ಪಂಜಾಬ್ ಸಿಎಂರಂತೆ ಕ್ರಮ ಕೈಗೊಳ್ಳಿ: ಹಗರಣದಲ್ಲಿ ಭಾಗಿಯಾದವರನ್ನ ಜೈಲಿಗೆ ಕಳಿಸಿ- ಸಿಎಂ ಬೊಮ್ಮಾಯಿಗೆ ಎಎಪಿ ರಾಜ್ಯ ಸಂಚಾಲಕ ಪೃಥ್ವಿರೆಡ್ಡಿ ಆಗ್ರಹ

 

ಬೆಂಗಳೂರು,ಮೇ,25,2022(www.justkannada.in): ಪಂಜಾಬ್ ನಲ್ಲಿ ಅಕ್ರಮದ ಆರೋಪ  ಕೇಳಿ ಬಂದಿದ್ದಕ್ಕೆ ಆರೋಗ್ಯ ಸಚಿವರನ್ನೇ ವಜಾ ಮಾಡಿ ಅಲ್ಲಿನ ಸಿಎಂ ಭಗವಂತ್ ಮಾನ್ ಕ್ರಮ ಕೈಗೊಂಡರು. ಅದೇ ರೀತಿ ನೀವೂ ಕೂಡ ಹಗರಣದಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಂಡು ಜೈಲಿಗೆ ಕಳುಹಿಸಿ ಎಂದು ಎಎಪಿ ರಾಜ್ಯ ಸಂಚಾಲಕ ಪೃಥ್ವಿರೆಡ್ಡಿ ಆಗ್ರಹಿಸಿದರು.

ಎಎಪಿ‌ ನಾಯಕರಾದ ಪೃಥ್ವಿರೆಡ್ಡಿ,  ಭಾಸ್ಕರ್ ರಾವ್, ಮಾಜಿ ಕೆಎಎಸ್ ಅಧಿಕಾರಿ ಮಥಾಯ್ ಜಂಟಿ ಸುದ‍್ಧಿಗೋಷ್ಠಿ ನಡೆಸಿ ಮಾತನಾಡಿದರು. ಈ ವೇಳೆ ಮಾತನಾಡಿದ ರಾಜ್ಯ ಸಂಚಾಲಕ ಪೃಥ್ವಿರೆಡ್ಡಿ, ಪಂಜಾಬ್ ನಲ್ಲಿ ಅಕ್ರಮದ ಆರೋಪ ಬಂತು. ಸಿಎಂ ಭಗವಂತ್ ಮಾನ್ ಕ್ರಮ ಕೈಗೊಂಡರು. ಆರೋಗ್ಯ ಸಚಿವ ವಿಜಯ್ ಕುಂದ್ಲಾ ಅವರನ್ನ ವಜಾ ಮಾಡಿದ್ರು. ಜೊತೆಗೆ ತಕ್ಷಣವೇ ಅರೆಸ್ಟ್ ಮಾಡಿಸಿದ್ದಾರೆ. ಅದೇ ರೀತಿ ರಾಜ್ಯದಲ್ಲೂ ಕ್ರಮ ಜರುಗಿಸಬೇಕು. ಕಳೆದ ಒಂದು ವರ್ಷದಿಂದ ಆರೋಪ ಎದುರಾಗಿವೆ. ಕಂಟ್ರಾಕ್ಟರ್ ಅಸೋಸಿಯೇಷನ್ ದೂರು ನೀಡಿದೆ. ೪೦% ಕಮೀಷನ್ ಬಗ್ಗೆ ದೂರು ನೀಡಿದೆ.

ಮಠಾಧೀಶರು ೩೦% ಕಮೀಷನ್ ಆರೋಪಿಸಿದ್ದಾರೆ. ಹಾಗಾಗಿ ಸಿಎಂ ಬೊಮ್ಮಾಯಿಯವರೇ ಕ್ರಮ ಜರುಗಿಸಿ. ಪಂಜಾಬ್ ಸಿಎಂ ಅವರಂತೆ ನೀವೂ ಕ್ರಮ ತೆಗೆದುಕೊಳ್ಳಿ. ಹಗರಣದಲ್ಲಿ ಯಾರು ಭಾಗಿಯಾಗಿದ್ದಾರೆ ಜೈಲಿಗೆ ಕಳಿಸಿ ಮೊಸಳೆ ಬಿಟ್ಟು ಚಿಕ್ಕ ಮೀನು‌ ಹಿಡಿಯೋದು ಬೇಡ ಎಂದು ಪೃಥ್ವಿರೆಡ್ಡಿ ಒತ್ತಾಯಿಸಿದರು.

