ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಪರ ವಾತಾವರಣ: ನೂರಕ್ಕೆ ನೂರರಷ್ಟು ಗೆಲ್ಲುವ ವಿಶ್ವಾಸವಿದೆ-ಮಾಜಿ ಸಿಎಂ ಸಿದ್ಧರಾಮಯ್ಯ..

ಬೆಂಗಳೂರು,ಜೂನ್,16,2022(www.justkannada.in): ಶಿಕ್ಷಕರು ಮತ್ತು ಪದವೀಧರ ಮತದಾರರು ಬದಲಾವಣೆಯನ್ನು ಬಯಸಿದ್ದಾರೆ ಎಂಬುದು ಈ ಫಲಿತಾಂಶದಿಂದ ಸ್ಪಷ್ಟವಾಗುತ್ತದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಪರವಾದ ವಾತಾವರಣ ಇದೆ ಎಂಬುದನ್ನು ಸ್ಪಷ್ಟಪಡಿಸುತ್ತಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ನೂರಕ್ಕೆ ನೂರು ಗೆಲ್ಲುವ ವಿಶ್ವಾಸವಿದೆ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ತಿಳಿಸಿದರು.

ಇಂದು ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ  ಮಾತನಾಡಿದರು. ಈ ಸಂದರ್ಭದಲ್ಲಿ ಸಿದ್ದರಾಮಯ್ಯನವರು ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದ್ದಿಷ್ಟು:

ನಮ್ಮ ಅಭ್ಯರ್ಥಿ ಮಧು ಜಿ ಮಾದೇಗೌಡ ಅವರು ಸುಮಾರು 12,205 ಮತಗಳ‌ ಅಂತರದಿಂದ ಪದವೀಧರ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ನಮ್ಮ ಸಮೀಪ ಅಭ್ಯರ್ಥಿ M V ರವಿಶಂಕರ್ ಅವರಿಗೆ 33,848 ನಮ್ಮ ಅಭ್ಯರ್ಥಿಗೆ 46,073 ಮತಗಳು ಬಂದಿವೆ, ಜೆಡಿಎಸ್ ಗೆ 19,630 ಮತ ಬಂದಿದೆ. ಎರಡು ಬಾರಿ ಶ್ರೀಕಂಠೇಗೌಡ ಅವರು ಗೆದ್ದಿದ್ದರು. ಈ ಬಾರಿ ರಾಮು ಅವರಿಗೆ ಜೆಡಿಎಸ್ ಟಿಕೆಟ್ ನೀಡಿತ್ತು. ಬಹುಶಃ ಸೋಲಿನ ಭಯದಿಂದ ಶ್ರೀಕಂಠೇಗೌಡರು ಸ್ಪರ್ಧಿಸಿರಲಿಲ್ಲ ಎಂದು ಕಾಣುತ್ತೆ ಎಂದು ಸಿದ್ಧರಾಮಯ್ಯ ಟೀಕಿಸಿದರು.

