayushmann Bharat -Scheme – HD Kumaraswamy