ಮುಂಗಾರು ಮಳೆ ಜೋರು: ಮಲೆನಾಡು, ಉತ್ತರ ಒಳನಾಡಲ್ಲಿ ವರ್ಷಧಾರೆ, ನದಿ-ಹಳ್ಳಗಳಲ್ಲಿ ಹೆಚ್ಚಿದ ಜಲಮಟ್ಟ

ಬೆಂಗಳೂರು:ಜುಲೈ-1: ಕೆಲದಿನಗಳಿಂದ ಮುಂಗಾರು ದುರ್ಬಲವಾಗಿದ್ದರೂ ವಾರಾಂತ್ಯದಲ್ಲಿ ಹಲವೆಡೆ ಮಳೆ ಅಬ್ಬರಿಸಿದ್ದು, ಮನೆ ಕುಸಿತ, ಸೇತುವೆಯಲ್ಲಿ ಬಿರುಕು, ರೈಲು ಹಳಿ ಮೇಲೆ ಮರಗಳು ಉರುಳಿ ಬಿದ್ದಿದ್ದೂ ಸೇರಿ ಹಲವು ಅವಘಡಗಳು ಸಂಭವಿಸಿವೆ.

ಬೆಳಗಾವಿ ಜಿಲ್ಲೆಯಾದ್ಯಂತ ಭಾನುವಾರ ಸುರಿದ ಭಾರಿ ಮಳೆಗೆ ಖಾನಾಪುರ ತಾಲೂಕಿನ ನಂದಗಡ ಬಳಿ ರಾಯಾಪುರ-ನಂದಗಡ ಮಾರ್ಗದ ಸೇತುವೆ ಬಿರುಕು ಬಿಟ್ಟಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ಹಬ್ಬಾನಹಟ್ಟಿ ಬಳಿಯ ಹನುಮ ದೇವಸ್ಥಾನ ಜಲಾವೃತಗೊಂಡಿದೆ.

ಬೆಳಗಾವಿ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶನಿವಾರ ಮಧ್ಯರಾತ್ರಿಯಿಂದ ಭಾನುವಾರ ಮಧ್ಯಾಹ್ನದವರೆಗೂ ಸುರಿದ ಧಾರಾಕಾರ ಮಳೆಯಿಂದ ಕೆಲ ಮನೆಗಳಿಗೆ ನೀರು ನುಗ್ಗಿ ಮತ್ತು ರಸ್ತೆ ಮೇಲೆ ಮರಗಳು ಬಿದ್ದಿದ್ದರಿಂದ ಜನಜೀವನ ಅಸ್ತವ್ಯಸ್ತಗೊಂಡಿತು. ನಿಪ್ಪಾಣಿ ಭಾಗದಲ್ಲೂ ಉತ್ತಮ ಮಳೆ ಸುರಿದಿದ್ದರಿಂದ ವೇದಗಂಗಾ ನದಿ ಮೈದುಂಬಿ ಹರಿಯುತ್ತಿದೆ.

ಖಾನಾಪುರ ತಾಲೂಕಿನ ಪಶ್ಚಿಮಘಟ್ಟ ಪ್ರದೇಶದಲ್ಲಿ ಶನಿವಾರ ಸಂಜೆಯಿಂದ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಮಲಪ್ರಭಾ ನದಿಯಲ್ಲಿ ನೀರಿನ ಹರಿವು ಹೆಚ್ಚಿದೆ. ಕಣಕುಂಬಿ ಅರಣ್ಯ ಪ್ರದೇಶದಲ್ಲಿ ಈ ವರ್ಷ ದಾಖಲೆ 21 ಸೆಂ.ಮೀ. ಮಳೆಯಾಗಿದೆ. ಅಲಾತ್ರಿ, ಕಳಸಾ, ಬಂಡೂರಿ, ಮಂಗೇತ್ರಿ, ವಜ್ರಾ, ಪಣಸುರಿ, ಕುಂಬಾರ, ತಟ್ಟಿ ನಾಲಾಗಳು ಸೇರಿ ಇತರ ಹಳ್ಳಗಳು ತುಂಬಿ ಹರಿಯುತ್ತಿವೆ.

