ರವಿ ಬಸ್ರೂರ್ ಮಾಡಿದ ‘ಗಿರ್ಮಿಟ್’  ಸಿಂಪ್ಲಿ ಸೂಪರ್…!

ಬೆಂಗಳೂರು,ನ,8,2019(www.justkannada.in): ಪ್ರತಿಭಾರಿ ವಿಭಿನ್ನ ಪ್ರಯೋಗವನ್ನು ಮಾಡೋ ರವಿ ಬಸ್ರೂರ್ ಗರ್‌ಗರ್ ಮಂಡ್ಲ,ಬಿಲಿಂಡರ್ ಚಿತ್ರ ಕುಂದಾಪುರ ಭಾಷೆಯಲ್ಲಿ ಚಿತ್ರೀಕರಿಸಿ ಸೈ ಎನಿಸಿಕೊಂಡವರು. ಹಾಗೇ ಕಟಕದಲ್ಲೂ ಮುಗ್ದ ಮನಸ್ಸಿನ ಮೇಲೆ    ಮಾಟ ಪ್ರಯೋಗ ನಡೆದ್ರೆ ಹೇಗಿರುತ್ತೆ ಅನ್ನೋ ನೈಜ ಘಟನೆಯಾಧಾರಿತ ಸಿನಿಮಾ ಮಾಡಿದ್ದರು. ಇದೀಗ  ಮಕ್ಕಳ ಮೂಲಕ ಯುವಕರ,ಹಿರಿಯರ ಕಥೆ ಹೇಳುವ ವಿಭಿನ್ನ ಪ್ರಯೋಗದ ಚಿತ್ರವನ್ನ ನಿರ್ದೇಶಕ ರವಿ ಬಸ್ರೂರ್ ಮಾಡಿ ಶಹಬ್ಬಾಸಗಿರಿ ಗಿಟ್ಟಿಕೊಂಡಿದ್ದಾರೆ.

ರವಿ ಬಸ್ರೂರ್ ನಿರ್ದೇಶನದ ಗಿರ್ಮಿಟ್ ಸಿನಿಮಾವೂ ಕೌಟುಂಬಿಕ  ಕಥೆಯನ್ನು ಹೊಂದಿದ್ದು, ಹೀರೋಗೆ ಜ್ಯೋತಿಷಿಯೊಬ್ಬರು  ಒಂದು ತಿಂಗಳಲ್ಲಿ ನೀನು ಮದುವೆಯಾಗಬೇಕು.ಇಲ್ಲಾಂದ್ರೆ ನಿನ್ನ ಅಜ್ಜಿ ಸಾಯ್ತಾರೆ ಅಂತ ಭವಿಷ್ಯ ನುಡಿದಿರ್ತಾರೆ.ಹಾಗೇ ಮದ್ವೆಯಾಗಿ ಬರೋ ಹುಡುಗಿಗೆ ಇಂಗ್ಲಿಷ್ ಬರ್ಬೇಕು ಅನ್ನೊ ಕಂಡಿಷನ್ ಹೀರೋ ಅಮ್ಮನದ್ದು. ಇದ್ರ  ನಡುವೆ ಹೀರೋಗೆ ಹೀರೋಯಿನ್ ಒಂದ್ ಕಂಡಿಷನ್ ಹಾಕಿರ್ತಾಳೆ‌.ಇದೆಲ್ಲ ಸವಾಲುಗಳ ನಡುವೆ ಹೇಗೆ ಹೀರೋ ತನ್ನ ಪ್ರೀತಿನಾ ಪಡೆಯುತ್ತಾನೆ ಅನ್ನೋದೆ ಥ್ರಿಲ್ಲಿಂಗ್ ವಿಷಯ.