ನಮ್ಮ ಪಕ್ಷದ ಅಭ್ಯರ್ಥಿಗಳು ಶಿಕ್ಷಕರ ಕ್ಷೇತ್ರದಿಂದ ಈ ಹಿಂದೆ ಗೆದ್ದಿದ್ದರು ಆದರೆ ಯಾವತ್ತೂ ದಕ್ಷಿಣ ಪದವೀಧರ ಕ್ಷೇತ್ರದಿಂದ ಗೆದ್ದಿರಲಿಲ್ಲ. ಮೊಟ್ಟಮೊದಲ ಬಾರಿಗೆ ಕಾಂಗ್ರೆಸ್ ಅಭ್ಯರ್ಥಿ ಈ ಬಾರಿ ಪದವೀಧರ ಕ್ಷೇತ್ರದಿಂದ ಗೆದ್ದಿದ್ದು. ಜೆಡಿಎಸ್‌ ನವರು ಮತ್ತು ಬಿಜೆಪಿ ಅವರು ಇದನ್ನು ನಮ್ಮ ಭದ್ರಕೋಟೆ ಎಂದು ಹೇಳುತ್ತಿದ್ದರು. ಇಂಥಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ನ ಅಭ್ಯರ್ಥಿ ಮಧು ಮಾದೇಗೌಡ ಅವರು ಗೆದ್ದಿದ್ದಾರೆ. ಅವರಿಗೆ ನಾನು ಅಭಿನಂದನೆಗಳನ್ನು ಹೇಳಲು ಬಯಸುತ್ತೇನೆ. ನಮ್ಮ ಅಭ್ಯರ್ಥಿಗೆ ಮತ ನೀಡಿದ ಪದವೀಧರ ಮತದಾರರಿಗೆ ಧನ್ಯವಾದಗಳು. 1 ಲಕ್ಷ 33 ಸಾವಿರ ಪದವೀಧರ ಮತದಾರರಿದ್ದರು. ನಮ್ಮ ಅಭ್ಯರ್ಥಿ ಇವರ ಮನ ಗೆಲ್ಲಲು ಯಶಸ್ವಿಯಾಗಿದ್ದಾರೆ. ನಮ್ಮ ಅಭ್ಯರ್ಥಿಯ ಗೆಲುವಿಗೆ ಸಂಘಟಿತ ಹೋರಾಟ ಕಾರಣ ಎಂದು ವಿಶ್ಲೇಷಿಸಿದರು.

ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಜಿಲ್ಲೆಗಳ ಪದವೀಧರ ಮತದಾರರು ಮತ ಚಲಾಯಿಸಿದ್ದಾರೆ. ಈ ನಾಲ್ಕು ಜಿಲ್ಲೆಗಳ ಕಾರ್ಯಕರ್ತರು, ಪಕ್ಷದ ಅಧ್ಯಕ್ಷರುಗಳು, ಮಾಜಿ ಸಂಸದರು, ಶಾಸಕರು ಇವರೆಲ್ಲರ ಸಂಘಟಿತ ಹೋರಾಟದ ಮೂಲಕ ಚುನಾವಣೆ ಗೆದ್ದಿದ್ದೇವೆ. ಈ ಎಲ್ಲ‌ರಿಗೂ ನನ್ನ ಆತ್ಮೀಯ ಧನ್ಯವಾದಗಳು.

ಇದೇ ರೀತಿ ಬೆಳಗಾವಿಯ ಶಿಕ್ಷಕರ ಕ್ಷೇತ್ರದಲ್ಲಿ ಪ್ರಕಾಶ್‌ ಹುಕ್ಕೇರಿ ಅವರು ಮೊದಲ ಸುತ್ತಿನಲ್ಲೇ ಗೆಲುವಿನ ಕೋಟಾ ತಲುಪಿ ಗೆದ್ದಿದ್ದಾರೆ. ಚಲಾವಣೆಯಾದ 20,000 ಮತಗಳಲ್ಲಿ ನಮ್ಮ ಅಭ್ಯರ್ಥಿ 11,000 ಕ್ಕೂ ಅಧಿಕ ಮತ ಪಡೆದಿದ್ದಾರೆ. ಕಳೆದ ಎರಡು ಬಾರಿ ಅಲ್ಲಿ ಬಿಜೆಪಿ ಅಭ್ಯರ್ಥಿ ಅರುಣ್‌ ಶಹಾಪುರ್‌ ಅವರು ಗೆದ್ದಿದ್ದರು. ನಮ್ಮ ಅಭ್ಯರ್ಥಿಗೆ ಮತ ನೀಡಿ ಗೆಲ್ಲಿಸಿದ ಬೆಳಗಾವಿ, ಬಿಜಾಪುರ, ಬಾಗಲಕೋಟೆ ಜಿಲ್ಲೆಗಳ ಎಲ್ಲಾ ಶಿಕ್ಷಕ ಬಂಧುಗಳಿಗೆ, ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಧನ್ಯವಾದಗಳು ಎಂದು ಸಿದ್ಧರಾಮಯ್ಯ ಹೇಳಿದರು.

