ಉನ್ನತ ಶಿಕ್ಷಣ ಪರಿಷತ್ ಪುನರ್ ರಚಿಸುವಂತೆ ಸಚಿವರಿಗೆ ಮನವಿ.

ಬೆಂಗಳೂರು,ಜೂನ್,6,2023(www.justkannada.in):  ಕರ್ನಾಟಕ ರಾಜ್ಯ ವಿಶ್ರಾಂತ ಕುಲಪತಿಗಳ ವೇದಿಕೆಯ ಅಧ್ಯಕ್ಷ ಪ್ರೊ. ಕೆ.ಎಸ್.ರಂಗಪ್ಪ ನೇತೃತ್ವದ ನಿಯೋಗವು ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ್ ಅವರನ್ನು ಭೇಟಿ ಮಾಡಿ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಅನ್ನು ಪುನರ್ ರಚನೆ ಮಾಡುವುದು ಸೇರಿದಂತೆ ಮೂರ್ನಾಲ್ಕು ಬೇಡಿಕೆಗಳನ್ನು ಸಲ್ಲಿಸಿದೆ.

ಉನ್ನತ ಶಿಕ್ಷಣ ಪರಿಷತ್‌ ನಲ್ಲಿ ಹಾಲಿ ಆಡಳಿತ ವ್ಯವಸ್ಥೆಯನ್ನು ಸಂಪೂರ್ಣ ರದ್ದುಪಡಿಸಿ ಪುನರ್ ರಚನೆ ಮಾಡಬೇಕು. ವಿಶ್ರಾಂತ ಕುಲಪತಿಗಳ ವೇದಿಕೆಯ(ಎಫ್‌ವಿಸಿಕೆ) ಅಧ್ಯಕ್ಷರನ್ನು ಪರಿಷತ್‌ ಸದಸ್ಯರಾಗಿ ಅಥವಾ ಆಹ್ವಾನಿತರನ್ನಾಗಿ ಸೇರಿಸಬೇಕು. ಎಫ್‌ ವಿಸಿಕೆಯನ್ನು ಸರ್ಕಾರದ ಅನುದಾನಕ್ಕೆ ಒಳಪಡಿಸಬೇಕು. ಸರ್ಕಾರದ ಕಾನೂನು, ನಿಯಮಾವಳಿಗಳನ್ನು ರೂಪಿಸುವಾಗ ವೇದಿಕೆಯ ಸದಸ್ಯರನ್ನು ಬಳಸಿಕೊಳ್ಳಬೇಕು. ನಾವು ಸರ್ಕಾರಕ್ಕೆ ಯಾವುದೇ ವಿಚಾರಗಳಲ್ಲಿ ಸಹಕಾರ ನೀಡಲು, ನಮ್ಮ ಸೇವೆಯನ್ನು ಬಳಸಿಕೊಳ್ಳಲು ಸದಾ ಲಭ್ಯವಿರುವುದಾಗಿ ನಿಯೋಗ ಮನವಿ ಮಾಡಿದೆ.

ಡಾ.ಎಸ್ ಎನ್ ಹೆಗ್ಡೆ, ಡಾ.ಕೆ ನಾರಾಯಣಗೌಡ, ಡಾ.ಎನ್.ಎಸ್ ರಾಮೇಗೌಡ, ಡಾಎಸ್.ಚಂದ್ರಶೇಖರ್ ಶೆಟ್ಟಿ ಸೇರಿದಂತೆ ಹಲವು ವಿಶ್ರಾಂತ ಕುಲಪತಿಗಳು ನಿಯೋಗದಲ್ಲಿದ್ದರು.

ಮನವಿ ಸ್ವೀಕರಿಸಿದ ಸಚಿವರು, ವಿಶ್ವಾಂತ ಕುಲಪತಿಗಳ ಸೇವಾ ಅನುಭವ ಬಹಳ ಮುಖ್ಯವಾದುದ್ದು. ಅವರ ಸೇವೆ ಬಳಸಿಕೊಳ್ಳಲು ಸರ್ಕಾರ ಸಿದ್ಧವಿದೆ. ಅಗತ್ಯವಿದ್ದಾಗ ಆಹ್ವಾನಿಸಲಾಗುವುದು ಹಾಗೂ ಬೇಡಿಕೆಗಳನ್ನ ಪರಿಶೀಲನೆ ಮಾಡಲಗುತ್ತದೆ ಎಂದರು.

Key words: Request – Minister –restructuring – Higher Education Council-K.S Rangappa