ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಡಿಜಿಟಲ್ ಗ್ರಂಥಾಲಯಗಳ ಸ್ಥಾಪನೆಗೆ ಸಿದ್ಧತೆ

ಬೆಂಗಳೂರು, ಜನವರಿ 31, 2023(www.justkannada.in): ಡಿಜಿಟಲ್ ಗ್ರಂಥಾಲಯಗಳ ಯೋಜನೆಗೆ ದೊರೆತಂತಹ ಪ್ರತಿಕ್ರಿಯೆಯಿಂದ ಪ್ರೇರಣೆಗೊಂಡಿರುವ ಗ್ರಂಥಾಲಯಗಳ ಇಲಾಖೆಯು, ಅಂದಾಜು ರೂ.೪ ಕೋಟಿ ಮೊತ್ತದಲ್ಲಿ ರಾಜ್ಯದಾದ್ಯಂತ ಗ್ರಾಮೀಣ ಪ್ರದೇಶಗಳು ಹಾಗೂ ಕೊಳಗೇರಿ ಪ್ರದೇಶಗಳಲ್ಲಿರುವಂತಹ ೧೭೨ ಗ್ರಂಥಾಲಯಗಳನ್ನು ಡಿಜಿಟಲ್ ಗ್ರಂಥಾಲಯಗಳನ್ನಾಗಿ ಪರಿವರ್ತಿಸಲು ಸಿದ್ಧತೆ ನಡೆಸಿದೆ.

ಮೊದಲ ಹಂತದಲ್ಲಿ ರಾಜ್ಯದ ೨೭೨ ಗ್ರಂಥಾಲಯಗಳನ್ನು ಡಿಜಿಟಿಲ್ ಗ್ರಂಥಾಲಯಗಳನ್ನಾಗಿ ಪರಿವರ್ತಿಸಲಾಗಿತ್ತು. ನಂತರ ಎರಡನೇ ಹಂತದಲ್ಲಿ ೧೦೦ ಗ್ರಂಥಾಲಯಗಳು ಪರಿವರ್ತನೆಗೊಂಡಿದ್ದವು. ಈಗ ಮೂರನೇ ಹಂತದಲ್ಲಿ ಇಲಾಖೆಯು ಗ್ರಾಮೀಣ ಪ್ರದೇಶಗಳ ಕಡೆ ಗಮನ ಹರಿಸಿದೆ.

ಈ ಯೋಜನೆಯನ್ನು 2020ರಲ್ಲಿ ಜಾರಿಗೊಳಿಸಲಾಯಿತು. ಪ್ರಸ್ತುತ ಅಂದರೆ ೨ ವರ್ಷ, ೧೦ ತಿಂಗಳಲ್ಲಿ ೩.೨೧ ಕೋಟಿ ಚಂದಾದಾರರಿದ್ದು, ೧.೭೩ ಕೋಟಿಯಷ್ಟು ಇ-ಕಂಟೆಂಟ್ (ವಿಷಯವಸ್ತು) ಅನ್ನು ಯಶಸ್ವಿಯಾಗಿ ಸೇರ್ಪಡೆಗೊಳಿಸಲಾಗಿದೆ.

“ಕರ್ನಾಟಕಕ್ಕೆ ಆರಂಭದಲ್ಲಿ ನೀಡಿದ್ದಂತಹ ಗುರಿ ಕನಿಷ್ಠ ೧೦ ಲಕ್ಷ ಚಂದಾದಾರರು. ಆದರೆ, ನಮಗೆ ಸಿಕ್ಕಂತಹ ಪ್ರತಿಕ್ರಿಯೆ ಅದ್ವಿತೀಯವಾಗಿತ್ತು, ಎಲ್ಲಾ ದಾಖಲೆಗಳನ್ನೂ ಮುರಿಯಿತು. ಇದು ನಮಗೆ ಇನ್ನೂ ಹೆಚ್ಚಿನ ಸಂಖ್ಯೆಯ ಗ್ರಂಥಾಲಯಗಳನ್ನು ಡಿಜಿಟಲ್‌ ಗೆ ಪರಿವರ್ತಿಸಲು ಪ್ರೇರೇಪಿಸಿದೆ,” ಎಂದು ಗ್ರಂಥಾಲಯಗಳ ಇಲಾಖೆಯ ನಿರ್ದೇಶಕ ಸತೀಶ್ ಕುಮಾರ್ ಎಸ್. ಹೊಸಮನಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಇಲಾಖೆಯು, ಬಳಕೆದಾರರಿಗೆ ದೂರದಿಂದಲೇ ವಿಷಯವಸ್ತುವನ್ನು ಪಡೆಯಲು ಅನುಕೂಲ ಮಾಡಿಕೊಡಲು https://www.karnatakadigitalpubliclibrary.org/ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಿದೆ, ಹಾಗೂ ಡಿಜಿಟಲ್ ರೂಪದ ಗ್ರಂಥಾಲಯಗಳ ಸೌಲಭ್ಯರಹಿತರಿಗಾಗಿ ಗ್ರಂಥಾಲಯಗಳನ್ನು ಗಣಕಯಂತ್ರಗಳು ಹಾಗೂ ಲ್ಯಾಪ್‌ ಟಾಪ್‌ಗಳೊಂದಿಗೆ ಉನ್ನತೀಕರಿಸಿದೆ.

