ಸಬ್ಸಿಡಿಗಳಿಗೆ ಕತ್ತರಿ, ಕಾರ್ಪೊರೇಟ್ ಬಂಡವಾಳಿಗರ ಜೊತೆ ದೋಸ್ತಿಯೇ ಮೋದಿ ಅವರ ಸಾಧನೆ- ಸಿದ್ಧರಾಮಯ್ಯ ಟೀಕೆ.

ಬೆಂಗಳೂರು,ಜೂನ್,11,2022(www.justkannada.in): ಸಬ್ಸಿಡಿಗಳಿಗೆ ಕತ್ತರಿ ಕಾರ್ಪೊರೇಟ್ ಬಂಡವಾಳಿಗರ ಜೊತೆ ದೋಸ್ತಿ ಪ್ರಧಾನಿ ನರೇಂದ್ರ ಮೋದಿ ಅವರ ಎಂಟು ವರ್ಷಗಳ ಸಾಧನೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಟೀಕಿಸಿದ್ದಾರೆ.

ಪತ್ರಿಕಾ ಹೇಳಿಕೆಯ ಬಿಡುಗಡೆ ಮಾಡಿರುವ ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿರುವುದಿಷ್ಟು…

ಸಬ್ಸಿಡಿಗಳನ್ನು ನೀಡುವುದರಿಂದ ಆರ್ಥಿಕತೆಯು ವೇಗ ಪಡೆಯುತ್ತದೆ ಎಂಬುದು ಅರ್ಥಶಾಸ್ತ್ರ ಗೊತ್ತಿರುವ ಪ್ರತಿಯೊಬ್ಬರಿಗೂ ಅರ್ಥವಾಗುತ್ತದೆ. ಆದರೆ ಮೋದಿ ಸರ್ಕಾರ ಮತ್ತು ಆ ಸರ್ಕಾರದ ಹಿಂದೆ ಇರುವ ಆರ್‌ಎಸ್‌ಎಸ್ ಪ್ರಣೀತ ಜನರಿಗೆ ಇದು ಅರ್ಥವಾಗುತ್ತಿಲ್ಲ. ಅಥವಾ ಅವರು ಉದ್ದೇಶ ಪೂರ್ವಕವಾಗಿ ಜನರ ಕೈಯಲ್ಲಿ ಹಣ ಇರಬಾರದು ಎಂದು ತೀರ್ಮಾನಿಸಿಯೇ ಯೋಜನೆಗಳನ್ನು ರೂಪಿಸುತ್ತಾರೆ. ಕೇಂದ್ರ ಸರ್ಕಾರ ರೈತ ವಿರೋಧಿ ಕಾಯ್ದೆಗಳನ್ನು ತಂದು ಕೃಷಿಯನ್ನೂ ಕೂಡ ಅದಾನಿ, ಅಂಬಾನಿ ಮುಂತಾದ ಬಂಡವಾಳಿಗರಿಗೆ ಕೊಟ್ಟು ರೈತರನ್ನು ಸರ್ವನಾಶ ಮಾಡಲು ಹೊರಟಿತ್ತು. ಆದರೆ ರೈತರು ನಡೆಸಿದ ವೀರೋಚಿತ ಹೋರಾಟಗಳಿಂದ ಕಾಯ್ದೆಗಳನ್ನು ಕೈ ಬಿಡಬೇಕಾಯಿತು.

ಮೋದಿಯವರ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕೊರೋನಾ ಇದ್ದ ಎರಡು ವರ್ಷ ಬಿಟ್ಟರೆ ಉಳಿದಂತೆ ನಿರಂತರವಾಗಿ ಸಬ್ಸಿಡಿಗಳಿಗೆ ಕತ್ತರಿ ಹಾಕುತ್ತಿದ್ದಾರೆ. ಆರ್‌ ಬಿಐ ನ ಮಾಹಿತಿಯಂತೆ ೨೦೧೨ ರಿಂದ ೨೦೧೩-೧೪ ರ ವರೆಗೆ ಜಿಡಿಪಿಯ ಶೇ. ೨.೨ ರಿಂದ ೨.೪ ರವರೆಗೆ ಸಬ್ಸಿಡಿ ನೀಡಲಾಗುತಿತ್ತು. ಈಗ ಅದರ ಪ್ರಮಾಣ ಶೇ.೧ ಕ್ಕಿಂತ ಕೆಳಗೆ ಇಳಿದಿದೆ ಎಂದು ವಿವರಿಸಿದರು.

