ಚೈತನ್ಯದ ಚಿಲುಮೆಯಂತಿದ್ಧ ರಾಮಿ ಅವರನ್ನ ಕಳೆದುಕೊಂಡು ಮೇಲುಕೋಟೆ ಒಂದಿಷ್ಟು ಸೊರಗಿದೆ..

ಮಂಡ್ಯ,ಜೂನ್,16,2022(www.justkannada.in): ನಿನ್ನೆ ನಮ್ಮನ್ನಗಲಿದ ಕಾಳಮೇಘಾಚಾರ್‍, ಅಲಿಯಾಸ್ ರಾಮೈಂಗಾರ್‍ ಅಲಿಯಾಸ್ ರಾಮಿ ಅವರನ್ನು ಕಳೆದು ಕೊಂಡು ಮೇಲುಕೋಟೆ ಒಂದಿಷ್ಟು ಸೊರಗಿದೆ. ರಾಮೈಂಗಾರ್‍ ಎಂದೂ ಪ್ರೀತಿ/ಸಲಿಗೆ ಯಿಂದ ’ರಾಮಿ’ ಎಂದೂ ಊರಿಗೆಲ್ಲ ಚಿರಪರಿಚಿತ ಈ  ಕಾಳಮೇಘಾಚಾರ್‍. ಕಾಳ ಮೇಘಾಚಾರ್‍ ಎಂಬ ಹೆಸರು ಹೇಗೆ ಎಷ್ಟು ಅಪರೂಪವೋ ಹಾಗೆ ರಾಮಿಯದು ಒಂದು ವಿಲಕ್ಷಣ ವ್ಯಕ್ತಿತ್ವ .

ನಮ್ಮ ಪುತಿನ  ಅಥವಾ ಗೊರೂರು ರಾಮಸ್ವಾಮಿ ಅಯ್ಯಂಗಾರ್‍ ಅವರ ’ಪ್ರಬಂಧಗಳಲ್ಲಿ ಸ್ಥಾನ ಪಡೆಯಬಹುದಾದ ವ್ಯಕ್ತಿತ್ವ ಅದು. ಅಂತಹ ಎತ್ತರವಲ್ಲದ ಕಟ್ಟುಮಸ್ತಿನ ದೇಹ ರಾಮಿಯದು. ಕಟ್ಟು ಮಸ್ತಿನ ದೇಹ ಇದ್ದದ್ದಕ್ಕೆ, ಶ್ರಮದ ಕೆಲಸ ಆಯ್ದುಕೊಂಡರೋ ಅಥವಾ ಶ್ರಮದ ಕೆಲಸ ಮಾಡುತ್ತಾ ಮಾಡುತ್ತಾ ದೇಹ ಗಟ್ಟಿಯಾಗುತ್ತಾ ಹೋಯಿತೋ ನನಗೆ ತಿಳಿಯದು. ಆದರೂ ರಾಮಿ ಎಂದೊಡನೆ ಕಟ್ಟು ಮಸ್ತಿನ, ಅಷ್ಟು ಎತ್ತರವಲ್ಲದ, ದುಂಡು ಮುಖದ ವ್ಯಕ್ತಿತ್ವ ಕಣ್ಣು ಮುಂದೆ ಬಂದು ನಿಲ್ಲುತ್ತದೆ. ಲೌಕಿಕ ಶಿಕ್ಷಣವನ್ನು ದಕ್ಕಿಸಿ ಕೊಳ್ಳಲಾರದ, ವೇದ- ಉಪನಿಷತ್ತುಗಳನ್ನೂ ರೂಢಿಸಿಕೊಳ್ಳಲಾಗದ, ಶ್ರಮ ಜೀವನಕ್ಕೆ ನಿಂತ ಬ್ರಾಹ್ಮಣ ಕುಲದ ವ್ಯಕ್ತಿ ಅವರು. ಹಾಗಾಗಿ ಅದು ಅಪರೂಪದ ವ್ಯಕ್ತಿತ್ವ. ಮಡಿವಂತ ಬ್ರಾಹ್ಮಣ ಸಮಾಜದಲ್ಲಿ ಜಾತಿಯಿಂದ ಬ್ರಾಹ್ಮಣನಾಗಿದ್ದು ಶ್ರಮವನ್ನೂ ಮಾಡಬಲ್ಲ ವ್ಯಕ್ತಿಗೆ ಎಲ್ಲಿಲ್ಲದ  ಬೇಡಿಕೆ. ದೇವಸ್ಥಾನದ ಊರುಗಳಲ್ಲಿ, ಮಡಿ-ಮೈಲಿಗೆಗಳ ಚೌಕಟ್ಟಿನಲ್ಲಿ ಇದ್ದು ಕೊಂಡು, ಜಾತಿಯವನಾಗಿ  ಶ್ರಮದ ಕೆಲಸವನ್ನುನಿಭಾಯಿಸುವ ಒಂದು ಮೂರು ನಾಲ್ಕು ಮಂದಿ ಇರುತ್ತಾರೆ. ಅವರು ಕೇರಿಯ/ ದೇವಸ್ಥಾನ  ನಿತ್ಯ ಕಟ್ಟಲೆಗಳನ್ನು ನಿರ್ವಹಿಸುತ್ತಿರುತ್ತಾರೆ.  ಒಂದು ರೀತಿಯಲ್ಲಿ ರಂಗದ ಹಿಂದಿನ ಕೆಲಸಗಳನ್ನು ಅವರು ಮಾಡುತ್ತಿರುತ್ತಾರೆ. ಅಂತಹ ಒಂದು ವ್ಯಕ್ತಿತ್ವ ನಮ್ಮ ರಾಮಿಯದು. ಎಪ್ಪತ್ತರ ಅಂಚಿನಲ್ಲಿದ್ದ ಬ್ರಹ್ಮಚಾರಿ ರಾಮಿ ನಮ್ಮೂರಿನ ನರಸಿಂಹನ ಸೇವೆಯನ್ನು ಕಳೆದ ನಾಲ್ಕೈದು ದಶಕ ಮಾಡಿ ನಿನ್ನೆ ನರಸಿಂಹ ಜಯಂತಿಯಂದೆ ಇಹ ಲೋಕವನ್ನು ತ್ಯಜಿಸಿದ್ದು ಯೋಗಾ ಯೋಗವೇ ಸರಿ.

