ಕ್ಷೇತ್ರದ ಅಭಿವೃದ್ಧಿಗಾಗಿ ರಾಜೀನಾಮೆ ನೀಡಿದ್ದೇನೆ: ಸುಪ್ರೀಂ ತೀರ್ಪಿನ ನಂತರ ಮುಂದಿನ ನಿರ್ಧಾರ- ಸಿಎಂ ಬಿಎಸ್ ವೈ ಭೇಟಿ ಬಳಿಕ ಅನರ್ಹ ಶಾಸಕ ಡಾ.ಸುಧಾಕರ್…

ಬೆಂಗಳೂರು,ಆ,3,2019(www.justkannada.in):  ಕ್ಷೇತ್ರದ ಅಭಿವೃದ್ದಿ ವಿಚಾರವಾಗಿ ನಾನು ರಾಜೀನಾಮೆ ನೀಡಿದ್ದೇನೆ. ಸುಪ್ರೀಂಕೋರ್ಟ್ ತೀರ್ಪು ಬಂದ ಬಳಿಕ ಮುಂದಿನ ನಿರ್ಧಾರ ಮಾಡುತ್ತೇನೆ ಎಂದು ಅನರ್ಹ ಶಾಸಕ ಡಾ.ಸುಧಾಕರ್ ತಿಳಿಸಿದರು.

ಇಂದು ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿ  ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನ ಅನರ್ಹ ಶಾಸಕ ಡಾ.ಸುಧಾಕರ್ ಭೇಟಿ ಮಾಡಿದರು. ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಅವರು, ನಾನು ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಸಿಎಂ ಜತೆ ಚರ್ಚಿಸಿದ್ದೇನೆ. ರಾಜಕೀಯ ವಿಚಾರಗಳ ಕುರಿತು ಚರ್ಚಿಸಿಲ್ಲ. ನಮ್ಮ ಜಿಲ್ಲೆಗೆ ಮೆಡಿಕಲ್ ಕಾಲೇಜು ಮಂಜೂರಾಗಿತ್ತು. ಆದರೆ ಈ ಹಿಂದಿನ ಸರ್ಕಾರ ಅನುದಾನ ನೀಡಿರಲಿಲ್ಲ. ಈಗ ಸಿಎಂ ಬಿಎಸ್ ವೈ ಅನುದಾನ ನೀಡುವ ವಿಶ್ವಾಸವಿದೆ ಎಂದರು.

ಬಿಎಸ್ ವೈ ಪ್ರಮಾಣವಚನ ಸ್ವೀಕರಿಸುವಾಗ ನಾನು ಇರಲಿಲ್ಲ. ಹೀಗಾಗಿ ಇಂದು ಭೇಟಿಯಾಗಿ ಅಭಿನಂದನೆ ಸಲ್ಲಿಸಿದ್ದೇನೆ. ಬಿಎಸ್ ವೈ ಸಂಪುಟದಲ್ಲಿ ಸ್ಥಾನ ಸಿಗುವ ಬಗ್ಗೆ ನನಗೆ ಗೊತ್ತಿಲ್ಲ ಎಂದರು.

ಇದೇ ವೇಳೆ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ ಡಾ.ಸುಧಾಕರ್, ಎಲ್ಲಿಂದಲೋ ಬಂದು ಕಾಲರ್ ಎಗರಿಸಿದ್ರೆ ಜನ ಮತ ಹಾಕಲ್ಲ. ಕ್ಷೇತ್ರದಲ್ಲಿ ಸೇವೆ ಮಾಡಿದವರಿಗೆ ಜನ ಮತ ಹಾಕ್ತಾರೆ. ಸ್ಥಳೀಯವಾಗಿ ನೋಡಿಕೊಂಡು ಮತ ಹಾಕ್ತಾರೆ. ಅತಿರಥ ಮಹಾರಥರೆಲ್ಲಾ ರಾಜ್ಯ ಸುತ್ತಾಡಿದ್ರೂ ಕೇವಲ ಒಂದೇ ಒಂದು ಸೀಟು ಬಂದಿದ್ದು ಯಾಕೆ ಎಂದು ಕಿಡಿಕಾರಿದರು.

ಮೊದಲು ಸುಪ್ರೀಂಕೋರ್ಟ್ ತೀರ್ಪು ಬರಲಿ. ಸುಪ್ರೀಂ ತೀರ್ಪು ತಡವಾದ್ರೂ ನ್ಯಾಯ ಸಿಗುವ ವಿಶ್ವಾಸವಿದೆ. ಸೋಲಿಸೋನು ಗೆಲ್ಲಿಸೋನು ಮೇಲೆ ಇದ್ದಾನೆ. ಜನರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಡಾ.ಸುಧಾಕರ್ ತಿಳಿಸಿದರು.

Key words:  resigned – development-disqualified MLA- Dr Sudhakar -CM BSY- visit.