ರೆಪೋ ದರ ಏರಿಸಿದ ಆರ್’ಬಿಐ: ಜನರಿಗೆ ಹೆಚ್ಚಲಿದೆ ಇಎಂಐ ಹೊರೆ

ಬೆಂಗಳೂರು, ಆಗಸ್ಟ್ 05, 2022 (www.justkannada.in): ರೆಪೋ ದರ ಏರಿಕೆಯಿಂದ ಗೃಹ, ವಾಹನ ಸಾಲಗಳ ಬ್ಯಾಂಕ್​ಗಳ ಇಎಂಐ ಮೊತ್ತ ಮತ್ತಷ್ಟು ದುಬಾರಿಯಾಗಲಿದ್ದು, ಜನ ಸಾಮಾನ್ಯರ ಜೇಬಿಗೆ ಹೊರೆಯಾಗಲಿದೆ.

ಆರ್​ಬಿಐನ ಹಣಕಾಸು ನೀತಿ ಸಮಿತಿ (ಎಂಪಿಸಿ)ಯ ಮೂರು ದಿನಗಳ ಸಭೆಯ ಬಳಿಕ ರೆಪೋ ದರ ಏರಿಕೆ ನಿರ್ಧಾರವನ್ನು ಆರ್​ಬಿಐ ಗವರ್ನರ್​ ಶಕ್ತಿಕಾಂತ್​ ದಾಸ್ ಶುಕ್ರವಾರ ಪ್ರಕಟಿಸಿದ್ದಾರೆ.

ಆರ್ಥಿಕ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಹಣದುಬ್ಬರವನ್ನು ಗುರಿಯೊಳಗೆ ಇರಿಸಿಕೊಳ್ಳುವತ್ತ ಗಮನಹರಿಸಲು ಎಂಪಿಸಿ ನಿರ್ಧರಿಸಿದೆ ಎಂದು ಶಕ್ತಿಕಾಂತ್ ದಾಸ್​ ಹೇಳಿದ್ದಾರೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಇದು ಆರ್‌ಬಿಐನ ಮೂರನೇ ರೆಪೋ ದರ ಏರಿಕೆಯಾಗಿದೆ. ಕಳೆದ ಜೂನ್​ ತಿಂಗಳಲ್ಲಿ 50 ಮೂಲಾಂಶಗಳ ಏರಿಕೆಯೊಂದಿಗೆ ರೆಪೋ ದರ 4.90 ರಷ್ಟಿತ್ತು. ಇದೀಗ 50 ಮೂಲಾಂಶ ಏರಿಕೆಯೊಂದಿಗೆ 5.40 ರಷ್ಟಾಗಿದೆ.