ಮೈಸೂರು,ಸೆಪ್ಟಂಬರ್,11,2026 (www.justkannada.in): ಮೈಸೂರು ಕೇಂದ್ರ ಕಾರಾಗೃಹದ ಮೇಲೆ ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ದಿಢೀರ್ ಕಾರ್ಯಾಚರಣೆ ನಡೆದಿದೆ. ಜೈಲಿನ ಪ್ರತಿಯೊಂದು ಬ್ಯಾರೆಕ್ ಗೂ ತೆರಳಿ ಪರಿಶೀಲನೆ ನಡೆಸಿದ ಡಿಜಿಪಿ, ಅಧಿಕಾರಿಗಳಿಂದ ಜೈಲಿನೊಳಗಿನ ವ್ಯವಸ್ಥೆ ಹಾಗೂ ಮೊಬೈಲ್ ಬಳಕೆಗೆ ಸಂಬಂಧಿಸಿದಂತೆ ಮಾಹಿತಿ ಪಡೆದುಕೊಂಡರು.
ಕಾರ್ಯಾಚರಣೆ ಬಳಿಕ ಮಾತನಾಡಿದ ಅಲೋಕ್ ಕುಮಾರ್, ಜೈಲಿನ ಕೆಲವು ಭಾಗಗಳಲ್ಲಿ ಮೊಬೈಲ್ ಸಿಗ್ನಲ್ ಪತ್ತೆಯಾಗುತ್ತಿದೆ. ಹೀಗಾಗಿ ತುರ್ತಾಗಿ ಜಾಮರ್ ಅಳವಡಿಸುವ ಅಗತ್ಯವಿದೆ ಎಂದು ಹೇಳಿದರು.
ಮೊಬೈಲ್ ಗಳು ಜೈಲಿನೊಳಗೆ ಪತ್ತೆಯಾಗುತ್ತಿರುವ ಕುರಿತು ಹಲವು ದೂರುಗಳು ಬಂದಿದ್ದು, ಅವುಗಳ ಪರಿಶೀಲನೆಗಾಗಿ ತಾವು ಖುದ್ದು ಭೇಟಿ ನೀಡಿರುವುದಾಗಿ ತಿಳಿಸಿದರು. “ಖೈದಿಗಳು ಮೊಬೈಲ್ ಇಟ್ಟುಕೊಳ್ಳುವುದು ತಪ್ಪು; ಅದಕ್ಕೆ ಸಹಕಾರ ನೀಡುವವರೂ ತಪ್ಪಿತಸ್ಥರು. ಇಬ್ಬರ ಮೇಲೂ ಕ್ರಮ ಕೈಗೊಳ್ಳುತ್ತೇವೆ” ಎಂದು ಎಚ್ಚರಿಕೆ ನೀಡಿದರು.
ಇದೇ ವೇಳೆ ಪರಪ್ಪನ ಅಗ್ರಹಾರ ಜೈಲಿನಲ್ಲಿನ ಮೊಬೈಲ್ ಅಕ್ರಮದ ಬಗ್ಗೆಯೂ ಮಾಹಿತಿ ನೀಡಿದ ಅವರು, ಕಳೆದ ಎಂಟು ತಿಂಗಳಲ್ಲಿ ಸುಮಾರು 300 ಮೊಬೈಲ್ ಗಳನ್ನು ಜಪ್ತಿ ಮಾಡಲಾಗಿದೆ ಎಂದರು. ಇನ್ನೂ ಐದಾರು ಮೊಬೈಲ್ ಗಳು ಇರುವ ಶಂಕೆಯಿದ್ದು, ಅವುಗಳನ್ನು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.
ಪ್ರತಿದಿನ ಸುಮಾರು 200 ಮಂದಿ ಜೈಲಿನೊಳಗೆ ಪ್ರವೇಶಿಸುವುದರಿಂದ ಸಂಪೂರ್ಣ ತಪಾಸಣೆ ಸವಾಲಾಗಿದೆ. ಕೆಲವರು ಸಿಮ್ ಗಳನ್ನು ನುಂಗಿಕೊಂಡು ಅಥವಾ ಮೊಬೈಲ್ ಗಳನ್ನು ದೇಹದೊಳಗೆ ಅಡಗಿಸಿಕೊಂಡು ತರುವ ಪ್ರಕರಣಗಳೂ ಇವೆ. ಹೀಗಾಗಿ ಪ್ರಯತ್ನಗಳ ನಡುವೆಯೂ ಮೊಬೈಲ್ ಗಳು ಜೈಲಿನೊಳಗೆ ಬರುತ್ತಿವೆ ಎಂದು ಅಲೋಕ್ ಕುಮಾರ್ ವಿವರಿಸಿದರು.
“ಜೈಲಿನಲ್ಲಿ ಶೇ.100ರಷ್ಟು ಮೊಬೈಲ್ ಇಲ್ಲ ಎಂದು ಹೇಳಲು ನಾನು ಸಿದ್ಧನಿಲ್ಲ. ಆದರೆ ನಿಯಂತ್ರಣಕ್ಕೆ ಅಗತ್ಯ ಕ್ರಮಗಳು ನಡೆಯುತ್ತಿವೆ. ವ್ಯವಸ್ಥೆಯನ್ನು ಸರಿಪಡಿಸುತ್ತೇನೆ” ಎಂದು ಡಿಜಿಪಿ ಅಲೋಕ್ ಕುಮಾರ್ ಸ್ಪಷ್ಟಪಡಿಸಿದರು.
ಇನ್ನು ಪ್ರಜ್ವಲ್ ರೇವಣ್ಣ ಅವರ ಮೊಬೈಲ್ ಪತ್ತೆಯಾದ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಪ್ರಕರಣ ಈಗ ಪೊಲೀಸರ ತನಿಖೆಯಲ್ಲಿದೆ. ತನಿಖೆ ನಡೆಯುತ್ತಿರುವುದರಿಂದ ಸದ್ಯಕ್ಕೆ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿದರು.










