ಸಾವಿರಾರು ಅರಣ್ಯವಾಸಿಗಳಿಗೆ ಶೀಘ್ರ ಹಕ್ಕುಪತ್ರ- ಸಚಿವ ಈಶ್ವರ್ ಖಂಡ್ರೆ.

ಬೆಂಗಳೂರು, ಸೆಪ್ಟಂಬರ್, 22,2023(www.justkannada.in):  ಕಾಡಿನಲ್ಲಿ 1978ಕ್ಕೆ ಮುನ್ನ ವಾಸಿಸುತ್ತಿದ್ದ ಅರಣ್ಯವಾಸಿಗಳು, ಅಥವಾ ಅರಣ್ಯ ಭೂಮಿಯಲ್ಲಿ ಉಳುಮೆ ಮಾಡುತ್ತಿದ್ದವರು ಸ್ಪಷ್ಟ ದಾಖಲೆ ಸಹಿತ ನಿಯಮಾನುಸಾರ ನಿಗದಿತ ಕಾಲಮಿತಿಯಲ್ಲಿ ಅರ್ಜಿ ಸಲ್ಲಿಸಿದ್ದು, ಪ್ರಕರಣ ಇತ್ಯರ್ಥವಾಗದೇ ಬಾಕಿ ಉಳಿದಿರುವ 10 ಸಾವಿರ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ ಸಾವಿರಾರು ಜನರಿಗೆ ಹಕ್ಕುಪತ್ರ ವಿತರಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸ್ಪಷ್ಟ ಸೂಚನೆ ನೀಡಿದ್ದಾರೆ.

ಇಂದು ಬನ್ನೇರುಘಟ್ಟ ರಾಷ್ಟ್ರೀಯ ಜೈವಿಕ ಉದ್ಯಾನಕ್ಕೆ ಭೇಟಿ ನೀಡಿ, ಚಿರತೆ ಮತ್ತು ಜಿಂಕೆಗಳ ಸಾವಿನ ಖುದ್ದು ಪರಿಶೀಲನೆ ನಡೆಸಿದ ಬಳಿಕ, ವಿವಿಧ ಜಿಲ್ಲೆಗಳ ಅರಣ್ಯಾಧಿಕಾರಿಗಳೊಂದಿಗ ವಿಡಿಯೋ ಕಾನ್ಫರೆನ್ಸ್ ನಡೆಸಿದ ಸಚಿವ ಈಶ್ವರ್ ಖಂಡ್ರೆ, ಅರ್ಹ ಅರಣ್ಯವಾಸಿಗಳು ಸಲ್ಲಿಸಿರುವ ಸಾವಿರಾರು ಅರ್ಜಿ ಹಲವಾರು ವರ್ಷಗಳಿಂದ ಇತ್ಯರ್ಥವಾಗದೆ ಇರುವುದು ತಮ್ಮ ಗಮನಕ್ಕೆ ಬಂದಿದ್ದು, 3 ತಿಂಗಳ ಕಾಲಮಿತಿಯಲ್ಲಿ ಸಮರೋಪಾದಿಯಲ್ಲಿ ಈ ಎಲ್ಲ ಅರ್ಹರಿಗೆ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ಹಲವಾರು ವರ್ಷಗಳಿಂದ ಈ ವಿಷಯ ನನೆಗುದಿಗೆ ಬಿದ್ದಿದ್ದು, ಅರಣ್ಯವಾಸಿಗಳಿಗೆ ಮತ್ತು ಅರಣ್ಯ ಭೂಮಿಯಲ್ಲಿ 1978ಕ್ಕೆ ಮುನ್ನ ನಿಯಮಾನುಸಾರ ಉಳಿಮೆ ಮಾಡುತ್ತಿರುವ, ನೆಲೆಸಿರುವ ಜನರಿಗೆ ಸಿಹಿಸುದ್ದಿ ನೀಡಿ ಎಂದ ಅವರು, ಈ ಸಂಬಂಧ ನಾಳೆ ಅಧಿಕಾರಿಗಳ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಅರ್ಜಿ ವಿಲೇವಾರಿಗೆ ಸುತ್ತೋಲೆ ಹೊರಡಿಸುವುದಾಗಿಯೂ ತಿಳಿಸಿದರು.

