ಅಗ್ನಿ ದುರಂತಗಳು ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮ ಅಗತ್ಯ: ಕಂದಾಯ ಸಚಿವ ಕೃಷ್ಣ ಬೈರೇಗೌಡ

ಬೆಂಗಳೂರು, ಅಕ್ಟೋಬರ್, 30,2023(www.justkannada.in): ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ಅಗ್ನಿ ದುರಂತಗಳಿಂದ ಪ್ರಾಣಾಪಾಯಗಳು ಹೆಚ್ಚುತ್ತಿರುವ ಹಿನ್ನೆಲೆ ಜನಸಾಮಾನ್ಯರಲ್ಲೂ ಆತಂಕ ಮನೆಮಾಡಿದ್ದು, ಮುಂದಿನದಿಗಳಲ್ಲಿ ಅಗ್ನಿ ದುರಂತಗಳು ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಅಗ್ನಿ ಶಾಮಕದಳವನ್ನು  ಉನ್ನತೀಕರಣಗೊಳಿಸಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಸೂಚಿಸಿದರು.

ವಿಕಾಸಸೌಧದ ಕಂದಾಯ ಇಲಾಖೆ ಸಚಿವರ ಕಚೇರಿಯಲ್ಲಿ ಅಗ್ನಿ ಶಾಮಕದಳ ಪೊಲೀಸ್ ಮಹಾ ನಿರ್ದೇಶಕರಾದ ಕಮಲ್ ಪಂತ್ ಅವರ ಜೊತೆಗಿನ ಸಭೆಯಲ್ಲಿ ಮಾತನಾಡಿದ ಸಚಿವ ಕೃಷ್ಣಭೈರೇಗೌಡ,  ಕಳೆದ 20 ದಿನಗಳ ಅವಧಿಯಲ್ಲಿ ಬೆಂಗಳೂರಿನಲ್ಲೇ ಮೂರು ಕಡೆಗಳಲ್ಲಿ ಅಗ್ನಿ ಅನಾಹುತಗಳು ಸಂಭವಿಸಿವೆ. ನಗರ ಪ್ರದೇಶಗಳೂ ಸೇರಿದಂತೆ ರಾಜ್ಯಾದ್ಯಂತ ಅಗ್ನಿ ದುರಂತಗಳು ಸಂಭವಿಸಿದಂತೆ ಅಗ್ನಿಶಾಮಕ ದಳ ತಡೆಯುವಂತಾಗಬೇಕು ಎಂದು ಹೇಳಿದರು.

ಅತ್ತಿಬೆಲೆ ಪಟಾಕಿ ಗೋದಾಮಿನ ದುರಂತದಲ್ಲಿ ತಮಿಳುನಾಡು ಮೂಲದ 13 ಕಾರ್ಮಿಕರು ಮೃತಪಟ್ಟಿದ್ದರು, ಅಕ್ಟೋಬರ್ 19 ರಂದು ಕೋರಮಂಗಲದ ಮಡ್‌ ಪೈಪ್ ಅನ್ನೋ ರೆಸ್ಟೋಕೆಫೆ ಅಗ್ನಿ ದುರಂತದಲ್ಲಿ ಇಬ್ಬರು ಮೃತಪಟ್ಟು, ಹಲವರು ಗಾಯಗೊಂಡಿದ್ದರು. ಹಜ್ ಭವನದ ಬೆಂಕಿ ಆಹುತಿಗೆ, ರೂ 3 ಕೋಟಿ ನಷ್ಟವಾಗಿದೆ ಎಂದು ತಿಳಿಸಿದ ಸಚಿವ ಕೃಷ್ಣಬೈರೇಗೌಡ, ಇಂತಹ ದುರಂತಗಳ ಕಾರಣ, ಇದನ್ನು ತಡೆಯಲು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಅಗ್ನಿಶಾಮಕ ದಳ ಚಿಂತನೆ ನಡೆಸಬೇಕು ಎಂದರು.

ಅಗ್ನಿಶಾಮಕ ದಳದ ಉನ್ನತೀಕರಣಗಳ ಬಗ್ಗೆಯೂ ಗಮನವಹಿಸುವ ಜೊತೆಗೆ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಅನುಮತಿ ನೀಡುವಾಗಲೇ ಅಗ್ನಿ ದುರಂತ ತಡೆಗೆ ತೆಗೆದುಕೊಳ್ಳಲಾಗಿರುವ ಕ್ರಮಗಳನ್ನು ಪರಿಶೀಲಿಸಿ, ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಬೇಕು ಎಂದು ಸಚಿವ ಕೃಷ್ಣಬೈರೇಗೌಡ ಅಧಿಕಾರಿಗಳಿಗೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಅಗ್ನಿಶಾಮಕ ದಳದ ಉನ್ನತೀಕರಣ ಹಾಗೂ ಹೊಸ ಅಗ್ನಿಶಾಮಕ ದಳಗಳನ್ನು ಸ್ಥಾಪಿಸುವ ಕುರಿತ ಕ್ರಿಯಾ ಯೋಜನೆ ಮಂಡಿಸಿದ ಅಗ್ನಿಶಾಮಕ ದಳ ಪೊಲೀಸ್ ಮಹಾ ನಿರ್ದೇಶಕ ಕಮಲ್ ಪಂತ್ ಅವರು ಉಡುಪಿ ಜಿಲ್ಲೆಯ ಮಣಿಪಾಲ್, ದಾವಣಗೆರೆಯ-ನ್ಯಾಮತಿ, ವಿಜಯಪುರ ಜಿಲ್ಲೆಯ ನಿಡಗುಂದಿ-ಬಬಲೇಶ್ವರ್, ರಾಯಚೂರಿನ ಮಸ್ಕಿ, ಬೆಳಗಾವಿಯ ಮುದಲಗಿ, ಬಳ್ಳಾರಿಯ ಕಂಪ್ಲಿ ಹಾಗೂ ಕಲಬುರಗಿ ಷಹಾಬಾದ್ ಭಾಗದಲ್ಲಿ ನೂತನ ಅಗ್ನಿಶಾಮಕ ದಳ ಸ್ಥಾಪಿಸುವ ಸಂಬಂಧ ಯೋಜನೆ ಮಂಡಿಸಿದರು ಹಾಗೂ ಬೆಂಗಳೂರು ಸೇರಿದಂತೆ ನಗರ ಭಾಗದಲ್ಲಿ ಸಂಭವಿಸುತ್ತಿರುವ ಅಗ್ನಿ ಅವಘಡಗಳ ತಡೆಗೆ ಏನೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವ ಕುರಿತು ಶೀಘ್ರ ಇಲಾಖೆಗೆ ವರದಿ ನೀಡುವುದಾಗಿ ಎಂದು ತಿಳಿಸಿದರು.

ಸಭೆಯಲ್ಲಿ ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಪ್ರಧಾನ ಕಾರ್ಯದರ್ಶಿ ವಿ. ರಶ್ಮಿ ಮಹೇಶ್ ಸೇರಿದಂತೆ ಅಗ್ನಿಶಾಮಕ ದಳದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Key words: Precautionary -measures – prevent -fire disasters- Minister -Krishna Byre Gowda