ಹಾಗೆಯೇ ೨೦೧೨-೧೩ ರಲ್ಲಿ ಕೇಂದ್ರದ ಬಜೆಟ್ ಗಾತ್ರ ೧೪.೯೧ ಲಕ್ಷ ಕೋಟಿ. ಆಗ ಆಹಾರ, ರಸಗೊಬ್ಬರ, ಪೆಟ್ರೋಲಿಯಂನ ಮೇಲೆ ನೀಡಿದ ಸಬ್ಸಿಡಿಯ ಪ್ರಮಾಣ ೨.೪೮ ಲಕ್ಷ ಕೋಟಿ. ಅಂದರೆ ಒಟ್ಟಾರೆ ಬಜೆಟ್ ನ ಶೇ. ೧೬.೬೧ ರಷ್ಟು ಸಂಪನ್ಮೂಲಗಳನ್ನು ಸಬ್ಸಿಡಿಗಾಗಿ ವಿನಿಯೋಗಿಸಲಾಗಿತ್ತು. ೨೦೧೪ ರಲ್ಲಿ ಅಧಿಕಾರಕ್ಕೆ ಬಂದ ಮೋದಿಯವರ ಸರ್ಕಾರ ನಿರಂತರವಾಗಿ ಜನಸಾಮಾನ್ಯರ ಬದುಕನ್ನು ಹಿಂಡುವ ಕೆಲಸ ಪ್ರಾರಂಭಿಸಿದೆ. ನಿರಂತರವಾಗಿ ಸಬ್ಸಿಡಿಯನ್ನು ಕಡಿಮೆ ಮಾಡುತ್ತಾ ಬಂದಿದೆ. ೨೦೧೭-೧೮ ರಲ್ಲಿ ಬಜೆಟ್ ಗಾತ್ರ ೨೧.೪೭ ಲಕ್ಷ ಕೋಟಿ ರೂಗಳಿದ್ದರೆ, ನೀಡಿದ ಸಬ್ಸಿಡಿ ಕೇವಲ ೧.೯೧ ಲಕ್ಷ ಕೋಟಿ [ಶೇ. ೮.೮೯], ೨೦೧೯-೨೦ ರಲ್ಲಿ ೨೭.೮೬ ಲಕ್ಷ ಕೋಟಿ ಬಜೆಟ್ ಗಾತ್ರವಾದರೆ, ಸಬ್ಸಿಡಿ ಪ್ರಮಾಣ ೨.೧೯ ಲಕ್ಷ ಕೋಟಿಯಾಯಿತು [ಶೇ.೭.೮]. ಇದರ ನಂತರ ಕೊರೋನಾ ತೀವ್ರವಾಗಿ ಬಾಧಿಸಿ, ಆರ್ಥಿಕತೆ ಕುಸಿಯತೊಡಗಿತು. ಈ ಸಂದರ್ಭದಲ್ಲಿ ಆಹಾರ ಮುಂತಾದ ವಲಯಗಳ ಸಬ್ಸಿಡಿಯನ್ನು ತುಸು ಹೆಚ್ಚಿಸಿದರು. ಆದರೆ ೨೦೨೨-೨೩ ರ ಬಜೆಟ್‌ ನಲ್ಲಿ ಮತ್ತೆ ಕಡಿತ ಮಾಡಿದ್ದಾರೆ. ಈ ವರ್ಷ ಕೇಂದ್ರದ ಬಜೆಟ್ ಗಾತ್ರ ೩೯.೪೪ ಲಕ್ಷ ಕೋಟಿಗಳಷ್ಟಿದೆ. ಆದರೆ ನೀಡುತ್ತಿರುವ ಸಬ್ಸಿಡಿ ಪ್ರಮಾಣ ೩.೦೫ ಲಕ್ಷ ಕೋಟಿಗಳಷ್ಟಿದೆ, ಅಂದರೆ ಶೇ.೭.೭ ಮಾತ್ರ.

ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಮೇಲೆ ಮನಮೋಹನಸಿಂಗ್ ಅವರ ಸರ್ಕಾರ ವರ್ಷಕ್ಕೆ ೯೭ ಸಾವಿರ ಕೋಟಿ ರೂ.ಗಳವರೆಗೂ ಸಬ್ಸಿಡಿ ನೀಡುತ್ತಿತ್ತು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ೧೨೫ ಡಾಲರ್ ಗಳನ್ನು ಮೀರಿ ಬೆಳೆದಿದ್ದರೂ ಸಹ ದೇಶದಲ್ಲಿ ಡೀಸೆಲ್ ಬೆಲೆ ೪೬ ರೂಪಾಯಿ ಮತ್ತು ಪೆಟ್ರೋಲ್ ಬೆಲೆ ೭೬ ರೂಪಾಯಿ ಹಾಗೂ ಅಡುಗೆ ಅನಿಲದ ಬೆಲೆ ೪೧೪ ರೂ ಒಳಗೆ ಇರುವಂತೆ ಮನಮೋಹನಸಿಂಗ್ ಅವರು ನೋಡಿಕೊಂಡಿದ್ದರು. ಇದರಿಂದ ಹಣದುಬ್ಬರವನ್ನು ನಿಯಂತ್ರಿಸಿ ಜನ ಸಾಮಾನ್ಯರ ಬದುಕಿನ ಮೇಲೆ ದುಷ್ಪರಿಣಾಮವಾಗದಂತೆ ನೋಡಿಕೊಂಡಿದ್ದರು. ಆದರೆ ಮೋದಿ ಸರ್ಕಾರ ಜನ ಸಾಮಾನ್ಯರನ್ನು ಶತ್ರುಗಳ ರೀತಿ ಭಾವಿಸುತ್ತಿದೆ. ಪೆಟ್ರೋಲಿಯಂ ಬಾಬತ್ತಿಗೆ ನೀಡುತ್ತಿದ್ದ ಸಬ್ಸಿಡಿಯನ್ನು ೨೦೨೦-೨೧ ರಲ್ಲಿ ಕೇವಲ ೬.೫ ಸಾವಿರ ಕೋಟಿಗಳಿಗೆ ಇಳಿಸಿದರು. ೨೦೨೨-೨೩ ರಲ್ಲಿ ಅದರ ಪ್ರಮಾಣ ಕೇವಲ ೫.೮ ಸಾವಿರ ಕೋಟಿಗಳಿಗೆ ಇಳಿದಿದೆ. ಇದರಿಂದಾಗಿಯೂ ಬೆಲೆಗಳು ತೀವ್ರವಾಗಿ ಏರಿಕೆಯಾಗಿವೆ. ಜನರು ಬದುಕು ಸಾಗಿಸುವುದೇ ದುಸ್ತರವಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ರೈತರಿಗೆ ನೀಡುವ ಸಬ್ಸಿಡಿಯ ಮೊತ್ತ ಕೂಡ ದಿನೇ ದಿನೇ ಕಡಿಮೆಯಾಗುತ್ತಿದೆ. ಜನರಿಗೆ ಸಬ್ಸಿಡಿ ನೀಡಬಾರದು, ಜನರ ಕಡೆಯ ಹನಿ ರಕ್ತವೂ ಉಳಿಯದಂತೆ ಹೀರಿಕೊಳ್ಳಬೇಕೆಂದು ಹಠ ತೊಟ್ಟಂತೆ ತೆರಿಗೆ ವಿಧಿಸುತ್ತಿದೆ. ಮೋದಿಯವರ ಬಿಜೆಪಿ ಸರ್ಕಾರವು ಮತ್ತೊಂದು ಕಡೆ ಕಾರ್ಪೊರೇಟ್ ಬಂಡವಾಳಿಗರ ಮೇಲಿನ ತೆರಿಗೆಯನ್ನು ಇಳಿಸುತ್ತಿದೆ. ದೇಶದಲ್ಲಿ ಈಗ ಜನಸಾಮಾನ್ಯರು ಕಟ್ಟುವ ತೆರಿಗೆ ಹೆಚ್ಚಾಗುತ್ತಿದೆ, ಕಾರ್ಪೊರೇಟ್ ಶ್ರೀಮಂತರು ಕಟ್ಟುವ ತೆರಿಗೆ ಕಡಿಮೆಯಾಗುತ್ತಿದೆ.