ಉಳಿದ ಇನ್ನೆರಡು ಕ್ಷೇತ್ರಗಳಲ್ಲಿ ಸೋತಿದ್ದೇವೆ. ನಾವು ಈ ಮೊದಲು ನಾಲ್ಕೂ ಸ್ಥಾನಗಳಲ್ಲೂ ಇರಲಿಲ್ಲ. ಬಸವರಾಜ್‌ ಗುರಿಕಾರ್‌ ಅವರಿಗೆ ಸುಮಾರು 4,597 ಮತಗಳನ್ನು ಹಾಗೂ ಸುನೀಲ್‌ ಸಂಕ ಅವರಿಗೆ 10,122 ಮತಗಳನ್ನು ನೀಡಿದ್ದಾರೆ. ಇಲ್ಲಿ ನಮ್ಮ ಅಭ್ಯರ್ಥಿಗಳು ಸೋತಿದ್ದರೂ, ಇಷ್ಟು ಮತಗಳನ್ನು ನೀಡಿದ್ದಕ್ಕಾಗಿ ಮತದಾರರಿಗೆ ಧನ್ಯವಾದ ಹೇಳಲು ಬಯಸುತ್ತೇನೆ.

ಎಲ್ಲಕ್ಕಿಂತ ಮುಖ್ಯವಾಗಿ ಶಿಕ್ಷಕರು ಮತ್ತು ಪದವೀಧರ ಮತದಾರರು ಬದಲಾವಣೆಯನ್ನು ಬಯಸಿದ್ದಾರೆ ಎಂಬುದು ಈ ಫಲಿತಾಂಶದಿಂದ ಸ್ಪಷ್ಟವಾಗುತ್ತದೆ. ಬಿಜೆಪಿ ಪಕ್ಷ ನಾಲ್ಕೂ ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ ಎಂಬ ಜಂಭ ಹೊಡೆದಿದ್ದರು, ಮುಖ್ಯಮಂತ್ರಿಗಳೇ ಹೋಗಿ ಪ್ರಚಾರ ಮಾಡಿದ್ದರು. ನಮಗೆ ಸಂಪನ್ಮೂಲಗಳ ಕೊರತೆ ಇದ್ದಾಗ್ಯೂ ಕೂಡ ಪದವೀಧರರು ಮತ್ತು ಶಿಕ್ಷಕರು ನಮಗೆ ಆಶಿರ್ವಾದ ಮಾಡಿದ್ದಾರೆ. ಇದು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಪರವಾದ ವಾತಾವರಣ ಇದೆ ಎಂಬುದನ್ನು ಸ್ಪಷ್ಟಪಡಿಸುತ್ತಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ನೂರಕ್ಕೆ ನೂರು ಗೆಲ್ಲುವ ವಿಶ್ವಾಸವಿದೆ ಎಂದರು.

