Saturday, October 3, 2026

BDA Apartments

You should utilize any platform that you get to learn: Nagathihalli Chandrashekar BDA JK_Adv BDA Adv
Home Crime ಮೈಸೂರು ಜೈಲಿನಲ್ಲಿ ಕೈದಿಗಳು ಎಸೆನ್ಸ್ ಕುಡಿದಿದ್ದ ಪ್ರಕರಣ: ಮೃತರ ಸಂಖ್ಯೆ 3ಕ್ಕೆ ಏರಿಕೆ

ಮೈಸೂರು ಜೈಲಿನಲ್ಲಿ ಕೈದಿಗಳು ಎಸೆನ್ಸ್ ಕುಡಿದಿದ್ದ ಪ್ರಕರಣ: ಮೃತರ ಸಂಖ್ಯೆ 3ಕ್ಕೆ ಏರಿಕೆ

ಮೈಸೂರು,ಜನವರಿ,8,2025 (www.justkannada.in):  ಜೈಲಿನಲ್ಲಿ ಎಸೆನ್ಸ್ ಕುಡಿದು ಆಸ್ಪತ್ರೆಗೆ ದಾಖಲಾಗಿದ್ದ ಪ್ರಕರಣ ಸಂಬಂಧ ಇದೀಗ ಮತ್ತೊಬ್ಬ ಕೈದಿಯೂ ಸಾವನ್ನಪ್ಪಿದ್ದು ಸಾವಿನ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.

ಕಿಕ್‌ಗಾಗಿ ಎಸೆನ್ಸ್ ಕುಡಿದಿದ್ದ ಮೂವರು ಕೈದಿಗಳಾದ ಚಾಮರಾಜನಗರದ ನಾಗರಾಜು, ಮೈಸೂರಿನ ಸಾತಗಳ್ಳಿಯ ಮಾದೇಶ್, ಇದೀಗ ರಮೇಶ್ ಕೂಡ ಸಾವನ್ನಪ್ಪಿದ್ದಾರೆ .

ಹೊಸ ವರ್ಷ ಹಿನ್ನೆಲೆ ಕೇಕ್ ತಯಾರಿಸಲು ತರಿಸಿದ್ದ ಎಸೆನ್ಸ್ ಕುಡಿದು ಮೂವರು ಕೈದಿಗಳು ಅಸ್ವಸ್ಥರಾಗಿದ್ದರು. ಮೂವರನ್ನ ಕೆಆರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ  ಕೈದಿ ಮಾದೇಶ್ ಮೃತಪಟ್ಟಿದ್ದು,  ರಮೇಶ್ ಹಾಗೂ ನಾಗರಾಜ್ ಸ್ಥಿತಿ ಗಂಭೀರವಾಗಿತ್ತು. ನಂತರ ನಾಗರಾಜ್ ಸಹ ಸಾವನ್ನಪ್ಪಿದ್ದು ಇದೀಗ ಚಿಕಿತ್ಸೆ ಫಲಕಾರಿಯಾಗದೇ ಕೈದಿ ರಮೇಶ್ ಸಹ ಮೃತಪಟ್ಟಿದ್ದಾರೆ.

ಬೇಕರಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಮೂವರು ಹೊಸವರ್ಷದ ಕೇಕ್ ತಯಾರಿಸಲು ತರಿಸಲಾಗಿದ್ದ ಎಸೆನ್ಸ್ ಕುಡಿದಿದ್ದರು. ಡಿಸೆಂಬರ್ 28ರಂದೇ ಎಸೆನ್ಸ್ ಕುಡಿದು ಯಾರಿಗೂ ಹೇಳದೆ ಸುಮ್ಮನಾಗಿದ್ದರು. ನಂತರ ಮೂವರಿಗೂ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆ ಜೈಲಿನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಹೊಟ್ಟೆ ನೋವು ಕಡಿಮೆಯಾಗದ ಹಿನ್ನೆಲೆ ಕೆ ಆರ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿಯೂ ಕೈದಿಗಳು ವಿಷಯ ಮುಚ್ಚಿಟ್ಟಿದ್ದರು. ವೈದ್ಯರು ಈ ಬಗ್ಗೆ ಪ್ರಶ್ನಿಸಿದಾಗ ಮೂವರು ಸತ್ಯ ಹೇಳಿದ್ದಾರೆ.

