ಸೋಮಶೇಖರ್ ರಾಜಕೀಯವಾಗಿ ಸೂಸೈಡ್ ಮಾಡಿಕೊಂಡಿದ್ದಾರೆ: ಜನರು ಅವರನ್ನ ಕ್ಷಮಿಸಲ್ಲ- ಆರ್.ಅಶೋಕ್.

ಬೆಂಗಳೂರು, ಫೆಬ್ರವರಿ 27,2024(www.justkannada.in) : ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಮತ ಹಾಕುವ ಮೂಲಕ ಅಡ್ಡ ಮತದಾನ ಮಾಡಿದ ಶಾಸಕ ಎಸ್.ಟಿ ಸೋಮಶೇಖರ್ ವಿರುದ್ದ ವಿಪಕ್ಷ ನಾಯಕ ಆರ್ ಅಶೋಕ್ ಅಸಮಾಧಾನ ವ್ಯಕ್ತಪಡಿಸಿದರು.

ಅಡ್ಡಮತದಾನ ಮಾಡಿದ ಶಾಸಕ ಎಸ್.ಟಿ ಸೋಮಶೇಖರ್ ವಿರುದ್ದ ಕ್ರಮ ಕೈಗೊಳ್ಳುವ ಕುರಿತು ಮಾತನಾಡಿದ ಆರ್.ಅಶೋಕ್,   ವಕೀಲ ವಿವೇಕ್ ರೆಡ್ಡಿ ಅವರ ಜೊತೆ ಚರ್ಚೆ ಮಾಡಿದ್ದೇನೆ. ಅವರು ಏನೆಲ್ಲಾ ಮಾಡಬಹುದು ಎಂದು ತಿಳಿಸಿದ್ದಾರೆ ಎಂದರು.

ಎಸ್.ಟಿ. ಸೋಮಶೇಖರ್, ಶಿವರಾಮ ಹೆಬ್ಬಾರ್‌ ಗೂ ವಿಪ್ ಕಳಿಸಿದ್ದೆವು. ಕೊನೆಯ ಕ್ಷಣದವರೆಗೂ ನಮ್ಮ ಜೊತೆ ಮಾತನಾಡಿ  ನಾವು ಪಕ್ಷಕ್ಕೆ ಮೋಸ ಮಾಡಲ್ಲ,  ತಾಯಿಗೆ ಮೋಸ ಮಾಡಲ್ಲ ಅಂದಿದ್ದರು. ಸೋಮಶೇಖರ್ ಅವರೇ ನಿನ್ನೆ ಕರೆ ಮಾಡಿ ದ್ರೋಹ ಬಗೆಯಲ್ಲ ಎಂದು ಹೇಳಿದ್ದರು. ಸೋಮಶೇಖರ್ ಡಿ.ಕೆ. ಶಿವಕುಮಾರ್ ಜೊತೆಗೆ, ಸಿದ್ದರಾಮಯ್ಯ ಜೊತೆಗೆ ಓಡಾಡುವಾಗಲೇ ಗುಮಾನಿ ಇತ್ತು.  ಆದರೆ  ಸೋಮಶೇಖರ್ ಅಡ್ಡ ಮತದಾನ ಮಾಡಿದ್ದಾರೆ ಅಂತ ಗೊತ್ತಾಗಿದೆ. ಈ ರೀತಿ ಪದೇ ಪದೇ ಮೋಸ ಮಾಡುವುದನ್ನು ಜನ ಸಹಿಸಲ್ಲ. ಸೋಮಶೇಖರ್ ರಾಜಕೀಯವಾಗಿ ಸೂಸೈಡ್ ಮಾಡಿಕೊಂಡಿದ್ದಾರೆ. ಜನರ ಅವರನ್ನ ಕ್ಷಮಿಸಲ್ಲ ಎಂದು ಕಿಡಿಕಾರಿದರು.

ಎಸ್ ಟಿ ಸೋಮಶೇಖರ್ ರನ್ನ  ಮಂತ್ರಿ ಮಾಡಿ, ಮೈಸೂರು ಉಸ್ತುವಾರಿ ಸಚಿವರನ್ನಾಗಿ ಮಾಡಿದ್ದೆವು. ಅಭಿವೃದ್ಧಿಗೆ ಹಣ ಅಂತಾರೆ. ಹಿಂದೆ ಎಷ್ಟು ಬಾರಿ ಹಣ ಕೊಟ್ಟಿಲ್ಲ?  ಜಗದೀಶ್ ಶೆಟ್ಟರ್ ರಾಜೀನಾಮೆ ಕೊಟ್ಟು ಬಿಜೆಪಿ ಬಂದರು. ಇವರೂ ಪಕ್ಷಕ್ಕೆ ರಾಜೀನಾಮೆ ಕೊಟ್ಟು, ಮತ ಹಾಕಬಹುದಿತ್ತು. ಈ ಸಂಬಂಧ  ಕಾನೂನು ತಜ್ಞರ ಜೊತೆ ಚರ್ಚಿಸಿ ನಿರ್ಧಾರ ಮಾಡುತ್ತೇವೆ ಎಂದು ಆರ್.ಅಶೋಕ್ ತಿಳಿಸಿದರು.

Key words: Rajyasabha election-ST Somashekhar – political suicide- R. Ashok.