Wednesday, July 29, 2026

BDA Apartments

Home Front Page ರಾಜಕೀಯ ಅಲೆಮಾರಿ ಎಂಬ ಶ್ರೀನಿವಾಸ್ ಪ್ರಸಾದ್ ಟೀಕೆಗೆ ತಿರುಗೇಟು: ಹಣದ ಆಮಿಷ ಒಡ್ಡಿದ್ದ ಬಗ್ಗೆ ಹೊಸ...

ರಾಜಕೀಯ ಅಲೆಮಾರಿ ಎಂಬ ಶ್ರೀನಿವಾಸ್ ಪ್ರಸಾದ್ ಟೀಕೆಗೆ ತಿರುಗೇಟು: ಹಣದ ಆಮಿಷ ಒಡ್ಡಿದ್ದ ಬಗ್ಗೆ ಹೊಸ ಬಾಂಬ್ ಸಿಡಿಸಿದ ಹೆಚ್. ವಿಶ್ವನಾಥ್

ಮೈಸೂರು,ಡಿಸೆಂಬರ್,15,2022(www.justkannada.in): ರಾಜಕೀಯ ಅಲೆಮಾರಿ ಎಂದು ಕಟು ಟೀಕೆ ಮಾಡಿದ್ದ ಸಂಸದ ಶ್ರಿನಿವಾಸ್ ಪ್ರಸಾದ್ ಅವರಿಗೆ ತಿರಗೇಟು ನೀಡಿದ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್, ನೀವು ಒಂದೇ ಪಕ್ಷವನ್ನು ಎರಡೆರಡು ಬಾರಿ ಸೇರ್ಪಡೆಯಾಗಿದ್ದೀರಿ. ನೀವು ಅಲೆಮಾರಿಗಳ ರಾಜ ಎಂದು ಕಿಡಿಕಾರಿದರು.

ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಮಾಜಿ ಸಚಿವ ಎಚ್. ವಿಶ್ವನಾಥ್, ನಾನು ಹಾಗು ಶ್ರೀನಿವಾಸಪ್ರಸಾದ್ ಹಳೆಯ ಸ್ನೇಹಿತರು, ಬಹುಕಾಲದ ಒಡನಾಡಿಗಳು. ಅದೆಲ್ಲವನ್ನು ಮರೆತು ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ರನ್ನು ನಾನು ಭೇಟಿ ಮಾಡಿದ್ದನ್ನೇ ಘೋರ ಅಪರಾಧ ಎಂಬಂತೆ ಶ್ರೀನಿವಾಸ ಪ್ರಸಾದ್ ಬಿಂಬಿಸುತ್ತಿರುವುದು ಅವರ ವ್ಯಕ್ತಿತ್ವಕ್ಕೆ ಸರಿಯಲ್ಲ. ಯಾರನ್ನು ಮೆಚ್ಚಿಸಲು ನನ್ನ ವಿರುದ್ದ ಮುಗಿಬಿದ್ದಿದ್ದೀರಿ. ಸಂಸತ್ ಸದಸ್ಯರಾಗಿರುವ ನೀವು ನಿಮ್ಮ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಗಮನ ನೀಡುವ ಬದಲು ಏಕಾಏಕಿ ನನ್ನ ವಿರುದ್ಧ ಏಕೆ ತಿರುಗಿ ಬಿದ್ದಿದ್ದೀರಿ. ಸದ್ಯದಲ್ಲೇ ಸಚಿವ ಸಂಪುಟ ವಿಸ್ತರಣೆ ಆಗ್ತಿದೆ, ಆ ವೇಳೆ ನಂಜನಗೂಡು ಕ್ಷೇತ್ರದ ಶಾಸಕರಾಗಿರುವ ನಿಮ್ಮ ಅಳಿಯನಿಗೆ ಅವಕಾಶ ಸಿಗಲೆಂದು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಟಿ ನರಸೀಪುರ ಕ್ಷೇತ್ರದಲ್ಲಿ ನಿಮ್ಮ ಮಗಳಿಗೆ ಟಿಕೆಟ್ ಸಿಗಲೆಂದು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದಲ್ಲಿ ನಿಮ್ಮ ಮತ್ತೊಬ್ಬ ಅಳಿಯನಿಗೆ ಟಿಕೆಟ್ ಕೊಡಿಸುವ ಸಲುವಾಗಿ ನನ್ನನ್ನು ಈ ರೀತಿ ಟೀಕಿಸಿದ್ದೀರಾ ಶ್ರೀನಿವಾಸಪ್ರಸಾದ್ ಅವರೇ. ನೀವು ಹುಟ್ಟಿ ಬೆಳೆದ ಅಶೋಕಪುರಂಗೆ ನಿಮ್ಮ ಕೊಡುಗೆಯಾದರೂ ಏನು? ಯಾರಿಗೋ ಕಲ್ಲು ಹೊಡೆದರೇ ಅದು ಮತ್ತೆ ನಿಮಗೇ ಹೊಡೆಯತ್ತದೇ ಎಂಬುದನ್ನು ಮರೆಯಬೇಡಿ ಶ್ರೀನಿವಾಸಪ್ರಸಾದ್ ಅವರೇ ಎಂದು ಕುಟುಕಿದರು.

