‘ಏಕ್ ಲವ್ ಯಾ’ಗೆ ಪೈರಸಿ ಕಾಟ: ಸಿಎಂಗೆ ದೂರು ನೀಡುತ್ತೇನೆ ಎಂದ ಪ್ರೇಮ್

ಬೆಂಗಳೂರು, ಮಾರ್ಚ್ 02, 2021 (www.justkannada.in): ಇತ್ತೀಚೆಗೆ ಬಿಡುಗಡೆ ಆದ ‘ಏಕ್ ಲವ್ ಯಾ’ ಸಿನಿಮಾದ ಪೈರಸಿ ಕಾಪಿ ಸಹ ಟೆಲಿಗ್ರಾಂಗೆ ಅಪ್‌ಲೋಡ್ ಆಗಿತ್ತು.

ನಿರ್ದೇಶಕ ಪ್ರೇಮ್ ಈಗ ಟೆಲಿಗ್ರಾಂ ಮೆಸೆಂಜರ್ ಅಪ್ಲಿಕೇಶನ್ ವಿರುದ್ಧ ಗರಂ ಆಗಿದ್ದಾರೆ.

ಇತ್ತೀಚಿಗೆ ಯಾವುದೇ ಹೊಸ ಸಿನಿಮಾ ಬಿಡುಗಡೆ ಆದರೂ ಅದರ ಬಹುತೇಕ ಒರಿಜಿನಲ್ ಕಾಪಿಗಳು ಕೆಲವೇ ಗಂಟೆಗಳಲ್ಲಿ ಟೆಲಿಗ್ರಾಂನಲ್ಲಿ ಲಭ್ಯವಾಗುತ್ತವೆ. ಇದೀಗ ‘ಏಕ್ ಲವ್ ಯಾ’ ಕೂಡ ಲೀಕ್ ಆಗಿದೆ.

‘ಏಕ್ ಲವ್ ಯಾ’ ಸಿನಿಮಾ ಪೈರಸಿ ಮಾಡುತ್ತಿದ್ದಾರೆ. ಮುಂದಿನ ವಾರ ನಾನು ಖುದ್ದಾಗಿ ಸಿಎಂ ಸರ್ ಅವರನ್ನು ಭೇಟಿಯಾಗಿ ಅವರಿಗೊಂದು ಪತ್ರ ಕೊಟ್ಟು, ದಯವಿಟ್ಟು ಸಹಾಯ ಮಾಡಿ ಎಂದು ಕೇಳಿಕೊಳ್ಳುತ್ತೇನೆ ಎಂದು ಪ್ರೇಮ್ ಹೇಳಿದ್ದಾರೆ.

ಒಂದು ಸಿನಿಮಾ ಅಪ್‌ಲೋಡ್ ಆಗುತ್ತಿದ್ದಂತೆ ಅದನ್ನು ಸಾವಿರಾರು ಮಂದಿ ಹಂಚಿಕೊಳ್ಳುತ್ತಾರೆ. ಮತ್ತೊಬ್ಬನಿಗೆ ಟ್ಯಾಗ್ ಮಾಡಿ ನೋಡುವಂತೆ ಹೇಳುತ್ತಾರೆ. ಇದು ಸರಿಯಲ್ಲ ಎಂದು ಪ್ರೇಮ್ ಬೇಸರ ವ್ಯಕ್ತಪಡಿಸಿದ್ದಾರೆ.