ಬ್ರಹ್ಮರ್ಷಿ ನಾರಾಯಣ ಗುರುಗಳ ಚಿತ್ರವಿದ್ದ ಸ್ತಬ್ಧಚಿತ್ರ ತಿರಸ್ಕಾರ ಅತ್ಯಂತ ಖಂಡನೀಯ- ಹೆಚ್.ಡಿಕೆ ಅಸಮಾಧಾನ.

ಬೆಂಗಳೂರು,ಜನವರಿ,15,2022(www.justkannada.in): ಬ್ರಹ್ಮರ್ಷಿ ನಾರಾಯಣ ಗುರುಗಳ ಚಿತ್ರವಿದ್ದ ಸ್ತಬ್ಧಚಿತ್ರವನ್ನ  ಕೇಂದ್ರದ ಗಣರಾಜ್ಯೋತ್ಸವ ಸಮಿತಿ ತಿರಸ್ಕರಿಸಿರುವುದನ್ನ  ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಖಂಡಿಸಿದ್ದಾರೆ.

ಈ ಕುರಿತು ಟ್ವಿಟ್ ಮಾಡಿ ಅಸಮಾಧಾನ ಹೊರ ಹಾಕಿರುವ ಹೆಚ್.ಡಿ ಕುಮಾರಸ್ವಾಮಿ, ಪರಮಪೂಜ್ಯರಾದ ಬ್ರಹ್ಮರ್ಷಿ ನಾರಾಯಣ ಗುರುಗಳ ಚಿತ್ರವಿದ್ದ ಸ್ತಬ್ಧಚಿತ್ರವನ್ನು ಕೇಂದ್ರದ ಗಣರಾಜ್ಯೋತ್ಸವ ಸಮಿತಿ ತಿರಸ್ಕರಿಸಿರುವುದು ಅತ್ಯಂತ ಖಂಡನೀಯ ಹಾಗೂ ನಮ್ಮ ನೆಲದ ನಂಬಿಕೆಗಳಿಗೆ ಮಾಡಿರುವ ಅಪಮಾನ.

ಸ್ತ್ರೀ ಸಮಾನತೆಯನ್ನು ಪ್ರತಿಪಾದಿಸಿ ಜಾತಿ, ಮತಭೇದಗಳನ್ನು ಧಿಕ್ಕರಿಸಿ ಸಮಾಜೋದ್ಧಾರಕ್ಕೆ ಶ್ರಮಿಸಿದ ಮಹಾನ್ ಚೇತನ ಶ್ರೀ ನಾರಾಯಣ ಗುರುಗಳು,  “ಮನುಷ್ಯರೆಲ್ಲ ಒಂದೇ ಎಂದು ಹೇಳಿ ಒಂದೇ ಜಾತಿ, ಒಂದೇ ಮತ, ಒಬ್ಬರೇ ದೇವರು” ಎಂದು ಸಾರಿ ಆತ್ಮದಲ್ಲಿ ಅರಿವಿನ ಬೆಳಕು ಮೂಡಿಸಿದವರು.

ಅಂಥವರ ಚಿತ್ರವಿದ್ದ ಸ್ತಬ್ಧಚಿತ್ರವನ್ನು ತಿರಸ್ಕಾರ ಮಾಡಿರುವುದು ಕ್ಷಮಾರ್ಹವಲ್ಲದ ತಪ್ಪು ಹಾಗೂ ಭಾರತೀಯ ಸುಧಾರಣಾ ಪರಂಪರೆಯ ಬಗ್ಗೆ ತಿಳಿವಳಿಕೆ ಇಲ್ಲದ ಅಜ್ಞಾನದ ಪರಮಾವಧಿ. ಆಯ್ಕೆ ಸಮಿತಿಯಲ್ಲಿ ಇಂಥ ಅಜ್ಞಾನಿಗಳಿರುವುದು ದೇಶಕ್ಕೆ ಶೋಭೆಯಲ್ಲ.

ಕೂಡಲೇ ನಾರಾಯಣ ಗುರುಗಳ ಚಿತ್ರವಿರುವ ಸ್ತಬ್ಧಚಿತ್ರವನ್ನು ಗಣರಾಜ್ಯೋತ್ಸವದ ಪರೇಡ್ʼಗೆ ಸಮಿತಿಯು ಅಂಗೀಕಾರ ಮಾಡಬೇಕು. ಕೂಡಲೇ ಸಂಬಂಧಪಟ್ಟ ಕೇಂದ್ರದ ಸಚಿವಾಲಯ ಮತ್ತು ಅಧಿಕಾರಿಗಳು ಈ ಅಚಾತುರ್ಯವನ್ನು ಸರಿ ಮಾಡಬೇಕು ಎಂದು ಒತ್ತಾಯ ಮಾಡುತ್ತೇನೆ ಎಂದು ಟ್ವಿಟ್ಟರ್ ನಲ್ಲಿ ಆಗ್ರಹಿಸಿದ್ದಾರೆ.

Key words: rejection -image -Brahmarshi Narayana guru- Hd kumaraswamy