ಗುಣಮಟ್ಟದ ಚಿತ್ರಗಳು ಬಂದರೆ ಸಮಾಜಕ್ಕೆ ಉಪಯುಕ್ತ: ದಸರಾ ಚಲನಚಿತ್ರೋತ್ಸವದಲ್ಲಿ ಸಿಎಂ ಸಿದ್ದರಾಮಯ್ಯ

ಮೈಸೂರು. ಅಕ್ಟೋಬರ್ 15, 2023 (www.justkannada.in): ಚಲನಚಿತ್ರ ಬಹಳ ಪ್ರಭಾವ ಇರುವಂತಹ ಮಾಧ್ಯಮವಾಗಿದ್ದು, ಗುಣಮಟ್ಟದ ಚಿತ್ರಗಳು ತೆರೆ ಮೇಲೆ ಬಂದರೆ ಸಮಾಜಕ್ಕೆ ಉಪಯುಕ್ತವಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಕರ್ನಾಟಕ ಕಲಾಮಂದಿರದಲ್ಲಿ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ  ಅಂಗವಾಗಿ ಹಮ್ಮಿಕೊಂಡಿದ್ದ ಚಲನಚಿತ್ರೋತ್ಸವ ಕಾರ್ಯಕ್ರಮವನ್ನು  ಉದ್ಘಾಟಿಸಿ ಮಾತನಾಡಿದ ಅವರು, ಚಲನಚಿತ್ರ ಪ್ರೇಮಿಗಳಿಗೆ ಇದೊಂದು ಸುವರ್ಣ ಅವಕಾಶ. 7 ದಿನಗಳ ಕಾಲ ನಗರದ ಐನಾಕ್ಸ್ ಮತ್ತು ಡಿ ಆರ್ ಸಿ ಮಾಲ್ ನಲ್ಲಿ ಉತ್ತಮ ಚಲನ ಚಿತ್ರಗಳು ಪ್ರದರ್ಶನ ಆಗಲಿದ್ದು ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.

ಚಲನಚಿತ್ರಗಳ ಮೂಲಕ ಜನತೆಗೆ ಉತ್ತಮ ಸಂದೇಶ ನೀಡುವುದರ ಜೊತೆಗೆ ಜೀವನದ ಮೌಲ್ಯಗಳನ್ನು ಚಲನಚಿತ್ರಗಳ ಮೂಲಕ ನಾಡಿಗೆ ತಿಳಿಸುವಂತಹ ಕೆಲಸ ಮಾಡುತ್ತಾ ಬರುತ್ತಿದೆ. ಸರ್ಕಾರದ ವತಿಯಿಂದ ಗುಣಮಟ್ಟದ ಚಿತ್ರ ನೀಡುವ ಎಲ್ಲಾ ಚಿತ್ರರಂಗದವರಿಗೆ ಸಹಕಾರವನ್ನು ನೀಡುತ್ತಾ ಬಂದಿದ್ದೇವೆ ಎಂದು ಹೇಳಿದರು.

ಕನ್ನಡದ ಖ್ಯಾತ ಹಾಸ್ಯನಟ ನರಸಿಂಹರಾಜು ಅವರ ಜನ್ಮದಿನದ ಪ್ರಯುಕ್ತ ನರಸಿಂಹರಾಜು ಅವರ ಪುತ್ರಿ ಸುಧಾ ನರಸಿಂಹರಾಜು ಅವರಿಗೆ ಸನ್ಮಾನ ಮಾಡುವುದರ ಜೊತೆಗೆ ನರಸಿಂಹ ರಾಜು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡಿದರು. ಇದೇ ಸಮಯದಲ್ಲಿ ಚಲನಚಿತ್ರೋತ್ಸವದ ವಿಶೇಷ ಮಾಹಿತಿಗಳನ್ನೊಳಗೊಂಡ ಕಿರು ಹೊತ್ತಿಗೆಯನ್ನು ಗಣ್ಯರು ಬಿಡುಗಡೆ ಮಾಡಿದರು.

ನಂತರ ಮಾತನಾಡಿದ ಖ್ಯಾತ ಚಿತ್ರನಟ ಡಾರ್ಲಿಂಗ್ ಕೃಷ್ಣ ಮೈಸೂರಿನ ಚಲನಚಿತ್ರೋತ್ಸವ ದಲ್ಲಿ ಪಾಲ್ಗೊಳ್ಳುತ್ತಿರುವುದು ಹೆಮ್ಮೆಯ ವಿಷಯ. ನನ್ನ ಊರು ಮೈಸೂರು ಆದಕಾರಣ ನನ್ನ ಕಲೆಗೆ ಮೈಸೂರು ಅತ್ಯುತ್ತಮ ವೇದಿಕೆಯನ್ನು ಮಾಡಿಕೊಟ್ಟಿತ್ತು. ನನಗಷ್ಟೇ ಅಲ್ಲದೆ ಹಲವು ಕಲೆಗಾರರಿಗೆ ಮೈಸೂರಿನ ದಸರಾ ಉಪಯುಕ್ತವಾಗಿದೆ ಹಾಗೂ ಸಿನಿಮಾಗಳು ಕೇವಲ ಮನರಂಜನೆ ಅಷ್ಟೇ ಅಲ್ಲದೆ ಸಮಾಜ ಉತ್ತಮ ಸಂದೇಶ ನೀಡುತ್ತಾ ಬಂದಿವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಮಹಾಪೌರರಾದ ಶಿವಕುಮಾರ್, ಶಾಸಕರಾದ  ಡಾ.ತಿಮ್ಮಯ್ಯ, ಎ.ಅರ್.ಕೃಷ್ಣಮೂರ್ತಿ, ರವಿಶಂಕರ್, ಅನಿಲ್ ಚಿಕ್ಕಮಾದು, ಶ್ರೀವತ್ಸ, ಚಿತ್ರನಟ  ನಟಿಯರಾದ ಮಿಲನ ನಾಗರಾಜ್, ಸುಧಾ ನರಸಿಂಹರಾಜು,‌ ಮಾನ್ವಿತ ಕಾಮತ್ , ವೈಭವಿ ಶಾಂಡಿಲ್ಯ, ಮಯೂರಿ  ಸೇರಿದಂತೆ ಇತರರು ಹಾಜರಿದ್ದರು.