ಇಷ್ಟೊಂದು ಅಕ್ರಮ ಆದ್ರೂ ಪ್ರಧಾನಿ ಮೋದಿ ಯಾಕೆ ಗಮನಕೊಡ್ತಿಲ್ಲ..? ಮಥಾಯ್  ಪ್ರಶ್ನೆ.

ಇದೇ ವೇಳೆ ಮಾತನಾಡಿದ ಮಾಜಿ ಕೆಎಎಸ್ ಅಧಿಕಾರಿ ಮಥಾಯ್, ಬಿಬಿಎಂಪಿಯಲ್ಲಿ ಕಮೀಷನ್ ವ್ಯವಹಾರವಿದೆ. ಹಿಂದೆ ಇಷ್ಟೊಂದು ಭ್ರಷ್ಟಾಚಾರ ಇರಲಿಲ್ಲ. ಆದರೆ ಈಗ ಎಲ್ಲದರಲ್ಲೂ ಭ್ರಷ್ಟಾಚಾರವಿದೆ. ಪಿಎಸ್ ಐ ನೇಮಕಾತಿಯಲ್ಲಿ ಅವ್ಯವಹಾರವಾಗಿದೆ. ಕೆಪಿಎಸ್ ಸಿ ನೇಮಕದಲ್ಲಿ ಅಕ್ರಮವಾಗಿದೆ. ಕೋಟಿ ಕೋಟಿ ಲೆಕ್ಕದಲ್ಲಿ ಅವ್ಯವಹಾರ ನಡೆದಿದೆ. ಗುತ್ತಿಗೆದಾರರ ಸಂಘ ಕಮೀಷನ್ ದೂರು ನೀಡಿದೆ. ಸಾಮಾನ್ಯ ಪ್ರಜೆ ಪತ್ರ ಬರೆದರೆ ಪ್ರಧಾನಿ ಗಮನ ಹರಿಸ್ತಾರೆ. ಆದರೆ ಇಷ್ಟೊಂದು ಅಕ್ರಮ ಆದ್ರೂ ಯಾಕೆ ಗಮನ ಕೊಡ್ತಿಲ್ಲ ಎಂದು ಪ್ರಶ್ನಿಸಿದರು.

ನಾನು ಕೆಎಎಸ್ ಅಧಿಕಾರಿಯಾಗಿದ್ದವನು. ಭ್ರಷ್ಟಾಚಾರದ ಬಗ್ಗೆ ದೂರು ಕೊಟ್ಟೆ. ಆದರೆ ಕಂದಾಯ ಸಚಿವರು ಕ್ರಮ‌ಜರುಗಿಸಲಿಲ್ಲ. ಆ ಕೇಸ್ ಗಳನ್ನೇ ಪೆಂಡಿಂಗ್ ಇಟ್ಟರು. ಆದರೆ ಇದು ಹೆಚ್ಚು ದಿನ ನಡೆಯಲ್ಲ. ರಾಜ್ಯದ ಜ‌ನ ಎಲ್ಲವನ್ನೂ‌ಗಮನಿಸ್ತಾರೆ. ಸರಿಯಾದ ಸಮಯದಲ್ಲಿ ಬುದ್ಧಿ ಕಲಿಸ್ತಾರೆ ಎಂದು ಮಥಾಯ್ ಎಚ್ಚರಿಕೆ ನೀಡಿದರು.

ಪಂಜಾಬ್ ನಲ್ಲಿ ‌ಅಧಿಕಾರಕ್ಕೆ ಬಂದು ಎರಡು ತಿಂಗಳಾಗಿದೆ. ಎರಡು ‌ತಿಂಗಳಲ್ಲೇ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಾಗುತ್ತಿದೆ. ನಮ್ಮ‌ ಪಕ್ಷದ ಸಚಿವರ ಮೇಲೆ ದೂರು ಬರುತ್ತೆ. ದೂರು ಬರುತ್ತಲೇ ಅವರನ್ನ ವಜಾ ಮಾಡಿದ್ದಾರೆ. ಇಷ್ಟೇ ಅಲ್ಲ ಅವರನ್ನ ಜೈಲಿಗೆ ಕಳಿಸಿದ್ದಾರೆ ಎಂದು ಮಥಾಯ್ ಹೇಳಿದರು.

