7ನೇ ವೇತನ ಆಯೋಗದ ವರದಿ ಬಂದ ನಂತರ ಸಕಾರಾತ್ಮಕ ತೀರ್ಮಾನ-ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಫೆಬ್ರವರಿ 27,2024(www.justkannada.in):  ಪಂಚಗ್ಯಾರಂಟಿಗಳನ್ನು ಜಾರಿ ಮಾಡುವ ಆರ್ಥಿಕ ಹೊರೆಯ ನಡುವೆಯೂ 7ನೇ ವೇತನ ಆಯೋಗದ ಅಂತಿಮ ವರದಿ ಬಂದ ನಂತರ ಸರ್ಕಾರಿ ನೌಕರರ ಬಗ್ಗೆ ಸರ್ಕಾರ ಸಕಾರಾತ್ಮಕವಾಗಿ ತೀರ್ಮಾನವನ್ನು ಕೈಗೊಳ್ಳಲಿದೆ ಎಂದು  ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಇಂದು ರಾಜ್ಯ ಮಟ್ಟದ ಸರ್ಕಾರಿ ನೌಕರರ ಸಮ್ಮೇಳನವನ್ನು ಉದ್ಘಾಟಿಸಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.

ಕೇಂದ್ರ ಸರ್ಕಾರ ನಿರ್ಧರಿಸಿದಂತೆ ತುಟ್ಟಿಭತ್ಯೆಯನ್ನು ಯಾವುದೇ ವಿಳಂಬವಿಲ್ಲದೇ ರಾಜ್ಯದಲ್ಲಿ ನೀಡಲಾಗುತ್ತಿದೆ. ಎನ್ ಪಿ ಎಸ್ ತೆಗೆದು ಹಳೆ ಪಿಂಚಣಿ ವ್ಯವಸ್ಥೆಯನ್ನು ಜಾರಿ ಮಾಡುವ ಬಗ್ಗೆಯೂ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಸರ್ಕಾರಿ ನೌಕರರಿಗೆ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಜಾರಿ ಮಾಡುವ ಬಗ್ಗೆಯೂ ಶೀಘ್ರದಲ್ಲಿ ತೀರ್ಮಾನಿಸಲಾಗುವುದು ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ,  ಸರ್ಕಾರ ಮತ್ತು ಜನರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುವ ಜವಾಬ್ದಾರಿಯುತ ಕೆಲಸವನ್ನು ಪರಿಣಾಮಕಾರಿಯಾಗಿ ಮಾಡುತ್ತಿರುವ ಸರ್ಕಾರಿ ನೌಕರರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜ್ಯದ ಅಭಿವೃದ್ಧಿಯಲ್ಲಿ ಭಾಗಿಯಾಗಬೇಕು

ಕರ್ನಾಟಕದಲ್ಲಿ 7.50 ಲಕ್ಷ ಸರ್ಕಾರಿ ನೌಕರರಿದ್ದಾರೆ. ಅದರಲ್ಲಿ 5.90 ಲಕ್ಷ ಜನ ಹಾಲಿ ಕೆಲಸ ಮಾಡುತ್ತಿದ್ದಾರೆ. 2.50 ಲಕ್ಷ ಜನರನ್ನು ಭರ್ತಿ ಮಾಡಲು ಸಾಧ್ಯವಾಗಿಲ್ಲ. ಕರ್ನಾಟಕದ ಜನಸಂಖ್ಯೆ 7 ಕೋಟಿ ಇದೆ. 7.50 ಲಕ್ಷ ಮಂಜೂರಾಗಿರುವ ಹುದ್ದೆಗಳಿವೆ. 7 ಲಕ್ಷ ಜನ 7 ಕೋಟಿ ಜನರ ಕಷ್ಟ ಸುಖಗಳಲ್ಲಿ ಭಾಗಿಯಾಗುವ, ರಾಜ್ಯದ ಅಭಿವೃದ್ಧಿಯಲ್ಲಿ ಭಾಗಿಯಾಗುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ನಮ್ಮನ್ನು 5 ವರ್ಷಕ್ಕೊಮ್ಮೆ ಆಯ್ಕೆ ಮಾಡಿದರೆ, ಸರ್ಕಾರಿ ಸೇವೆಗೆ ಸೇರಿದ ಮೇಲೆ ನಿವೃತ್ತಿಯಾಗುವವರೆಗೆ ನವೀಕರಣ ಮಾಡಿಸಿಕೊಳ್ಳುವ ಪ್ರಮೇಯವಿಲ್ಲ. ರಾಜಕಾರಣಿಗಳು 5 ವರ್ಷಕ್ಕೊಮ್ಮೆ ಕರ್ನಾಟಕದ ಜನರ ಆಶೀರ್ವಾದವನ್ನು ನವೀಕರಿಸಿಕೊಳ್ಳಬೇಕು ಎಂದರು.