ಆದರೆ ಅದಗಲೇ ಸಾಕಷ್ಟು ವಿಳಂಬವಾದ ಹಿನ್ನೆಲೆ, ಚಿಕಿತ್ಸೆ ಫಲಕಾರಿಯಾಗದೆ ಮಾದೇಶ ನಾಗರಾಜು ಸಾವನ್ನಪ್ಪಿದ್ದು ಇಂದು  ರಮೇಶ್ ಕೂಡ  ಮೃತಪಟ್ಟಿದ್ದಾರೆ. ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತಪಟ್ಟ ಕೈದಿ ನಾಗರಾಜು  ಅಣ್ಣನ ಮಗ ಮಲ್ಲು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು,  ಡಿಸೆಂಬರ್ 26 ರಂದು ನಮ್ಮ ಚಿಕ್ಕಪ್ಪನಿಗೆ ಕಿಡ್ನಿ ಫೇಲ್ಯೂರ್ ಎಂದು ಆಸ್ಪತ್ರೆಗೆ ಸೇರಿಸಿದ್ದರು. ಆಸ್ಪತ್ರೆಯಲ್ಲಿ ನಾನು ನಮ್ಮ ಚಿಕ್ಕಪ್ಪನನ್ನ ಕೇಳಿದೆ. ಕ್ರಿಸ್ಮಸ್ ಗೆ ತಯಾರಿಸಿದ್ದ ಕೇಕ್ ತಿಂದು ಬಿಸಿಬೇಳೆ ಬಾತ್ ತಿಂದಿದ್ದರಂತೆ. ಕೇಕ್ ಹಾಗೂ ಬಿಸಿಬೇಳೆ ಬಾತ್ ತಿಂದ ನಂತರ ಹೊಟ್ಟೆ ನೋವು ಬಂದಿದೆ. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

ನಮ್ಮ ತಂದೆ ಜೊತೆಗೆ ಇನ್ನೂ ಇಬ್ಬರು ಅಸ್ವಸ್ಥರಾಗಿದ್ದರು. ನಿನ್ನೆ ಗುಂಡ್ಲುಪೇಟೆಯವರು ಸಾವನ್ನಪ್ಪಿದ್ರು. ಮತ್ತೊಬ್ಬ ಹಾಸನ ಮೂಲದ ಖೈದಿ ಕೂಡ ಸಿರಿಯಸ್ ಇದ್ದಾರೆ. ಯಾಕಾಗಿದೆ, ಏನಾಗಿದೆ ನಮಗೆ ಗೊತ್ತಾಗುತ್ತಿಲ್ಲ. ಘಟನೆಗೆ ಕಾರಣ ಏನು ಎಂಬುದನ್ನ ಪೊಲೀಸರೆ ತಿಳಿಸಬೇಕು. ನಮ್ಮ ಚಿಕ್ಕಮ್ಮ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ನಮ್ಮ ಚಿಕ್ಕಪ್ಪ ಜೈಲು ಸೇರಿದ್ದರು. ಚಾಮರಾಜನಗರ ಜೈಲಿನಲ್ಲಿ 6 ವರ್ಷ ಇದ್ದು, 7 ತಿಂಗಳ ಹಿಂದೆಯಷ್ಟೇ ಮೈಸೂರು ಜೈಲಿಗೆ ಬಂದಿದ್ದರು. ಈಗ ಈ ರೀತಿ ಘಟನೆ ಆಗಿದೆ ಎಂದು ಮಲ್ಲು ತಿಳಿಸಿದ್ದಾರೆ.

Key words: Three prisoners,  die, drinking, essence, Mysore jail