ಬಸವನಗುಡಿ ಕಾಲುವೆ ದುರಂತ ಪ್ರಕರಣ ಮುಚ್ಚಿಹಾಕುವ ಕೆಲಸ ನಡೆದಿದೆ- ಭಾಸ್ಕರ್ ರಾವ್ ಆರೋಪ

ಬಸವನಗುಡಿ ಕಾಲುವೆ ದುರಂತ ವಿಚಾರ ಕುರಿತು ಮಾತನಾಡಿದ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್, ಪ್ರಕರಣ ಮುಚ್ಚಿಹಾಕುವ ಕೆಲಸ ನಡೆದಿದೆ. ಸ್ಥಳೀಯ ಶಾಸಕ ರವಿಸುಬ್ರಮಣ್ಯ ಮುಚ್ಚಿ ಹಾಕುವ ಯತ್ನ ಮಾಡಿದ್ದಾರೆ. ಅಲ್ಲಿ ಪೊಲೀಸರು ಪ್ರತಿಭಟನೆಗೆ ಅವಕಾಶ ಕೊಡ್ತಿಲ್ಲ. ಪ್ರಕರಣದ ಬಗ್ಗೆ ಅಧಿಕಾರಿಗಳು ಬಾಯಿ ಬಿಡ್ತಿಲ್ಲ. ಬಿಬಿಎಂಪಿ ಅಧಿಕಾರಿಗಳು ಅದರ ಉತ್ತರ ಕೇಳ್ಬೇಡಿ ಅಂತಾರೆ. ಕಡಿಮೆ ಗುಣಮಟ್ಟದ ವಸ್ತುಗಳನ್ನ ಬಳಸಿದ್ದಾರೆ. ಅಲ್ಲಿ ಗಾಯಾಳುಗಳು ಪಶ್ಚಿಮ ಬಂಗಾಳದವರು. ಹಾಗಾಗಿಯೇ ಪ್ರಕರಣ ಮುಚ್ಚೋ ಕೆಲಸ ನಡೆಯುತ್ತಿದೆ. ರಾಜ್ಯದವರಾಗಿದ್ದರೆ ದೊಡ್ಡದಾಗುತ್ತಿತ್ತು ಎಂದು ಆರೋಪಿಸಿದರು.

ನಮ್ಮ ರಾಜ್ಯದಲ್ಲಿ ಭ್ರಷ್ಟಾಚಾರದ ಬಗ್ಗೆ ಕಡಿವಾಣ ಎಸಿಬಿ, ಲೋಕಾಯುಕ್ತ ಇವೆ. ಇಲ್ಲಿರುವ ಅಧಿಕಾರಿಗಳಿಗೆ ಸರ್ಕಾರ ಕೆಲಸ ಕೊಡ್ತಿಲ್ಲ. ಅವರನ್ನ ಸುಮ್ಮನೆ ಮುಂದುವರೆಸಿದೆ. ಇಲ್ಲಿಯವರೆಗೆ ಲೋಕಾಯುಕ್ತಕ್ಕೆ ಕೇಸ್ ಕೊಟ್ಟಿಲ್ಲ. ಲೋಕಾಯುಕ್ತದ ಮೇಲೆ ಇವರಿಗೆ ಭಯವೇ? ಎಂದು ಪ್ರಶ್ನಿಸಿದ ಭಾಸ್ಕರ್ ರಾವ್, ಎಸಿಬಿಯವರಿಗೆ ಸರಿಯಾದ ಸಹಕಾರ ಕೊಡ್ತಿಲ್ಲ. ಹೀಗಾಗಿ ಭ್ರಷ್ಟಾಚಾರ ಹೆಚ್ಚಾಗ್ತಿದೆ. ೪೦% ಕಮೀಷನ್ ನಡೆಯುತ್ತಿದೆ. ಬಸವನಗುಡಿಯಲ್ಲಿ ರಾಜಕಾಲುವೆ ಗೋಡೆ ಕುಸಿದಿದೆ. ಕಾಮಗಾರಿಯ ಬೋರ್ಡ್ ಹಾಕಬೇಕು. ಅಲ್ಲಿ ಯಾವ ಬೋರ್ಡ್ ಹಾಕಿಲ್ಲ. ಕೆಲಸಗಾರರಿಗೆ ಕನಿಷ್ಠ ರಕ್ಷಣೆ ಸೌಕರ್ಯ ಕೊಟ್ಟಿಲ್ಲ. ಅಲ್ಲಿ ಬಳಸಿರುವ ಕಂಬಿ ಲೋ ಕ್ವಾಲಿಟಿ ಇದೆ. ಈಗ ಅವಸರದಲ್ಲಿ ಎಲ್ಲವನ್ನೂ ತೆಗೆದಿದ್ದಾರೆ. ಇದು ೪೦% ಕಮೀಷನ್ ಪ್ರಕರಣವೇ ಎಂದು ನಿನ್ನೆಯ ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

Key words: Punjab CM-  action –bribe-minister- AAP –Prithviraddy