ಮಗನ ಆಟ ನೋಡಲು ಮೈಸೂರಿಗೆ ಬಂದ ರಾಹುಲ್ ದ್ರಾವಿಡ್ ! ಟೀಂ ಇಂಡಿಯಾ ಕೋಚ್ ಸರಳತೆಗೆ ಮನಸೋತ ಅಭಿಮಾನಿಗಳು

ಮೈಸೂರು, ಡಿಸೆಂಬರ್ 02, 2023 (www.justkannada.in): ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಕ್ರೀಡಾಂಗಣಕ್ಕೆ ಭೇಟಿ ನೀಡಿದ್ದ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಅವರ ಫೋಟೋ ಎಲ್ಲೆಡೆ ವೈರಲ್ ಆಗಿದ್ದು, ಅವರ ಸರಳತೆಯನ್ನು ಅಭಿಮಾನಿಗಳು ಮತ್ತೊಮ್ಮೆ ಕೊಂಡಾಡಿದ್ದಾರೆ.

ಕೂಚ್‌ ಬಿಹಾರ್‌ ಟ್ರೋಫಿ 19 ವರ್ಷದೊಳಗಿನವರ ಟೂರ್ನಿಯ ಪಂದ್ಯದಲ್ಲಿ ರಾಹುಲ್ ಪುತ್ರ ಆಡುತ್ತಿದ್ದು, ಇದನ್ನು ನೋಡಲು ರಾಹುಲ್ ದ್ರಾವಿಡ್ ತಮ್ಮ ಪತ್ನಿ ಸಮೇತ ಆಗಮಿಸಿದ್ದರು.

ಪುತ್ರ ಸಮಿತ್‌ ದ್ರಾವಿಡ್ ಆಟ ನೋಡಲು ಅವರು ಪತ್ನಿ ವಿಜೇತಾ ಅವರೊಂದಿಗೆ ಆಗಮಿಸಿದ್ದ ದ್ರಾವಿಡ್. ಮೈದಾನದ ಕಲ್ಲುಕಟ್ಟೆಯ ಮೇಲೆ ಕುಳಿತು ಅವರು ಪಂದ್ಯವನ್ನು ವೀಕ್ಷಿಸಿದರು.

ಮಾಧ್ಯಮಗಳ ಜೊತೆಯೂ ಮಾತನಾಡಲು ಬಯಸದ ದ್ರಾವಿಡ್, ‘ಎಲ್ಲ ಅಪ್ಪಂದಿರಂತೆ ನಾನೂ ಮಗನ ಆಟ ನೋಡಲು ಬಂದಿದ್ದೇನೆ. ಇದರಲ್ಲಿ ವಿಶೇಷವೇನಿಲ್ಲ’ ಎಂದಷ್ಟೇ ಹೇಳಿದರು.