ಅದೇಕೋ ರಾಮಿ ಕುಟುಂಬ ಊರ್ಜಿತವಾಗದ ಕುಟುಂಬವಾಗೆ ಉಳಿದು ಹೋಯಿತು.  ರಾಮಿಯ ತಮ್ಮ ಮಿಣ್ಣಿ  ಹತ್ತು ವರ್ಷದ ಹಿಂದೆಯೇ ಇಲ್ಲಿಂದ ನಿರ್ಗಮಿಸಿದರೆ , ಬೆಂಗಳೂರಿನಲ್ಲಿದ್ದ ರಾಮಿಯ ಪ್ರೀತಿಯ ತಂಗಿ ಕೆಲವು ವರ್ಷಗಳ ಹಿಂದೆ ಅಪಘಾತವೊಂದರಲ್ಲಿ ನಿಧನರಾದರು. ಇನ್ನೊಬ್ಬ ಅಣ್ಣ ಸರಿಯಾಗಿ ಬದುಕಲಿಲ್ಲ. ಮತ್ತೊಬ್ಬ ಸಹೋದರ ಇಲ್ಲೇ ಇದ್ದು ಅಂತಹ ಸುಖದ ಬದುಕನ್ನು ಬದುಕಿಲ್ಲ. ತಂಗಿ ಮಾತ್ರ ವಿದ್ಯಾವಂತೆ. ಆದರೆ ಈ ನಾಲ್ಕು ಸಹೋದರರಿಗೂ ಯಾವ ಕಾರಣಕ್ಕೋ ಸರಸ್ವತಿಯೂ ಒಲಿಯಲಿಲ್ಲ, ಲಕ್ಷ್ಮೀ ಯೂ ಇಲ್ಲ. ಆದರೆ ನಮ್ಮ ರಾಮಿಗೆ ನರಸಿಂಹ ಒಲಿದಿದ್ದ, ಅದು ಕೇವಲ ಅವನಿಂದ ಸೇವೆ ಮಾಡಿಸಿಕೊಳ್ಳಲು.  ರಾಮಿಯದು ದೇವಸ್ಥಾನದ ಮುಂದಿರುವ ಪಾಳು ಮನೆ. ಅವರ ಅಜ್ಜನ ಕಾಲದ ಮನೆ ಇರಬೇಕು. ಸೋರುವ ಸೂರು, ಬೀಳುತ್ತಿರುವ ಗೋಡೆ, ಗುಳಿ ಬಿದ್ದ ನೆಲ ಮನೆಯ ತುಂಬ ಧೂಳೋ ಧೂಳು. ಅಲ್ಲೇ ಕೊಟ್ಟಿಗೆ ಎಂಬ ಜಾಗದಲ್ಲಿ ರಾಮಿಯು ನರಸಿಂಹ ನ ಸೇವೆ ಸಾಲದೆಂದು ಗೋಸೇವೆಗೆ ಕಟ್ಟಿಕೊಂಡ ಒಂದಿಷ್ಟು ಹಸು ಕರುಗಳು. ಈ ಮನೆಯಲ್ಲಿ ಮಲಗಿ ಸೂರ್ಯೋದಯದ ಮುಂಚೆಯೇ ಗೋಗಳೊಂದಿಗೆ ಮನೆ ಬಿಟ್ಟರೆ ಮತ್ತೆ ಹಿಂದಿರುಗುವುದು ರಾತ್ರಿಯೇ.