ದೇಶದ ಹಾಗೂ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಬಿಜೆಪಿ ಸರ್ಕಾರಗಳು ಅಧೋಗತಿಗೆ ತಂದಿವೆ. ರೈತರು, ಮಹಿಳೆಯರು, ಯುವಕರ ಸಮಸ್ಯೆಗಳು ಇಂದು ಬಹಳ ಬೃಹದಾಕಾರವಾಗಿ ಬೆಳೆಯುತ್ತಿದೆ. ಇದರಿಂದ ರಾಜಕೀಯ ಪ್ರಬುದ್ಧತೆ ಇರುವ ಮತದಾರರು ಕಾಂಗ್ರೆಸ್‌ ಪಕ್ಷಕ್ಕೆ ಆಶೀರ್ವಾದ ಮಾಡಿದ್ದಾರೆ, ಮುಂದಿನ ಚುನಾವಣೆಯಲ್ಲಿಯೂ ಇದೇ ರೀತಿ ಜನ ಆಶೀರ್ವಾದ ಮಾಡುತ್ತಾರೆಂದು ಸ್ಪಷ್ಟವಾಗಿ ಕಾಣುತ್ತಿದೆ. ಬಿಜೆಪಿಯವರ ಕೋಮುವಾದ, ಧರ್ಮ ರಾಜಕಾರಣ ಮತ್ತು ಪ್ರಜಾಪ್ರಭುತ್ವ ವಿರೋಧಿ ಕ್ರಮಗಳು, ಸಂವಿಧಾನ ವಿರೋಧಿ ಕ್ರಮಗಳು, ಸೇಡಿನ ರಾಜಕೀಯದ ವಿರುದ್ಧವಾಗಿ ಜನ ನಮಗೆ ಮತ ನೀಡಿದ್ದಾರೆ. ಸೇಡಿನ ರಾಜಕೀಯವನ್ನು, ಪ್ರಜಾಪ್ರಭುತ್ವ ವಿರೋಧಿ ಕ್ರಮಗಳನ್ನು ಜನ ಈ ಹಿಂದೆಯೂ ಒಪ್ಪಿಲ್ಲ, ಮುಂದೆಯೂ ಒಪ್ಪಲ್ಲ. ದೇಶ, ಸಂವಿಧಾನ, ರಾಜ್ಯ ಹಾಗೂ ಪ್ರಜಾಪ್ರಭುತ್ವಕ್ಕೆ ಆಪತ್ತು ಬಂದಾಗ ಜನ ಅವುಗಳ ರಕ್ಷಣೆಗೆ ನಿಲ್ಲುತ್ತಾರೆ ಎಂದು ಹಿಂದೆಯೂ ನೋಡಿದ್ದೇವೆ, ಮುಂದೆಯೂ ಹೀಗೆ ಆಗುತ್ತದೆ ಎಂದು ಸಿದ್ಧರಾಮಯ್ಯ ಭವಿಷ್ಯ ನುಡಿದರು.

ಬಸವರಾಜ ಹೊರಟ್ಟಿ ಅವರು ವೈಯಕ್ತಿಕ ವರ್ಚಸ್ಸಿನಿಂದ ಗೆದ್ದಿರುವುದು

ಬಸವರಾಜ ಹೊರಟ್ಟಿ ಅವರು ವೈಯಕ್ತಿಕ ವರ್ಚಸ್ಸಿನಿಂದ ಗೆದ್ದಿರುವುದು, ಬಿಜೆಪಿಯಿಂದ ನಿಂತಿದ್ದಕ್ಕಾಗಿ ಗೆದ್ದಿದ್ದಲ್ಲ. ಈ ಹಿಂದೆ ಅವರು ಜೆಡಿಎಸ್‌ ನಿಂದ 3 ಬಾರಿ ಗೆದ್ದಿದ್ದರು. ವಾಯುವ್ಯ ಪದವೀಧರರ ಕ್ಷೇತ್ರದಿಂದ ಬಲಿಷ್ಠ ಅಭ್ಯರ್ಥಿಯನ್ನು ನಮ್ಮಿಂದ ಹಾಕಲು ಆಗಲಿಲ್ಲ. ಕೊನೆ ಕ್ಷಣದಲ್ಲಿ ಒಬ್ಬರು ಲಾಯರ್‌ ಅವರನ್ನು ನಿಲ್ಲಿಸಿದ್ವಿ. ಗೆದ್ದ ಕಡೆಗಳೆಲ್ಲೆಲ್ಲ ದೊಡ್ಡ ಅಂತರದಲ್ಲಿ ಗೆದ್ದಿದ್ದೀವಿ. ನಾಲ್ಕೂ ಕಡೆಗಳಲ್ಲಿ ಈ ಮೊದಲು ಕಾಂಗ್ರೆಸ್‌ ಶೂನ್ಯದಲ್ಲಿತ್ತು, ಆದರೆ ಈ ಬಾರಿ ಎರಡು ಕಡೆ ಗೆದ್ದಿದ್ದೀವಿ.