“ನಾವು ಎಲ್ಲಾ ವಿಷಯವಸ್ತುವನ್ನೂ ಸಹ ಕ್ಲೌಡ್‌ನಲ್ಲಿ ಹೋಸ್ಟ್ ಮಾಡುತ್ತೇವೆ ಹಾಗೂ ಉಪಕರಣಗಳನ್ನು ಖರೀದಿಸುವುದು ಸಾಧ್ಯವಾಗದಿರುವಂತಹವರಿಗಾಗಿ, ಪರಿವರ್ತಿಸಿಲಾಗಿರುವಂತಹ ಗ್ರಂಥಾಲಯಗಳಲ್ಲಿ ಲ್ಯಾಪ್‌ ಟಾಪ್‌ ಗಳು ಹಾಗೂ ಇಂಟೆರ್‌ ನೆಟ್ ಸಂಪರ್ಕವನ್ನು ಕಲ್ಪಿಸುತ್ತಿದ್ದೇವೆ,” ಎಂದು ಹೊಸಮನಿ ವಿವರಿಸಿದರು.

ಈ ವಿಷಯವಸ್ತು ಇ-ಪುಸ್ತಕಗಳು, ನಿಯತಕಾಲಿಕೆಗಲು, ಹಾಗೂ ವೀಡಿಯೋಗಳ ರೂಪದಲ್ಲಿ ಲಭ್ಯವಿದ್ದು, ಕನ್ನಡ, ಇಂಗ್ಲೀಷ್, ತಮಿಳು, ತೆಲುಗು ಹಾಗೂ ಇನ್ನಿತರೆ ಭಾಷೆಗಳಲ್ಲಿ ದೊರೆಯುತ್ತವೆ.

ಮುಂದುವರೆಯುತ್ತಾ ಹೊಸಮನಿ ಅವರು, ನಮ್ಮ ಈ ಉಪಕ್ರಮವು ಅನೇಕ ಪ್ರಕಾಶಕರು, ಸಂಪಾದಕರನ್ನು ಆಕರ್ಷಿಸಿದ್ದು, ಅವರು ಸ್ವಯಂಪ್ರೇರಿತವಾಗಿ ಡಿಜಿಟಲ್ ಮಾದರಿಯಲ್ಲಿ ಬಳಸಲು ಪುಸ್ತಕಗಳನ್ನು ದಾನ ನೀಡುತ್ತಿದ್ದಾರೆ. ಈ ಹೊಸ ರೂಪದ ಗ್ರಂಥಾಲಯ, ಅನೇಕರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧವಾಗಲು ಬಹಳ ನೆರವಾಗಿವೆ ಎಂದಿದ್ದಾರೆ.

ಡಿಜಿಟಲ್ ಗ್ರಂಥಾಲಯಗಳಿಗೆ ಸಾರ್ವಜನಿಕರಿಂದ ಅದ್ಭುತ ಪ್ರತಿಕ್ರಿಯೆ ದೊರೆತಿದ್ದರೂ ಸಹ ಅಗತ್ಯ ಹಣ ಇನ್ನೂ ಒಂದು ಕಾಳಜಿಯಾಗಿದೆ. “ಸಾಂಪ್ರದಾಯಿಕ ಗ್ರಂಥಾಲಯಗಳನ್ನು ಡಿಜಿಟಲ್ ರೂಪಕ್ಕೆ ಪರಿವರ್ತಿಸುವುದು ಬಂಡವಾಳದ ಅಗತ್ಯವಿರುವಂತಹ ಯೋಜನೆಯಾಗಿದೆ. ಪ್ರಸ್ತುತ ಬಹುಪಾಲು ಕೆಲಸಗಳನ್ನು ಭಾರತ ಸರ್ಕಾರ ಹಾಗೂ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯಿತಿ ರಾಜ್ (ಆರ್‌ಡಿಪಿಆರ್) ಇಲಾಖೆಯಡಿ ಲಭ್ಯವಾಗುತ್ತಿರುವ ಹಣದಲ್ಲಿ ಪೂರೈಸಲಾಗುತ್ತಿದೆ,” ಎಂದು ಗ್ರಂಥಾಲಯಗಳ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಹಲವು ಸರ್ಕಾರಿ ಸಂಸ್ಥೆಗಳು ಗ್ರಂಥಾಲಯ ಕರವನ್ನು ಪಾವತಿಸಿಲ್ಲ. ಇದರಿಂದಾಗಿ ಇಲಾಖೆಯ ಆದಾಯ ಕಡಿಮೆಯಾಗಿದ್ದು, ಸರ್ಕಾರದ ನಿಧಿಯನ್ನು ಅವಲಂಭಿಸುವಂತಾಗಿದೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: Preparation -establishment -digital libraries – rural areas