ಗೋವುಗಳನ್ನು ಧನುಷ್ಕೋಟಿಯ ದಿಕ್ಕಿನಲ್ಲಿ ಓಡಿಸಿ. ಅದರ ಹಿಂದೆ ತಾನೂ ಒಂದಿಷ್ಟು ದೂರ ಹೋಗಿ ಅಲ್ಲೇ ಫಲಸ್‌ತೀರ್ಥದಲ್ಲೋ, ಪದ್ಮ ತೀರ್ಥದಲ್ಲೋ, ವೇದ ಪುಸ್ಕರಣಿಯಲ್ಲೋ, ಅಕ್ಕ-ತಂಗಿಯ ಕೊಳದಲ್ಲೋ ಒಂದು ಮುಳುಗು ಹಾಕಿ ಅದೇ ಕೌಪೀನ ಮತ್ತು ಅದೇ ತುಂಡನ್ನು  ಹಿಂಡಿ ಸುತ್ತು ಕೊಂಡು ಅಲ್ಲೇ ಸಿಕ್ಕ ಕಡ್ಡಿಯೊಂದರಿಂದ ಹಣೆಗೆ ನಾಮ ಎಳೆದು ಕೊಂಡು ಬಿಟ್ಟರೆ ರಾಮಿಯ ಅಲಂಕಾರ ಮುಗಿಯಿತು.

ಎಂಟು ಗಂಟೆಯ ಹೊತ್ತಿಗೆ ನಾರಾಯಣರ ದೇವಸ್ಥಾನ ಸೇರಿ ಅಲ್ಲಿ ಒಂದೆರಡು ಸೇರು ದೋಸೆ ಹಿಟ್ಟು ರುಬ್ಬಿ, ಒಂದು ಹತ್ತು ಕೊಡ ನೀರು ಸೇದಿ ಪಾಕ ಶಾಲೆ ಸೇರಿಸಿ ಬಿಟ್ಟರೆ ಅಲ್ಲಿಗೆ ಅಂದಿನ ನಾರಾಯಣನ ಸೇವೆ ಒಂದು ಹಂತಕ್ಕೆ ಬಂದಂತೆ.