ಸೋತ ಅಭ್ಯರ್ಥಿ ತಾನು ನ್ಯಾಯವಾಗಿ ಸೋತೆ ಎಂದು ಹೇಳುತ್ತಾರಾ? ನಮ್ಮ ಅಭ್ಯರ್ಥಿ ಒಂದು ಬಾರಿ ಗೆದ್ದಿದ್ದಕ್ಕೆ ಹಣ ಖರ್ಚು ಮಾಡಿ ಗೆದ್ದಿದ್ದು ಎನ್ನುವುದಾದರೆ ಈ ಹಿಂದೆ ಅರುಣ್‌ ಶಹಾಪುರ್‌ ಎರಡು ಬಾರಿ ಗೆದ್ದಿದ್ರಲ್ಲ ಎಷ್ಟು ಹಣ ಖರ್ಚು ಮಾಡಿ ಗೆದ್ದಿದ್ದಂತೆ? ಇದು ಮತದಾರರಿಗೆ ಅವಮಾನ ಮಾಡಿದಂತೆ ಆಗಲ್ವಾ? ಚುನಾವಣಾ ವ್ಯವಸ್ಥೆಯನ್ನು ಭ್ರಷ್ಟಗೊಳಿಸಿದವರು ಬಿಜೆಪಿಯವರು, ನಾವಲ್ಲ ಎಂದು ಸಿದ್ಧರಾಮಯ್ಯ ಕಿಡಿಕಾರಿದರು.

ಕೋಲಾರ, ಬಾದಾಮಿ, ಕೊಪ್ಪಳ, ವರುಣಾ, ಚಾಮರಾಜಪೇಟೆ ಈ ಎಲ್ಲಾ ಕಡೆ ನನಗೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಕರೆಯುತ್ತಿದ್ದಾರೆ. ಹತ್ತಾರು ಕಡೆ ಜನ ಕರೆಯುತ್ತಿದ್ದಾರೆ ಎಂದರೆ ನಾನು ಗೆಲ್ಲುತ್ತೇನೆ ಎಂದೇ ತಾನೇ ಕರೆಯುತ್ತಿರೋದು. ಕಾಲು ಎಳೆಯುವವರು ರಾಜಕೀಯದಲ್ಲಿ ಇದ್ದೇ ಇರುತ್ತಾರೆ. ನಮ್ಮ ಪಕ್ಷದಲ್ಲಿ ಯಾರೂ ಈ ತರದವರು ಇಲ್ಲ, ಯಾರನ್ನು ಕಂಡರೆ ಭಯ ಇರುತ್ತೆ ಅಂತವರ ಕಾಲೆಳೆಯೋಕೆ ಅಂತಲೇ ಪ್ರಯತ್ನ ಮಾಡುತ್ತಾರೆ. ನನ್ನ ರಾಜಕೀಯ ಕಂಡು ಹೊಟ್ಟೆ ಕಿಚ್ಚು ಪಡುವವರು ಮಾತ್ರ ಈ ರೀತಿ ಮಾಡುತ್ತಾರೆ. ನಮ್ಮ ಪಕ್ಷದಲ್ಲಿ ಎಲ್ಲರೂ ಅಭಿಮಾನದಿಂದ ಕಾಣ್ತಾರೆ, ಎಲ್ಲರೂ ನನ್ನನ್ನು ಪ್ರೀತಿಸುತ್ತಾರೆ. ನಮ್ಮ ಪಕ್ಷದಲ್ಲಿ ಯಾರೂ ನನ್ನ ವಿರೋಧಿಗಳಿಲ್ಲ.

ಬಿಜೆಪಿಯವರಂತೆ ನಮ್ಮ ಪಕ್ಷದವರು ಮಾತನಾಡಲ್ಲ ಎಂದು ನಾನು ಈ ಹಿಂದೆ ಹೇಳಿದ್ದೆ. ನಾನು ಏನಾದ್ರೂ ಮಾತನಾಡಿದ್ರೆ ಇಪ್ಪತ್ತು ಜನ ಬಿಜೆಪಿಯವರು ನನ್ನ ಮೇಲೆ ಬರ್ತಾರೆ. ಈ ರೀತಿ ನಮ್ಮವರು ಮಾತನಾಡಲ್ಲ ಎಂದು ಹೇಳಿದ್ದೆ ಅಷ್ಟೆ. ಬಿಜೆಪಿ ಅವರು ಸುಳ್ಳು ಹೇಳೋದರಲ್ಲಿ ಮೊದಲಿಗರು. ಬಿಜೆಪಿ ಮತ್ತು ಜೆಡಿಎಸ್‌ ನವರು ನನ್ನ ಸಂಪರ್ಕದಲ್ಲಿ ಇರೋದು ನಿಜ. ಅದನ್ನು ಈಗಲೇ ಹೇಳೋಕಾಗಲ್ಲ. ಮುಂದೆ ಸಮಯ ಬಂದಾಗ ಹೇಳುತ್ತೇನೆ ಎಂದರು.

