ಕೇಂದ್ರದ ಮಲತಾಯಿ ಧೋರಣೆ  ಖಂಡಿಸಿ ರಾಜ್ಯದ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆ- ಕಾಂಗ್ರೆಸ್ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಪುಷ್ಪ ಅಮರನಾಥ್…

ಮೈಸೂರು,ಸೆ,10,2019(www.justkannada.in): ರಾಜ್ಯದ ನೆರೆ ಸಂತ್ರಸ್ತರಿಗೆ ಪರಿಹಾರ ಮರೀಚಿಕೆಯಾಗಿದೆ. ಹೀಗಾಗಿ ಕೇಂದ್ರದ ಮಲತಾಯಿ ಧೋರಣೆ  ಖಂಡಿಸಿ ರಾಜ್ಯದ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ  ಕೆಪಿಸಿಸಿ ರಾಜ್ಯ ಘಟಕದಿಂದ ಪ್ರತಿಭಟನೆಗೆ ನಿರ್ಧಾರ ಮಾಡಲಾಗಿದೆ ಎಂದು ಕಾಂಗ್ರೆಸ್ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಡಾ. ಪುಷ್ಪ ಅಮರನಾಥ್ ಹೇಳಿದರು.

ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಪುಷ್ಪ ಅಮರನಾಥ್ , ರಾಜ್ಯದ ನೆರೆ ಹಾವಳಿ ಶತಮಾನದ ಬಹುದೊಡ್ಡ ಅನಾಹುತವಾಗಿದೆ. ಈ ವೇಳೆ ಸಂತ್ರಸ್ಥರಿಗೆ ಪರಿಹಾರ ಮರೀಚಿಕೆಯಾಗಿದೆ. ಈ ವಿಚಾರದಲ್ಲಿ ಕೇಂದ್ರವು ರಾಜ್ಯದ ಬಗ್ಗೆ ಮಲತಾಯಿ ಧೋರಣೆ ತೋರುತ್ತಿದ್ದು, ಇದನ್ನು  ಖಂಡಿಸಿ ಸೆಪ್ಟಂಬರ್12ರಂದು  ರಾಜ್ಯದ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

ರಾಜ್ಯದಲ್ಲಿ ಮೂವರು ಕೇಂದ್ರ ಸಚಿವರು, 25 ಜನ ಸಂಸದರಿದ್ದರೂ ಇಂದು ಕೇಂದ್ರದ ಮುಂದೆ ಮಂಡಿಯೂರುವ ಸ್ಥಿತಿ ನಿರ್ಮಾಣವಾಗಿರುವುದು ಶೋಚನೀಯ. ಈಚೆಗೆ ಚಂದ್ರಯಾನ ವೀಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಆಗಮಿಸಿದಾಗ ನೆರೆ ಸಂತ್ರಸ್ತರನ್ನು ಭೇಟಿಯಾಗಿ ಅವರ ದುಃಖ ದುಮ್ಮಾನ ಆಲಿಸುವರು ಎಂಬ ಇದ್ದ ಆಶಾವಾದಕ್ಕೆ ತಣ್ಣೀರೆರೆಚಿದ್ದಾರೆ. ಪ್ರಧಾನಿಯವರ ವರ್ತನೆ ರಾಜ್ಯದ ಬಗ್ಗೆ ಅವರಿಗಿರುವ ಭಾವನೆ  ಏನೆಂದು ತೋರುತ್ತದೆ ಎಂದು ಪುಷ್ಪ ಅಮರನಾಥ್ ಟೀಕಿಸಿದರು.

ನೆರೆ ಸಂತ್ರಸ್ತರಿಗೆ ನೀಡುತ್ತಿರುವ 10 ಸಾವಿರ ರೂ.ಗಳ ಪರಿಹಾರ ಚೆಕ್ ಗಳು ಸಹ ಬೌನ್ಸ್ ಆಗುತ್ತಿವೆ. ಸಂತ್ರಸ್ಥರಿಗೆ ಕಳುಹಿಸಿದ ಪರಿಹಾರ ಸಾಮಾಗ್ರಿಗಳು ಸೂಕ್ತವಾಗಿ ವಿಲೇವಾರಿಯಾಗಿಲ್ಲ, ಈಗಾಗಲೇ ಕೇಂದ್ರ ಸಮಿತಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸಿದ್ದರೂ ಇದುವರೆಗೂ ಯಾಕೆ ಸೂಕ್ತ ಪರಿಹಾರ ಲಭಿಸಿಲ್ಲ. ಪರಿಹಾರ ಕೇಂದ್ರಗಳಲ್ಲಿ  ಸೋಂಕು ರೋಗಗಳ ಭೀತಿ ಆರಂಭವಾಗಿದೆ, ಮನೆ ಮನೆಗೆ ಮಧ್ಯ ಬೇಡ ಶುದ್ಧ ಕುಡಿಯುವ ನೀರು. ಸೂಕ್ತ ಸೂರು ನೀಡಿ,  ನಾಡ ಹಬ್ಬ ದಸರಾದೊಳಗೆ ನೆರೆ ಸಂತ್ರಸ್ತರಿಗೆ ಸೂಕ್ತ ವ್ಯವಸ್ಥೆಯಾಗಲೇಬೇಕೆಂದು  ಡಾ.ಪುಷ್ಪ ಅಮರನಾಥ್ ಆಗ್ರಹಿಸಿದರು.

Key words: Protest – against-centers – mysore- Pushpa Amarnath,