ಪ್ರಜಾಪ್ರಭುತ್ವದ ಮಾಲೀಕರ ಪರವಾಗಿ ಕೆಲಸ ಮಾಡಬೇಕು

ರಾಜ್ಯದ  ಜನ ನನಗೆ  ಎರಡನೇ ಬಾರಿಗೆ ಮುಖ್ಯಮಂತ್ರಿಯಾಗುವ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದಾರೆ. ಅದರಲ್ಲಿ ನೀವೂ, ನಿಮ್ಮ ಕುಟುಂಬದವರೂ ಇದ್ದಾರೆ.  7 ಕೋಟಿ ಕನ್ನಡಿಗರ ಭಾಗವಾದ ಸರ್ಕಾರಿ ನೌಕಕರು, ಸಾಮಾಜಿಕ ವ್ಯವಸ್ಥೆಯನ್ನು ಅರ್ಥ ಮಾಡಿಕೊಂಡಿದ್ದೀರಿ ಎಂದು ಭಾವಿಸಿದ್ದೇನೆ. ನಮ್ಮ ಸಮಾಜದಲ್ಲಿ ಸಾಮಾಜಿಕ, ಆರ್ಥಿಕ ಸಮಾನತೆ ತರಬೇಕು. ನಾವೆಲ್ಲರೂ ಪ್ರಜಾಪ್ರಭುತ್ವದ ಮಾಲೀಕರ ಪರವಾಗಿ ಕೆಲಸ ಮಾಡಲು ಇರಬೇಕು ಎಂದರು.

ರಾಜ್ಯದ ಜನರ ಪರವಾಗಿ ಕೆಲಸ ಮಾಡಬೇಕಾಗಿರುವುದು ಮೊದಲನೇ ಆದ್ಯತೆ.

ಸರ್ಕಾರ ನಿಮಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಸರ್ಕಾರ ನಿಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು. ಆದರೆ ಅದೇ ಮೊದಲ ಆದ್ಯತೆ ಅಲ್ಲ. ಅನ್ಯಾಯಗಳನ್ನು ಸರಿಪಡಿಸುವುದು ಸರ್ಕಾರದ ಕರ್ತವ್ಯ.  ರಾಜ್ಯದ ಜನರ ಪರವಾಗಿ ಕೆಲಸ ಮಾಡಬೇಕಾಗಿರುವುದು ಮೊದಲನೇ ಆದ್ಯತೆ. ಬೇಡಿಕೆಗಳು ನಂತರದ ಆದ್ಯತೆ. ಇದನ್ನು ಸ್ಪಷ್ಟವಾಗಿ ನೀವು  ಅರ್ಥಮಾಡಿಕೊಂಡಿದ್ದೀರಿ ಎನ್ನುವುದು ನನ್ನ ಅನಿಸಿಕೆ ಎಂದರು.

ನಾನು ಸರ್ಕಾರಿ ನೌಕರರ ಪರ.

ಸರ್ಕಾರಿ ನೌಕರರ ಸಮಸ್ಯೆಗಳನ್ನು ಅರಿತು 7ನೇ ವೇತನ ಆಯೋಗ ರಚಿಸಲಾಗಿದ್ದು, 6ನೇ ವೇತನ ಆಯೋಗವನ್ನು ನಮ್ಮ ಸರ್ಕಾರ ಜಾರಿಗೆ ತಂದಿತ್ತು. ಆ ಸಂದರ್ಭದಲ್ಲಿ ಸರ್ಕಾರಿ ನೌಕರರ ವಿರುದ್ಧವಿರುವುದಾಗಿ ನನ್ನ ಮೇಲೆ ಅರೋಪ ಮಾಡಿದ್ದರು. ಆದರೆ ನಾನೇ 6ನೇ ವೇತನ ಆಯೋಗವನ್ನು ರಚಿಸಿದ್ದೆವು. ಸರ್ಕಾರಿ ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ಕೆಲಸವಾಗಬೇಕು. 6ನೇ  ವೇತನ ಆಯೋಗದಲ್ಲಿ ಶೇ. 30ರಷ್ಟು ಫಿಟ್ಮೆಂಟ್ ಸೌಲಭ್ಯ ನೀಡಲು 10,500 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ಬಿಡುಗಡೆ ಮಾಡಿದೆ. ಈಗ 7 ನೇ ವೇತನ ಆಯೋಗದ ಮಧ್ಯಂತರ ವರದಿಯಂತೆ 17% ಹೆಚ್ಚಳ ಮಾಡಲಾಗಿತ್ತು. ಆಯೋಗದ ಅಂತಿಮ ವರದಿ ನೀಡಲು ಇನ್ನಷ್ಟು ಕಾಲಾವಕಾಶ ಬೇಕೆಂದು ಆಯೋಗದ ಆಧ್ಯಕ್ಷರು ಕೋರಿದ್ದು, ಮಾರ್ಚ್ 15 ರವರೆಗೆ ವರದಿ ನೀಡಲು ಸಮಯಾವಕಾಶ ನೀಡಲಾಗಿದೆ. ಲೋಕಸಭಾ ಚುನಾವಣೆಯ ಹಿನ್ನಲೆ , ಆಯೋಗದ ಅಂತಿಮ ವರದಿಯನ್ನು ಆದಷ್ಟು ಜಾಗ್ರತೆ ಸಲ್ಲಿಸುವುದಾಗಿ ತಿಳಿಸಿದ್ದಾರೆ. ನಾನು ಸರ್ಕಾರಿ ನೌಕರರ ಪರವಾಗಿದ್ದೇನೆ ಎಂದು ತಿಳಿಸಿದರು.

ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ, ಸಚಿವರಾದ ಈಶ್ವರ್ ಖಂಡ್ರೆ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಕೃಷ್ಣಪ್ಪ, ಶೇಷಯ್ಯ, ಭೈರಪ್ಪ, ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಶೀನಿವಾಸ ತಿಮ್ಮೇಗೌಡ, ಖಜಾಂಚಿ ಡಾ: ಸಿದ್ದರಾಮಣ್ಣ, ರಾಜ್ಯ ಮಟ್ಟದ ನೌಕರರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Key words: Positive -decision- after- 7th pay commission- report-CM Siddaramaiah