ಹತ್ತಕ್ಕೂ ಹೆಚ್ಚು ಮನೆಗಳ ಕುಸಿತ

ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಯಾದ್ಯಂತ ಭಾನುವಾರ ಧಾರಾಕಾರ ಮಳೆಯಾಗಿದ್ದು, ಹುಬ್ಬಳ್ಳಿಯಲ್ಲಿ ಶನಿವಾರ ರಾತ್ರಿಯಿಂದ ಸತತವಾಗಿ ಸುರಿದ ಮಳೆಯಿಂದ 10ಕ್ಕೂ ಹೆಚ್ಚು ಮನೆಗಳು ಕುಸಿದಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಹುಬ್ಬಳ್ಳಿ ಬಂಕಾಪುರ ಚೌಕದಲ್ಲಿ ಮಲ್ಲಿಕಾರ್ಜುನ ಮೋಟಗಿ ಎಂಬುವವರ ಮಣ್ಣಿನ ಗೋಡೆಯ ಮನೆ ನೆಲಸಮಗೊಂಡಿದೆ. ಗಬ್ಬೂರ್ ಬೈಪಾಸ್ ಬಳಿಯ ಶರಣನಗರ ಹತ್ತಿರ ನಾಲಾ ತುಂಬಿ ಮಳೆ ನೀರು ಮನೆಯೊಳಗೆ ನುಗ್ಗಿದ್ದರಿಂದ ಕುಟುಂಬ ಪರದಾಡುವಂತಾಗಿದೆ. ಯಲ್ಲಾಪುರದಲ್ಲಿ ಮಳೆ ಜೋರಾಗಿ ಸುರಿದಿದ್ದು, ಹಳ್ಳ ತುಂಬಿ ಹರಿಯುತ್ತಿದೆ. ಭಟ್ಕಳ ತಾಲೂಕಿನ ಕಾಯ್ಕಿಣಿ ಪಂಚಾಯಿತಿ ವ್ಯಾಪ್ತಿಯ ತೆರ್ನಮಕ್ಕಿಯಲ್ಲಿ ಚಲಿಸುತ್ತಿದ್ದ ಆಟೋ ಮೇಲೆ ಮರ ಬಿದ್ದು, ಆಟೋ ರಿಕ್ಷಾ ಭಾಗಶಃ ಜಖಂ ಆಗಿದೆ. ಚಾಲಕ ಸುರೇಶ ಶೆಟ್ಟಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮುರ್ಡೆಶ್ವರದ ಆರ್​ಎನ್​ಎಸ್ ಡಿಪ್ಲೊಮಾ ಕಾಲೇಜ್ ಬಳಿ ಮರ ಬಿದ್ದು ಟ್ರಾನ್ಸ್​ಫಾರ್ಮರ್​ಗೆ ಹಾನಿಯಾಗಿದೆ. ಪಟ್ಟಣದ ಕೋಟೇಶ್ವರ ರಸ್ತೆಯ ವಿದ್ಯುತ್ ಕಂಬ ಮುರಿದಿದೆ. ಜೊಯಿಡಾ ತಾಲೂಕಿನ ಗೊಡಸೇತ ಗ್ರಾಮದಲ್ಲಿ ಸುರಿದ ಭಾರಿ ಗಾಳಿಮಳೆಗೆ ಬೃಹತ್ ಗಾತ್ರದ ಮರ ಬುಡಸಮೇತ ಕಿತ್ತು ಎರಡು ಮನೆಗಳ ಮೇಲೆ ಬಿದ್ದಿದ್ದರಿಂದ ಅಪಾರ ಹಾನಿ ಸಂಭವಿಸಿದೆ. ಕುಮಟಾ ತಾಲೂಕಿನಾದ್ಯಂತ ಉತ್ತಮ ಮಳೆಯಾಗಿದೆ, ಅಣೆಕಟ್ಟೆಗಳಿಗೆ ಉತ್ತಮ ಒಳಹರಿವು ಪ್ರಾರಂಭವಾಗಿದೆ. ಸೂಪಾ ಅಣೆಕಟ್ಟೆಗೆ 28,284 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕದ್ರಾ ಅಣೆಕಟ್ಟೆಗೆ 6,706 ಕ್ಯೂಸೆಕ್, ಕೊಡಸಳ್ಳಿ ಅಣೆಕಟ್ಟೆಗೆ 3,993 ಕ್ಯೂಸೆಕ್ ನೀರು ಹರಿದು ಬರುತ್ತಿದೆ.

