ಮೈಸೂರಿನಲ್ಲಿ ವೀರಭದ್ರೇಶ್ವರ ಸ್ವಾಮಿ ದೇವಾಲಯ ತೆರವು ಖಂಡಿಸಿ ಪ್ರತಿಭಟನೆ: ಸ್ಥಳಕ್ಕೆ ಬಂದ ಎಸಿಗೆ ತರಾಟೆ…

ಮೈಸೂರು,ಫೆ,29,2020(www.justkannada.in):  ವೀರಭದ್ರೇಶ್ವರ ಸ್ವಾಮಿ ದೇವಾಲಯ ತೆರವುಗೊಳಿಸಿರುವುದನ್ನ ಖಂಡಿಸಿ ಮೈಸೂರಿನಲ್ಲಿ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು.

ಪೌಂಟೆನ್  ಸರ್ಕಲ್ ಬಳಿಯ ಕೆಇಬಿ ಗೆಸ್ಟ್ ಹೌಸ್ ಮುಂಭಾಗವಿದ್ದ ವೀರಭದ್ರೇಶ್ವರ ದೇವಾಲಯವನ್ನ ಬೆಳ್ಳಂಬೆಳಿಗ್ಗೆ 4:30ರ ವೇಳೆ ಪಾಲಿಕೆ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಮುಖಂಡರಿಗೆ, ಸ್ಥಳೀಯರಿಗೆ ತಿಳಿಸದೇ ಹಿಂದೂ ದೇವಾಲಯ ತೆರವುಗೊಳಿಸಿದ್ದಾರೆಂದು ಆರೋಪ ಆರೋಪಿಸಿ ಮೈಸೂರಿನ ಫೌಂಟೆನ್ ಸರ್ಕಲ್ ಬಳಿ ಬಿಜೆಪಿ ಹಾಗೂ ಹಿಂದೂಪರ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಹಾಗೆಯೇ ಮೇಯರ್ ಹಾಗೂ ಪಾಲಿಕೆ ಆಯುಕ್ತರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಪ್ರತಿಭಟನಾ ಸ್ಥಳಕ್ಕೆ ಬಂದ ಎಸಿ ಶಿವೇಗೌಡರಿಗೆ ಪ್ರತಿಭಟನಾಕಾರರು ತರಾಟೆ ತೆಗೆದುಕೊಂಡರು. ರಾತ್ರೋರಾತ್ರಿ ದೇವಾಲಯ ತೆರವು ಮಾಡುವ ಉದ್ದೇಶವೇನು ಎಂದು ಪ್ರಶ್ನಿಸಿ ಶಿವೇಗೌಡರ ವಿರುದ್ಧ ಪ್ರತಿಭಟನಾಕಾರರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಮಯದಲ್ಲಿ  ಪೋಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮಾಜಿ ಮೇಯರ್ ಸಂದೇಶ್ ಸ್ವಾಮಿ ಸಾಥ್ ನೀಡಿದರು. ಸ್ಥಳಕ್ಕೆ ಬಂದ ಎಸಿಗೆ ಕ್ಲಾಸ್ ತೆಗೆದುಕೊಂಡ ಸಂದೇಶ್ ಸ್ವಾಮಿ, ಪಾಲಿಕೆಯಲ್ಲಿ ಜೆಡಿಎಸ್ ಕಾಂಗ್ರೆಸ್ ಅಡಳಿತದಲ್ಲಿರುವುದರಿಂದ ಹಿಂದೂ ದೇವಾಲಯಗಳ ಮೇಲೆ ದಬ್ಬಾಳಿಕೆ ಮಾಡ್ತಿದ್ದೀರಾ. ಮೊದಲು ಸುಪ್ರೀಂ ಕೋರ್ಟ್ ನ ಆದೇಶ ಸರಿಯಾಗಿ ಓದಿ. ದೇವಾಲಯದ ತೆರವಿಗೆ ನಮ್ಮ ವಿರೋಧವಿಲ್ಲ. ಆದರೆ ರಾತ್ರೋರಾತ್ರಿ ಕಳ್ಳರಂತೆ ತೆರವುಗೊಳಿಸಿರುವುದು ಖಂಡನೀಯ. ಕೂಡಲೇ ವೀರಭದ್ರೇಶ್ವರ ದೇವಾಲಯ ಪುನರ್ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿದರು.

Key words: Protest -against – eviction – Veerabhadreshwara Swamy Temple – Mysore