ನಾಯಕನಟನಾಗಿ ಆಶ್ಲೇಷ್ ರಾಜ್ ನಟಿಸಿದ್ರೆ,ನಟಿಯಾಗಿ ಶ್ಲಾಘ ಸಾಲಿಗ್ರಾಮ ಮನೋಜ್ಞವಾಗಿ ಅಭಿನಯಿಸಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ. ನಾಯಕನಿಗೆ ರಾಕಿಂಗ್ ಸ್ಟಾರ್ ಯಶ್ ಧ್ವನಿ ನೀಡಿದ್ದು,ನಾಯಕಿಗೆ ರಾಧಿಕಾ ಪಂಡಿತ್ ಧ್ವನಿಯಾಗಿ ಚಿತ್ರಕ್ಕೆ ಮತ್ತಷ್ಟು ಮೆರಗು ನೀಡಿದೆ‌.ಹಾಗೇ ಚಿತ್ರದಲ್ಲಿ‌ನ ಇನ್ನು‌ ಕೆಲವು ಪಾತ್ರಗಳಿಗೆ ಸಾಧುಕೋಕಿಲ,ರಂಗಾಯಣ ರಘು,ತಾರಾ ಸೇರಿ ಇತರರು ಧ್ವನಿ‌ ನೀಡಿದ್ದಾರೆ.ಚಿತ್ರದಲ್ಲಿ ಹಾಸ್ಯದ ಮೂಲಕವೇ ಕಥೆ ಬೆಳೆಯುತ್ತಾ ಹೋಗುತ್ತೆ.ಇದರೊಂದಿಗೆ ಪೈಟಿಂಗ್ ಕೂಡ ಇದ್ದು ಮಾಸ್ ಪ್ರೇಕ್ಷಕರನ್ನು ಸೆಳೆಯುತ್ತದೆ.

ತಾಂತ್ರಿಕವಾಗಿ ಕ್ಯಾಮರಾ ವರ್ಕ್ನಲ್ಲಿ ಸಚಿನ್ ಬಸ್ರೂರ್ ಕಥೆಗೆ ಬೇಕಾಗೋ ದೃಶ್ಯಗಳನ್ನು  ಸೆರೆಹಿಡಿದಿದ್ದಾರೆ. ಸಂಬಾಷಣೆ ಸಹಜವಾಗಿದ್ದು ಕುಂದಾಪುರ ಕನ್ನಡ,ಮಂಗಳೂರು ಕನ್ನಡ,ಉತ್ತರ ಕರ್ನಾಟಕ, ಮಂಡ್ಯ ಸೊಗಡಿನ ಕನ್ನಡವನ್ನು ಪಾತ್ರಗಳಿಗೆ ತಕ್ಕಂತೆ ಬಳಸಲಾಗಿದ್ದು,ಕುಂದಾಪ್ರ ಕನ್ನಡ ಮಾತನಾಡೋ ಅಜ್ಜಿಯ ಸಂಭಾಷಣೆ ಅತಿಹೆಚ್ಚು ಸೆಳೆಯುತ್ತೆ.ಚಿತ್ರದಲ್ಲಿ ಎರಡು ಸಾಂಗ್ ಇದ್ದು ಮೂಲತಃ ಸಂಗೀತ ನಿರ್ದೇಶಕರಾಗಿದ್ದ ರವಿ ಬಸ್ರೂರ್ ಚಿತ್ರದಲ್ಲಿ ಇನ್ನು ಕೆಲವೊಂದು‌ ಹಾಡುಗಳ ನಿರೀಕ್ಷೆಯಲ್ಲಿದ್ದ ಕೆಲವರಿಗೆ ನಿರಾಸೆಯಾಗಿದೆ.

ಒಟ್ಟಾರೆಯಾಗಿ ಮಕ್ಕಳ ಮೂಲಕ ಹಿರಿಯರ ಪಾತ್ರಮಾಡಿ ಹೆಣ್ಣು ಹೆತ್ತವರ ಕಷ್ಟಗಳನ್ನ ಅರ್ಥಮಾಡಿಸೋದ್ರಲ್ಲಿ ರವಿ ಬಸ್ರೂರ್‌‌ ಗೆದ್ದಿದ್ದಾರೆ. ಸದಾ ಪ್ರಯೋಗಾತ್ಮಕ ‌ಚಿತ್ರಗಳನ್ನ ಮಾಡೋ ಬಸ್ರೂರ್  ಈ ಚಿತ್ರದ ಮೂಲಕ ಪ್ರಯೋಗಾತ್ಮಕ ಚಿತ್ರಗಳಿಗೆ ಇನ್ನಷ್ಟು ಉತ್ತೇಜನ ನೀಡೋದ್ರಲ್ಲಿ ಸಂಶಯವಿಲ್ಲ..

– ರೂಪೇಶ್ ಬೈಂದೂರು

Key words: ravi basrur-‘Girmit-film-Simply Super …