ಜಾತಿಗಣತಿ ವರದಿ ಓದದೇ ಅವೈಜ್ಞಾನಿಕ ಎಂದು ಹೇಗೆ ಹೇಳುತ್ತೀರಿ..? ಜಯಪ್ರಕಾಶ್ ಹೆಗ್ಡೆ.

ಬೆಂಗಳೂರು,ಫೆಬ್ರವರಿ,29,2024(www.justkannada.in):  ಇಂದು ಸರ್ಕಾರಕ್ಕೆ ಸಲ್ಲಿಕೆಯಾದ ಜಾತಿಗಣತಿ ವರದಿಗೆ ವಿರೋಧ ವ್ಯಕ್ತವಾಗಿದ್ದು ಈ ಕುರಿತು ಪ್ರತಿಕ್ರಿಯಿಸಿರುವ  ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಜಯಪ್ರಕಾಶ್​ ಹೆಗ್ಡೆ,  ಜಾತಿಗಣತಿ ವರದಿ ಓದದೇ ಅವೈಜ್ಞಾನಿಕ ಎಂದು ಹೇಗೆ ಹೇಳುತ್ತೀರಿ..? ಎಂದು ಪ್ರಶ್ನಿಸಿದ್ದಾರೆ.

ಇಂದು ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯರಿಗೆ ಜಾತಿಗಣತಿ ವರದಿ ಸಲ್ಲಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಜಯಪ್ರಕಾಶ್​ ಹೆಗ್ಡೆ, ಕಾಂತರಾಜು ಸಮಿತಿ 2014-15ರಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ದತ್ತಾಂಶ  ಸಂಗ್ರಹ ಮಾಡಿತ್ತು. ಕಾಂತರಾಜು ಸಮಿತಿ ದತ್ತಾಂಶ ಪ್ರಕಾರ ನಾವು ವರದಿ ಸಿದ್ಧಪಡಿಸಿದ್ದೇವೆ​. ಜಾತಿಗಣತಿ ವರದಿಗೆ ಕಾರ್ಯದರ್ಶಿ, ಎಲ್ಲಾ ಸದಸ್ಯರು ಸಹಿಯೂ ಇದೆ. ವರದಿ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ಆಗಲಿದೆ ಎಂದರು.

ಹಾಗೆಯೇ ಜಾತಿಗಣತಿ ವರದಿಗೆ ವಿರೋಧದ ಬಗ್ಗೆ ಪ್ರತಿಕ್ರಿಯಿಸಿದ ಅವರು,  ಜಾತಿಗಣತಿ ವರದಿಯನ್ನು ಓದದೇ ಅವೈಜ್ಞಾನಿಕ ಎಂದು ಹೇಗೆ ಹೇಳುತ್ತೀರಿ. ನಾವು ಸಿದ್ಧಪಡಿಸಿದ ಜಾತಿ ಗಣತಿಯ ವರದಿ ಸೋರಿಕೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಇಂದು ಸಲ್ಲಿಕೆಯಾದ ಜಾತಿ ಗಣತಿ ವರದಿಯಲ್ಲಿ ಒಟ್ಟು 13 ಪ್ರತಿಗಳನ್ನು ಸಿದ್ಧಪಡಿಸಲಾಗಿದೆ. ಎಲ್ಲ ಪ್ರತಿಗಳು ಕೂಡ ದೊಡ್ಡ ಸಂಪುಟಗಳಾಗಿವೆ. ಕೆಲವು ಸಂಪುಟಗಳನ್ನು ಎರಡು-ಮೂರು ಭಾಗಗಳಾಗಿ ಮಾಡಲಾಗಿದೆ. ಇನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಹಾಗೂ ಎಲ್ಲ ವರ್ಗಗಳ ಶೈಕ್ಷಣಿಕ ಮತ್ತು ಸಾಮಾಜಿಕ ಸ್ಥಾನಮಾನಗಳ ಸಮೀಕ್ಷೆಯನ್ನು ವರದಿಯು ಒಳಗೊಂಡಿದೆ.

Key words: reading – caste census –report-Jayaprakash Hegde.