ಅರ್ಧ ಹೆಲ್ಮೆಟ್‌ ಧರಿಸಿ ಬೈಕ್‌ ಚಲಾಯಿಸುವ ಪೊಲೀಸರಿಗೂ ದಂಡ

ಬೆಂಗಳೂರು:ಆ-29: ಕಾನೂನು ರಕ್ಷಣೆ ಮತ್ತು ಸಂಚಾರ ನಿಯಂತ್ರಿಸುವ ಪೊಲೀಸರಿಗೆ ಅವರ ಪ್ರಾಣ ರಕ್ಷಣೆಯೂ ಅಷ್ಟೇ ಮುಖ್ಯ. ದ್ವಿಚಕ್ರ ವಾಹನ ಚಲಾಯಿಸುವ ವೇಳೆ ಅವರು ಐಎಸ್‌ಐ ಪ್ರಮಾಣೀಕೃತ ಹೆಲ್ಮೆಟ್‌ ಧರಿಸಬೇಕು. ಆದರೆ, ಪೊಲೀಸರೇ ಮೋಟಾರು ಕಾಯಿದೆ ನಿಯಮದ ಉಲ್ಲಂಘನೆ ಮಾಡುತ್ತಿದ್ದು, ಇದಕ್ಕೆ ಬ್ರೇಕ್‌ ಹಾಕಲು ಪೊಲೀಸ್‌ ಇಲಾಖೆ ನಿರ್ಧರಿಸಿದೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಅಪಘಾತದಲ್ಲಿ ನಗರ ಸಶಸ್ತ್ರ ಮೀಸಲು ಪಡೆ ಪೊಲೀಸ್‌ ಪೇದೆ ರಾಜು ಶಿವಪ್ಪ ಎಂಬುವರು ಮೃತಪಟ್ಟಿದ್ದರು. ಆ. 22ರಂದು ರಾತ್ರಿ ಬಳ್ಳಾರಿ ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ಅಶೋಕ ನಗರ ಸಂಚಾರ ಠಾಣೆಯ ಮುಖ್ಯ ಪೇದೆ ಕೊಟ್ರೇಶ್‌ ಗಂಭೀರವಾಗಿ ಗಾಯಗೊಂಡು ಕೋಮಾ ಸ್ಥಿತಿ ತಲುಪಿದ್ದಾರೆ. ಈ ಎರಡೂ ದುರಂತ ಘಟನೆಗಳಲ್ಲಿ ಇಬ್ಬರೂ ಪೇದೆಗಳು ಅರ್ಧ ಹೆಲ್ಮೆಟ್‌ ಧರಿಸಿದ್ದರು ಎಂಬ ಸಂಗತಿ ಗೊತ್ತಾಗಿದೆ.

ಇಂತಹ ಘಟನೆಗಳು ರಾಜ್ಯದ ವಿವಿಧೆಡೆಯಿಂದ ವರದಿಯಾಗಿವೆ. ಈ ಬಗ್ಗೆ ರಾಜ್ಯ ಕಾನೂನು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ ಅಮರ್‌ ಕುಮಾರ್‌ ಪಾಂಡೆ ಅವರನ್ನು “ಉದಯವಾಣಿ’ ಸಂಪರ್ಕಿಸಿದಾಗ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. “ವಾಹನ ಸವಾರರು ರಾಜ್ಯಾದ್ಯಂತ ಎಲ್ಲರೂ ಸ್ವಯಂಪ್ರೇರಿತವಾಗಿ ಕಾನೂನು ಪಾಲನೆ ಮಾಡಬೇಕು. ಅರ್ಧ ಹೆಲ್ಮೆಟ್‌ ಧರಿಸಿ ದ್ವಿಚಕ್ರ ವಾಹನ ಚಲಾಯಿಸುವ ಸವಾರರ ವಿರುದ್ಧವೂ ಕಡ್ಡಾಯವಾಗಿ ಕ್ರಮ ಜರುಗಿಸುವ ಬಗ್ಗೆ ಮತ್ತಷ್ಟು ನಿರ್ದೇಶನಗಳನ್ನು ನೀಡಲಾಗುತ್ತದೆ ಎಂದು ಅವರು ಹೇಳಿದರು.