ಹಳಿ ಮೇಲೆ ಉರುಳಿದ ಮರ

ಖಾನಾಪುರ ತಾಲ್ಲೂಕಿನ ನಾಗರಗಾಳಿ- ತಾವರಗಟ್ಟಿ ರೈಲ್ವೆ ನಿಲ್ದಾಣಗಳ ನಡುವಿನ ಹಳಿ ಮೇಲೆ ಭಾನುವಾರ ಮಧ್ಯಾಹ್ನ ಮರ ಉರುಳಿದ್ದರಿಂದ ಲೋಂಡಾ-ಅಳ್ನಾವರ ಮಾರ್ಗದಲ್ಲಿ ಸಂಚರಿಸುವ ರೈಲುಗಳು ಕೆಲಕಾಲ ಸ್ಥಗಿತಗೊಂಡಿದ್ದವು. ರೈಲ್ವೆ ಸಿಬ್ಬಂದಿ ಹಳಿ ಮೇಲೆ ಬಿದ್ದಿದ್ದ ಮರ ತೆರವುಗೊಳಿಸಿ ರೈಲು ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಒಳ ಹರಿವು ಹೆಚ್ಚಳ

ಮಲೆನಾಡಿನಲ್ಲೂ ಭಾನುವಾರ ಉತ್ತಮ ಮಳೆಯಾಗಿದ್ದು, ನದಿಗಳ ಒಳಹರಿವು ಏರಿದೆ. ಶಿವಮೊಗ್ಗದ ಶರಾವತಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಆಗುಂಬೆ ಭಾಗದಲ್ಲಿ 2 ದಿನಗಳಿಂದ ಭರ್ಜರಿ ಮಳೆ ಆಗುತ್ತಿರುವುದರಿಂದ ಗಾಜನೂರು ತುಂಗಾ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಲಿಂಗನಮಕ್ಕಿ ಜಲಾಶಯಕ್ಕೆ 6593, ಭದ್ರಾ ಡ್ಯಾಂಗೆ 311, ತುಂಗಾ ಅಣೆಕಟ್ಟೆಗೆ 1748 ಕ್ಯೂಸೆಕ್ ಒಳಹರಿವು ಇದೆ. ತುಂಗಾ ಡ್ಯಾಂಗೆ ಹೆಚ್ಚಿನ ನೀರು ಬರುತ್ತಿರುವುದರಿಂದ ಸೋಮವಾರ ಕ್ರಸ್ಟ್​ಗೇಟ್ ತೆರೆಯುವ ಸಾಧ್ಯತೆಗಳಿವೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಕಳಸ ತಾಲೂಕಿನಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಉಳಿದೆಡೆ ಸಾಧಾರಣ ಮಳೆ ಬರುತ್ತಿದೆ.