ನನ್ನನ್ನು ಅಲೆಮಾರಿ ರಾಜಕಾರಣಿ ಎಂದು ಟೀಕಿಸಿರುವ ನೀವು ಎಷ್ಟು ಪಕ್ಷಗಳನ್ನು ಬದಲಾಯಿಸಿದ್ದೀರಿ. ನೀವು ಒಂದೇ ಪಕ್ಷವನ್ನು ಎರಡೆರಡು ಬಾರಿ ಸೇರ್ಪಡೆಯಾಗಿದ್ದೀರಿ. ನೀವು ಅಲೆಮಾರಿಗಳ ರಾಜ ಎಂದು ವಿ ಶ್ರೀನಿವಾಸ ಪ್ರಸಾದ್ ವಿರುದ್ದ ಟೀಕಾ ಪ್ರಹಾರ ನಡೆಸಿದರು.

ನಾನು ಯಾವುದೇ ಕಾಂಗ್ರೆಸ್ ನಾಯಕರನ್ನು ಕದ್ದು ಮುಚ್ಚಿ ಭೇಟಿ ಮಾಡಿಲ್ಲ. ಎಲ್ಲಾ ಕಾಂಗ್ರೆಸ್ ನಾಯಕರನ್ನು ಬಹಿರಂಗವಾಗಿಯೇ ಭೇಟಿ ಮಾಡಿದ್ದೇನೆ. ಎಲ್ಲಾ ಕಾಂಗ್ರೆಸ್ ನಾಯಕರನ್ನು ಸೌಜನ್ಯಯುತವಾಗಿ ಭೇಟಿ ಮಾಡಿದ್ದೇನೆ. ನಾನು ಎಂದಾದರೂ ಬಿಜೆಪಿ ತೊರೆದು ಕಾಂಗ್ರೆಸ್ ಗೆ ಸೇರುತ್ತೇನೆಂದು ಹೇಳಿದ್ದೀನಾ? ನನ್ನನ್ನು ಬಿಜೆಪಿಗೆ ಸೇರಲು ಮಧ್ಯಸ್ಥಿಕೆ ವಹಿಸಿದವರು ಇದೇ ಶ್ರೀನಿವಾಸಪ್ರಸಾದ್. ಆದರೆ ನಾನು ಬಿಜೆಪಿ ಸೇರ್ಪಡೆಯಾದ ಬಳಿಕ ಯಡಿಯೂರಪ್ಪ ಆಗಲಿ, ಶ್ರೀನಿವಾಸಪ್ರಸಾದ್ ಸೇರಿದಂತೆ ಯಾವೊಬ್ಬ ಬಿಜೆಪಿ ನಾಯಕರು ನನ್ನ ನೆರವಿಗೆ ಬರಲಿಲ್ಲ. ನಾನು ಉಪ ಚುನಾವಣೆಯಲ್ಲಿ ಸೋತ ಬಳಿಕ ಎಂಎಲ್ಸಿ ಮಾಡಲು ನೆರವಾಗಿದ್ದು ಆರ್ ಎಸ್ ಎಸ್ ಮುಖಂಡ ಮುಕುಂದ ಅವರು. ಆರ್ ಎಸ್ ಎಸ್ ನಾಯಕ ಮುಕುಂದ ಅವರಿಂದ ನಾನು ಎಂಎಲ್ಸಿ ಆದೆ ಎಂದು ಹೆಚ್.ವಿಶ್ವನಾಥ್ ಹೇಳಿದರು.

ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಯಾಗಲು ಹಣದ ಆಮಿಷ ಒಡ್ಡಿದ್ದರು.

ಯಡಿಯೂರಪ್ಪ, ಅವರ ಮಗ ವಿಜಯೇಂದ್ರ ಹಾಗು ಶ್ರೀನಿವಾಸಪ್ರಸಾದ್ ಅವರು ನನಗೆ ಹಣ ಕೊಡಲು ಬಂದಿದ್ದರು‌. ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಯಾಗಲು ಹಣದ ಆಮಿಷ ಒಡ್ಡಿದ್ದರು ಎಂದು ಹೆಚ್.ವಿಶ್ವನಾಥ್ ಮತ್ತೊಂದು ಹೊಸ ಬಾಂಬ್ ಸಿಡಿಸಿದರು. ಆದರೆ ಎಷ್ಟು ಹಣ ಕೊಡಲು ಬಂದಿದ್ದರು, ನೀವು ಹಣ ಹಣ ಪಡೆದುಕೊಂಡಿರಾ ಎಂಬ ಪ್ರಶ್ನೆಗೆ ಸೂಕ್ತ ಉತ್ತರ ನೀಡದ ಹೆಚ್.ವಿಶ್ವನಾಥ್, ಈ ಬಗ್ಗೆ ಬಾಂಬೆ ಡೈರೀಸ್ ನೋಡಿ. ಬಾಂಬೆ ಡೈರೀಸ್ ನ ಮೊದಲ ಅಧ್ಯಾಯದಲ್ಲೇ ಈ ವಿಚಾರವಿದೆ ಎಂದು ಕುತೂಹಲ ಹುಟ್ಟುಹಾಕಿದರು.

ಇವತ್ತಿನ ದಿನದ ಚುನಾವಣೆ ಎದುರಿಸಲು ನಮ್ಮಂತವರಿಂದ ಆಗಲ್ಲ. ದೇವರಾಜ ಅರಸು ಅವರ ಕೃಪಾಕಟಾಕ್ಷದಿಂದ ಕೇವಲ ೫೦ ಸಾವಿರ ಖರ್ಚಿನಲ್ಲಿ ಶಾಸಕನಾದವನು. ದೇವೇಗೌಡರ ಆಶೀರ್ವಾದದಿಂದ ಸಚಿವನಾದವನು. ಇಂದು ಒಂದು ಚುನಾವಣೆ ಎದುರಿಸಲು ೩೦, ೪೦ ಕೋಟಿ ಖರ್ಚು ಮಾಡುತ್ತಾರೆ. ನಮ್ಮಲ್ಲಿ ಅಷ್ಟು ಹಣ ಎಲ್ಲಿದೆ ನಮ್ಮಪ್ಪ ಒಂದಷ್ಟು ಜಮೀನು ಬಿಟ್ಟುಹೋಗಿದ್ದಾರೆ. ಅದರಲ್ಲಿ ಒಂದಷ್ಟು ಬೆಳೆ ಬೆಳೆದು ಜೀವನ ಮಾಡುತ್ತಿದ್ದೇನೆ. ಮುಂಬರುವ ಚುನಾವಣೆ ಎದುರಿಸುವಷ್ಟು ಶಕ್ತಿ ನನಗಿಲ್ಲಎಂದು ಇಂದಿನ ಚುನಾವಣೆ ಪ್ರಕ್ರಿಯೆ ಕುರಿತು ಎಚ್.ವಿಶ್ವನಾಥ್ ಕಳವಳ ವ್ಯಕ್ತಪಡಿಸಿದರು.

Key words: political vagabond- Srinivas Prasad- criticism-MLC-H.Vishwanath