ಅಲ್ಲಿಂದ  ನರಸಿಂಹನ ಬೆಟ್ಟಹತ್ತಿ ಅಲ್ಲಿಯೂ ನಿತ್ಯಕಟ್ಲೆಗೆ ಒಂದೆರಡು ಸೇರಿ ದೋಸೆ ಹಿಟ್ಟು ರುಬ್ಬಿ, ಅರ್ಧ ಬೆಟ್ಟದಿಂದ ಆರೇಳು ಸಲ  ದೊಡ್ಡ ತಪ್ಪಲೆಯಲ್ಲಿ ನೀರು ಹೊತ್ತು ಪ್ರಸಾದಕ್ಕೆ ಮಾಡಿದ್ದ ಪೊಂಗಲ್ ಅನ್ನೋ ಮೊಸರನ್ನ ವನ್ನೋ  ಒಂದಿಷ್ಟು ಬಾಯಿಗೆ ಎಸೆದು ಕೊಂಡರೆ ರಾಮಿಯ ಮಧ್ಯಾಹ್ನದ ಭೋಜನ ಮುಗಿದಂತೆ. ಮತ್ತೆ ಸಂಜೆ ಬೆಟ್ಟ ಹತ್ತಿ ಮಾರನೆಗೆ ಪಾತ್ರೆಗಳನ್ನು ಅಣಿಗೊಳಿಸಿ ಬಂದರೆ ಅಂದಿನ ಕೆಲಸ ಹೆಚ್ಚೂಕಡಿಮೆ ಪೂರ್ಣವಿರಾಮ.

ಇಷ್ಟಲ್ಲದೇ ವಿವಿಧ ಸನ್ನಿಧಿಗಳಲ್ಲಿ ನಡೆಯವ ಕಾರ್ಯಕ್ರಮಗಳಿಗೆ ಖಾರದ ಪುಡಿ ಕುಟ್ಟಿ ಕೊಡುವುದು. ಲಾಡು ಮಾಡಲು ಹಿಟ್ಟು ನಾದು ಕೊಡುವುದು, ಒಂದಿಷ್ಟು ಬ್ರಾಹ್ಮಣ ಮನೆಗಳಿಗೆ ಮೆಣಸಿನ ಪುಡಿ ಕುಟ್ಟಿಕೊಡುವುದು ಇದ್ದೇ ಇದೆ.

ವೈರಮುಡಿ ಉತ್ಸವ ಬಂದರಂತೂ ರಾಮಿಗೆ ಬಿಡುವಿಲ್ಲದಷ್ಟು ಕೆಲಸ. ಬ್ರಹ್ಮೋತ್ಸವದ ಹನ್ನೊಂದು  ದಿನವೂ ಸುಮಾರು ೨೦೦ ಕೊಡ ನಾರಾಯಣನಿಗೆ ನೀರು  ಹೊತ್ತು, ಬೆಟ್ಟ ಹತ್ತಿ ನರಸಿಂಹನ ಕೆಲಸ.

ಅಷ್ಟತೀರ್ಥದ ಸಂದರ್ಭದಲ್ಲಿ ಸೌದೆ ಒಲೆಯಲ್ಲಿ ಸುಮಾರು ಏಳೆಂಟು ನೂರು ಜನರಿಗೆ ಆಗುವಷ್ಟು ಕದಂಬ ಮೊಸರನ್ನವನ್ನು ತೊಟ್ಟಲು ಮಡುವಿನಲ್ಲಿ ಹಲವಾರು ವರ್ಷಗಳಿಂದ ಒಬ್ಬನೇ ಮಾಡುತ್ತಾ ಬಂದಿದ್ದರು. ಅದನ್ನು ಜನ ಬಾಯಿ ಚಪ್ಪರಿಸಿ ತಿನ್ನುತ್ತಿದ್ದರು. ಅದು ನಿಜಕ್ಕೂ ಏಕವ್ಯಕ್ತಿಯ ಪ್ರದರ್ಶನ!

ರಾಮಿ ಬೆಟ್ಟಕ್ಕೆ ನೀರು ಹೊರುವುದನ್ನು ಪರ ಊರಿನ ಭಕ್ತಾದಿಗಳು ಮೂಕರಾಗಿ ನಿಂತು ನೋಡುವುದು ಸಾಮಾನ್ಯ ದೃಶ್ಯವಾಗಿತ್ತು. ಭಕ್ತಾದಿಗಳು ಗೌರವದಿಂದ  ನೀಡಿದ ಪುಡಿಗಾಸನ್ನು ರಾಮಿ ತುಂಬಿ ಇಡುತ್ತಿದ್ದದ್ದು ಬಿಂದಿಗೆಯಲ್ಲಿ! ಅವರ ಮನೆಯ ಅಡಿಗೆ ಮನೆಯ ಮೂಲೆಯಲ್ಲಿ ಚಿಲ್ಲರೆ ಕಾಸಿನ ಬಿಂದಿಗೆ! ಅದನ್ನು ನೋಡಿದಾಗ ಯಾವುದೋ ಶತಮಾನಕ್ಕೆ ಹೋದಂತೆ ಅನಿಸುತ್ತಿತ್ತು.