ತುಂಬಿ ಹರಿದ ವೇದಗಂಗಾ ನದಿ

ದಾವಣಗೆರೆ ಜಿಲ್ಲಾದ್ಯಂತ ಭಾನುವಾರ ಸಾಧಾರಣ ಮಳೆಯಾಗಿದ್ದು, ದಾವಣಗೆರೆಯಲ್ಲಿ ಸುಮಾರು ಅರ್ಧ ತಾಸಿಗೂ ಅಧಿಕ ಕಾಲ ಮಳೆ ಸುರಿಯಿತು. ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದ ನಿಪ್ಪಾಣಿ ನಗರ ಮತ್ತು ಸುತ್ತಮುತ್ತಲಿನ ಗ್ರಾಮಗಳ ಜೀವನಾಡಿ ವೇದಗಂಗಾ ನದಿ ಮೈದುಂಬಿ ಹರಿಯುತ್ತಿದೆ.

ವಾಯುಭಾರ ಕುಸಿತದ ಪ್ರಭಾವವಿಲ್ಲ

ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುಸಿತದ ಪ್ರಭಾವ ರಾಜ್ಯದ ಮೇಲೆ ಅಷ್ಟಾಗಿ ಉಂಟಾಗು ವುದಿಲ್ಲವಾದರೂ ಜುಲೈ 3ರವರೆಗೆ ಉತ್ತರ ಒಳನಾಡು ಮತ್ತು ಕರಾವಳಿಯಲ್ಲಿ ಉತ್ತಮ ಮಳೆಗೆ ಆಗಲಿದೆ. ಆದರೆ ದಕ್ಷಿಣ ಒಳನಾಡಿನ ಹಲವೆಡೆ ಒಣಹವೆ ವಾತಾವರಣ ಮುಂದುವರಿಯಲಿದೆ ಎಂದು ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರದ ಉಸ್ತುವಾರಿ ಶ್ರೀನಿವಾಸ್ ರೆಡ್ಡಿ ತಿಳಿಸಿದ್ದಾರೆ. ಈಗಾಗಲೇ ಮುಂಗಾರು ಅವಧಿಯ ಶೇ.25 ಪೂರ್ಣಗೊಂಡಿದ್ದು, ಜೂನ್​ನಲ್ಲಿ ಶೇ.27 ಮಳೆ ಕೊರತೆಯಾಗಿದೆ. ಮಲೆನಾಡು ಜಿಲ್ಲೆಗಳಲ್ಲಿ ಮಳೆ ಇಲ್ಲದ್ದರಿಂದ ಜಲಾಶಯಗಳ ಭರ್ತಿ ವಿಳಂಬವಾಗಿದೆ.

ಕಳೆದ ವರ್ಷ ಮುಂಗಾರು ಅವಧಿಯ ಮೊದಲ ತಿಂಗಳ ಬಳಿಕ ಕಾವೇರಿ ಜಲಾಶಯದಲ್ಲಿ 72 ಟಿಎಂಸಿ ನೀರಿತ್ತು. ವಾಡಿಕೆಯಂತೆ 31.5 ಟಿಎಂಸಿ ನೀರು ಸಂಗ್ರಹವಾಗಬೇಕು. ಆದರೆ ಮಳೆ ಕೊರತೆ ಹಿನ್ನೆಲೆಯಲ್ಲಿ ಜಲಾಶಯಗಳು ಬರಿದಾಗಿದ್ದು, ಇದೇ ಸ್ಥಿತಿ ಮುಂದುವರಿದರೆ ಕಷ್ಟವಿದೆ ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ.
ಕೃಪೆ;ವಿಜಯವಾಣಿ

ಮುಂಗಾರು ಮಳೆ ಜೋರು: ಮಲೆನಾಡು, ಉತ್ತರ ಒಳನಾಡಲ್ಲಿ ವರ್ಷಧಾರೆ, ನದಿ-ಹಳ್ಳಗಳಲ್ಲಿ ಹೆಚ್ಚಿದ ಜಲಮಟ್ಟ
rain-mansoon-rain-malenadu-shivamogga-heavy-rain-rain-water-flood