ಸ್ವಯಂಪ್ರೇರಿತ ಪಾಲನೆ ಅಗತ್ಯ: ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಐಎಸ್‌ಐ ಗುರುತಿನ ಪೂರ್ಣ ಪ್ರಮಾಣದ ಹೆಲ್ಮೆಟ್‌ ಧರಿಸಬೇಕು ಎಂದು ನಿಯಮವಿದೆ. ಆದರೆ, ಸಾರ್ವಜನಿಕರು ಇದನ್ನು ಕಡ್ಡಾಯ ವಾಗಿ ಪಾಲಿಸುವುದಿಲ್ಲ. ಪೊಲೀಸರ ಕರ್ತವ್ಯದ ಜತೆಗೆ ಜನರು ಸ್ವಯಂಪ್ರೇರಿತವಾಗಿ ತಮ್ಮ ರಕ್ಷಣೆಗಾಗಿ ಈ ನಿಯಮವನ್ನು ಪಾಲಿಸಿದಾಗ ನೂರ ರಷ್ಟು ಯಶಸ್ಸು ಸಿಗಲಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಅಭಿಪ್ರಾಯಪಡುತ್ತಾರೆ.

ಈ ಹಿಂದೆ ಐಎಸ್‌ಐ ಗುರುತಿನ ಹೆಲ್ಮೆಟ್‌ ಕಡ್ಡಾಯ ನಿಯಮ ರಾಜ್ಯಾದ್ಯಂತ ಜಾರಿಯಾದರೂ ಭಿನ್ನ ಅಭಿ ಪ್ರಾಯಗಳು ಕೇಳಿಬಂದಿದ್ದವು. ಪೊಲೀಸ್‌ ಇಲಾಖೆಗೂ ತಾಂತ್ರಿಕ ಸಮಸ್ಯೆಗಳು ಉಂಟಾದವು. ಹೀಗಾಗಿ, ಪೂರ್ಣ ಪ್ರಮಾಣದ ಹೆಲ್ಮೆಟ್‌ ಕಡ್ಡಾಯ ಪಾಲನೆ ಹಳ್ಳ ಹಿಡಿದಿದೆ ಎಂದು ಹಿರಿಯ ಅಧಿಕಾರಿ ಹೇಳುತ್ತಾರೆ.

ದಂಡ ವಿಧಿಸಲು ಆದೇಶ: ಬೆಂಗಳೂರು ನಗರ ಸಂಚಾರ ಹೆಚ್ಚುವರಿ ಪೊಲೀಸ್‌ ಆಯುಕ್ತ ಡಾ.ಬಿ.ಆರ್‌ ರವಿಕಾಂತೇಗೌಡ ಅವರು, ಅರ್ಧ ಹೆಲ್ಮೆಟ್‌ ಧರಿಸಿ ದ್ವಿಚಕ್ರ ವಾಹನ ಚಲಾಯಿಸುವ ಪೊಲೀಸ್‌ ಸಿಬ್ಬಂದಿ ಮತ್ತು ಅಧಿಕಾರಿಗಳ ವಿರುದ್ಧವೂ ಮೋಟಾರು ಕಾಯಿದೆ ಅನ್ವಯ ಪ್ರಕರಣ ದಾಖಲಿಸಿ ದಂಡ ವಿಧಿಸುವಂತೆ ಸೂಚಿಸಿ ನಗರ ಸಂಚಾರ ಪೊಲೀಸರಿಗೆ ಆದೇಶಿಸಿದ್ದಾರೆ.

ಅಷ್ಟೇ ಅಲ್ಲದೆ ಸಮವಸ್ತ್ರದಲ್ಲಿದ್ದಾಗ ಕಡ್ಡಾಯವಾಗಿ ಪೂರ್ಣ ಪ್ರಮಾಣದ ಹೆಲ್ಮೆಟ್‌ ಧರಿಸಿ ದ್ವಿಚಕ್ರ ವಾಹನ ಚಲಾಯಿಸಬೇಕು. ಒಂದು ವೇಳೆ ಅರ್ಧ ಹೆಲ್ಮೆಟ್‌ ಧರಿಸಿ ವಾಹನ ಚಲಾಯಿಸಿರುವುದು ಕಂಡು ಬಂದರೆ ದಂಡ ವಿಧಿಸಬೇಕು. ಜತೆಗೆ, ಅವರ ವಿರುದ್ಧ ಶಿಸ್ತು ಕ್ರಮಕ್ಕಾಗಿ ಹಿರಿಯ ಅಧಿಕಾರಿಗಳಿಗೆ ವರದಿ ನೀಡುವಂತೆ ಸೂಚಿಸಿದ್ದಾರೆ.
ಕೃಪೆ:ವಿಜಯವಾಣಿ

ಅರ್ಧ ಹೆಲ್ಮೆಟ್‌ ಧರಿಸಿ ಬೈಕ್‌ ಚಲಾಯಿಸುವ ಪೊಲೀಸರಿಗೂ ದಂಡ

police-are-also-fined-for-riding-a-bike-wearing-a-half-helmet