ಹಾಗೆಂದು ರಾಮಿಗೆ ಹಣ ಮೋಹವಿರಲಿಲ್ಲವೆಂದು ಹೇಳಲಾಗುವುದಿಲ್ಲ. ತಾನು ಮಾಡಿದ ಕೆಲಸಕ್ಕೆ ಸರಿಯಾದ ಪ್ರತಿಫಲವನ್ನು ಮುಲಾಜಿಲ್ಲದೆ ಪಡೆಯುತ್ತಿದ್ದರು. ಹಣಕ್ಕೆ ಹಣ ಗಂಟುಹಾಕುವ ಸ್ವಭಾವವೂ ಅವರಿಗಿತ್ತು.  ಹಣವನ್ನು ಬಡ್ಡಿಗೆ ಕೊಡು ಸಂಪ್ರದಾಯವೂ ಇತ್ತು.

ತನ್ನ ಕಾಲಿಗೆ ಎಂದೂ ಚಪ್ಪಲಿ ತೊಡದಿದ್ದ ರಾಮಿ , ಸಂಜೆಯಾದ ಮೇಲೆ ಚಳಿ ತಡೆದು ಕೊಳ್ಳಲು ಒಂದು ಹಳೆಯ ಟೀ ಶರ್ಟು ತೊಟ್ಟು ತಲೆಗೊಂದು ಟೋಪಿ ಹಾಕಿಕೊಳ್ಳುತ್ತಿದ್ದದ್ದು ಇತ್ತೀಚಿನ ರೂಢಿ. ಇರುವುದರಲ್ಲೇ ಸ್ವಲ್ಪ ಶುಭ್ರವಾದ ಪಂಚೆಯನ್ನು ಮೊಣಕಾಲಿನವರಗೆ ಸುತ್ತಿ ಕೊಂಡು ಅಂಗಿ ತಗಲಿಸಿಕೊಂಡರೆ ಇಂದು ರಾಮಿ ಯಾವುದೋ ಪರ ಊರಿಗೆ ಹೊರಟಿದ್ದಾರೆ ಎಂದು ಅರ್ಥ.

ಕೆಲವು ವರ್ಷಗಳಿಂದ ನಮ್ಮ ಕಸ್ತೂರಿ ಮನೆಯಲ್ಲಿ ಸಂಜೆ ಒಂದು ಕಾಫಿ ಕುಡಿದು ,ಆ ಮನೆಯಲ್ಲೇ ಒಂದಿಷ್ಟು ಏನನ್ನಾದರೂ ಹೊಟ್ಟೆಗೆ ಹಾಕಿಕೊಂಡು ತನ್ನ ಮನೆ(?) ಸೇರಿದರೆ ರಾಮಿಯ ದಿನಚರಿ ಮುಕ್ತಾಯ. ಇದು ಒಂದೆರಡು ದಿನದ ದಿನಚರಿಯಲ್ಲ ಸುಮಾರು ಐವತ್ತು ವರ್ಷ ನಡೆದದ್ದು!

ಹೀಗೆ ರಾಮಿ ಎಪ್ಪತ್ತು ವರ್ಷ ಬದುಕಿ ನಾರಾಯಣನ ಪಾದ ಸೇರಿ ಮೇಲುಕೋಟೆಯ ಜನರು ಮುಂದಿನ ತಲೆಮಾರಿಗೆ ಹೇಳಬಹುದಾದ ಒಂದು ವ್ಯಕ್ತಿಯಾಗಿ ಸ್ಮೃತಿಪಟಲವನ್ನು ಸೇರಿದ್ದಾರೆ.

ಇಡೀ ಜೀವನವನ್ನು ಸಂತೆಗೆ ಬಂದವನಂತೆ ಕಳೆದ ರಾಮಿ, ಪರಿಸರದ ದೃಷ್ಟಿಯಿಂದ ’lowest possible carbon foot print ‘  ಒತ್ತಿಹೋದ ವ್ಯಕ್ತಿ.

ಕೃಪೆ : Santhosh kaulagi/ fb

Key words: Rami –melukote-god-narasimha