ಪಶ್ಚಿಮ ಬಂಗಾಳದ ಅಲಿಪುರದಿಂದ ಜಿರಾಫೆ ತರಲು ಯತ್ನ

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಒಂದು ಜಿರಾಫೆ ಮಾತ್ರ ಇದ್ದು, ಪಶ್ಚಿಮ ಬಂಗಾಳದ ಅಲಿಪುರದಿಂದ ಮತ್ತೊಂದು ಜಿರಾಫೆ ತರಿಸುವ ಪ್ರಯತ್ನ ನಡೆದಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

ಪ್ರಸ್ತುತ ಬನ್ನೇರುಘಟ್ಟದಲ್ಲಿರುವ ಜಿರಾಫೆಯನ್ನು ಮೈಸೂರು ಮೃಗಾಲಯದಿಂದ ತರಿಸಲಾಗಿದ್ದು, ಏಕ ಪ್ರಾಣಿ ಇರುವ ಮೃಗಾಲಯಗಳಲ್ಲಿ ಮತ್ತೊಂದು ಅದೇ ಜಾತಿಯ ಪ್ರಾಣಿ ತರಿಸಲು ಸರ್ಕಾರ ಎಲ್ಲ ಬೆಂಬಲ ನೀಡಲಿದೆ ಎಂದರು.

ಬನ್ನೇರುಘಟ್ಟ ರಾಷ್ಟ್ರೀಯ ಜೈವಿಕ ಉದ್ಯಾನದಲ್ಲಿ ಉತ್ತಮ ಮೃಗಾಲಯ ಇದೆ, ಸಫಾರಿ ಇದೆ. ಇಲ್ಲಿ ಆನೆ, ಚಿರತೆ, ಹುಲಿ, ಸಿಂಹ, ಕರಡಿ, ಜಿಂಕೆಗಳು ಸ್ವೇಚ್ಛೆಯಾಗಿ ವಿಹರಿಸುವುದನ್ನು ನೋಡಬಹುದಾಗಿದೆ. ಬೆಂಗಳೂರಿಗೆ ಸಮೀಪದಲ್ಲೇ ಇದ್ದು, ಹೆಚ್ಚಿನ ಜನರು  ಆಗಮಿಸುವ ಕಾರಣ, ಮುಖ್ಯರಸ್ತೆಯಿಂದ ಪರ್ಯಾಯವಾಗಿ ಮತ್ತೊಂದು ಸಂಪರ್ಕ  ರಸ್ತೆ  ಕಲ್ಪಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ 6 ಎಕರೆ ಭೂಸ್ವಾಧೀನ ಮಾಡಿಕೊಳ್ಳಬೇಕಾಗಿದ್ದು, ಇದಕ್ಕೆ 40-50 ಕೋಟಿ ರೂ. ಅಗತ್ಯವಿದೆ, ಜೊತೆಗೆ ಬನ್ನೇರುಘಟ್ಟದವರೆಗೆ ಮೆಟ್ರೋ ರೈಲು ವಿಸ್ತರಣೆ ಮಾಡುವ ಬೇಡಿಕೆಯೂ ಇದ್ದು, ಈ ಎರಡೂ ವಿಷಯಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳೆಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.

ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಅರಣ್ಯಾಧಿಕಾರಿಗಳು ಮತ್ತು ವೈದ್ಯಾಧಿಕಾರಿಗಳ ನಡುವೆ ಉತ್ತಮ ಸಾಮರಸ್ಯವಿದ್ದು, ಪ್ರಾಣಿಗಳ ಸಂರಕ್ಷಣೆಗೆ ಎಲ್ಲ ಅಗತ್ಯಕ್ರಮ ಕೈಗೊಳ್ಳಲಿದ್ದಾರೆ ಎಂದು ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.

Key words: Quick -rights – thousands -forest dwellers- Minister -Ishwar Khandre