ರಾಜಕೀಯ ದ್ವೇಷದಿಂದ ಸುಳ್ಳು ಮೊಕದ್ದಮೆ ಹಾಕಿ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಅವರಿಗೆ ಕಿರುಕುಳ ನೀಡುತ್ತಿದ್ದಾರೆ, ಪ್ರಜಾಪ್ರಭುತ್ವಕ್ಕೆ ನೇಣು ಹಾಕುತ್ತಿದ್ದಾರೆ. ಸಂವಿಧಾನದ ರೀತಿ ನಡೆದುಕೊಳ್ಳುತ್ತಿಲ್ಲ ಇದರ ವಿರುದ್ಧ ನಾವು ಹೋರಾಟ ಮಾಡುತ್ತಿದ್ದೇವೆ. ಇಂದು ಪ್ರಜಾಪ್ರಭುತ್ವದ ಕಗ್ಗೊಲೆ ಆಗುತ್ತಿದೆ.

ಎಐಸಿಸಿ ಕಚೇರಿಯನ್ನು ಒಂದು ರೀತಿ ವಶಕ್ಕೆ ಪಡೆದಂತೆ ಅಲ್ಲಿದ್ದವರನ್ನು ಆಚೆಗಟ್ಟಿ, ಹಲ್ಲೆ ಮಾಡಲು ಇವರಿಗೆ ಅಧಿಕಾರ ಕೊಟ್ಟಿದ್ದು ಯಾರು? ತುರ್ತು ಪರಿಸ್ಥಿತಿಯಲ್ಲೂ ಈ ರೀತಿ ಆಗಿರಲಿಲ್ಲ. ಯಾರು ಅನ್ಯಾಯದ ವಿರುದ್ಧ ಧ್ವನಿ ಎತ್ತುತ್ತಾರೆ ಅವರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ, ಇದಕ್ಕೆ ವಿರುದ್ಧವಾಗಿ ನಾವು ಪ್ರತಿಭಟನೆ ಮಾಡಿದ್ದು. ನಮಗೆ ರಾಜಭವನದ ಒಳಗೆ ಹೋಗಲು ಬಿಟ್ಟಿಲ್ಲ. ಪೊಲೀಸರು ಬಂಧಿಸಿ ಬಿಟ್ಟು ಕಳಿಸಿದ್ರು ಎಂದು ಸಿದ್ಧರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರದ ವೈಫಲ್ಯಗಳ ಬಗ್ಗೆ, ಬೆಲೆಯೇರಿಕೆ ವಿರುದ್ಧ, ಸಾಂಸ್ಕೃತಿಕ ದಾಳಿಯ ವಿರುದ್ಧ ಹೋರಾಟ ಮಾಡಿದ್ದು ನಾವೆ. ಹಿಜಾಬ್‌, ಹಲಾಲ್‌ ಮುಂತಾದ ಧಾರ್ಮಿಕ ವಿಚಾರಗಳನ್ನು ಅವರು ಮುನ್ನೆಲೆಗೆ ತಂದಾಗ ಹೋರಾಟ ಮಾಡಿದವರು ನಾವೆ. ಕಾಂಗ್ರೆಸ್‌ ಪಕ್ಷ ಒಗ್ಗೂಡಿ ಇವುಗಳ ವಿರುದ್ಧ ಹೋರಾಡಿದೆ ಎಂದರು.

Key words: pro-Congress-atmosphere – next election-Former CM- Siddaramaiah.