ಕೃಷಿ ಕ್ಷೇತ್ರವನ್ನೂ ಖಾಸಗೀಕರಣ ಮಾಡಲು ಹೊರಟಿದ್ದಾರೆ: ಇದು ರೈತರು, ಯುವಕರಿಗೆ ಆಶಾದಾಯಕ ಬಜೆಟ್ ಅಲ್ಲ- ಮಾಜಿ ಸಿಎಂ ಸಿದ್ಧರಾಮಯ್ಯ..

ಮೈಸೂರು,ಫೆ,1,2020(www.justkannada.in):  ಇಂದು ಮಂಡಿಸಿದ ಕೇಂದ್ರ ಬಜೆಟ್ ರೈತರು, ಯುವಕರಿಗೆ ಆಶಾದಾಯಕ ಬಜೆಟ್ ಅಲ್ಲ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಟೀಕಿಸಿದ್ದಾರೆ.

ಕೇಂದ್ರ ಬಜೆಟ್ ಬಗ್ಗೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಮಾಜಿ ಸಿಎಂ ಸಿದ್ಧರಾಮಯ್ಯ,  ಕೃಷಿ ಬೆಳವಣಿಗೆ ಶೇ. 2.5 ಮಾತ್ರ ಇದೆ. ಆದರೆ ಕೇಂದ್ರ ಸರ್ಕಾರ ರೈತರ ಆದಾಯ ದ್ವಿಗುಣಗೊಳಿಸುತ್ತೇವೆ ಅಂತ ಹೇಳುತ್ತಿದೆ. ರೈತರ ಆದಾಯ ದ್ವಿಗುಣ ಆಗಬೇಕಾದರೆ ಕೃಷಿ ಬೆಳವಣಿಗೆ ಕನಿಷ್ಠ ಶೇ.10 ರಷ್ಟು ಇರಬೇಕು. ಶೇ.10ರಷ್ಟು ಬೆಳವಣಿಗೆ ಆಗುವ ಯಾವುದೇ ಆಶಾ ಭಾವನೆ ಕಾಣುತ್ತಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ರೈತರ ಮೂಗಿಗೆ ತುಪ್ಪ ಸವರುತ್ತಿದೆ. ರೈತರ ಹೆಸರಿನಲ್ಲಿ ವರ್ಣರಂಜಿತ ಹೆಸರುಗಳ ಯೋಜನೆ ಘೋಷಿಸಲಾಗಿದೆ. ಕಿಸಾನ್ ಉಡಾನ್‌ನಿಂದ ಸಾಮಾನ್ಯ ರೈತರಿಗೆ ಅನುಕೂಲ ಆಗುತ್ತಾ ? ಎಂದು ಪ್ರಶ್ನಿಸಿದರು.

ಕೃಷಿ ಕ್ಷೇತ್ರವನ್ನೂ ಖಾಸಗೀಕರಣ ಮಾಡಲು ಹೊರಟಿದ್ದಾರೆ. ಭೂಮಿ ಗುತ್ತಿಗೆ, ಎಪಿಎಂಸಿ ಅಮೂಲಾಗ್ರ ಬದಲಾವಣೆ, ಮಾರುಕಟ್ಟೆ ಬದಲಾವಣೆ ಮಾಡುತ್ತೇವೆ ಅಂತ ಹೇಳಿದ್ದಾರೆ. ಇದೆಲ್ಲವೂ ಕೃಷಿ ವಲಯದ ಖಾಸಗೀಕರಣದ ಭಾಗ. ಎಲ್ಲ ರೈತರ ಬಳಿ ನೂರಾರು ಎಕರೆ ಜಮೀನು ಇರೋದಿಲ್ಲ. 1- 2 ಎಕರೆ ಜಮೀನು ಇರುವ ಸಣ್ಣ ರೈತರಿಗೆ ಪೂರಕವಾದ ಯಾವುದೇ ಯೋಜನೆ ರೂಪಿಸಿಲ್ಲ ಎಂದು ಸಿದ್ಧರಾಮಯ್ಯ ಆರೋಪಿಸಿದರು.

ನಿರ್ಮಾಣ, ಉತ್ಪಾದನಾ ವಲಯದಲ್ಲಿ ಹಿಂಜರಿತ ‌ಇದೆ. ಉದ್ಯೋಗ ಸೃಷ್ಟಿ ಆಗುತ್ತಿಲ್ಲ. ಐದು ವರ್ಷದಲ್ಲಿ 80 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಪ್ರಧಾನಿ ಮೋದಿ ಹೇಳಿದ್ದರು‌. ಆದರೆ ಉದ್ಯೋಗದ ಪ್ರಮಾಣ ಇಳಿಕೆ ಆಗುತ್ತಿದೆ. ಪ್ರತಿ ಬಜೆಟ್‌ನಲ್ಲೂ ಉದ್ಯೋಗ ಇಳಿಕೆ ಗೊತ್ತಾಗುತ್ತಿದೆ. ರಾಜ್ಯಗಳ ಪಾಲಿನ ತೆರಿಗೆ ಮೊತ್ತವೂ ಖೋತಾ ಆಗಿದೆ. 18ನೇ ಹಣಕಾಸು ಯೋಜನೆಯ ಪ್ರಕಾರ ತೆರಿಗೆ ಹಣ ಸಂದಾಯ ಆಗುತ್ತಿಲ್ಲ‌ ಎಂದು ಸಿದ್ಧರಾಮಯ್ಯ ಕಿಡಿಕಾರಿದರು.

Key words: privatize – agriculture -not -budget – farmers- young people-mysore-Former CM- Siddaramaiah