ಇದೇ ಸಂದರ್ಭದಲ್ಲಿ ದೇಶದ ಆರ್ಥಿಕತೆಯ ಚೈತನ್ಯವೆ ಕುಸಿದು ಹೋಗುವಂತೆ ಸಾಲ ಮಾಡಲಾಗಿದೆ. ಮೋದಿಯವರು ಅಧಿಕಾರಕ್ಕೆ ಬಂದ ಈ ಎಂಟು ವರ್ಷಗಳಲ್ಲಿ ದೇಶದ ಸಾಲ ೧೦೨ ಲಕ್ಷ ಕೋಟಿಗಳಷ್ಟು ಹೆಚ್ಚಾಗಿದೆ. ೨೦೧೪ ರಲ್ಲಿ ದೇಶದ ಜನರ ತಲೆಯ ಮೇಲೆ ೫೭ ಸಾವಿರ ರೂಪಾಯಿ ಸಾಲವಿದ್ದರೆ ಇಂದು ೧.೭೦ ಲಕ್ಷ ರೂಪಾಯಿ ಸಾಲವಾಗಿದೆ.

ಆದರೆ ಇದೇ ಸಂದರ್ಭದಲ್ಲಿ ಕೇವಲ ಪೆಟ್ರೋಲ್ ಮತ್ತು ಡೀಸೆಲ್‌ ಗಳಿಂದಲೆ ೨೬ ಲಕ್ಷ ಕೋಟಿ ರೂಪಾಯಿಗಳನ್ನು ದೇಶದ ಜನರಿಂದ ದೋಚಿಕೊಳ್ಳಲಾಗಿದೆ. ಇಷ್ಟೊಂದು ಹಣ ಎಲ್ಲಿ ಹೋಯಿತು? ಇದರ ಲಾಭ ಜನ ಸಾಮಾನ್ಯರಿಗೇಕೆ ಸಿಗಲಿಲ್ಲ? ಇದನ್ನು ಯಾರು ತಿಂದು ಹಾಕಿದರು? ಎಷ್ಟು ಹಣ ಭ್ರಷ್ಟಾಚಾರಕ್ಕೆ ಹೋಯಿತು? ಎಷ್ಟು ಹಣ ಕಾರ್ಪೊರೇಟ್ ಬಂಡವಾಳಿಗರ ಸಾಲಮನ್ನಾ ಮಾಡಲು ಖರ್ಚು ಮಾಡಲಾಯಿತು? ಈ ಎಲ್ಲ ಪ್ರಶ್ನೆಗಳಿಗೆ ದೇಶದ ಜನರಿಗೆ ಮೋದಿಯವರ ಸರ್ಕಾರ ಲೆಕ್ಕ ಕೊಡಬೇಕಾಗಿದೆ ಎಂದು ಸಿದ್ಧರಾಮಯ್ಯ ಚಾಟಿ ಬೀಸಿದ್ದಾರೆ.

ಅದಕ್ಕೂ ಮೊದಲು ಅಮೆರಿಕ, ಯುರೋಪ್, ಆಸ್ಟ್ರೇಲಿಯ, ಜಪಾನ್ ಮತ್ತು ನ್ಯೂಜಿಲ್ಯಾಂಡ್ ದೇಶಗಳಲ್ಲಿ ರೈತರಿಗೆ, ಜನಸಾಮಾನ್ಯರಿಗೆ ನೀಡುತ್ತಿರುವ ಸಬ್ಸಿಡಿಗಳಂತೆ ಭಾರತದಲ್ಲೂ ನೀಡಿ, ಮುಳುಗಿ ಹೋಗುತ್ತಿರುವ ಜನರ ಬದುಕನ್ನು ಸುಧಾರಣೆ ಮಾಡಬೇಕಾದ ಅಗತ್ಯ ಹೆಚ್ಚಾಗಿದೆ ಎಂದು ಹೇಳಿದ್ದಾರೆ.

Key words: PM-Modi’s-achievement-corporate-subsidies-former CM-Siddaramaiah