ಶೇ.15 ರಷ್ಟು ವೇತನ ಹೆಚ್ಚಳ ನಿರಾಕರಿಸಿದ ಹಿನ್ನೆಲೆ: ಮಾ.20ರಂದು ಸಾರಿಗೆ ನೌಕರರ ಜೊತೆ ಸಂಧಾನ ಸಭೆಗೆ ಮುಂದಾದ ಸರ್ಕಾರ.

ಬೆಂಗಳೂರು,ಮಾರ್ಚ್,17,2023(www.justkannada.in):  ಸಾರಿಗೆ ನೌಕರರು ಶೇ. 15ರಷ್ಟು ವೇತನ ಪರಿಷ್ಕರಣೆ ನಿರಾಕರಿಸಿದ ಹಿನ್ನೆಲೆ ಇದೀಗ ಮತ್ತೆ ಸಾರಿಗೆ ನೌಕರರ ಜೊತೆ ಸಂಧಾನ ಸಭೆ ನಡೆಸಲು ಸರ್ಕಾರ ಮುಂದಾಗಿದೆ.

ಕಾರ್ಮಿಕ ಇಲಾಖೆ ಆಯುಕ್ತರು ಮಾರ್ಚ್ 20 ಮಧ್ಯಾಹ್ನ 2.30 ಕ್ಕೆ ಕಾರ್ಮಿಕ ಸಂಘಗಳ ಜೊತೆ ಸಂಧಾನ ಸಭೆ ನಡೆಸಲಿದ್ದಾರೆ. ಸರ್ಕಾರದ ಆದೇಶ ಮೇರೆಗೆ ಮಾರ್ಚ್ 20 ರಂದು ಕಾರ್ಮಿಕ ಸಂಘಟನೆಗಳು ಮತ್ತು ಅಧಿಕಾರಿಗಳನ್ನ ಸಂಧಾನ ಸಭೆಗೆ ಆಹ್ವಾನಿಸಲಾಗಿದೆ. ಮಾರ್ಚ್ 21 ರಂದು ಸಾರಿಗೆ ನೌಕರರು ಮುಷ್ಕರಕ್ಕೆ ಮುಂದಾಗಿರುವ ಹಿನ್ನೆಲೆ ನೌಕರರನ್ನ ಸಮಾಧಾನ ಪಡಿಸಲು ಮತ್ತೊಂದು ರಾಜಿ ಸಭೆಗೆ ಸರ್ಕಾರ ಮುಂದಾಗಿದೆ.

ಈ ಮಧ್ಯೆ ವೇತನ ಹೆಚ್ಚಳ ಸೇರಿ ತಮ್ಮ ಬೇಡಿಕೆಯನ್ನ ಈಡೇರಿಸದಿದ್ದರೇ ಮುಷ್ಕರ ಹಿಂಪಡೆಯುವ ಮಾತೇ ಇಲ್ಲ ಎಂದು ಈಗಾಗಲೇ ಸಾರಿಗೆ ನೌಕರರ ಸಂಘದ ಅಧ್ಯಕ್ಷ ಹೆಚ್​.ವಿ. ಅನಂತ ಸುಬ್ಬರಾವ್ ಎಚ್ಚರಿಕೆ ನೀಡಿದ್ದಾರೆ.

ನಿನ್ನೆ ಬೆಳಿಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಸಾರಿಗೆ ನೌಕರರಿಗೆ ಶೇ 15ರಷ್ಟು ವೇತನ ಹೆಚ್ಚಳ ಮಾಡುವುದಾಗಿ ಘೋಷಿಸಿದ್ದರು. ಈ ಸಂಬಂಧ ಆದೇಶವನ್ನು ನಿನ್ನೆಯೇ ಹೊರಡಿಸಲಾಗುವುದು ಎಂದಿದ್ದರು. ಯಾವುದೇ ಸಂಧಾನ ಸಭೆ ನಡೆಸದೇ ಏಕಾಏಕಿ ತೀರ್ಮಾನ ಕೈಗೊಂಡ ಸಿಎಂ ನಡೆಗೆ ವ್ಯಾಪಾಕ ವಿರೋಧ ಕೂಡ ವ್ಯಕ್ತವಾಗಿದೆ. ಮೂಲ ವೇತನದಲ್ಲಿ ಶೇ 25ರಷ್ಟು ಹೆಚ್ಚಳ ಮಾಡಬೇಕು ಎಂಬುದು ಸಾರಿಗೆ ನೌಕರರ ಬೇಡಿಕೆಯಾಗಿದೆ.

Key words: refusal – 15% salary- increase- government -meeting – transport employees – March 20.